ಬೆಂಗಳೂರು: ನೈರುತ್ಯ ರೈಲ್ವೆಯ ವಿವಿಧ ವಿಭಾಗಗಳಲ್ಲಿ ನಡೆಯಲಿರುವ ಪದೋನ್ನತಿ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೆ ಅವಕಾಶ ಕಲ್ಪಿಸದಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪರೀಕ್ಷೆಗಳನ್ನು ಕನ್ನಡದಲ್ಲಿಯೂ ನಡೆಸುವಂತೆ ರೈಲ್ವೆ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಈ ಕುರಿತು ಪ್ರಕಟಣೆ ಹೊರಡಿಸಿದ್ದು, ನೈರುತ್ಯ ರೈಲ್ವೆಯ ಮೈಸೂರು ವಿಭಾಗವು ಗುಡ್ಸ್ ಟ್ರೇನ್ ಮ್ಯಾನೇಜರ್ ಹುದ್ದೆ ಭರ್ತಿಗೆ ಸಂಬಂಧಿಸಿದಂತೆ ಜೂನ್ 25ರಂದು ಕಂಪ್ಯೂಟರ್ ಆಧಾರಿತ ಪದೋನ್ನತಿ ಪರೀಕ್ಷೆ ನಡೆಸಲು ಮುಂದಾಗಿದೆ. ಇದೇ ರೀತಿಯ ಪರೀಕ್ಷೆಗಳು ಬೆಂಗಳೂರು ಮತ್ತು ಹುಬ್ಬಳ್ಳಿ ವಿಭಾಗಗಳಲ್ಲೂ ನಡೆಯಲಿವೆ ಎಂದು ತಿಳಿಸಿದ್ದಾರೆ.
ಆದರೆ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಸಿದ್ಧಪಡಿಸಲಾಗುತ್ತಿದ್ದು, ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ. ಇದರಿಂದ ಕನ್ನಡಿಗ ಉದ್ಯೋಗಿಗಳಿಗೆ ಅನ್ಯಾಯವಾಗುತ್ತಿದ್ದು, ಸಮಾನ ಅವಕಾಶದ ತತ್ವಕ್ಕೆ ಧಕ್ಕೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: “ಸರಕಾರಿ ಆಸ್ಪತ್ರೆಗಳ ಖಾಸಗೀಕರಣ: ಉಳ್ಳಾಲದಲ್ಲಿ ಆರೋಗ್ಯ ಸೇವೆ ಕುಸಿತ?”
ಕರವೇ ಹಲವು ವರ್ಷಗಳಿಂದ ರೈಲ್ವೆ ಇಲಾಖೆಯಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸುವಂತೆ ಆಗ್ರಹಿಸುತ್ತಾ ಬಂದಿದ್ದು, ರೈಲ್ವೆ ಮಂಡಳಿ ಹಾಗೂ ನೈರುತ್ಯ ರೈಲ್ವೆ ಆಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದಾಗ್ಯೂ, ಕನ್ನಡ ಭಾಷೆಗೆ ಸೂಕ್ತ ಮಾನ್ಯತೆ ದೊರೆಯುತ್ತಿಲ್ಲ ಎಂದು ಸಂಘಟನೆ ಆರೋಪಿಸಿದೆ.
ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಿದ್ದು, ರಾಜ್ಯದ ಉದ್ಯೋಗಿಗಳಿಗೆ ತಮ್ಮ ತಾಯ್ನುಡಿಯಲ್ಲಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಬೇಕು. ರೈಲ್ವೆ ನೇಮಕಾತಿ ಹಾಗೂ ಪದೋನ್ನತಿ ಪರೀಕ್ಷೆಗಳಲ್ಲಿ ಕನ್ನಡವನ್ನು ಸೇರಿಸಬೇಕು ಎಂಬುದು ಕರವೇಯ ಪ್ರಮುಖ ಬೇಡಿಕೆಯಾಗಿದೆ ಎಂದು ನಾರಾಯಣಗೌಡ ತಿಳಿಸಿದ್ದಾರೆ.
ಪರೀಕ್ಷೆಯಲ್ಲಿ ಕನ್ನಡ ಭಾಷೆ ಸೇರ್ಪಡೆಗೊಳಿಸುವ ಕುರಿತು ರೈಲ್ವೆ ಇಲಾಖೆ ತಕ್ಷಣ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕರವೇ ಎಚ್ಚರಿಕೆ ನೀಡಿದೆ.
ಇದನ್ನೂ ನೋಡಿ: ದೇವದಾಸಿ ಮಕ್ಕಳಿಗೂ ತಂದೆಯ ಹೆಸರಿನ ಹಕ್ಕು: ದಶಕಗಳ ಹೋರಾಟಕ್ಕೆ ಸಿಕ್ಕ ಐತಿಹಾಸಿಕ ಜಯ | ಬಿ. ಮಾಳಮ್ಮ | ಗುರುರಾಜ ದೇಸಾಯಿ
