ಭಾರಿ ಮಳೆ, ಆಕಸ್ಮಿಕ ಪ್ರವಾಹ ಎಚ್ಚರಿಕೆ – ಅಸ್ಸಾಂ ಹೈ ಅಲರ್ಟ್

ಅಸ್ಸಾಂ: ಸರ್ಕಾರವು ಪಕ್ಕದ ಅರುಣಾಚಲ ಪ್ರದೇಶ ರಾಜ್ಯದ ಲೋಯರ್ ಸುಬನ್ಸಿರಿ ಜಿಲ್ಲೆಯಲ್ಲಿ ಭಾರಿ ಮಳೆ ಹಾಗೂ ಆಕಸ್ಮಿಕ ಪ್ರವಾಹ (ಫ್ಲ್ಯಾಶ್ ಫ್ಲಡ್) ವರದಿಯಾದ ಹಿನ್ನೆಲೆಯಲ್ಲಿ ಜೂನ್‌ 24ರಂದು ಹೈ ಅಲರ್ಟ್ ಘೋಷಿಸಿದೆ.

ಲೋಯರ್ ಸುಬನ್ಸಿರಿಯಲ್ಲಿನ ಮಳೆಯ ಪರಿಣಾಮ ಅಸ್ಸಾಂನ ಹಲವಾರು ಜಿಲ್ಲೆಗಳ ಮೇಲೆ ಕೆಳಭಾಗದಲ್ಲಿ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.

ಪ್ರಾದೇಶಿಕ ಹವಾಮಾನ ಕೇಂದ್ರ, ಗುವಾಹಟಿ ಮತ್ತು ಇಟಾನಗರ ಹವಾಮಾನ ಕೇಂದ್ರದ ಮಾಹಿತಿಯಂತೆ, ಯಜಾಲಿ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 72.8 ಮಿ.ಮೀ. ಮಳೆಯಾಗಿದ್ದು, ಜೂನ್ 24ರಂದು ಬೆಳಿಗ್ಗೆ 6ರಿಂದ 9 ಗಂಟೆಯ ನಡುವೆ ಹೆಚ್ಚಿನ ಮಳೆಯಾಗಿದೆ.

ಇದನ್ನೂ ಓದಿ: ಸ್ಥಳೀಯ ಚುನಾವಣೆ: ಗ್ರಾ. ಪಂಗಳಲ್ಲಿ ಸಹಾಯ ಕೇಂದ್ರ ಆರಂಭ

ಉಪಗ್ರಹ ಮತ್ತು ರಾಡಾರ್ ಚಿತ್ರಣಗಳ ಪ್ರಕಾರ, ಈ ಭಾರಿ ಮಳೆಯ ಪರಿಣಾಮವಾಗಿ ಮೇಲ್ಭಾಗದ ಜಲಾಶಯ ಪ್ರದೇಶಗಳಲ್ಲಿ ಆಕಸ್ಮಿಕ ಪ್ರವಾಹ ಮತ್ತು ನದಿ ನೀರಿನ ಹರಿವು ಹೆಚ್ಚಳ ಕಂಡುಬಂದಿದೆ.

ಪನ್ಯೋರ್ ಲೋಯರ್ ಹೈಡ್ರೋಎಲೆಕ್ಟ್ರಿಕ್ ಪ್ರಾಜೆಕ್ಟ್ ಪ್ರದೇಶದಲ್ಲಿ ಫ್ಲ್ಯಾಶ್ ಫ್ಲಡ್ ವರದಿಯಾಗಿದೆ. ನೀರಿನ ಹರಿವು ಏಕಾಏಕಿ ಹೆಚ್ಚಾದ ಕಾರಣ, ಒಂದು ಸ್ಪಿಲ್‌ವೇ ಗೇಟ್ ತೆರೆಯಲಾಗಿದ್ದು, ಹೆಚ್ಚುವರಿ ನೀರನ್ನು ಹೊರಹಾಕಲಾಗಿದೆ. ಯಜಾಲಿ ಪ್ರದೇಶದಲ್ಲಿ ಮಣ್ಣು-ಕಲ್ಲುಗಳೊಂದಿಗೆ ಬಂದ ಪ್ರವಾಹದಿಂದ ಮನೆಗಳು ಮತ್ತು ಮೂಲಸೌಕರ್ಯಗಳಿಗೆ ಹಾನಿಯಾಗಿದೆ.

