ಹಾಸನ: ಸರ್ಕಾರಿ ಜಾಗವನ್ನು ಉಳಿಸಿ ಸಾರ್ವಜನಿಕ ಉಪಯೋಗಕ್ಕೆ ತರಲು ಮುಂದಾಗಿದ್ದ ಡಿವೈಎಫ್ಐ (DYFI) ಹಾಸನ ಜಿಲ್ಲಾ ಅಧ್ಯಕ್ಷ ಹಾಗೂ ಕೆಪಿಆರ್ಎಸ್ (KPRS) ಚನ್ನರಾಯಪಟ್ಟಣ ತಾಲ್ಲೂಕು ಕಾರ್ಯದರ್ಶಿ ವಾಸುದೇವ್ ಕಲ್ಕೆರೆ ಮೇಲೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಸರ್ಕಾರಿ
ಏಪ್ರಿಲ್ 8, 2026 ರಂದು ಸಂಜೆ ಸುಮಾರು 6.30ರ ಸಮಯದಲ್ಲಿ, ತಾಲೂಕಿನ ನುಗ್ಗೇಹಳ್ಳಿ ಹೋಬಳಿ ಕಲ್ಕೆರೆ (ಕಟ್ಟೆಮನೆ) ಸರ್ಕಲ್ನಲ್ಲಿರುವ ಪಶು ಆಸ್ಪತ್ರೆ ಇದ್ದ ಸ್ಥಳದಲ್ಲಿ ಡಿಜಿಟಲ್ ಲೈಬ್ರರಿ ನಿರ್ಮಾಣಕ್ಕಾಗಿ ರೂಪುರೇಷೆ ಸಿದ್ಧಪಡಿಸುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಈ ಸಂದರ್ಭದಲ್ಲಿ 8 ರಿಂದ 10 ಜನರ ಗುಂಪು ಏಕಾಏಕಿ ವಾಸುದೇವ್ ಅವರ ಮೇಲೆ ದಾಳಿ ನಡೆಸಿ, ಅವರ ಮೊಬೈಲ್ ಫೋನ್ ಹಾನಿಗೊಳಿಸಿ, ಲೈಬ್ರರಿ ನಿರ್ಮಾಣ ಕಾರ್ಯವನ್ನು ನಿಲ್ಲಿಸುವಂತೆ ಜೀವ ಬೆದರಿಕೆ ಹಾಕಿದ್ದಾರೆ.
ಇದನ್ನೂ ಓದಿ: ವಿಧಾನಸಭಾ ಚುನಾವಣೆ| ಕೇರಳ: ಶೇ. 90 ರಷ್ಟು ಮತದಾನ ನಿರೀಕ್ಷೆ; ಅಸ್ಸಾಂ – ಶೇ. 75 ಕ್ಕೆ ಏರಿಕೆ
ಘಟನೆಯ ಸಮಯದಲ್ಲಿ ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣವೇ ಮಧ್ಯಪ್ರವೇಶಿಸಿ ವಾಸುದೇವ್ ಅವರನ್ನು ರಕ್ಷಿಸಿದ್ದಾರೆ. ಬಳಿಕ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ನುಗ್ಗೇಹಳ್ಳಿ ಪಿಎಸ್ಐಗೆ ವಿಷಯ ತಿಳಿಸಲಾಗಿದ್ದು, ಅವರು ಮುಂದಿನ ದಿನ ದೂರು ನೀಡುವಂತೆ ಸೂಚಿಸಿದ್ದಾರೆ. ಆದರೆ ಬೆಳಿಗ್ಗೆ ದೂರು ನೀಡಲು ಹೋದಾಗ ಪ್ರಾಥಮಿಕವಾಗಿ ದೂರು ಸ್ವೀಕರಿಸಲು ಪೊಲೀಸರು ಹಿಂಜರಿದಿದ್ದಾರೆ ಎನ್ನಲಾಗಿದೆ. ಜನರ ಆಕ್ರೋಶದ ಹಿನ್ನೆಲೆಯಲ್ಲಿ ನಂತರ ದೂರು ಸ್ವೀಕರಿಸಿ, ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ಈ ಪ್ರಕರಣದ ಹಿನ್ನೆಲೆ ಕುರಿತು ತಿಳಿದುಬಂದಂತೆ, ಸಂಬಂಧಿಸಿದ ಸ್ಥಳ ಸೇರಿದಂತೆ ಸುಮಾರು 11 ಎಕರೆ ಸರ್ಕಾರಿ ಭೂಮಿಯನ್ನು ತಹಶೀಲ್ದಾರ್ ಸರ್ವೆ ನಡೆಸಿಸಿ ವಶಕ್ಕೆ ಪಡೆದಿದ್ದು, ಅದನ್ನು ಬಡವರಿಗೆ ಹಂಚಿಕೆ ಮಾಡಬೇಕು ಎಂದು ವಾಸುದೇವ್ ಕಲ್ಕೆರೆ ಹೋರಾಟ ನಡೆಸುತ್ತಿದ್ದರು. ಈ ಭೂಮಿಯನ್ನು ಕಬಳಿಸಲು ಸ್ಥಳೀಯ ಪ್ರಭಾವಿಗಳು ಯತ್ನಿಸುತ್ತಿದ್ದರೆಂದು ಆರೋಪಿಸಲಾಗಿದ್ದು, ಅದಕ್ಕೆ ಅಡ್ಡಿಯಾದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.
ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ನೋಡಿ: ಎಸ್ ಐಆರ್: ವಿಶೇಷ ಸಮಗ್ರ ಹೊರತಳ್ಳುವಿಕೆ: ಮುಗಿಯದ ವ್ಯಥೆ? Janashakthi Media
