ಸಹಾರನ್ಪುರ: ಉತ್ತರ ಪ್ರದೇಶದ ಸಹಾರನ್ಪುರ ಜಿಲ್ಲಾ ಕಲೆಕ್ಟರೇಟ್ ಆವರಣದಲ್ಲಿದ್ದ ಹಳೆಯ ಮಸೀದಿಯನ್ನು ಜಿಲ್ಲಾಡಳಿತ ಶನಿವಾರ ಮುಂಜಾನೆ ಭಾರಿ ಪೊಲೀಸ್ ಭದ್ರತೆಯ ನಡುವೆ ಧ್ವಂಸಗೊಳಿಸಿದೆ. ಮಸೀದಿ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದೆ ಎಂದು ಆಡಳಿತ ವಾದಿಸಿದ್ದು, ಮಸೀದಿ ಆಡಳಿತ ಸಮಿತಿ ಮಾತ್ರ ಧ್ವಂಸಕ್ಕೂ ಮುನ್ನ ಅಗತ್ಯ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲಾಗಿಲ್ಲ ಎಂದು ಆರೋಪಿಸಿದೆ. ಸಹಾರನ್ಪುರ
ಮಸೀದಿ ಧ್ವಂಸ ಕಾರ್ಯಾಚರಣೆ ಬೆಳಗಿನ ಜಾವ ಸುಮಾರು 5ರಿಂದ 6.45ರ ನಡುವೆ ನಡೆದಿದೆ. ಕಲೆಕ್ಟರೇಟ್ನ ಎಲ್ಲ ಪ್ರವೇಶ ದ್ವಾರಗಳನ್ನು ಮುಚ್ಚಿ, ಭಾರಿ ಸಂಖ್ಯೆಯಲ್ಲಿ ಪೊಲೀಸರು ಹಾಗೂ ತ್ವರಿತ ಕಾರ್ಯಪಡೆ ನಿಯೋಜಿಸಲಾಗಿತ್ತು. ಜೆಸಿಬಿ ಮತ್ತು ಇತರ ಯಂತ್ರೋಪಕರಣಗಳನ್ನು ರಾತ್ರಿ ವೇಳೆಯೇ ಕಲೆಕ್ಟರೇಟ್ ಆವರಣಕ್ಕೆ ತರಲಾಗಿತ್ತು.
ಮಸೀದಿ ಆಡಳಿತ ಸಮಿತಿಯ ಪ್ರಕಾರ, ಈ ಕಟ್ಟಡವು ನೂರು ವರ್ಷಗಳಿಗಿಂತಲೂ ಹಳೆಯದಾಗಿದ್ದು, ಪ್ರಸ್ತುತ ಕಲೆಕ್ಟರೇಟ್ ಕಟ್ಟಡ ನಿರ್ಮಾಣಕ್ಕೂ ಮೊದಲೇ ಅಸ್ತಿತ್ವದಲ್ಲಿತ್ತು. 1911ರ ವಿದ್ಯುತ್ ಬಿಲ್ ಸೇರಿದಂತೆ ಹಳೆಯ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಸಲ್ಲಿಸಿರುವುದಾಗಿ ಸಮಿತಿ ಹೇಳಿದೆ. ಆಸ್ತಿ ಸುನ್ನಿ ವಕ್ಫ್ ಮಂಡಳಿಗೆ ಸಂಬಂಧಿಸಿದೆ ಮತ್ತು ಹಳೆಯ ಕಂದಾಯ ದಾಖಲೆಗಳಲ್ಲೂ ಆಸ್ತಿಯ ವಿವರಗಳಿವೆ ಎಂದು ಸಮಿತಿ ವಾದಿಸಿದೆ. ಸಹಾರನ್ಪುರ
ಆದರೆ ಜಿಲ್ಲಾಡಳಿತವು ಈ ದಾಖಲೆಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದು, ಮಸೀದಿ ಸರ್ಕಾರಿ ಜಮೀನಿನ ಮೇಲೆ ಅನಧಿಕೃತವಾಗಿ ನಿರ್ಮಿಸಲಾಗಿದೆ ಎಂದು ಹೇಳಿದೆ.
