ಬೆಂಗಳೂರು: ರಾಜ್ಯ ಸರ್ಕಾರವು ವಿದ್ಯಾರ್ಥಿಗಳಲ್ಲಿ ಅತಿಯಾದ ಮತ್ತು ಅಸುರಕ್ಷಿತ ಡಿಜಿಟಲ್ ತಂತ್ರಜ್ಞಾನ (ಮೊಬೈಲ್)ದ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಿರುವ ‘ವಿದ್ಯಾರ್ಥಿಗಳಲ್ಲಿ ಜವಾಬ್ದಾರಿಯುತ ತಂತ್ರಜ್ಞಾನ ಬಳಕೆ ಕರಡು ನೀತಿ’ಯನ್ನು ಪ್ರಕಟಿಸಿದೆ.
ಶಾಲೆಗಳಲ್ಲಿ ಮನೋರಂಜನಾ ತಂತ್ರಜ್ಞಾನ ಬಳಕೆಯನ್ನು 1 ಗಂಟೆಗೆ ಮಿತಿಗೊಳಿಸುವ ಗುರಿ ಸೇರಿದಂತೆ ಹಲವಾರು ಮಹತ್ವದ ಅಂಶಗಳುಳ್ಳ ಈ ಕರಡು ನೀತಿಯನ್ನು ಸಾರ್ವಜನಿಕ ಚರ್ಚೆಗೆ ಮುಕ್ತಗೊಳಿಸಿದ್ದು ಸಲಹೆ, ಅಭಿಪ್ರಾಯ ಸಲ್ಲಿಸಲು ಅವಕಾಶ ನೀಡಿದೆ.
ಏಪ್ರಿಲ್ 1ರಂದು ಈ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಈಗಾಗಲೇ ಇಲಾಖೆಯ ವೆಬ್‌ಸೈಟ್‌ನಲ್ಲಿ ಕರಡು ನೀತಿಯನ್ನು ಅಪ್‌ಲೋಡ್ ಮಾಡಿದ್ದು 15 ದಿನಗಳ ಒಳಗಾಗಿ ಸಾರ್ವಜನಿಕರು, ಸಂಘ-ಸಂಸ್ಥೆಗಳು, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಯಾರು ಬೇಕಿದ್ದರೂ ತಮ್ಮ ಸಲಹೆ, ಅಭಿಪ್ರಾಯಗಳನ್ನು ಸಲ್ಲಿಸಬಹುದು ಎಂದು ಹೇಳಿದರು.
ಇದನ್ನೂ ಓದಿ: ತ್ರಿಪುರಾ| “ಚುನಾವಣೆಗೂ ಮುನ್ನ ಘರ್ಷಣೆ, ನಂತರ ಸೌಹಾರ್ದತೆ”: ಚೌಧರಿ ವಾಗ್ದಾಳಿ
ಮೊಬೈಲ್ ಸೇರಿದಂತೆ ತಂತ್ರಜ್ಞಾನದ ಬಳಕೆಯಿಂದ ಮಕ್ಕಳಲ್ಲಿ ನಿದ್ರಾಹೀನತೆ, ಸಾಮಾಜಿಕ ಪ್ರತ್ಯೇಕತೆ (ಸೋಶಿಯಲ್ ಐಸೋಲೇಶನ್) ಹೆಚ್ಚುತ್ತಿದ್ದು ತಂತ್ರಜ್ಞಾನ ವ್ಯಸನದಿಂದಾಗಿ ಮಾನಸಿಕ ಅಸಮತೋಲನಕ್ಕೂ ಕಾರಣವಾಗುತ್ತಿದೆ. ಶಾಲೆಗಳಲ್ಲಿ ಇದನ್ನು ನಿಷೇಧ ಮಾಡುವ ಬಗ್ಗೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಈ ಬಗ್ಗೆ ತಿಳಿವಳಿಕೆ ನೀಡಬೇಕಿದ್ದು ಶಿಕ್ಷಕರಿಗೆ ಈ ಬಗ್ಗೆ ತರಬೇತಿ ಕೊಡಲಾಗುತ್ತದೆ. ತಂತ್ರಜ್ಞಾನವನ್ನು ಬೇಡ ಎನ್ನಲಾಗುವುದಿಲ್ಲ.
ಆದರೆ, ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಮಕ್ಕಳಿಗೂ ಅರಿವು ಮೂಡಿಸಬೇಕಿದೆ. ಪಠ್ಯಪುಸ್ತಕದಲ್ಲೂ ಈ ಬಗ್ಗೆ ಒಂದು ವಿಷಯವನ್ನು ಅಳವಡಿಸಬೇಕು. ಶಿಕ್ಷಣ ಇಲಾಖೆ ಜತೆಗೂ ಮಾತುಕತೆ ಮಾಡಲಾಗಿದೆ. ಸಾರ್ವಜನಿಕ ಅಭಿಪ್ರಾಯ ಬಂದ ಬಳಿಕ ನೀತಿಯನ್ನು ಅಂತಿಮಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಇಲ್ಲಿಗೆ ಅಭಿಪ್ರಾಯ ಸಲ್ಲಿಸಿ
ಆಸಕ್ತರು ತಮ್ಮ ಅಮೂಲ್ಯ ಅಭಿಪ್ರಾಯಗಳನ್ನು [email protected] ಮತ್ತು [email protected] ಗೆ ಮೇಲ್ ಮಾಡಬಹದು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.
