ನವದೆಹಲಿ: ನೀಟ್ ಯುಜಿ–2026 ಮರುಪರೀಕ್ಷೆಗೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಜಾರಿಗೆ ತರುವಂತೆ ಪರೀಕ್ಷಾ ಪ್ರಾಧಿಕಾರ ಮುಂದಾಗಿದೆ. ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ವಿಷಯ ತಜ್ಞರು, ಭಾಷಾಂತರಕಾರರು ಸೇರಿದಂತೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲರನ್ನು ಅಜ್ಞಾತ ಹಾಗೂ ಸುರಕ್ಷಿತ ಸ್ಥಳದಲ್ಲಿ ಕಣ್ಗಾವಲಿನಡಿ ಇರಿಸಲಾಗಿದೆ.
ಪ್ರಶ್ನೆಪತ್ರಿಕೆ ಸಿದ್ಧತೆ ಅಂತಿಮ ಹಂತದಲ್ಲಿರುವಾಗ ಭಾಗವಹಿಸುವ ಸಿಬ್ಬಂದಿಗೆ ಬಾಹ್ಯ ಸಂಪರ್ಕ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಈ “ಐಸೊಲೇಶನ್” ಕ್ರಮಗಳು ಜೂನ್ 21ರಂದು ಪರೀಕ್ಷೆ ಮುಗಿಯುವವರೆಗೆ ಮುಂದುವರಿಯಲಿವೆ ಎಂದು ತಿಳಿದುಬಂದಿದೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ನಂತರದ ಮರುಪರೀಕ್ಷೆ ವಿವಾದದ ಹಿನ್ನೆಲೆ, ಸುಮಾರು 22 ಲಕ್ಷ ಅಭ್ಯರ್ಥಿಗಳು ಮತ್ತೆ ಪರೀಕ್ಷೆ ಬರೆಯಬೇಕಾದ ಪರಿಸ್ಥಿತಿ ಉಂಟಾಗಿದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕವೂ ಹೆಚ್ಚಾಗಿದೆ.
ಇದನ್ನೂ ಓದಿ: 2,823 ಎಕರೆ ಭೂಸ್ವಾಧೀನ ವಿರೋಧಿಸಿ ‘ವಿಧಾನಸೌಧ ಚಲೋ’; ರೈತರ ಬೈಕ್ ರ್ಯಾಲಿ ತಡೆದ ಪೊಲೀಸರು
ಉನ್ನತ ಅಧಿಕಾರಿಗಳ ಪ್ರಕಾರ, ಪ್ರಶ್ನೆಪತ್ರಿಕೆ ತಯಾರಿಕಾ ಹಂತದಲ್ಲಿ ಭಾಗವಹಿಸುವ ವಿಷಯ ತಜ್ಞರು, ಮಾರ್ಗದರ್ಶಕರು ಹಾಗೂ ಭಾಷಾಂತರಕಾರರನ್ನು ಒಳಗೊಂಡ ಸಿಬ್ಬಂದಿಗೆ ಬಹುಮಟ್ಟದ ಭದ್ರತಾ ವ್ಯವಸ್ಥೆ ಒದಗಿಸಲಾಗಿದೆ. ಅವರ ಚಲನವಲನಗಳ ಮೇಲೆ ನಿರಂತರ ನಿಗಾ ಇರಿಸಲಾಗುತ್ತಿದೆ.
ಈ ಭದ್ರತಾ ವಲಯದಲ್ಲಿ ಮೊಬೈಲ್ ಫೋನ್, ಲ್ಯಾಪ್ಟಾಪ್ ಹಾಗೂ ಇತರ ವೈಯಕ್ತಿಕ ಡಿಜಿಟಲ್ ಸಾಧನಗಳ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ. ಇಂಟರ್ನೆಟ್ ಸಂಪರ್ಕಕ್ಕೂ ನಿರ್ಬಂಧ ವಿಧಿಸಲಾಗಿದೆ. ಪ್ರವೇಶ ಮತ್ತು ನಿರ್ಗಮನದ ವಿವರಗಳನ್ನು ದಾಖಲಿಸಲಾಗುತ್ತಿದ್ದು, ಅಧಿಕೃತ ಸಿಬ್ಬಂದಿಗೆ ಮಾತ್ರ ಪ್ರವೇಶ ಅವಕಾಶ ನೀಡಲಾಗಿದೆ.
ಶಿಕ್ಷಣ ಸಚಿವಾಲಯ ಹಾಗೂ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ರೂಪಿಸಿರುವ ಬಹುಹಂತದ ಭದ್ರತಾ ಚೌಕಟ್ಟಿನ ಭಾಗವಾಗಿ ಈ ಐಸೊಲೇಶನ್ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಮರುಪರೀಕ್ಷೆ ಜೂನ್ 21ರಂದು ಮಧ್ಯಾಹ್ನ 2ರಿಂದ ಸಂಜೆ 5.15ರವರೆಗೆ ದೇಶದ 551 ಕೇಂದ್ರಗಳು ಹಾಗೂ ವಿದೇಶದ 14 ನಗರಗಳಲ್ಲಿ ನಡೆಯಲಿದೆ.
ಇದನ್ನೂ ನೋಡಿ: ಸರಕಾರಕ್ಕೆ ತೈಲದ ಆಟ, ಜನರಿಗೆ ಜೇಬಿನ ದರೋಡೆ! | ವಿಶ್ಲೇಷಣೆ – ಗುರುರಾಜ ದೇಸಾಯಿ Janashakthi Media
