ಜರ್ಮನಿ ಪ್ರಾಂತ್ಯದಲ್ಲಿ ಉಗ್ರ ಬಲಪಂಥೀಯ ‘ಜರ್ಮನಿಗೆ ಬದಲಿ’ ಯ ಜಯಭೇರಿ, ಆಳುವ ಕೂಟಕ್ಕೆ ಶಾಕ್!

ಜರ್ಮನಿಯ ಒಂದು ಪ್ರಾಂತ್ಯವಾದ ಸ್ಯಾಕ್ಸನಿ-ಆನ್ಹಾಲ್ಟ್ ನಲ್ಲಿ ನಡೆದ ಚುನಾವಣೆಯಲ್ಲಿ ಉಗ್ರ ಬಲಪಂಥೀಯ ‘ಜರ್ಮನಿಗೆ ಬದಲಿ’ (Alternative for Germany -AfD) ಪಕ್ಷವು ನಿರ್ಣಾಯಕ ಗೆಲುವು ಸಾಧಿಸಿತು.  ಸ್ಯಾಕ್ಸನಿ ಜರ್ಮನಿಯ 16 ರಾಜ್ಯಗಳಲ್ಲಿ ಗಾತ್ರ/ಜನಸಂಖ್ಯೆಯಲ್ಲಿ 10ನೆಯ ಸ್ಥಾನದಲ್ಲಿದ್ದು, ಆರ್ಥಿಕವಾಗಿ ಜರ್ಮನಿಯ ಹಿಂದುಳಿದ ರಾಜ್ಯವಾದರೂ, ಈ ರಾಜ್ಯದ ಚುನಾವಣಾ ಫಲಿತಾಂಶಗಳು, ಜರ್ಮನಿಯಾದ್ಯಂತ ಯುರೋಪಿನಾದ್ಯಂತ ತೀವ್ರ ಪರಿಣಾಮ ಬೀರಿವೆ, ಬೀರಲಿವೆ.

ಸೆಪ್ಟೆಂಬರ್ 6, 2026 ರಂದು ನಡೆದ ಜರ್ಮನಿಯ ಒಂದು ಪ್ರಾಂತ್ಯವಾದ ಸ್ಯಾಕ್ಸನಿ-ಆನ್ಹಾಲ್ಟ್ ನಲ್ಲಿ ನಡೆದ ಚುನಾವಣೆಯಲ್ಲಿ ಉಗ್ರ ಬಲಪಂಥೀಯ ‘ಜರ್ಮನಿಗೆ ಬದಲಿ’ (Alternative for Germany -AfD) ಪಕ್ಷವು ನಿರ್ಣಾಯಕ ಗೆಲುವು ಸಾಧಿಸಿತು. ಈ ಚುನಾವಣೆಯಲ್ಲಿ ಸುಮಾರು 78% ರಷ್ಟು ಭಾರೀ ಮತದಾನವಾಗಿತ್ತು. ಚಾನ್ಸಲರ್ (ಭಾರತದ ಪ್ರಧಾನಿಗೆ ಸಮನಾದ ಹುದ್ದೆ) ಮೆರ್ಜ್ ಸರಕಾರ ಜಾರಿಗೊಳಿಸಿದ ಜರ್ಮನಿಯ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ವ್ಯಾಪಕ ಆಕ್ರೋಶದ ವಾತಾವರಣದಲ್ಲಿ ಚುನಾವಣೆ ನಡೆಯಿತು.  ವಿಶೇಷವಾಗಿ ಸಾಮಾಜಿಕ ಸೇವೆಗಳು ಮತ್ತು ಕಲ್ಯಾಣ-ಯೋಜನೆಗಳ ಮೇಲಿನ ದಾಳಿಗಳು, ಉಕ್ರೇನ್ ಯುದ್ಧಕ್ಕೆ ಕುರಡು ಬೆಂಬಲ ಮತ್ತು ಅದರ ನೆಪದಲ್ಲಿ ನಡೆಯುತ್ತಿರುವ ಮಿಲಿಟರೀಕರಣದ ನೀತಿಗಳ ವಿರುದ್ಧ ಈ ಆಕ್ರೋಶ ವ್ಯಕ್ತವಾಗಿತ್ತು. ಹಿಂದಿನ ಸರಕಾರವನ್ನು ಸಿಡಿಯು, ಎಸ್.ಪಿ.ಡಿ ಮತ್ತು ಎಫ್,ಪಿ,ಡಿ ಪಕ್ಷಗಳ ಮೈತ್ರಿಕೂಟ ರಚಿಸಿತ್ತು.

