ನವದೆಹಲಿ: ಪಶ್ಚಿಮ ಬಂಗಾಳ ಪೊಲೀಸರು ಟಿಎಂಸಿ (ತೃಣಮೂಲ ಕಾಂಗ್ರೆಸ್) ಮಾಜಿ ಶಾಸಕ ಜಹಾಂಗೀರ್ ಖಾನ್ ಅವರನ್ನು ಜೂನ್8ರಂದು ಬಂಧಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ವೇಳೆ ಫಾಲ್ತಾ ಕ್ಷೇತ್ರದಲ್ಲಿ ಮರುಮತದಾನ ಘೋಷಣೆಯಾಗುತ್ತಿದ್ದಂತೆ ಅವರು ವಿವಾದದ ಕೇಂದ್ರಬಿಂದುವಾಗಿದ್ದರು.
ಫಾಲ್ತಾ ಕ್ಷೇತ್ರದಲ್ಲಿ ಅಕ್ರಮಗಳು ನಡೆದಿರುವ ಆರೋಪಗಳ ನಡುವೆ ಖಾನ್ ಸ್ಪರ್ಧಿಸುತ್ತಿದ್ದು, ಈ ಹಿನ್ನೆಲೆ ಪ್ರಕರಣಗಳು ದಾಖಲಾಗಿದ್ದವು. ಈ ನಡುವೆ, ಕಲ್ಕತ್ತಾ ಹೈಕೋರ್ಟ್‌ನ ರಜೆ ಪೀಠವು ಖಾನ್ ವಿರುದ್ಧ ದಾಖಲಾಗಿದ್ದ ಐದು ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ನೀಡಿದ್ದ ಮಧ್ಯಂತರ ರಕ್ಷಣೆಯನ್ನು ವಿಸ್ತರಿಸಲು ನಿರಾಕರಿಸಿದ ಕೆಲವು ವಾರಗಳ ಬಳಿಕ ಬಂಧನ ನಡೆದಿದೆ. ನ್ಯಾಯಮೂರ್ತಿ ಪಾರ್ಥ ಸಾರಥಿ ಚಟರ್ಜಿ ಈ ವಿಚಾರವನ್ನು ನಿಯಮಿತ ಪೀಠಕ್ಕೆ ವರ್ಗಾಯಿಸಿದ್ದರು.
ಇದಕ್ಕೂ ಮೊದಲು, ಮೇ 21ರಂದು ನಡೆದ ಮರುಮತದಾನದ ಹಿನ್ನೆಲೆಯಲ್ಲಿ ಮೇ 26ರವರೆಗೆ ನ್ಯಾಯಮೂರ್ತಿ ಸಾಗತಾ ಭಟ್ಟಾಚಾರ್ಯ ಅವರು ಖಾನ್ ಅವರಿಗೆ ಮಧ್ಯಂತರ ರಕ್ಷಣೆಯನ್ನು ನೀಡಿದ್ದರು. ಈ ಅವಧಿ ಮುಗಿಯುವ ಮೊದಲು ರಾಜ್ಯ ಸರ್ಕಾರ ರಕ್ಷಣೆಯನ್ನು ರದ್ದುಪಡಿಸಲು ಮನವಿ ಸಲ್ಲಿಸಿದ್ದರೂ, ನ್ಯಾಯಾಲಯ ಮಧ್ಯಪ್ರವೇಶಿಸಲು ನಿರಾಕರಿಸಿತ್ತು.
ಇದನ್ನೂ ಓದಿ: ರಾಷ್ಟ್ರೀಯ ಪ್ರಶಸ್ತಿ ವಿಜೇತ ಮಲಯಾಳಂ ನಟ ಸಲೀಂ ಕುಮಾರ್ ನಿಧನ
ಪಶ್ಚಿಮ ಬಂಗಾಳ ಪೊಲೀಸರಿಂದ ಕ್ರಮ ಕೈಗೊಳ್ಳದಂತೆ ರಕ್ಷಣೆಯನ್ನು ಕೋರಿ ಖಾನ್ ಹೈಕೋರ್ಟ್‌ಗೆ ಮೊರೆ ಹೋಗಿದ್ದು, ತನ್ನ ವಿರುದ್ಧ ಪುನಃಪುನಃ ಅಪರಾಧ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಆರೋಪಿಸಿದ್ದರು.
