ಯಲಬುರ್ಗಾ: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗೆದಗೇರಿ ಗ್ರಾಮದಲ್ಲಿ ಟಾಟಾ ಕಂಪನಿ ನಿರ್ಮಿಸುತ್ತಿರುವ ಪವನ ವಿದ್ಯುತ್ ಯೋಜನೆಯ ಪವರ್ ಸಬ್ಸ್ಟೇಷನ್ (PSS) ಕಾಮಗಾರಿಗೆ ಸ್ಥಳೀಯ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ವಿಂಡ್ ಟರ್ಬೈನ್ಗೆ ಅತ್ಯಂತ ಸಮೀಪದಲ್ಲೇ ಪಿಎಸ್ಎಸ್ ನಿರ್ಮಿಸಲಾಗುತ್ತಿದ್ದು, ಇದರಿಂದ ಜೀವಹಾನಿ ಸಂಭವಿಸುವ ಆತಂಕ ಎದುರಾಗಿದೆ ಎಂದು ರೈತರು ಆರೋಪಿಸಿದ್ದಾರೆ. ಗೆದಗೇರಿ
ರೈತರ ಹೇಳಿಕೆಯ ಪ್ರಕಾರ, ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವಾಲಯ (MNRE) ಮಾರ್ಗಸೂಚಿಗಳ ಪ್ರಕಾರ ಪವನ ವಿದ್ಯುತ್ ಘಟಕಗಳು ಹಾಗೂ ಸಂಬಂಧಿತ ಮೂಲಸೌಕರ್ಯಗಳ ನಡುವೆ ನಿಗದಿತ ಸುರಕ್ಷತಾ ಅಂತರ ಕಾಯ್ದುಕೊಳ್ಳಬೇಕು. ಆದರೆ, ಈ ನಿಯಮಗಳನ್ನು ಪಾಲಿಸದೆ ಟಾಟಾ ಕಂಪನಿ ಪಿಎಸ್ಎಸ್ ನಿರ್ಮಿಸುತ್ತಿದೆ ಎಂದು ಆರೋಪಿಸಲಾಗಿದೆ.
ವಿಂಡ್ ಟರ್ಬೈನ್ನಲ್ಲಿ ತಾಂತ್ರಿಕ ದೋಷ ಉಂಟಾಗಿ ಅದು ಕುಸಿದರೆ ಅಥವಾ ಅಪಘಾತ ಸಂಭವಿಸಿದರೆ, ಪಕ್ಕದಲ್ಲಿರುವ ಪಿಎಸ್ಎಸ್ಗೆ ಹಾನಿಯಾಗಿ ವಿದ್ಯುತ್ ಉಪಕರಣಗಳು ಸ್ಫೋಟಗೊಳ್ಳುವ ಅಪಾಯವಿದ್ದು, ಸುತ್ತಮುತ್ತಲಿನ ರೈತರ ಜಮೀನು ಹಾಗೂ ಜೀವಕ್ಕೆ ಗಂಭೀರ ಅಪಾಯ ಎದುರಾಗಬಹುದು ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಆರ್ಟ್ ಆಫ್ ಲಿವಿಂಗ್ ವಿರುದ್ಧ ಭೂ ಒತ್ತುವರಿ ಆರೋಪ: ತನಿಖೆಗೆ ಎಸ್ಐಟಿ ರಚಿಸಿದ ಕರ್ನಾಟಕ ಸರ್ಕಾರ
ಇದರ ಜತೆಗೆ, ವಿಂಡ್ ಟರ್ಬೈನ್ನಿಂದ ಉಂಟಾಗುವ ನಿರಂತರ ಶಬ್ದ ಮತ್ತು ಗಾಳಿಯ ಒತ್ತಡದಿಂದ ಕೃಷಿ ಚಟುವಟಿಕೆಗಳಿಗೂ ತೊಂದರೆಯಾಗುತ್ತಿದೆ ಎಂದು ರೈತರು ದೂರಿದ್ದಾರೆ. ರಾತ್ರಿ ವೇಳೆ ಭಾರೀ ಶಬ್ದದಿಂದ ನಿದ್ದೆ ಬರುವುದಿಲ್ಲ. ಹೊಲದಲ್ಲಿ ಕೆಲಸ ಮಾಡಲು