ಪಾವಗಡ: ತಾಲೂಕಿನ ಕೊಟಗುಡ್ಡ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಸೋಲಾರ್ ಪ್ಲಾಂಟ್‌ಗೆ ಸಂಬಂಧಿಸಿದಂತೆ 33 ಕೆವಿ ವಿದ್ಯುತ್ ಮಾರ್ಗವನ್ನು ಗ್ರಾಮಗಳ ಮಧ್ಯಭಾಗದಲ್ಲಿ ಅಳವಡಿಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಗ್ರಾಮಸ್ಥರು ಹಾಗೂ ರೈತ ಸಂಘದ ಪದಾಧಿಕಾರಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಗುಂಡ್ಲಾಹಳ್ಳಿ ಹಾಗೂ ಅರೇಕ್ಯಾತನಹಳ್ಳಿಯಿಂದ ವಿದ್ಯುತ್ ಸರಬರಾಜು ಮಾಡಲು ಅಳವಡಿಸಲಾಗುತ್ತಿರುವ ಕಂಬಗಳನ್ನು ಜನನಿಬಿಡ ಪ್ರದೇಶದಲ್ಲಿ ಸ್ಥಾಪಿಸಿರುವುದರಿಂದ ಸಾರ್ವಜನಿಕ ಸುರಕ್ಷತೆಗೆ ಧಕ್ಕೆಯಾಗಬಹುದು ಎಂದು ಪ್ರತಿಭಟನಾಕಾರರು ಆಕ್ಷೇಪಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ಮಾತನಾಡಿ, ರಾಜ್ಯ ಹೆದ್ದಾರಿ ಬದಿಯಲ್ಲಿ ಕಂಬಗಳನ್ನು ಅಳವಡಿಸಲು ಅನುಮತಿ ಇದ್ದರೂ, ಖಾಸಗಿ ಕಂಪನಿ ನಿಯಮ ಉಲ್ಲಂಘಿಸಿ ಗ್ರಾಮದ ಮಧ್ಯದಲ್ಲೇ ಕಾಮಗಾರಿ ನಡೆಸುತ್ತಿದೆ ಎಂದು ಆರೋಪಿಸಿದರು. ಈಗಾಗಲೇ ಹಲವೆಡೆ ಗುಂಡಿ ತೋಡಿ ಕಂಬಗಳನ್ನು ಅಳವಡಿಸಿರುವುದಾಗಿ ಹೇಳಿದರು.
ಇದನ್ನೂ ಓದಿ: ವೇತನ ಬಾಕಿ, ಬದುಕು ಸಂಕಷ್ಟ: ಆಂಧ್ರದಲ್ಲಿ ಆರೋಗ್ಯ ಸಿಬ್ಬಂದಿಗಳ ಪ್ರತಿಭಟನೆ
ಗ್ರಾಮದ ಒಳಭಾಗದಲ್ಲೇ ಅಂಗನವಾಡಿ ಕೇಂದ್ರ, ಆಸ್ಪತ್ರೆ, ಶಾಲೆಗಳು ಹಾಗೂ ಕಾಲೇಜುಗಳಿರುವುದರಿಂದ ವಿದ್ಯುತ್ ಲೈನ್ ಹಾದುಹೋದರೆ ಮಕ್ಕಳಿಗೆ, ಸಾರ್ವಜನಿಕರಿಗೆ ಮತ್ತು ಜಾನುವಾರುಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಆದ್ದರಿಂದ, ವಿದ್ಯುತ್ ಮಾರ್ಗವನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಶಿವು ಕೂಡ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ, ಮಾರ್ಗವನ್ನು ಜನವಸತಿ ಪ್ರದೇಶದಿಂದ ಹೊರತೆಗೆದಿಡಬೇಕೆಂದು ಆಗ್ರಹಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ತಹಸೀಲ್ದಾರ್ ಕಚೇರಿ ಎದುರು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಬಳಿಕ ಗ್ರಾಮಸ್ಥರು ತಾಲೂಕು ಕಚೇರಿ ಮುಂದೆ ಸೇರಿ, ಕಾಮಗಾರಿ ನಿಲ್ಲಿಸುವಂತೆ ಮನವಿ ಸಲ್ಲಿಸಿದರು.
ಇದನ್ನೂ ನೋಡಿ: ಭೂಮಿ ಹೋಯ್ತು, ಉದ್ಯೋಗ ಸಿಗಲಿಲ್ಲ! 13 ವರ್ಷ ಕಳೆದರೂ ಸಿಗದ ನ್ಯಾಯ! Janashakthi Media
