ಬೆಂಗಳೂರು : ರೈತರ ತೀವ್ರ ವಿರೋಧ ಮತ್ತು ವ್ಯಾಪಕ ಪ್ರತಿಭಟನೆಗಳ ನಡುವೆಯೂ ರಾಜ್ಯ ಸರ್ಕಾರ ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಸ್ವಾಧೀನಕ್ಕೆ ಮುಂದಾಗಿದೆ ಬಿಡದಿ ಸಮೀಪದ ಮೂರು ಗ್ರಾಮಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು, ಯೋಜನೆಯ ಮೊದಲ ಹಂತದ ಅನುಷ್ಠಾನಕ್ಕೆ ಸರ್ಕಾರ ಚಾಲನೆ ನೀಡಿದೆ.
ಅಧಿಸೂಚನೆಯ ಪ್ರಕಾರ, ಕೆಂಪಯ್ಯನಪಾಳ್ಯ, ಮಂಡಲಹಳ್ಳಿ ಮತ್ತು ವಡೇರಹಳ್ಳಿ ಗ್ರಾಮಗಳ ವ್ಯಾಪ್ತಿಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಈ ಪೈಕಿ ಕೆಂಪಯ್ಯನಪಾಳ್ಯದಲ್ಲಿ ಅತಿ ಹೆಚ್ಚು ಭೂಮಿ ಸ್ವಾಧೀನಗೊಳ್ಳಲಿದ್ದು, ಉಳಿದ ಎರಡು ಗ್ರಾಮಗಳಲ್ಲೂ ಗಣನೀಯ ಪ್ರಮಾಣದ ಭೂಮಿ ಯೋಜನೆಗೆ ಒಳಪಡಲಿದೆ.
ಸುಮಾರು 9600 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಈ ಯೋಜನೆಯನ್ನು ರಾಜ್ಯ ಸರ್ಕಾರ “ಭಾರತದ ಮೊದಲ ಕೃತಕ ಬುದ್ಧಿಮತ್ತೆ ಆಧಾರಿತ ನಗರ” ಎಂದು ಬಣ್ಣಿಸಿದೆ. ವಸತಿ, ವಾಣಿಜ್ಯ, ಕೈಗಾರಿಕಾ, ಶಿಕ್ಷಣ, ಆರೋಗ್ಯ ಮತ್ತು ಆಧುನಿಕ ಮೂಲಸೌಕರ್ಯಗಳನ್ನು ಒಳಗೊಂಡ ಸಮಗ್ರ ನಗರವೊಂದನ್ನು ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಯೋಜನೆಯ ಒಟ್ಟು ವೆಚ್ಚ ₹18,000 ಕೋಟಿ ರಿಂದ ₹20,000 ಕೋಟಿ ನಡುವಿರಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ : ಬಿಡದಿ | ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ :ಭೂ ಸ್ವಾಧೀನದ ವಿರುದ್ಧ ಮಹಿಳಾ ಧ್ವನಿ

ಆದರೆ ಯೋಜನೆಗೆ ರೈತರಿಂದ ಮತ್ತು ಕೆಲವು ರಾಜಕೀಯ ಪಕ್ಷಗಳಿಂದ ವಿರೋಧವೂ ವ್ಯಕ್ತವಾಗಿದೆ. ಫಲವತ್ತಾದ ಕೃಷಿಭೂಮಿ ಕಳೆದುಹೋಗಲಿದೆ, ಸಾವಿರಾರು ಕುಟುಂಬಗಳ ಜೀವನೋಪಾಯಕ್ಕೆ ಧಕ್ಕೆಯಾಗಲಿದೆ ಎಂಬ ಆತಂಕವನ್ನು ರೈತರು ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಸರ್ಕಾರವು ಭೂಮಾಲೀಕರಿಗೆ ಪರಿಹಾರ ಪ್ಯಾಕೇಜ್, ಅಭಿವೃದ್ಧಿಪಡಿಸಿದ ಭೂಮಿಯಲ್ಲಿ ಪಾಲು ಹಾಗೂ ಇತರೆ ಸೌಲಭ್ಯಗಳನ್ನು ನೀಡುವುದಾಗಿ ಹೇಳಿದೆ.
ಯೋಜನೆ ಕುರಿತು ರಾಜಕೀಯ ವಾಗ್ವಾದವೂ ತೀವ್ರಗೊಂಡಿದೆ. ಒಂದು ಕಡೆ ಸರ್ಕಾರ ಇದು ಬೆಂಗಳೂರಿನ ಭವಿಷ್ಯದ ಬೆಳವಣಿಗೆಗೆ ಅಗತ್ಯವಾದ ಯೋಜನೆ ಎಂದು ಸಮರ್ಥಿಸಿಕೊಳ್ಳುತ್ತಿದ್ದರೆ, ವಿರೋಧ ಪಕ್ಷಗಳು ಇದನ್ನು ಭೂ ವ್ಯವಹಾರಕ್ಕೆ ಸಂಬಂಧಿಸಿದ ಯೋಜನೆ ಎಂದು ಟೀಕಿಸುತ್ತಿವೆ.
ಈ ಕುರಿತು ಜನಶಕ್ತಿ ಮೀಡಿಯಾಗೆ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ್ ಪ್ರತಿಕ್ರಯಿಸಿದ್ದು, 519 ಎಕರೆಗೆ ಭೂ ಸ್ವಾಧೀನ ಅಂತಿಮ ಅಧಿಸೂಚನೆ ಹೊರಡಿಸಿರುವ ಡಿ.ಕೆ. ಶಿವಕುಮಾರ ಸರ್ಕಾರಕ್ಕೆ ರೈತರು ತಕ್ಕ ಪಾಠ ಕಲಿಸುತ್ತಾರೆ, ಭೂ ಸ್ವಾಧೀನದ ವಿರುದ್ದದ ಹೋರಾಟ ಇನ್ನಷ್ಟು ಬಲಗೊಳ್ಳಲಿದೆ, ರಿಯಲ್ಎಸ್ಟೇಟ್ ದುರುದ್ದೇಶವನ್ನು ಸೋಲಿಸುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ನೋಡಿ : ಬಿಡದಿ ಉಪನಗರ ಯೋಜನೆಗೆ ವಿರೋಧ – ದಿನವಿಡೀ ರಸ್ತೆ ಬಂದ್ ಮಾಡಿದ ರೈತರು Janashakthi Media