ಎ.ಎಫ್.ಡಿ  (AfD) ಪಕ್ಷವು ಸುಮಾರು 44% ಮತಗಳನ್ನು ಗಳಿಸಿತು, ಇದು 2021 ರ ಚುನಾವಣೆಯ ಫಲಿತಾಂಶಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್ ಅವರ ಕ್ರಿಶ್ಚಿಯನ್ ಡೆಮೋಕ್ರಟಿಕ್ ಯೂನಿಯನ್ (ಸಿಡಿಯು) ಪಕ್ಷದ ಬೆಂಬಲವು ಅರ್ಧದಷ್ಟು ಕಡಿಮೆಯಾಗಿ 17% ರಷ್ಟಕ್ಕೆ ಇಳಿಯಿತು. ಸೋಶಿಯಲ್ ಡೆಮೋಕ್ರಟ್ಸ್ (ಎಸ್.ಪಿ.ಡಿ), ಗ್ರೀನ್ಸ್ ಮತ್ತು ಪ್ರಗತಿಪರ ಪಕ್ಷವಾದ ಡೈ ಲಿಂಕೆ – ಇವೆಲ್ಲವೂ 10% ಕ್ಕಿಂತ ಕಡಿಮೆ ಮತಗಳನ್ನು ದಾಖಲಿಸಿದವು. ಇನ್ನೊಂದು ಎಡ ಪಕ್ಷ ಸಹ್ರಾ ವಾಗೆನ್ಕ್ನೆಚ್ಟ್ ಮೈತ್ರಿ (ಬಿಎಸ್.ಡಬ್ಲ್ಯೂ) ಪಕ್ಷವು ಸೀಟು ಪಡೆಯಲು ಬೇಕಾದ ಕನಿಷ್ಟ 5%  ಮತಪ್ರಮಾಣವನ್ನು ಸ್ವಲ್ಪವೇ ಮತಗಳಿಂದ ದಾಟಿ ಶಾಸನ ಸಭೆ ಪ್ರವೇಶಿಸಿತು. ಎಫ್,ಪಿ,ಡಿ ಈ ಕನಿಷ್ಟ 5%  ಮತಪ್ರಮಾಣವನ್ನು ಗಳಿಸದೆ ಶಾಸನಸಭೆಯಿಂದಲೇ ಹೊರಗುಳಿದಿದೆ.

ರಾಜ್ಯದ 83 ಸೀಟುಗಳಿರುವ ಶಾಸನ ಸಭೆಯಲ್ಲಿ ಎ.ಎಫ್.ಡಿ 39 ಮತ್ತು   ಸಿಡಿಯು 15 ಸೀಟುಗಳನ್ನು ಗಳಿಸಿದೆ. ಸೋಶಲಿಸ್ಟರು, ಗ್ರೀನ್ಸ್ ಮತ್ತು ಎಡ ಪಕ್ಷ ಡೈ ಲಿಂಕೆ ತಲಾ 8 ಸೀಟುಗಳನ್ನು ಮತ್ತು ಇನ್ನೊಂದು ಎಡಪಕ್ಷ ಬಿಎಸ್.ಡಬ್ಲ್ಯೂ 5 ಸೀಟುಗಳನ್ನು ಗಳಿಸಿವೆ, ಕಳೆದ ಅವಧಿಯಲ್ಲಿ  ಎಡ ಪಕ್ಷ ಡೈ ಲಿಂಕೆ ವಿಭಜನೆಯಾಗಿ ಬಿಎಸ್.ಡಬ್ಲ್ಯೂ ರಚಿತವಾಗಿದ್ದು, ಒಟ್ಟಾಗಿ ಹೆಚ್ಚು ಮತಗಳಿಕೆ ಮತ್ತು ಸೀಟು ಸಾಧಿಸಿವೆ.

