ಬೆಂಗಳೂರು: 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದ ಮೆಕ್ಕೆಜೋಳವನ್ನು ರೈತರಿಂದ ನೇರವಾಗಿ ಖರೀದಿಸಿ ಡಿಸ್ಟಿಲರಿಗಳಿಗೆ ಸರಬರಾಜು ಮಾಡುವಂತೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ(ಕೆಎಸ್‍ಸಿಎಂಎಫ್) ಸಂಸ್ಥೆಗೆ ರಾಜ್ಯ ಸರ್ಕಾರ ನವೆಂಬ್ 30ರಂದು ಆದೇಶ ಹೊರಡಿಸಿದೆ.
ಧಾನ್ಯ ಆಧಾರಿತ ಎಥನಾಲ್ ಉತ್ಪಾದಿಸುವ ಡಿಸ್ಟಿಲರಿಗಳಿಗೆ ಮೊದಲು ತ್ರೈಮಾಸಿಕದಲ್ಲಿ(2025 ನವೆಂಬರ್ 25ರಿಂದ 2026 ಜನವರಿ 26ರವರೆಗೆ) ಒಟ್ಟು 44,895 ಮೆಟ್ರಿಕ್ ಟನ್ ಮೆಕ್ಕೆಜೋಳ ಅಗತ್ಯವಿದ್ದು, ಅದರ ಶೇ.50ರಷ್ಟು ಅಂದರೆ 22,446 ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ರೈತರಿಂದ ಪಿಎಸಿಎಸ್/ಟಿಎಪಿಸಿಎಂಎಸ್ ಸಂಸ್ಥೆಗಳ ಮೂಲಕ ಖರೀದಿಸಿ ಡಿಸ್ಟಿಲರಿಗಳ ಗೋದಾಮುಗಳಿಗೆ ಸರಬರಾಜು ಮಾಡುವಂತೆ ಕೆಎಸ್‍ಸಿಎಂಎಫ್‍ಗೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಕಬ್ಬನ್ ಪಾರ್ಕ್ ಪುಷ್ಪ ಪ್ರದರ್ಶನದಲ್ಲಿ : ಸಾಹಾಸ್ ಸಂಸ್ಥೆಯಿಂದ ತ್ಯಾಜ್ಯ ವಿಲೇವಾರಿ ಜಾಗೃತಿ ಅಭಿಯಾನ – ರಾಧ ಬಿ ಎಸ್
ಪ್ರತಿ ರೈತರಿಂದ ನೇರವಾಗಿ ಗರಿಷ್ಟ 5 ಕ್ವಿಂಟಾಲ್ ಮೆಕ್ಕೆಜೋಳ ಉತ್ಪನ್ನವನ್ನು ಬೆಂಬಲ ಬೆಲೆ ದರ ಪ್ರತಿ ಕ್ವಿಂಟಾಲ್‍ಗೆ 2,400 ರೂ.ನಂತೆ ಖರೀದಿಸಬೇಕು ಮತ್ತು ಡಿಸ್ಟಿಲರಿಗಳ ಸಮೀಪದ ಪಿಎಸಿಎಸ್‍ಗಳ ಮೂಲಕ ಖರೀದಿಸಲು ಆದ್ಯತೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳವು ಖರೀದಿದಾರ ಡಿಸ್ಟಿಲರಿಗಳಿಂದ ಮಾರಾಟದ ಮೊತ್ತ ಪಡೆದ ದಿನಾಂಕದಿಂದ ಮೂರು ದಿನಗಳಲ್ಲಿ ಸಂಬಂಧಪಟ್ಟ ರೈತರಿಗೆ ಡಿಬಿಟಿ ಮೂಲಕ ಪಾವತಿಸಬೇಕು ಎಂದು ತಿಳಿಸಲಾಗಿದೆ.
ಖರೀದಿ ಪ್ರಕ್ರಿಯೆಗೆ ಎನ್‍ಇಎಂಎಲ್ ಸಂಸ್ಥೆಯ ತಂತ್ರಾಂಶ ಅಳವಡಿಸಿಕೊಂಡು ಸರಕಾರದ ಎಫ್‍ಆರ್‍ಯುಐಟಿಎಸ್ ಪೋರ್ಟಲ್ ಮತ್ತು ಡಿಬಿಟಿ ಸಂಯೋಜನೆಯೊಂದಿಗೆ ಡಿಸೆಂಬರ್ 1ರಿಂದ ಮೂರು ದಿನಗಳವರೆಗೆ ರೈತರ ನೋಂದಣಿ ಕಾರ್ಯವನ್ನು ನಿರ್ವಹಿಸಬೇಕು ಎಂದು ಹೇಳಲಾಗಿದೆ.
ಇದನ್ನೂ ನೋಡಿ: ಬಾಕಿ ವೇತನಕ್ಕಾಗಿ ಬೀಡಿ ನೌಕರರ ಪ್ರತಿಭಟನೆ Janashakthi Media
