ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ತನ್ನ ನೋಂದಣಿ, ಹಣಕಾಸು ಮೂಲಗಳು, ತೆರಿಗೆ ಪಾವತಿ ಹಾಗೂ ಸಾರ್ವಜನಿಕ ಚಟುವಟಿಕೆಗಳ ಕುರಿತು ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಒತ್ತಾಯಿಸಿ, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ. ಆರ್ಎಸ್ಎಸ್
ಆರ್ಎಸ್ಎಸ್ ಶತಮಾನೋತ್ಸವದ ಹಿನ್ನೆಲೆಯಲ್ಲಿ ಬರೆದಿರುವ ಪತ್ರದಲ್ಲಿ ಸಂಘಟನೆಯ ಕಾರ್ಯಚಟುವಟಿಕೆಗಳು, ಕಾನೂನುಬದ್ಧ ಸ್ಥಾನಮಾನ ಮತ್ತು ಹಣಕಾಸು ವ್ಯವಹಾರಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿರುವ ಪ್ರಿಯಾಂಕ್ ಖರ್ಗೆ, ಸಾರ್ವಜನಿಕ ಜೀವನದಲ್ಲಿ ಪ್ರಭಾವಿ ಪಾತ್ರ ವಹಿಸುವ ಸಂಘಟನೆಯು ಹೆಚ್ಚಿನ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಪ್ರದರ್ಶಿಸಬೇಕೆಂದು ಆಗ್ರಹಿಸಿದ್ದಾರೆ.

ಪತ್ರದ ಸಾರಾಂಶ ಹೀಗಿದೆ:
“ಮಾನ್ಯ ಶ್ರೀ ಮೋಹನ್ ಭಾಗವತ್ ಅವರೇ,
ನನ್ನ ಪತ್ರ ಶೀಘ್ರದಲ್ಲೇ ನಿಮಗೆ ತಲುಪಲಿದೆ. ಆದರೆ ಈ ವಿಷಯದ ಕುರಿತು ಮೊದಲು ನಿಮ್ಮ ಗಮನಕ್ಕೆ ತರುವುದು ಮುಖ್ಯ ಎಂದು ನಾನು ಭಾವಿಸಿದ್ದೇನೆ.
ಮೊದಲನೆಯದಾಗಿ, 100 ವರ್ಷಗಳನ್ನು ಪೂರೈಸಿರುವ ಆರ್ಎಸ್ಎಸ್ಗೆ ಅಭಿನಂದನೆಗಳು. 60,000ಕ್ಕೂ ಹೆಚ್ಚು ಶಾಖೆಗಳು ಮತ್ತು ಕೋಟ್ಯಂತರ ಸ್ವಯಂಸೇವಕರನ್ನು ಹೊಂದಿರುವುದಾಗಿ ಹೇಳಿಕೊಳ್ಳುವ ಸಂಸ್ಥೆಯಾದ ಆರ್ಎಸ್ಎಸ್ ಪಾರದರ್ಶಕತೆ ಮತ್ತು ಸಂವಿಧಾನಾತ್ಮಕ ಹೊಣೆಗಾರಿಕೆಯನ್ನು ಪಾಲಿಸಬೇಕಾಗಿದೆ.
