ಬಿಡದಿ ರೈತರ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಿ; ರೈತರೊಂದಿಗೆ ಮಾತುಕತೆ ನಡೆಸಿ: ಡಾ. ಕೆ. ಪ್ರಕಾಶ್

ಬೆಂಗಳೂರು: ಬಿಡದಿ ಟೌನ್‌ಶಿಪ್‌ ನಿರ್ಮಾಣಕ್ಕಾಗಿ ರೈತರ ಭೂಸ್ವಾಧೀನ ಪ್ರಕ್ರಿಯೆಯನ್ನು ತಕ್ಷಣ ಕೈಬಿಟ್ಟು, ರೈತ ಮುಖಂಡರೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ. ಕೆ. ಪ್ರಕಾಶ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಿಡದಿ ಟೌನ್‌ಶಿಪ್‌ ಯೋಜನೆಯನ್ನು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ರಾಜಕೀಯ ವಿಷಯವಾಗಿ ನೋಡದೆ, 10 ಸಾವಿರಕ್ಕೂ ಹೆಚ್ಚು ರೈತ ಕುಟುಂಬಗಳ ಅಳಿವು–ಉಳಿವಿನ ಪ್ರಶ್ನೆಯಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಕಳೆದ ಸುಮಾರು 15 ತಿಂಗಳಿಂದ ರೈತರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಬಿಡದಿ ಮಾತ್ರವಲ್ಲದೆ ರಾಜ್ಯದ ವಿವಿಧ ಭಾಗಗಳ ರೈತರು ಹಾಗೂ ವಿವಿಧ ರಾಜಕೀಯ ಪಕ್ಷಗಳು, ರೈತ ಮತ್ತು ಜನಪರ ಸಂಘಟನೆಗಳು ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುತ್ತಿವೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಸೋನಂ ವಾಂಗ್‌ಚುಕ್‌ ಉಪವಾಸ: ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು; ಕೇಂದ್ರದ ವಿರುದ್ಧ ವಿಪಕ್ಷಗಳ ಆಕ್ರೋಶ

ಬಳ್ಳಾರಿ, ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ರೈತರ ಜಮೀನನ್ನು ಕಡಿಮೆ ಬೆಲೆಗೆ ಸ್ವಾಧೀನಪಡಿಸಿಕೊಂಡು ಖಾಸಗಿ ಕಾರ್ಪೊರೇಟ್ ಕಂಪನಿಗಳಿಗೆ ನೀಡುತ್ತಿರುವ ಬೆಳವಣಿಗೆಗಳು ರೈತರಲ್ಲಿ ಆತಂಕ ಉಂಟುಮಾಡಿವೆ ಎಂದು ಅವರು ಆರೋಪಿಸಿದರು.

ಸುಳ್ಳು ಪ್ರಕರಣಗಳನ್ನು ವಾಪಸ್ ಪಡೆಯಬೇಕು

ರೈತರ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿರುವ ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಹಾಗೂ ಭೂಮಿ ಕಳೆದುಕೊಳ್ಳುತ್ತಿರುವ ರೈತರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಡಾ. ಕೆ. ಪ್ರಕಾಶ್ ಆಗ್ರಹಿಸಿದರು.

ಯಶವಂತ ಅವರು ದೆಹಲಿಗೆ ತೆರಳುತ್ತಿದ್ದ ರೈಲಿನಲ್ಲಿದ್ದಾಗಲೂ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ. ಇಂತಹ ಕ್ರಮಗಳು ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸುತ್ತವೆ ಎಂದು ಅವರು ಹೇಳಿದರು.

ಬಹುತೇಕರು ಸಣ್ಣ ರೈತರು

ಬಿಡದಿ ಟೌನ್‌ಶಿಪ್‌ ಯೋಜನೆಗಾಗಿ ಆರಂಭದಲ್ಲಿ 7,481 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಸರ್ಕಾರ ಘೋಷಿಸಿತ್ತು. ಇದೀಗ ಎರಡು ಹಂತಗಳಲ್ಲಿ 7,250 ರೈತರಿಗೆ ಸೇರಿದ 5,448 ಎಕರೆ ಭೂಮಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ ಎಂದು ಅವರು ತಿಳಿಸಿದರು.

ಸರಾಸರಿ ಪ್ರತಿ ರೈತ ಕುಟುಂಬವು ಒಂದು ಎಕರೆಗಿಂತಲೂ ಕಡಿಮೆ ಭೂಮಿ ಹೊಂದಿದ್ದು, ಬಹುತೇಕರು ಸಣ್ಣ ಮತ್ತು ಅತಿಸಣ್ಣ ರೈತರು. ಅವರ ಜೀವನಾಧಾರವೇ ಈ ಭೂಮಿಯಾಗಿದೆ. ಇತ್ತೀಚಿನ ಪ್ರತಿಭಟನೆಯೊಂದರಲ್ಲಿ ಭಾಗವಹಿಸಿದ್ದ ಇಂಜಿನಿಯರಿಂಗ್ ಪದವೀಧರ ಯುವಕನೊಬ್ಬ, “ನನ್ನ ಶಿಕ್ಷಣಕ್ಕೂ ಈ ಭೂಮಿಯೇ ಕಾರಣ” ಎಂದು ಹೇಳಿರುವುದು ರೈತರ ಸಂಕಷ್ಟವನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

ಚೆನ್ನರಾಯಪಟ್ಟಣ ಮಾದರಿಯಲ್ಲಿ ಪರಿಹಾರ ಕಂಡುಕೊಳ್ಳಿ

ಬೆಂಗಳೂರಿನ ಚೆನ್ನರಾಯಪಟ್ಟಣದಲ್ಲಿ ರೈತರ ಹೋರಾಟದ ಸಂದರ್ಭದಲ್ಲಿ ಸರ್ಕಾರ ಅನುಸರಿಸಿದ್ದಂತೆ, ಬಿಡದಿಯಲ್ಲೂ ರೈತರೊಂದಿಗೆ ಮಾತುಕತೆ ನಡೆಸಿ ಒಮ್ಮತದ ಪರಿಹಾರ ಕಂಡುಕೊಳ್ಳಬೇಕು. ಬಲವಂತದ ಭೂಸ್ವಾಧೀನವನ್ನು ಕೈಬಿಟ್ಟು ರೈತರ ಹಿತವನ್ನು ಕಾಪಾಡುವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಡಾ. ಕೆ. ಪ್ರಕಾಶ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದನ್ನೂ ನೋಡಿ: ಮಹಿಳಾ ಮೀಸಲಾತಿ ತಕ್ಷಣ ಜಾರಿಗೊಳಿಸಿ; ಜನಗಣತಿ–ಡಿಲಿಮಿಟೇಶನ್‌ ಹೆಸರಲ್ಲಿ ವಿಳಂಬ ಬೇಡ: ನಾಗಮೋಹನ ದಾಸ್

Donate Janashakthi Media

Leave a Reply

Your email address will not be published. Required fields are marked *