ಪ್ರಮುಖ ನೀತಿ ಕ್ರಮಗಳು
– ಪಠ್ಯಕ್ರಮದಲ್ಲಿ ಏಕೀಕರಣ:
ತಂತ್ರಜ್ಞಾನ ಜವಾಬ್ದಾರಿಯುತ ಬಳಕೆ, ಜೀವನ ಕೌಶಲ್ಯ ಮತ್ತು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು (ಐಸಿಟಿ) ಶಿಕ್ಷಣದಲ್ಲಿ ಒಳಗೊಳ್ಳುವುದು. 9ನೇ ತರಗತಿಯಿಂದ ದ್ವಿತೀಯ ಪಿಯು ಪಠ್ಯದಲ್ಲಿ ಒಂದು ವಿಷಯವಾಗಿ ಕಲಿಸುವುದು
– ಶಾಲಾ ಡಿಜಿಟಲ್ ಬಳಕೆ ನೀತಿ:
ದಿನಕ್ಕೆ 1 ಗಂಟೆ ಮನರಂಜನಾ ತಂತ್ರಜ್ಞಾನ ಬಳಕೆ, ಸಮಯ, ಸೈಬರ್ ದುರ್ವರ್ತನೆಯನ್ನು ನಿರ್ವಹಿಸುವುದು ಮತ್ತು ಸಲಹಾ ಸೇವೆಗಳ ವ್ಯವಸ್ಥೆ
– ಆರಂಭಿಕ ಗುರುತಿಸುವಿಕೆ ಮತ್ತು ರೆಫರಲ್:
ವಿದ್ಯಾರ್ಥಿಗಳ ವರ್ತನೆ ಹಾಗೂ ಶೈಕ್ಷಣಿಕ ಸಮಸ್ಯೆಗಳ ಸೂಚನೆಗಳನ್ನು ಗುರುತಿಸಲು ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ. ಅಗತ್ಯವಿದ್ದರೆ, ನಿಗದಿತ ಕ್ರಮಗಳ ಮೂಲಕ ಅವರನ್ನು ಕೌನ್ಸೆಲರ್‌ಗಳು ಹಾಗೂ ಮಾನಸಿಕ ಆರೋಗ್ಯ ಸೇವೆಗಳನ್ನು ಪಡೆಯಲು ರೆಫರ್ ಮಾಡಲಾಗುತ್ತದೆ.
– ಜವಾಬ್ದಾರಿಯುತ ತಂತ್ರಜ್ಞಾನ ಬಳಕೆ ಸಮಿತಿಗಳು:
ಅನುಷ್ಠಾನ, ಜಾಗೃತಿ ಮತ್ತು ಘಟನೆ ನಿರ್ವಹಣೆಗೆ ಶಾಲಾ ಮಟ್ಟದ ಸಮಿತಿಗಳ ರಚನೆ
– ತರಬೇತಿ ಮತ್ತು ಅರಿವು:
ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ನಿಯಮಿತ ಸಂವೇದನಾ ಕಾರ್ಯಕ್ರಮಗಳು
– ಆಫ್‌ಲೈನ್ ಚಟುವಟಿಕೆಗಳ ಉತ್ತೇಜನ:
ದೈಹಿಕ ಚಟುವಟಿಕೆ, ಹವ್ಯಾಸಗಳು ಮತ್ತು ತಂತ್ರಜ್ಞಾನೇತರ ಅವಧಿಗಳ ಪ್ರೋತ್ಸಾಹ
– ಮೌಲ್ಯಮಾಪನ ವ್ಯವಸ್ಥೆಗಳು:
ತಂತ್ರಜ್ಞಾನ ಬಳಕೆಯ ಒತ್ತಡದ ಅನುಸರಣೆ ಮತ್ತು ಟೆಲಿ- ಮಾನಸ್ (14416) ಮುಂತಾದ ಸೇವೆಗಳ ಬಳಕೆ
– ಶಿಕ್ಷಕರ ತರಬೇತಿ (ಡಿಜಿಟಲ್ ಡಿಟಾಕ್ಸ್ ಮಾದರಿ):
ಟ್ರೈನಿಂಗ್ ಆಫ್ ಟ್ರೈನರ್ಸ್ (ಟಿಒಟಿ) ಮಾದರಿಯ ಮೂಲಕ, ತಂತ್ರಜ್ಞಾನ ವ್ಯಸನದ (50 ಮಾದರಿ- ಕಾರ್ವಿಂಗ್, ಕಂಟ್ರೋಲ್, ಕಂಪಲ್ಶನ್, ಕಾಪಿಂಗ್, ಕಾನ್ಸಿಕ್ವೆನ್ಸಸ್) ಲಕ್ಷಣಗಳ ಗುರುತಿಸುವಿಕೆ ಮತ್ತು ತರಗತಿ ಮಟ್ಟದ ಸಹಪಾಠಿಗಳಿಂದ ಮುನ್ನಡೆಸಲ್ಪಡುವ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದು ಶಿಕ್ಷಕರನ್ನು ಸಜ್ಜುಗೊಳಿಸುವುದು.
ಇದನ್ನೂ ನೋಡಿ: ಕೇರಳ ಚುನಾವಣೆ | ಎಲ್‌ಡಿಎಫ್ vs ಯುಡಿಎಫ್ ನೆಕ್ ಟು ನೆಕ್ ಫೈಟ್ – ಗೇಮ್‌ಚೇಂಜರ್ ಆಗುವ ಮತದಾರರು ಯಾರು?
