ಮುಸ್ಲಿಂ ಮಹಿಳೆಯರಿಗೆ ಕಂಬಳಿ ನೀಡಲು ನಿರಾಕರಿಸಿದ ಬಿಜೆಪಿ ಮಾಜಿ ಸಂಸದ

ಜೈಪುರ: ಮುಸ್ಲಿಂ ಮಹಿಳೆಯರ ಹೆಸರು ಕೇಳಿ, ಅವರಿಗೆ ಕಂಬಳಿ ನೀಡಲು ನಿರಾಕರಿಸಿ, “ಪ್ರಧಾನಿ ಮೋದಿ ಅವರನ್ನು ನಿಂದಿಸುವವರಿಗೆ ಸವಲತ್ತುಗಳನ್ನು ಪಡೆಯುವ ಹಕ್ಕಿಲ್ಲ” ಎಂದು ಬಡವರಿಗೆ ಕಂಬಳಿ ವಿತರಿಸುವ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜಸ್ಥಾನದ ಬಿಜೆಪಿ ಮಾಜಿ ಸಂಸದ ಸುಖ್‌ಬೀರ್ ಸಿಂಗ್ ಚೌನಪುರಿಯಾ ಹೇಳಿದ್ದಾರೆ. ಮುಸ್ಲಿಂ

“ಪ್ರಧಾನಿ ಮೋದಿಯವರನ್ನು ದೂಷಿಸುವವರಿಗೆ ಕಂಬಳಿ ಪಡೆಯುವ ಹಕ್ಕಿಲ್ಲ” ಎಂದು ಅವರು ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಘಟನೆಯ ಹಿನ್ನೆಲೆ

ಟೋಂಕ್ ಸವಾಯಿ ಮಾಧೋಪುರ್ ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾಗಿರುವ ಜೌನಾಪುರಿಯಾ ಅವರು ಇತ್ತೀಚೆಗೆ ಬಡವರಿಗೆ ಕಂಬಳಿ ಹಂಚುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸಾಲಿನಲ್ಲಿ ನಿಂತಿದ್ದ ಮಹಿಳೆಯೊಬ್ಬರ ಹೆಸರು ಕೇಳಿದ ಮಾಜಿ ಸಂಸದರು, ಅವರು ಮುಸ್ಲಿಂ ಎಂದು ತಿಳಿಯುತ್ತಿದ್ದಂತೆಯೇ ಕಂಬಳಿ ನೀಡದಂತೆ ತಮ್ಮ ಸಹಾಯಕರಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಬಿಸಿಯೂಟ ನೌಕರರ; ಆಶಾ ಕಾರ್ಯಕರ್ತರ ಗೌರವ ಧನ ಹೆಚ್ಚಳಕ್ಕೆ ಮನವಿ ಸಲ್ಲಿಕೆ

“ನನ್ನ ಮಾತು ಕೇಳಿ, ಯಾರು ಪ್ರಧಾನಿ ಮೋದಿಯವರನ್ನು ನಿಂದಿಸುತ್ತಾರೋ ಅವರಿಗೆ ಈ ಕಂಬಳಿ ಪಡೆಯುವ ಅರ್ಹತೆ ಇಲ್ಲ. ನಿಮಗೆ ಇದರಿಂದ ಬೇಸರವಾದರೆ ನಾನು ಏನೂ ಮಾಡಲು ಸಾಧ್ಯವಿಲ್ಲ, ಇಲ್ಲಿಂದ ಜಾಗ ಖಾಲಿ ಮಾಡಿ,” ಎಂದು ಮಹಿಳೆಯರನ್ನು ಉದ್ದೇಶಿಸಿ ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಸಾರ್ವಜನಿಕರ ಆಕ್ರೋಶ – ಪ್ರತಿಭಟನೆ

ಕಂಬಳಿ ಪಡೆಯಲು ಗಂಟೆಗಟ್ಟಲೆ ಕಾಯುತ್ತಿದ್ದ ಮಹಿಳೆಯರನ್ನು ಖಾಲಿ ಕೈಯಲ್ಲಿ ಕಳುಹಿಸಿದ್ದಕ್ಕೆ ಸ್ಥಳೀಯರು ಮಾಜಿ ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಸಾರ್ವಜನಿಕರು ಮತ್ತು ಸಂಸದರ ನಡುವೆ ವಾಗ್ವಾದ ನಡೆದಿದೆ. ಇದಕ್ಕೆ ಪ್ರತಿಕ್ರಿಯಿಸಿದ ಜೌನಾಪುರಿಯಾ, ಇದು ನನ್ನ ವೈಯಕ್ತಿಕ ಹಣದಿಂದ ಮಾಡುತ್ತಿರುವ ವಿತರಣೆ, ಇದರಲ್ಲಿ ಸರ್ಕಾರದ ಹಣವಿಲ್ಲ” ಎಂದು ಸಮರ್ಥಿಸಿಕೊಂಡು ಸ್ಥಳದಿಂದ ನಿರ್ಗಮಿಸಿದ್ದಾರೆ.

ರಾಜಸ್ಥಾನ ವಿಧಾನಸಭೆಯ ಬಜೆಟ್ ಅಧಿವೇಶನ ನಡೆಯುತ್ತಿರುವ ಬೆನ್ನಲ್ಲೇ ಈ ವಿಡಿಯೋ ಹೊರಬಂದಿರುವುದು ಭಜನ್ ಲಾಲ್ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇಕ್ಕಟ್ಟು ತಂದಿದೆ. ಸಚಿನ್ ಪೈಲಟ್ ಅವರ ಭದ್ರಕೋಟೆಯಾಗಿರುವ ಟೋಂಕ್ ಜಿಲ್ಲೆಯಲ್ಲಿ ನಡೆದ ಈ ಘಟನೆಯನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಕಾಂಗ್ರೆಸ್ ತೀವ್ರ ವಾಗ್ದಾಳಿ

ಈ ಘಟನೆಯನ್ನು ಕಾಂಗ್ರೆಸ್ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.”ಬಡವರ ಹೆಸರು ಮತ್ತು ಧರ್ಮ ಕೇಳಿ ಕಂಬಳಿ ಕಿತ್ತುಕೊಳ್ಳುವುದು ಅಮಾನವೀಯ ಮತ್ತು ಸಂವಿಧಾನಕ್ಕೆ ಮಾಡಿದ ಅವಮಾನ. ಪ್ರಧಾನಿಯವರು ಇಂತಹ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು,” ಎಂದು ಸಂಸದ ಹರೀಶ್ ಚಂದ್ರ ಮೀನಾ ಅವರು ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ನೋಡಿ: ಪಿಚ್ಚರ್ ಪಯಣ 167 |ಪಿಚ್ಚರ್ ಪಯಣ 167 | “Dry Leaf : ಆಟದ ಮಾಟ ಬದುಕಿನ ಪಾಠ”| Janashakthi Media

Donate Janashakthi Media

Leave a Reply

Your email address will not be published. Required fields are marked *