ಕಪ್ಪು ಬಟ್ಟೆ ಧರಿಸಿ ಸಂಸತ್‌ನಲ್ಲಿ ಇಂಡಿಯಾ ಮೈತ್ರಿಕೂಟದ ಪ್ರತಿಭಟನೆ; ವಿದ್ಯಾರ್ಥಿಗಳ ಮೇಲಿನ ದಾಳಿಗೆ ಖಂಡನೆ

ನವದೆಹಲಿ: ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದಾಳಿಯನ್ನು ಖಂಡಿಸಿ ಇಂಡಿಯಾ (INDIA) ಮೈತ್ರಿಕೂಟದ ಸಂಸದರು ಬುಧವಾರ ಕಪ್ಪು ಬಟ್ಟೆ ಧರಿಸಿ ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಪಕ್ಷಗಳು, ವಿದ್ಯಾರ್ಥಿಗಳ ಮೇಲಿನ ಬಲಪ್ರಯೋಗದ ಕುರಿತು ಸಂಸತ್ತಿನ ಉಭಯ ಸದನಗಳಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದವು.

ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್, ಡಿಎಂಕೆ, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಹಾಗೂ ಎಡಪಕ್ಷಗಳ ಸಂಸದರು ಕಪ್ಪು ಉಡುಪು ಧರಿಸಿ ಸಂಸತ್ತಿಗೆ ಆಗಮಿಸಿದರು. ವಿದ್ಯಾರ್ಥಿಗಳೊಂದಿಗೆ ಐಕ್ಯತೆ ವ್ಯಕ್ತಪಡಿಸುವ ಸಂಕೇತವಾಗಿ ಕಪ್ಪು ಬಟ್ಟೆ ಧರಿಸಿರುವುದಾಗಿ ಅವರು ತಿಳಿಸಿದರು.

ಸಂಸತ್ ಭವನದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, “ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಪ್ರತಿಪಕ್ಷ ನಾಯಕರು ಮಾತನಾಡಲು ಎದ್ದರೆ ಅವರನ್ನು ತಡೆಯಲಾಗುತ್ತಿದೆ. ಚರ್ಚೆ ನಡೆಸಬೇಕಾದರೂ ಸರ್ಕಾರದ ಅನುಮತಿ ಬೇಕೆಂದು ಸಭಾಧ್ಯಕ್ಷರು ಹೇಳುವ ಪರಿಸ್ಥಿತಿ ಬಂದಿದೆ. ಪ್ರಜಾಪ್ರಭುತ್ವವೇ ಮುಗಿದಿದೆ” ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಧಾನಿ ನಿವಾಸದ ಸಮೀಪ ನಡೆದ ಪ್ರತಿಭಟನೆ ವೇಳೆ ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಸೇರಿದಂತೆ ಹಲವು ಪ್ರತಿಪಕ್ಷ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದ ಘಟನೆ ಕುರಿತು ಪ್ರತಿಕ್ರಿಯಿಸಿದ ಅವರು, “ನಮ್ಮನ್ನು ವಶಕ್ಕೆ ಪಡೆದಿದ್ದು ಮುಖ್ಯವಲ್ಲ. ನಾವು ವಿದ್ಯಾರ್ಥಿಗಳ ಪರವಾಗಿ ನಿಂತಿದ್ದೇವೆ. ವಿದ್ಯಾರ್ಥಿಗಳ ಮೇಲೆ ನಡೆದಿರುವುದು ಸರಿಯೇ ಎಂಬುದನ್ನು ಸರ್ಕಾರ ಉತ್ತರಿಸಬೇಕು. ಅವರ ಹೋರಾಟ ನ್ಯಾಯಸಮ್ಮತವಾದದ್ದು” ಎಂದು ಹೇಳಿದರು.

ಇದನ್ನೂ ಓದಿ : ಭಾರತ–ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ರೈತರ ವಿರೋಧ: ದೆಹಲಿ ಚಲೋಗೆ ಕರೆ

ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಉಲ್ಲೇಖಿಸಿದ ಪ್ರಿಯಾಂಕಾ, “ದೇಶದ ಪ್ರತಿಯೊಬ್ಬ ವಿದ್ಯಾರ್ಥಿ, ಶಿಕ್ಷಕ ಮತ್ತು ಪೋಷಕರಿಗೂ ಈ ಸಮಸ್ಯೆ ತಿಳಿದಿದೆ. ಯುವಜನರ ಶಿಕ್ಷಣಕ್ಕಾಗಿ ಸರ್ಕಾರ ₹1.4 ಲಕ್ಷ ಕೋಟಿ ಮಾತ್ರ ಮೀಸಲಿಟ್ಟಿದೆ. ಆದರೆ ಕಾರ್ಪೊರೇಟ್ ಉದ್ಯಮಿಗಳ ಸಾವಿರಾರು ಕೋಟಿ ರೂಪಾಯಿ ಸಾಲಗಳನ್ನು ಮನ್ನಾ ಮಾಡಲಾಗುತ್ತಿದೆ. ರೈತರಿಗೆ, ಬಡವರಿಗೆ ಮತ್ತು ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನ್ಯಾಯ ಸಿಗುತ್ತಿಲ್ಲ” ಎಂದು ಆರೋಪಿಸಿದರು.

ವಿದ್ಯಾರ್ಥಿಗಳ ಮೇಲಿನ ಲಾಠಿ ಪ್ರಹಾರ ಹಾಗೂ ಪೊಲೀಸ್ ಕ್ರಮದ ಕುರಿತು ಕೇಂದ್ರ ಸರ್ಕಾರ ಉತ್ತರ ನೀಡಬೇಕು ಮತ್ತು ಹೊಣೆಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದವು. ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳು ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಸಂಸತ್ತಿನಲ್ಲಿ ಸಮಗ್ರ ಚರ್ಚೆ ನಡೆಸುವಂತೆ ಒತ್ತಾಯಿಸಿದವು.

ಪ್ರತಿಪಕ್ಷಗಳ ಪ್ರತಿಭಟನೆಯಿಂದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು. ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮ ಮತ್ತು ಅದನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು ಮಳೆಗಾಲ ಅಧಿವೇಶನದ ಪ್ರಮುಖ ರಾಜಕೀಯ ಚರ್ಚೆಯ ವಿಷಯವಾಗಿ ಪರಿಣಮಿಸಿವೆ.

ಇದನ್ನೂ ನೋಡಿ :“ಭೂಗಳ್ಳರ ಸರ್ಕಾರ!” ಜನಾಕ್ರೋಶ ಸಮಾವೇಶದಲ್ಲಿ ಜಿ.ಎನ್. ನಾಗರಾಜರ ಆಕ್ರೋಶ Janashakthi Media

Donate Janashakthi Media

Leave a Reply

Your email address will not be published. Required fields are marked *