ನಾಗರಹೊಳೆ| ಆದಿವಾಸಿ ಸಂವಾದಕ್ಕೆ ಅರಣ್ಯ ಇಲಾಖೆ ತಡೆ: ಪ್ರತಿಭಟನೆ ತೀವ್ರ

ಹುಣಸೂರು: ಮೇ 5 ರಿಂದ 7ರ ವರೆಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೂರ್ಕಲ್‌ನಲ್ಲಿ ಇತ್ತೀಚೆಗೆ ನಾಗರಹೊಳೆ ಆದಿವಾಸಿ ಜಮ್ಮ ಪಾಳೆ ಹಕ್ಕು ಸ್ಥಾಪನ ಸಮಿತಿ ವತಿಯಿಂದ ಆಯೋಜಿಸಿದ್ದ ಮೂರು ದಿನಗಳ ಸಮುದಾಯ ಸಂವಾದ ಕಾರ್ಯಕ್ರಮ ನಡೆಯದಂತೆ ಬಲವಂತವಾಗಿ ತಡೆಯೊಡ್ಡಿದ ಅರಣ್ಯ ಇಲಾಖೆ ಅಧಿಕಾರಿಗಳ ವರ್ತನೆ ವಿರೋಧಿಸಿ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.

ಉದ್ಯಾನವನದ ನಾಣಾಚ್ಚಿ ಗೇಟ್ ಸಮೀಪದ ಬಾಳೆಕೋವು ಹಾಡಿಯಲ್ಲಿ ಈ ಕುರಿತು ಆಯೋಜಿಸಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಸಮಿತಿ ಸದಸ್ಯರು ಗ್ರಾಮಸಭೆಗಳು ಅನುಮತಿ ಬೇಡುವವರಲ್ಲ, ಕಾನೂನುಬದ್ಧ ಹಕ್ಕುಗಳನ್ನು ಸಂವಿಧಾನಾತ್ಮಕವಾಗಿ ಚಲಾಯಿಸುವ ಹಕ್ಕುದಾರರು. ನಾವು ಮೌನವಾಗಿರುವುದಿಲ್ಲ, ನಾವು ಬೆದರಿಕೆಗೆ ಜಗ್ಗುವುದಿಲ್ಲ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ಸಮಿತಿ ಸದಸ್ಯ ಜೆ.ಎ.ಶಿವು, ಮೂರ್ಕಲ್‌ನಲ್ಲಿ ಸಮಿತಿಯಿಂದ ಆಯೋಜಿಸಿದ್ದ ಸಂರಕ್ಷಣೆಯ ಇತಿಹಾಸ, ಹಿಂಸೆ ಮತ್ತು ಜನರ ಹೋರಾಟ ವಿಷಯದ ಕುರಿತಾಗಿ ಸಂವಾದ ಕಾರ್ಯಕ್ರಮವನ್ನು ಅರಣ್ಯ ಅಧಿಕಾರಿಗಳು ಬಲವಂತದಿಂದ ತಡೆದಿದ್ದಾರೆ. ಇದು ಆದಿವಾಸಿಗಳ ಸಮುದಾಯಗಳ ಸಂವಿಧಾನಾತ್ಮಕ ಮತ್ತು ಕಾನೂನುಬದ್ಧ ಹಕ್ಕುಗಳ ಉಲ್ಲಂಘನೆಯಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ 334 ಭ್ರಷ್ಟಾಚಾರ ಪ್ರಕರಣಗಳು: ದೇಶದಲ್ಲಿ 3ನೇ ಸ್ಥಾನ

ನಮ್ಮ ಪವಿತ್ರ ಆಚರಣೆ ಮತ್ತು ಸಾಂಸ್ಕೃತಿಕ ಹಕ್ಕುಗಳಿಗೆ ಅಪಮಾನ ಮಾಡಲಾಗಿದೆ. ಅಂದು ಮೂರ್ಕಲ್ ಪ್ರದೇಶದ ದೇವರು ಮೂರ್ಕಲ್ ಅಜ್ಜಯ್ಯನಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲು ಅವಕಾಶ ನೀಡಲ್ಲ. ಕೋರ್ ಏರಿಯಾದಲ್ಲಿ ಯಾವುದೇ ಚಟುವಟಿಕೆಗಳು ನಿಷಿದ್ಧ ಎಂದು ಅಧಿಕಾರಿಗಳು ಹೊರಗಟ್ಟಿದ್ದಾರೆ. ಸಭೆಗೆ ಆಗಮಿಸಬೇಕಿದ್ದ ಸಂಪನ್ಮೂಲ ವ್ಯಕ್ತಿಗಳು, ಮಾನವ ಹಕ್ಕು ಹೋರಾಟಗಾರರು, ಅರಣ್ಯ ಹಕ್ಕು ಕಾಯ್ದೆ ತಜ್ಞರು, ವಕೀಲರು, ಪತ್ರಕರ್ತರನ್ನು ವೀರನಹೊಸಳ್ಳಿ ವಲಯ ಗೇಟ್‌ನಲ್ಲೇ ಬಲವಂತವಾಗಿ ತಡೆಹಿಡಿದ್ದಾರೆ. ಇದು ಖಂಡನೀಯ ಎಂದು ದೂರಿದರು.