ಇದನ್ನೂ ಓದಿ : ಹೆಸರಿನ ವ್ಯತ್ಯಾಸ: ಭಾರತ ರತ್ನ ಪ್ರೊ. ಸಿ.ಎನ್.ಆರ್. ರಾವ್‌ಗೂ ಎಸ್‌ಐಆರ್ ನೋಟಿಸ್

ಈ ಫಲಿತಾಂಶದ ಹೊರತಾಗಿಯೂ, ಎ.ಎಫ್.ಡಿ  ಗೆ ಸರ್ಕಾರ ರಚಿಸಲು ಸಾಧ್ಯವಾಗುತ್ತದೆಯೇ ಎಂಬುದು ಅಸ್ಪಷ್ಟವಾಗಿಯೇ ಉಳಿದಿದೆ, ಏಕೆಂದರೆ ಮುಖ್ಯವಾಹಿನಿಯ ಪಕ್ಷಗಳು ಐತಿಹಾಸಿಕವಾಗಿ ಎ.ಎಫ್.ಡಿ ವಿರುದ್ಧ, ಅದರ ನಾಜಿ   ಸಿದ್ಧಾಂತದ ಜೊತೆಗಿನ ನಂಟಿನಿಂದಾಗಿ ‘ರಾಜಕೀಯ ಅಸ್ಪೃಶ್ಯತೆ’ ಪಾಲಿಸುತ್ತಾ ಬಂದಿವೆ. ಎ.ಎಫ್.ಡಿ ಯ ರಾಜ್ಯ ನಾಯಕ ಉಲ್ರಿಚ್ ಸೀಗ್ಮಂಡ್ ಅವರು ಸಹ, ಅಗತ್ಯ ಬಿದ್ದರೆ ಮತ್ತೆ ಚುನಾವಣೆಗೆ ಹೋಗುವ ಮೂಲಕವಾದರೂ,  ಪಕ್ಷದ ಆದ್ಯತೆ ಮೈತ್ರಿ-ರಹಿತ ಸರಕಾರವನ್ನು ರಚಿಸುವುದಾಗಿದೆ ಎಂದು ಸೂಚಿಸಿದರು. ಮತ್ತೆ ಚುನಾವಣೆಯಾದರೆ, ಎ.ಎಫ್.ಡಿ  50% ಕ್ಕಿಂತ ಹೆಚ್ಚು ಮತಗಳನ್ನು ಗೆಲ್ಲುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸ್ಯಾಕ್ಸನಿ ಜರ್ಮನಿಯ 16 ರಾಜ್ಯಗಳಲ್ಲಿ ಗಾತ್ರ/ಜನಸಂಖ್ಯೆಯಲ್ಲಿ 10ನೆಯ ಸ್ಥಾನದಲ್ಲಿದ್ದು ಹಿಂದಿನ ಪೂರ್ವ ಜರ್ಮನಿಯ ಭಾಗವಾಗಿತ್ತು. ಆರ್ಥಿಕವಾಗಿ ಜರ್ಮನಿಯ ಹಿಂದುಳಿದ ರಾಜ್ಯಗಳಲ್ಲಿ ಒಂದು. ಆದರೂ ಈ ರಾಜ್ಯದ ಚುನಾವಣಾ ಫಲಿತಾಂಶಗಳು ಜರ್ಮನಿಯಾದ್ಯಂತ ಯುರೋಪಿನಾದ್ಯಂತ ತೀವ್ರ ಪರಿಣಾಮ ಬೀರಿವೆ, ಬೀರಲಿವೆ. ಜರ್ಮನಿಯ ‘ಮುಖ್ಯವಾಹಿನಿ’ಯ ಪಕ್ಷಗಳು ಚುನಾವಣಾ ಫಲಿತಾಂಶದ ಬಗ್ಗೆ ಆಘಾತ ವ್ಯಕ್ತಪಡಿಸಿದರೂ, ಎಡಪಂಥೀಯ ವಿಮರ್ಶಕರು ಇದು ಈಗ ಆಳುತ್ತಿರುವ ಕೂಟದ ಸರಕಾರದ ನೀತಿಗಳ ವಿರುದ್ಧ ಜನರ ಆಕ್ರೋಶದ ಫಲ ಎಂದು ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗಿವೆ. ಕಾರ್ಮಿಕರ ಹಕ್ಕುಗಳ ಮೇಲಿನ ದಾಳಿಗಳ, ಕಲ್ಯಾಣಕ್ರಮಗಳ ಕಡಿತದ, ನವ-ಉದಾರವಾದಿ ನೀತಿಗಳು ಉಕ್ರೇನ್ ಯುದ್ಧಕ್ಕೆ ಬೆಂಬಲ, ರಶ್ಯ-ದ್ವೇಷ/ಭೀತಿ ಸೃಷ್ಟಿಸಿ ಮರು-ಮಿಲಿಟರೀಕರಣದ ಯೋಜನೆ – ಇವುಗಳ ವಿರುದ್ಧ ಜನರ ಆಕ್ರೋಶವನ್ನು ಗುರುತಿಸಲು ಅವುಗಳಿಗೆ ಸಾಧ್ಯವಾಗಿಲ್ಲ ಎಂದು ಟೀಕಿಸಿವೆ.

