ಯುದ್ಧದ ಭೀಕರತೆ–ಶಾಂತಿಯ ಸಂದೇಶ: ಕವಿಗೋಷ್ಠಿಯಲ್ಲಿ ಪ್ರತಿಧ್ವನಿ

ಬೆಂಗಳೂರು: ನಗರದಲ್ಲಿ ಆಯೋಜಿಸಲಾದ ಬಹುಭಾಷಾ ಕವಿಗೋಷ್ಠಿ, ಯುದ್ಧದ ಆತಂಕ ಮತ್ತು ಸಾಮರಸ್ಯದ ಅಗತ್ಯತೆ ಕುರಿತು ಚಿಂತನೆಗಳಿಗೆ ವೇದಿಕೆಯಾಯಿತು.

ನಗರದಲ್ಲಿ ಜನ ಶಿಕ್ಷಣ ಟ್ರಸ್ಟ್‌, ‘ಕಾವ್ಯ ಸಂಜೆ’ ಹಾಗೂ ಜಾಗೃತ ನಾಗರಿಕರು ಕರ್ನಾಟಕ ವತಿಯಿಂದ ಈ ಕಾರ್ಯಕ್ರಮ ನಡೆಯಿತು. ವಿವಿಧ ಭಾಷೆಗಳ ಕವಿಗಳು ಭಾಗವಹಿಸಿ ತಮ್ಮ ಕವಿತೆಗಳ ಮೂಲಕ ಪ್ರಸ್ತುತ ಜಾಗತಿಕ ಪರಿಸ್ಥಿತಿಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ವಿಶೇಷವಾಗಿ ಇರಾನ್ ಮೇಲೆ ಇಸ್ರೇಲ್–ಅಮೇರಿಕಾ ನಡೆಸುತ್ತಿರುವ ಯುದ್ಧ ಮತ್ತು ಸಾಮ್ರಾಜ್ಯಶಾಹಿ ಕ್ರೂರತೆಯನ್ನು ಕವಿಗಳು ತಮ್ಮ ರಚನೆಗಳಲ್ಲಿ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪಶ್ಚಿಮ ಬಂಗಾಳ ಚುನಾವಣೆ: ಲೆಫ್ಟ್ ಫ್ರಂಟ್ 2ನೇ ಅಭ್ಯರ್ಥಿ ಪಟ್ಟಿ ಬಿಡುಗಡೆ

ಕವಿತೆಗಳ ಮೂಲಕ ಯುದ್ಧದ ಭೀಕರತೆಯನ್ನು ಬಿಂಬಿಸಿದ ಕವಿಗಳು ಶಾಂತಿ, ಸಹಬಾಳ್ವೆ ಮತ್ತು ಸಹಿಷ್ಣುತೆಯ ಮಹತ್ವವನ್ನು ಒತ್ತಿಹೇಳಿದರು. ವಿವಿಧ ಭಾಷೆಗಳ ನಡುವಿನ ವೈವಿಧ್ಯತೆ ಇದ್ದರೂ ಮಾನವೀಯ ಮೌಲ್ಯಗಳಲ್ಲಿ ಏಕತೆಯ ಸಂದೇಶ ಸ್ಪಷ್ಟವಾಗಿ ಮೂಡಿಬಂದಿತು ಎಂದು ಹಿರಿಯ ಸಾಹಿತಿ ಪ್ರೊ. ಎಸ್‌.ಜಿ. ಸಿದ್ದರಾಮಯ್ಯ ಹೇಳಿದರು.

‘ಕಾವ್ಯವನ್ನು ಗಂಭೀರವಾಗಿ ತೆಗೆದುಕೊಳ್ಳದ ಈ ಕಾಲದಲ್ಲಿ ಹೃದಯದಲ್ಲಿ ಕವಿತೆಗೆ ಜಾಗ ಇರಿಸದೇ ಇದ್ದರೆ ಅದು ಅಪಾಯಕಾರಿ. ಕವಿತೆ ಬರೆಯದಿದ್ದರೂ ಓದುವ, ಕೇಳುವ ಮನಸ್ಸಾದರೂ ಇರಬೇಕು’ ಎಂದು ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಸಮಾರೋಪದಲ್ಲಿ ಹೇಳಿದರು.

ಜನ ಶಿಕ್ಷಣ ಟ್ರಸ್ಟ್‌ನ ಕೆ.ಎಸ್‌. ವಿಮಲಾ, ಕವಿಗಳಾದ ಶಾಖಿರಾ ಖಾನಂ, ಪದ್ಮಿನಿ ನಾಗರಾಜ್‌, ಆರ್ಧ್ರಾ, ಪ್ರತಿಭಾ ನಂದಕುಮಾರ್‌, ಅಮರಲತಾ ಯಡಿಯೂರ್‌, ಪಲ್ಲವಿ ರಾಘವೇಂದ್ರ ಗೌಡರ್‌, ಮಂಜಪ್ಪ ಮಾಗೋಡಿ, ಚಂದ್ರಶೇಖರ ತಾಳ್ಯ, ಹಾಜಿರಾ ಖಾನಂ, ಸಂಧ್ಯಾರಾಣಿ, ಸಿದ್ಧಾರ್ಥ ಎಂ.ಎಸ್‌., ಮಮತಾ ಸಾಗರ್‌, ರೇಷ್ಮಾ ರಮೇಶ್‌, ಹೇಮಂತ ಲಿಂಗಪ್ಪ, ಎಂ.ಸಿ. ಜಯಮಾಲಾ, ರವಿಚಂದ್ರ ಹಾಗೂ ಸತ್ಯಮೂರ್ತಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕುಮಾರಸ್ವಾಮಿ ಬೆಜ್ಜಿಹಳ್ಳಿ ನಿರ್ವಹಿಸಿದರು.

ಇದನ್ನೂ ನೋಡಿ: ₹1ಕ್ಕೆ 1 ಲೀಟರ್ ಹಾಲು – ಫ್ಲಿಪ್‌ಕಾರ್ಟ್ ವಿರುದ್ಧ ಸಿಡಿದೆದ್ದ ರೈತರು Janashakthi Media

Donate Janashakthi Media

Leave a Reply

Your email address will not be published. Required fields are marked *