ಮಾಧ್ಯಮ ವರದಿಗಳ ಪ್ರಕಾರ ಮೂವರು ಕಾಣೆಯಾಗಿರುವ ಸಾಧ್ಯತೆ ಇದೆ. ಆದರೆ ಅಧಿಕಾರಿಗಳು ಇನ್ನೂ ಸಾವು-ನಷ್ಟವನ್ನು ಅಧಿಕೃತವಾಗಿ ದೃಢಪಡಿಸಿಲ್ಲ.

ಮೇಲ್ಭಾಗದಲ್ಲಿ ಮಳೆಯು ಮುಂದುವರಿದ ಹಿನ್ನೆಲೆಯಲ್ಲಿ ಬ್ರಹ್ಮಪುತ್ರ ನದಿ ಹಾಗೂ ಅದರ ಉಪನದಿಗಳಲ್ಲಿ ನೀರಿನ ಮಟ್ಟ ಮತ್ತು ಹರಿವಿನ ವೇಗ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

ಪ್ರವಾಹದ ಅಲೆ ಮೊದಲು ಧೇಮಾಜಿ, ಲಖಿಂಪುರ್, ಬಿಸ್ವನಾಥ್ ಮತ್ತು ಸೋನಿತ್ಪುರ್ ಜಿಲ್ಲೆಗಳಿಗೆ ತಲುಪಿ, ಮುಂದಿನ ಒಂದು-ಎರಡು ದಿನಗಳಲ್ಲಿ ಧುಬ್ರಿ ತನಕ ಹರಡುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಸೂಚನೆಯಂತೆ, ರಾಜ್ಯದ ಉನ್ನತ ಮಟ್ಟದಲ್ಲಿ ಪರಿಸ್ಥಿತಿಯನ್ನು ನಿಗಾ ವಹಿಸಲಾಗುತ್ತಿದೆ. ಎಲ್ಲಾ ಜಿಲ್ಲಾಡಳಿತಗಳಿಗೆ ಗರಿಷ್ಠ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಹಾಗೂ ಇತರ ತುರ್ತು ಸೇವಾ ತಂಡಗಳನ್ನು ಸಿದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ನದಿ ಪರಿಸ್ಥಿತಿ ಮತ್ತು ಅಪಾಯ ಪ್ರದೇಶಗಳನ್ನು ಅಧಿಕಾರಿಗಳು ನಿರಂತರವಾಗಿ ಗಮನಿಸುತ್ತಿದ್ದಾರೆ.

ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರಬೇಕು ಮತ್ತು ಅಗತ್ಯವಿದ್ದರೆ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಸರ್ಕಾರ ಸಲಹೆ ನೀಡಿದೆ. ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ದೋಣಿಗಳಲ್ಲಿ ಪ್ರಯಾಣಿಸಬಾರದು ಎಂದು ಎಚ್ಚರಿಸಲಾಗಿದೆ.

ಇದನ್ನೂ ನೋಡಿ: ಕಾಂಗ್ರೆಸ್‌ ಸರ್ಕಾರಕ್ಕೆ 3 ವರ್ಷ | ಮಹಿಳಾ ಮತ್ತು ಮಕ್ಕಳ ಕಲ್ಯಾಣ: ಘೋಷಣೆ ಎಷ್ಟು? ಸಾಧನೆ ಎಷ್ಟು? Janashakthi Media

Donate Janashakthi Media

Leave a Reply

Your email address will not be published. Required fields are marked *