ಆರ್ಎಸ್ಎಸ್ನ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಅಖಿಲ ಭಾರತೀಯ ಪ್ರತಿನಿಧಿ ಸಭೆ ಬಿಡುಗಡೆ ಮಾಡಿದ 2025-26ರ ವಾರ್ಷಿಕ ವರದಿಯ ಪ್ರಕಾರ, ಕರ್ನಾಟಕದಲ್ಲಿ 4,127 ದೈನಂದಿನ ಶಾಖೆಗಳು, 1,389 ಸಾಪ್ತಾಹಿಕ ಸಭೆಗಳು ಹಾಗೂ 60 ಮಾಸಿಕ ಮಂಡಳಿಗಳು ಕಾರ್ಯನಿರ್ವಹಿಸುತ್ತಿವೆ. 19.61 ಲಕ್ಷ ಜನರ ಭಾಗವಹಿಸುವಿಕೆಯೊಂದಿಗೆ 2,194 ಸಮಾಜೋತ್ಸವಗಳನ್ನು ಆಯೋಜಿಸಲಾಗಿದೆ. ಅಲ್ಲದೆ 2.21 ಲಕ್ಷ ಸಮವಸ್ತ್ರಧಾರಿಗಳೊಂದಿಗೆ 562 ಪಥಸಂಚಲನಗಳನ್ನು ನಡೆಸಲಾಗಿದೆ.ಆರ್ಎಸ್ಎಸ್
ಇದನ್ನೂ ಓದಿ : ಆರ್ಎಸ್ಎಸ್ ಚಟುವಟಿಕೆ ಪ್ರಶ್ನಿಸಿದ್ದಕ್ಕೆ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ
ಇಂತಹ ದೊಡ್ಡ ಮಟ್ಟದ ಪ್ರಭಾವ ಮತ್ತು ವ್ಯಾಪಕತೆಯನ್ನು ಹೊಂದಿರುವ ಆರ್ಎಸ್ಎಸ್ ತನ್ನ ಕಾನೂನುಬದ್ಧ ಸ್ಥಾನಮಾನ, ನೋಂದಣಿ, ಪದಾಧಿಕಾರಿಗಳು, ಹಣಕಾಸಿನ ಮೂಲಗಳು, ವೆಚ್ಚ, ತೆರಿಗೆ ಪಾವತಿ ಹಾಗೂ ಸಾರ್ವಜನಿಕ ಚಟುವಟಿಕೆಗಳಿಗೆ ಪಡೆದಿರುವ ಅನುಮತಿಗಳ ಕುರಿತು ಸ್ಪಷ್ಟನೆ ನೀಡಬೇಕಾಗಿದೆ.
ನಾಗರಿಕರು, ಕಾರ್ಮಿಕ ಸಂಘಟನೆಗಳು, ಸ್ವಯಂಸೇವಾ ಸಂಸ್ಥೆಗಳು, ಟ್ರಸ್ಟ್ಗಳು, ದೇವಾಲಯಗಳು ಹಾಗೂ ಕಂಪನಿಗಳಿಂದ ನೋಂದಣಿ, ವಿವರ ಬಹಿರಂಗ ಮತ್ತು ಕಾನೂನಿನ ಪರಿಪಾಲನೆಯನ್ನು ನಿರೀಕ್ಷಿಸುವಾಗ, ಆರ್ಎಸ್ಎಸ್ ಮಾತ್ರ ಏಕೆ ವಿನಾಯಿತಿ ಪಡೆಯಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ.
ತನ್ನ ಶತಮಾನೋತ್ಸವದ ಸಂದರ್ಭದಲ್ಲಿ ಆರ್ಎಸ್ಎಸ್ ಸಂವಿಧಾನಕ್ಕೆ ಬದ್ಧರಾಗುವ ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕು. ತನ್ನ ನೋಂದಣಿ, ಚಟುವಟಿಕೆಗಳು ಮತ್ತು ಹಣಕಾಸಿನ ಮಾಹಿತಿಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಅನ್ವಯಿಸುವ ತೆರಿಗೆಗಳನ್ನು ಪಾವತಿಸಬೇಕು ಹಾಗೂ ಸಂವಿಧಾನದ ಚೌಕಟ್ಟಿನೊಳಗೆ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು.
ನನ್ನ ಪತ್ರದಲ್ಲಿ ಉಲ್ಲೇಖಿಸಿರುವ ಪ್ರಶ್ನೆಗಳಿಗೆ ಆರ್ಎಸ್ಎಸ್ನಿಂದ ಶೀಘ್ರದಲ್ಲೇ ಪ್ರತಿಕ್ರಿಯೆ ದೊರೆಯುವ ನಿರೀಕ್ಷೆಯಲ್ಲಿದ್ದೇನೆ.”
ಪ್ರಿಯಾಂಕ್ ಖರ್ಗೆ ಅವರ ಈ ಪತ್ರ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಆರ್ಎಸ್ಎಸ್ ಕಡೆಯಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎಂಬ ಕುತೂಹಲ ಮೂಡಿಸಿದೆ. ಆರ್ಎಸ್ಎಸ್
ಇದನ್ನೂ ನೋಡಿ : ಬಿಜೆಪಿ–ಸಂಘಪರಿವಾರದಿಂದ ಇತಿಹಾಸ ವಿರೂಪಗೊಳಿಸುವ ಪ್ರಯತ್ನ – ಪ್ರಿಯಾಂಕ್ ಖರ್ಗೆ Janashakthi Media