ಭಯವಾಗುತ್ತಿದ್ದು, ಮಹಿಳಾ ಕೂಲಿ ಕಾರ್ಮಿಕರು ಸಹ ಕಳೆ ಕೀಳಲು ಬರುತ್ತಿಲ್ಲ. ಗಾಳಿಯ ಪರಿಣಾಮದಿಂದ ಬೆಳೆಗಳ ಬೆಳವಣಿಗೆಯೂ ಕುಂಠಿತವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ವಿಂಡ್ ಟರ್ಬೈನ್ ಅಳವಡಿಸಿರುವ ಭೂಮಿಯ ಮಾಲೀಕರಿಗೆ ಪರಿಹಾರ ನೀಡಲಾಗಿದೆ. ಆದರೆ ಪಕ್ಕದ ಜಮೀನುಗಳ ರೈತರಿಗೆ ಯಾವುದೇ ಪರಿಹಾರ ನೀಡಿಲ್ಲ. ಕಂಪನಿಯ ಭಾರೀ ವಾಹನಗಳ ಸಂಚಾರದಿಂದ ಬೆಳೆಗಳಿಗೆ ಹಾನಿಯಾಗಿದ್ದರೂ ಪರಿಹಾರ ಸಿಕ್ಕಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ಬಾರಿ ಅಧಿಕಾರಿಗಳು ಹಾಗೂ ಕಂಪನಿ ಸಿಬ್ಬಂದಿಯನ್ನು ಸಂಪರ್ಕಿಸಿದರೂ ಸ್ಪಂದನೆ ಸಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ.
ಭೂ ಪರಿವರ್ತನೆ ಪ್ರಕ್ರಿಯೆಯಲ್ಲಿ ಕಂದಾಯ ಇಲಾಖೆ ಪಕ್ಕದ ರೈತರಿಗೆ ನೋಟಿಸ್ ನೀಡಬೇಕಾಗಿದ್ದರೂ, ಆ ಪ್ರಕ್ರಿಯೆ ನಡೆದಿಲ್ಲ ಎಂದು ರೈತರು ಆರೋಪಿಸಿದ್ದಾರೆ. ಕೇವಲ ಎರಡು ಎಕರೆ ಭೂಮಿಯನ್ನು ಖರೀದಿಸಿ, ಇನ್ನೂ ಆರು ಎಕರೆ ಭೂಮಿಯನ್ನು 30 ವರ್ಷಗಳ ಅವಧಿಗೆ ಗುತ್ತಿಗೆ ಪಡೆದು ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಗೆದಗೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರ್ಮಾಣವಾಗಿರುವ ವಿಂಡ್ ಟರ್ಬೈನ್ಗಳು ಮತ್ತು ಪಿಎಸ್ಎಸ್ಗಳ ನಡುವಿನ ಸುರಕ್ಷತಾ ಅಂತರವನ್ನು ಜಿಲ್ಲಾಡಳಿತ, ಕಂದಾಯ ಇಲಾಖೆ ಹಾಗೂ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (KREDL) ಪರಿಶೀಲಿಸಬೇಕು. ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಇದನ್ನೂ ನೋಡಿ : ಉಸಿರಾಡುವ ಗಾಳಿಯೇ ವಿಷ! ಆಯುಷ್ಯ ಕಸಿಯುತ್ತಿರುವ ‘ಸೈಲೆಂಟ್ ಕಿಲ್ಲರ್’ | ಗುರುರಾಜ ದೇಸಾಯಿ Janashakthi Media