ಎ.ಎಫ್.ಡಿ ಯ  ಉತ್ತಮ ಚುನಾವಣಾ ಫಲಿತಾಂಶಗಳನ್ನು ದಾಖಲಿಸಲು ಪ್ರಾರಂಭಿಸಿದಾಗಿನಿಂದ, ಮುಖ್ಯವಾಹಿನಿಯ ಪಕ್ಷಗಳ ಗಮನವು ಬಹುತೇಕ ಸಂಪೂರ್ಣವಾಗಿ ಅದರ ವಲಸಿಗ-ವಿರೋಧಿ ಕಥನದ ಮೇಲೆ ಕೇಂದ್ರೀಕೃತವಾಗಿದೆ. ಮತಗಳನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಈ ವಲಸಿಗ-ವಿರೋಧಿ ಕಥನದ ಹೆಚ್ಚಿನ ಭಾಗಗಳನ್ನು ಅವು ಅಳವಡಿಸಿಕೊಳ್ಳುವುದು ಸಹ ಆಗಿದೆ.  ಈ ಪಕ್ಷಗಳು ತಮ್ಮ ತಪ್ಪು ನೀತಿಗಳ ಫಲವಾಗಿ ಜನತೆಯ ಜೀವನ ವೆಚ್ಚದ ಬಿಕ್ಕಟ್ಟು ಮತ್ತು ಬೃಹತ್ ಉದ್ಯೋಗ ನಷ್ಟಗಳ ಪ್ರಾಮುಖ್ಯತೆಯನ್ನು ಗುರುತಿಸುವಲ್ಲಿ ವಿಫಲವಾಗಿವೆ.  ಸ್ಯಾಕ್ಸನಿ-ಆನ್ಹಾಲ್ಟ್ ನಲ್ಲಿ ಸಹ ಇವು ಪ್ರಮುಖ ಅಂಶಗಳಾಗಿದ್ದವು. ಎ.ಎಫ್.ಡಿ ಗೆ ಬಿದ್ದ ಅನೇಕ ಮತಗಳು ಈ ಸಮಸ್ಯೆಗೆ ಪರಿಹಾರ ಹುಡುಕಲು ಅಥವಾ ಸಮಸ್ಯೆಯನ್ನೇ ಗುರುತಿಸಲು ನಿರಾಕರಿಸಿದ ‘ಮುಖ್ಯವಾಹಿನಿ’ ಪಕ್ಷಗಳಿಗೆ ಬದಲಿ ಹುಡುಕುವ ಪ್ರಯತ್ನದಲ್ಲಿ ಹಾಕಲ್ಪಟ್ಟವು ಎಂಬುದೂ, ಈ ಪಕ್ಷಗಳಿಗೆ ಮತ್ತು ಮೆರ್ಜ್ ಅವರ ಕೇಂದ್ರ ಸರಕಾರಕ್ಕೂ ಅರ್ಥವಾಗಿಲ್ಲ. ಈ ಭಾರೀ ಸೋಲಿನ ನಂತರವೂ ಸರಕಾರದ ನೀತಿಗಳಲ್ಲಿ ಯಾವುದೇ ಬದಲಾವಣೆ ಮಾಢುವುದಿಲ್ಲವೆಂದು  ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್ ಹೇಳಿದ್ದಾರೆ.