ಈ ಅರ್ಜಿ ಸಲ್ಲಿಕೆಗೆ ಎರಡು ದಿನಗಳ ಮುನ್ನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ‘ಪುಷ್ಪಾ’ ಪ್ರಕರಣವನ್ನು ಸ್ವತಃ ನೋಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಮೇ 16ರಂದು ಫಾಲ್ತಾದಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಖಾನ್ ಹೆಸರನ್ನು ಉಲ್ಲೇಖಿಸದೇ, “ಅವನು ಅತ್ಯಂತ ಕುಖ್ಯಾತ ಅಪರಾಧಿ; ಅವನ ಪ್ರಕರಣವನ್ನು ನಾನು ಸ್ವತಃ ನೋಡಿಕೊಳ್ಳುತ್ತೇನೆ. ಈ ‘ಪುಷ್ಪಾ’ ಈಗ ನನ್ನ ಜವಾಬ್ದಾರಿ” ಎಂದು ಹೇಳಿದ್ದರು.
ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಖಾನ್ ತಮ್ಮನ್ನು “ಪುಷ್ಪಾ” ಎಂದು ಕರೆಯಿಸಿಕೊಂಡಿದ್ದು, ಅದು ಅಲ್ಲು ಅರ್ಜುನ್ ಅಭಿನಯದ ‘ಪುಷ್ಪಾ’ ಚಿತ್ರದಲ್ಲಿನ ಸ್ಮಗ್ಲರ್ ಪಾತ್ರಕ್ಕೆ ಉಲ್ಲೇಖವಾಗಿತ್ತು. ಇದು, ಚುನಾವಣಾ ಆಯೋಗದ ವೀಕ್ಷಕರಾಗಿ ನಿಯೋಜಿತವಾಗಿದ್ದ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮರನ್ನು ‘ಸಿಂಘಮ್’ ಪಾತ್ರಕ್ಕೆ ಹೋಲಿಸಿದ ಸಂದರ್ಭದಲ್ಲಿತ್ತು.
ಫಾಲ್ತಾ ಮರುಮತದಾನದಲ್ಲಿ ಬಿಜೆಪಿ ಅಭ್ಯರ್ಥಿ ದೇವಾಂಗ್ಶು ಪಾಂಡಾ 1,09,021 ಮತಗಳ ಭರ್ಜರಿ ಅಂತರದಿಂದ ಗೆಲುವು ಸಾಧಿಸಿದರು. ಮುಖ್ಯಮಂತ್ರಿ ಅಧಿಕಾರಿ ಕೇಳಿದ್ದ ಒಂದು ಲಕ್ಷ ಮತಗಳ ಅಂತರವನ್ನು ಮೀರಿಸಿ ಈ ಗೆಲುವು ದಾಖಲಾಯಿತು. ಇದು 2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕ ಅತಿ ಹೆಚ್ಚು ಮತಾಂತರವಾಗಿದ್ದು, ಮಾತಿಗರಾ-ನಕ್ಸಲ್ಬಾರಿ ಕ್ಷೇತ್ರದ 1,04,265 ಮತಗಳ ದಾಖಲೆಯನ್ನು ಮೀರಿಸಿದೆ.
ಫಾಲ್ತಾ ಕ್ಷೇತ್ರದಲ್ಲಿ ಬಿಜೆಪಿಗೆ 71.2% ಮತಗಳು ಲಭಿಸಿದ್ದು, 2021ರ 36.7% ಮತಗಳಿಗಿಂತ ಗಣನೀಯ ಏರಿಕೆ ಕಂಡಿದೆ. ಸಿಪಿಐ(ಎಂ) ಎರಡನೇ ಸ್ಥಾನ ಪಡೆದುಕೊಂಡಿದ್ದರೂ ಬಹಳ ಹಿಂದಿದೆ.
ಮರುಮತದಾನದಲ್ಲಿ 88% ಕ್ಕೂ ಅಧಿಕ ಮತದಾನವಾಗಿದ್ದು, ಭಾರೀ ಸಿಎಪಿಎಫ್ ಭದ್ರತೆಯ ನಡುವೆ ಮತದಾರರು “ಭಯವಿಲ್ಲದೆ ಮತ ಚಲಾಯಿಸಿದ್ದೇವೆ” ಎಂದು ತಿಳಿಸಿದ್ದಾರೆ. ಮತದಾನಕ್ಕೆ 48 ಗಂಟೆಗಳ ಮುನ್ನ ಖಾನ್ ಸ್ಪರ್ಧೆಯಿಂದ ಹಿಂದೆ ಸರಿದ ನಂತರ ಟಿಎಂಸಿ ಧ್ವಜಗಳು ಕ್ಷೇತ್ರದಲ್ಲಿ ಕಾಣಿಸದಂತಾಗಿದ್ದವು.
ಇದನ್ನೂ ನೋಡಿ: ಸಾಮಾಜಿಕ ನ್ಯಾಯ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ – ಕೆ.ನೀಲಾ Janashakthi Media
