ಬೆಂಗಳೂರು: ‘ರಾಜ್ಯದಲ್ಲಿ ಎಲ್‌ಪಿಜಿ ಅಭಾವದಿಂದ ಆಟೋ ಚಾಲಕರಿಗೆ ಬಹಳ ತೊಂದರೆಯಾಗುತ್ತಿದೆ. ಇದರಿಂದ ಸಂಚಾರ ವ್ಯವಸ್ಥೆಯ ಮೇಲೆ ಪರಿಣಾಮ ಉಂಟಾಗುತ್ತಿದೆ. ಅಲ್ಲದೆ, ಹೊಟೇಲ್ ಉದ್ಯಮ ಕೂಡಾ ಸಮಸ್ಯೆ ಎದುರಿಸುತ್ತಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಗಮನಹರಿಸಬೇಕು’ ಎಂದು ಏಪ್ರಿಲ್ 4ರಂದು ಸುದ್ದಿಗಾರರ ಜೊತೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.
‘ಎಲ್‌ಪಿಜಿ ಪೂರೈಕೆ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲಿಲ್ಲ. ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಕೇಂದ್ರ ಸರ್ಕಾರ ಸರಿಯಾಗಿ ಮುಂಜಾಗ್ರತೆ, ನೀತಿ ರೂಪಿಸಬೇಕಿತ್ತು. ಆದರೆ, ಈ ವಿಚಾರದಲ್ಲಿ ವಿಫಲವಾಗಿದೆ. ಈ ವಿಚಾರವಾಗಿ ಬಿಜೆಪಿಯವರು ಈವರೆಗೂ ಯಾಕೆ ಮಾತನಾಡುತ್ತಿಲ್ಲ. ನಮ್ಮಿಂದ ತೊಂದರೆಯಾಗಿದೆ ಎಂದು ಒಪ್ಪಿಕೊಂಡು ಜನರ ಬಳಿ ಕ್ಷಮೆ ಕೋರಬೇಕು’ ಎಂದರು.
ಇದನ್ನೂ ಓದಿ: ಭ್ರಷ್ಟಾಚಾರಕ್ಕೆ ಕಡಿವಾಣ: ಸರ್ಕಾರಿ ಕಚೇರಿಗಳಲ್ಲಿ ಲಂಚ ವಿರೋಧಿ ಫಲಕ ಕಡ್ಡಾಯ
ಎರಡೂ ಕಡೆ ಗೆಲುವು–ಡಿಕೆಶಿ:
‘ಕಳೆದ ಚುನಾವಣೆಯಲ್ಲಿ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂದ ಮತಕ್ಕಿಂತ ಈ ಬಾರಿಯ ಉಪ ಚುನಾವಣೆಯಲ್ಲಿ ಹೆಚ್ಚು ಮತ ಬೀಳಲಿದೆ. ನಮ್ಮ ಅಭ್ಯರ್ಥಿಗಳು ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
‘ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಉಪಚುನಾವಣೆ ಪ್ರಚಾರ ಮಾಡಿದ್ದೇನೆ. ನಮ್ಮ ಕಾರ್ಯಕರ್ತರು ಬಹಳ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ಮನೆ ಮನೆಗೆ ಹೋಗಿ ಗ್ಯಾರಂಟಿ ಯೋಜನೆಗಳ ಬಗ್ಗೆ ಮನವರಿಕೆ ಮಾಡುತ್ತಿದ್ದಾರೆ. ಗ್ಯಾರಂಟಿ ಫಲಾನುಭವಿಗಳಲ್ಲಿ ಕಳೆದ ಬಾರಿ ಬಿಜೆಪಿಗೆ ಮತ ಹಾಕಿರುವವರೂ ಕೂಡ ಈ ಬಾರಿ ಕಾಂಗ್ರೆಸ್ ಗೆ ಮತ ಹಾಕುವುದಾಗಿ ತಿಳಿಸಿದ್ದಾರೆ. ಬೆಲೆ ಏರಿಕೆ ಆಗುತ್ತಿರುವ ಪರಿಸ್ಥಿತಿಯಲ್ಲಿ ಗ್ಯಾರಂಟಿ ಯೋಜನೆ ಎಷ್ಟು ನೆರವಾಗುತ್ತಿವೆ ಎಂದು ಸ್ಮರಿಸುತ್ತಿದ್ದಾರೆ. ಇವುಗಳನ್ನು ಉಳಿಸಿಕೊಳ್ಳಲು ಜನ ತೀರ್ಮಾನಿಸಿದ್ದಾರೆ’ ಎಂದರು.
ಇದನ್ನೂ ನೋಡಿ: ಬಿಜೆಪಿ–ಸಂಘಪರಿವಾರದಿಂದ ಇತಿಹಾಸ ವಿರೂಪಗೊಳಿಸುವ ಪ್ರಯತ್ನ – ಪ್ರಿಯಾಂಕ್ ಖರ್ಗೆ Janashakthi Media