ಎ.ಎಫ್.ಡಿ ಅಧಿಕಾರಕ್ಕೆ ಬಂದರೂ ಸಹ ಆರ್ಥಿಕ ನೀತಿಯಲ್ಲಿ ಬದಲಾವಣೆಗೆ ಕಾರಣವಾಗುವುದಿಲ್ಲ, ಏಕೆಂದರೆ ಅವರ ಕಾರ್ಯಕ್ರಮವು ನವಉದಾರವಾದಿ ತತ್ವಗಳೊಂದಿಗೆ ಹೊಂದಿಕೆಯಾಗಿಯೇ ಉಳಿದಿದೆ.  ಇದು ಎಡಪಕ್ಷಗಳಿಗೆ ಅವಕಾಶವನ್ನು ನೀಡಿದರೂ, ಸಾಮಾಜಿಕವಾಗಿ ರಾಜಕೀಯವಾಗಿ ಗಮನಾರ್ಹ ಪ್ರಮಾಣದಲ್ಲಿ ಜನರನ್ನು  ಅಣಿನೆರೆಸಲು ಈವರೆಗೆ ಸೋತಿವೆ.

ಎ.ಎಫ್.ಡಿ ನಾಜೀವಾದವನ್ನು ಎತ್ತಿಹಿಡಿಯುತ್ತಿದ್ದು ಜರ್ಮನ್ ರಾಷ್ಟ್ರವಾದಿ, ಜನಾಂಗವಾದಿ ಧೋರಣೆ ಹೊಂದಿದೆ. ವಲಸಿಗರನ್ನು ಮಾತ್ರವಲ್ಲ, ಎಲ್ಲ ಜರ್ಮನ್ ಮೂಲದವರು ಅಲ್ಲದವರನ್ನು ಹೊರದಬ್ಬಬೇಕೇಂದು ಪ್ರತಿಪಾದಿಸುತ್ತದೆ. ಇದು ಇಟಲಿಯ ಮತ್ತು ಫ್ರಾನ್ಸಿನ ಉಗ್ರ ಬಲಪಂಥೀಯ ಪಕ್ಷಗಳಿಗಿಂತಲೂ ಫ್ಯಾಸಿಸಂ ಗೆ ಹೆಚ್ಚು ಹತ್ತಿರವಾದ ಪಕ್ಷ. ಆದರೆ ಇಂದಿನ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಜನರನ್ನು ಸೆಳೆಯಲು – ಮುಖ್ಯವಾಹಿನಿಯ ಪಕ್ಷಗಳ ಆರ್ಥಿಕ ನೀತಿಗಳನ್ನು ಕಟುವಾಗಿ ಟೀಕಿಸುವ, ಯುರೋ ಕೂಟದಿಂದ  ಹೊರಬರುವ, ಉಕ್ರೇನ್ ಯುದ್ಧವನ್ನು ವಿರೋಧಿಸುವ, ಅದಕ್ಕೆ ಜರ್ಮನ್ ಬೆಂಬಲ ಹಿಂತೆಗೆದುಕೊಳ್ಳುವ, ರಶ್ಯಾದ ಜತೆ ಸಂಬಂಧ ಉತ್ತಮಪಡಿಸಿ ತೈಲ-ಗ್ಯಾಸ್ ಆಮದು ಮಾಡಿ ಜರ್ಮನ್ ಕೈಗಾರಿಕೆ ಅಭಿವೃದ್ಧಿಪಡಿಸುವ – ಧೋರಣೆಯನ್ನು ಎ.