ಕೆಆರ್‌ಎಸ್‌ನಿಂದ ನಾಲೆಗಳಿಗೆ ನೀರು ಹರಿಸಿ: ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರ

ಮಂಡ್ಯ: ಕೆಆರ್‌ಎಸ್ ಅಣೆಕಟ್ಟಿನಿಂದ ಕಾವೇರಿ ನೀರನ್ನು ಜಿಲ್ಲೆಯ ಎಲ್ಲಾ ನಾಲೆಗಳಿಗೆ ತಕ್ಷಣ ಹರಿಸಲು ಆಗ್ರಹಿಸಿ ಮಂಡ್ಯದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ, ದಲಿತ ಸಂಘರ್ಷ ಸಮಿತಿ, ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘ, ರೈತ ಸಂಘ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದವು. ನಾಲೆ

ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸೇರಿದಂತೆ ಹಲವಾರು ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ, ಅಣೆಕಟ್ಟಿನಲ್ಲಿ ನೀರಿನ ಮಟ್ಟ ಸಮರ್ಪಕವಾಗಿದ್ದರೂ ನಾಲೆಗಳಿಗೆ ನೀರು ಬಿಡುವಲ್ಲಿ ವಿಳಂಬ ಮಾಡುತ್ತಿರುವುದನ್ನು ಖಂಡಿಸಿದರು. ಒಣಗುತ್ತಿರುವ ಬೆಳೆಗಳನ್ನು ಉಳಿಸಲು ತುರ್ತಾಗಿ ನೀರು ಹರಿಸಬೇಕೆಂದು ಒತ್ತಾಯಿಸಿದರು.

ಇನ್ನೊಂದೆಡೆ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಜೆ.ಸಿ. ವೃತ್ತದಲ್ಲಿ ಅರೆಬೆತ್ತಲೆಯಾಗಿ ಘೋಷಣೆ ಕೂಗಿ, ರಸ್ತೆ ಮಧ್ಯೆ ಅಡುಗೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಕೇವಲ ಪರಿಹಾರದ ಮಾತು ಹೇಳಿ ರೈತರ ಸಮಸ್ಯೆಗಳನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ದೇಣಿಗೆ ವಿವಾದ: ಟ್ರಸ್ಟ್ ಕಾರ್ಯವೈಖರಿ ಬಗ್ಗೆ ಹೆಚ್ಚಿದ ಪ್ರಶ್ನೆಗಳು

ಕರ್ನಾಟಕ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಸದಸ್ಯರು ಕೂಡ ಪ್ರತಿಭಟನೆ ನಡೆಸಿ, ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ಕೂಲಿಕಾರರಿಗೆ ಉದ್ಯೋಗ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು. ಜಿಲ್ಲೆಯನ್ನೇ ಬರಪೀಡಿತ ಪ್ರದೇಶವೆಂದು ಘೋಷಿಸಿ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಕೂಡ ಕಾವೇರಿ ನೀರಿಗಾಗಿ ಮೆರವಣಿಗೆ ನಡೆಸಿದರು. “ಒಂದು ಕಟ್ಟು ನೀರು ಹರಿಸಿದರೆ ಬೆಳೆ ಉಳಿಯಬಹುದು” ಎಂದು ಒತ್ತಾಯಿಸಿದ ಅವರು, ರೈತರ ಆರ್ಥಿಕ ಸಂಕಷ್ಟ ನಿವಾರಣೆಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಂಘಟನೆಗಳ ಮುಖಂಡರು ಮಾತನಾಡಿ, ಮಂಡ್ಯ ಜಿಲ್ಲೆ ಕೃಷಿ ಆಧಾರಿತ ಪ್ರದೇಶವಾಗಿದ್ದು, ಲಕ್ಷಾಂತರ ಎಕರೆಗಳಲ್ಲಿ ಬೆಳೆಗಳು ಒಣಗುವ ಸ್ಥಿತಿಯಲ್ಲಿವೆ. ಕಟಾವಿಗೆ ಬಂದಿರುವ ಬೆಳೆಗಾದರೂ ನೀರು ಹರಿಸಿದರೆ ನಷ್ಟವನ್ನು ಕಡಿಮೆ ಮಾಡಬಹುದು ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಕಾವೇರಿ ನೀರು ಬಿಡುಗಡೆ ಮಾಡುವುದು ತುರ್ತು ಅಗತ್ಯವಾಗಿದ್ದು, ಜೊತೆಗೆ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಘೋಷಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಇದನ್ನೂ ನೋಡಿ: ಚೇಳುಗಳ ವಿಸ್ಮಯ ಜಗತ್ತು: ಗೊತ್ತಿಲ್ಲದ ಅಚ್ಚರಿಯ ಸತ್ಯಗಳು | ಡಾ: ಎನ್.ಬಿ.ಶ್ರೀಧರ Janashakthi Media

Donate Janashakthi Media

Leave a Reply

Your email address will not be published. Required fields are marked *