ಅಧಿಕಾರಿಗಳು ಮೂರ್ಕಲ್ ಪ್ರದೇಶ ಕೋರ್ ಏರಿಯಾ ಎಂದು ತಿಳಿಸಿದ್ದಾರೆ. ಆದರೆ, ವಾಸ್ತವವಾಗಿ ನಮ್ಮ ಪಾರಂಪರಿಕ ಕಾಡು ಮತ್ತು ವಾಸಸ್ಥಳವನ್ನು ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಿಕೊಂಡಿರುವುದೇ ಅಕ್ರಮ ಮತ್ತು ಅಸಂವಿಧಾನಿಕ. ಈ ನಡುವೆ ನಾವು ಸಂವಾದ ಕಾರ್ಯಕ್ರಮವನ್ನು ಬಾಳೆಕೋವು ಹಾಡಿಯಲ್ಲಿ ನಡೆಸಿದ್ದು, ಕರ್ನಾಟಕ, ಕೇರಳಾ, ತಮಿಳುನಾಡು ರಾಜ್ಯಗಳ ಆದಿವಾಸಿ ಅರಣ್ಯ ಹಕ್ಕು ಚಳವಳಿಗಳ ಸಂಗಮ ಸಾಧಿಸಿದ್ದೇವೆ ಎಂದರು.

ಸದಸ್ಯ ಜೆ.ಕೆ.ತಿಮ್ಮ ಮಾತನಾಡಿ, ನಾಗರಹೊಳೆ ಉದ್ಯಾನವನದಲ್ಲಿ ಜೇನು ಕುರುಬ ಸಮುದಾಯ ವಿಶೇಷವಾಗಿ ಅತಿ ದುರ್ಬಲ ಜನಾಂಗೀಯ ಗುಂಪು(ಪಿವಿಟಿಜಿ) ಎಂದು ಮಾನ್ಯತೆ ಪಡೆದಿದ್ದು, ಸಮುದಾಯದ ವಾಸಸ್ಥಳ ಮತ್ತು ಆವಾಸಸ್ಥಾನದ ಹಕ್ಕುಗಳನ್ನು ಹೊಂದಿದೆ. ತಮ್ಮ ಪಾರಂಪರಿಕ ವಾಸ ಸ್ಥಳಗಳಲ್ಲಿ ವಾಸಿಸುವ, ಪ್ರವೇಶಿಸುವ, ಬಳಸುವ ಮತ್ತು ರಕ್ಷಿಸುವ ಹಕ್ಕುಗಳನ್ನು ಹೊಂದಿದ್ದೇವೆ.

ಆದರೆ, ಅಧಿಕಾರಿಗಳ ವರ್ತನೆ ಹಿಂಸೆ ಮತ್ತು ದೌರ್ಜನ್ಯವಲ್ಲದೇ ಮತ್ತೇನೂ ಅಲ್ಲ. ಅರಣ್ಯ ಇಲಾಖೆಯ ಈ ವಸಾಹತುಶಾಹಿ ಸಂರಕ್ಷಣೆ ನೀತಿಯನ್ನು ಸಮಿತಿ ಖಂಡಿಸುತ್ತದೆ. ನಮ್ಮ ಪಾರಂಪರಿಕ ವಾಸ ಸ್ಥಗಳಲ್ಲಿ ಸಭೆಗಳು, ಕೂಟಗಳು, ಮತ್ತು ಪವಿತ್ರ ಆಚರಣೆಗಳನ್ನು ನಡೆಸುವ ಸಂಪೂರ್ಣ ಹಕ್ಕು ನಮಗಿದೆ. ಸಂವಾದ ಕಾರ್ಯಕ್ರಮದ ನಾಗರಹೊಳೆ ಘೋಷಣೆಯನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಸಮಿತಿ ಸದಸ್ಯರಾದ ಗಂಗೆ, ಬಳ್ಳೆ ರಮೇಶ್, ಜಿ.ಎಸ್.ರಾಮಕೃಷ್ಣ, ಚೌಡಮ್ಮ, ಪ್ರೇಮಾ, ಹಾಡಿಯ ನಿವಾಸಿಗಳು ಭಾಗವಹಿಸಿದ್ದರು.

ಇದನ್ನೂ ನೋಡಿ: ಕರಾವಳಿ ಪ್ರವಾಸೋದ್ಯಮ : ಸ್ಥಳೀಯರ ಬದುಕು ಉಳಿಯಬೇಕೇ ಹೊರತು ಕಾರ್ಪೊರೇಟ್ ಲಾಭಕ್ಕಲ್ಲ – ಮುನೀರ್ ಕಾಟಿಪಳ್ಳ

Donate Janashakthi Media

Leave a Reply

Your email address will not be published. Required fields are marked *