ಎಫ್.ಡಿ ಪ್ರತಿಪಾದಿಸುತ್ತಿದ್ದು ಅದು ಜನಪ್ರಿಯವಾಗಿದೆ. ಆದರೆ ಅಧಿಕಾರಕ್ಕೆ ಬಂದ ಮೇಲೆ ಎಷ್ಟರ ಮಟ್ಟಿಗೆ ಅದನ್ನು ಜಾರಿಗೊಳಿಸುತ್ತದೆ ಎಂದು ಹೇಳುವುದು ಕಷ್ಟ. ಇಟಲಿಯ ಪ್ರಧಾನಿ ಮೆಲೋನಿಯ ಉಗ್ರ ಬಲಪಂಥೀಯ ಪಕ್ಷ ವಿರೋಧ ಪಕ್ಷವಾಗಿದ್ದಾಗ, ಯುರೋ ಕೂಟದಿಂದ ಹೊರಬರುವ, ಉಕ್ರೇನ್ ಯುದ್ಧಕ್ಕೆ ಬೆಂಬಲವನ್ನು ವಿರೋಧಿಸುವ ಧೋರಣೆ ಪ್ರತಿಪಾದಿಸುತ್ತಿದ್ದು, ಅಧಿಕಾರಕ್ಕೆ ಬಂದ ಮೇಲೆ ಯುರೋಕೂಟದ ನೀತಿಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ. ಉಕ್ರೇನ್ ಯುದ್ಧಕ್ಕೆ ಬೆಂಬಲವನ್ನೂ ಮುಂದುವರೆಸಿದ್ದಾರೆ.

ಜರ್ಮನಿಯ ಇತರ ಪ್ರಾಂತ್ಯಗಳು ಮಾತ್ರವಲ್ಲ, ಯುರೋಪಿನಾದ್ಯಂತ ಪ್ರಗತಿಪರ ರಾಜಕಾರಣಿಗಳು, ಎ.ಎಫ್.ಡಿ ಈ ಜಯವನ್ನು ಕಾಳಜಿಯೊಂದಿಗೆ ಗಮನಿಸಿದ್ದಾರೆ.  ಇದು ನಡುಪಂಥೀಯ ಪಕ್ಷಗಳ ರಾಜಕಾರಣಿಗಳ ವಿನಾಶಕಾರಿ ಕುರುಡು ನವ-ಉದಾರವಾದಿ ಆರ್ಥಿಕ ನೀತಿಗಳ ಫಲ. ಈ ವಿಪತ್ತು ಅವರ ಸೃಷ್ಟಿ ಎಂದು ಹಲವು ನಾಯಕರು ಟೀಕಿಸಿದ್ದಾರೆ.

ಇದನ್ನೂ ನೋಡಿ : CITU ನಿಂದ ಕಾರ್ಮಿಕರ ವಿಧಾನಸೌದ ಚಲೋ | ಸೆಪ್ಟೆಂಬರ್ 08, 2026

Donate Janashakthi Media

Leave a Reply

Your email address will not be published. Required fields are marked *