₹6.41 ಕೋಟಿ ದಂಡ
ವಿವಾದವು 2025ರಲ್ಲಿ ಸಲ್ಲಿಸಲಾದ ದೂರಿನ ಬಳಿಕ ತೀವ್ರಗೊಂಡಿತ್ತು. ಉತ್ತರ ಪ್ರದೇಶದ ಸಾರ್ವಜನಿಕ ಆಸ್ತಿಯಿಂದ ಅನಧಿಕೃತ ವ್ಯಕ್ತಿಗಳ ತೆರವು ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. 2026ರ ಜುಲೈ 16ರಂದು ನಗರ ಮ್ಯಾಜಿಸ್ಟ್ರೇಟ್ ಮಸೀದಿಯನ್ನು ಅನಧಿಕೃತ ಕಟ್ಟಡವೆಂದು ಘೋಷಿಸಿ, 315 ಚದರ ಮೀಟರ್ ಸರ್ಕಾರಿ ಜಮೀನಿನ ಅನಧಿಕೃತ ಬಳಕೆಗೆ ₹6.41 ಕೋಟಿ ದಂಡ ವಿಧಿಸಿದ್ದರು.
ಈ ಆದೇಶದ ವಿರುದ್ಧ ಮಸೀದಿ ಸಮಿತಿ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಸೆಪ್ಟೆಂಬರ್ 2ರಂದು ಜಿಲ್ಲಾ ನ್ಯಾಯಾಲಯವು ಮೇಲ್ಮನವಿಯನ್ನು ತಿರಸ್ಕರಿಸಿ ನಗರ ಮ್ಯಾಜಿಸ್ಟ್ರೇಟ್ ಆದೇಶವನ್ನು ಎತ್ತಿಹಿಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಧ್ವಂಸ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಹಿಮಾಲಯದಲ್ಲಿ ಹೆಚ್ಚುತ್ತಿರುವ ಅಪಾಯ: ಹಿಮನದಿಗಳ ಹಿಂಜರಿತ, ಹಿಮಸರೋವರ ಸ್ಫೋಟದ ಭೀತಿ
“ಧ್ವಂಸ ಆದೇಶವೇ ಇರಲಿಲ್ಲ” ಮಸೀದಿ ಸಮಿತಿ
ಮಸೀದಿಯ ಮುತವಲ್ಲಿ ತನ್ವೀರ್ ಅಹ್ಮದ್ ಅವರು ತೆರವು ಆದೇಶ ಮತ್ತು ಧ್ವಂಸ ಆದೇಶ ಎರಡೂ ಒಂದೇ ಅಲ್ಲ ಎಂದು ವಾದಿಸಿದ್ದಾರೆ. ಜುಲೈನಲ್ಲಿ 30 ದಿನಗಳೊಳಗೆ ಆವರಣ ತೆರವುಗೊಳಿಸುವಂತೆ ಆದೇಶಿಸಲಾಗಿತ್ತು. ಆದರೆ ಆ ಆದೇಶದ ವಿರುದ್ಧದ ಮೇಲ್ಮನವಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಧ್ವಂಸ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಜಿಲ್ಲಾ ನ್ಯಾಯಾಲಯದ ಆದೇಶದ ಬಳಿಕವೂ ಮೇಲ್ಮನವಿ ಸಲ್ಲಿಸಲು ಅವಕಾಶವಿತ್ತು ಮತ್ತು ಧ್ವಂಸಕ್ಕೆ ಪ್ರತ್ಯೇಕ ಆದೇಶವಿರಲಿಲ್ಲ ಎಂಬುದು ಅವರ ವಾದವಾಗಿದೆ. ಮಸೀದಿ ಸಮಿತಿ ಇದೀಗ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸುತ್ತಿದೆ.
ರಾಜಕೀಯ ಆಕ್ರೋಶ
ಧ್ವಂಸ ಕಾರ್ಯಾಚರಣೆಗೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಸಹಾರನ್ಪುರ ಸಂಸದ ಇಮ್ರಾನ್ ಮಸೂದ್ ಇದನ್ನು “ಸಹಾರನ್ಪುರದ ಜನರಿಗೆ ಕರಾಳ ದಿನ” ಎಂದು ಕರೆದಿದ್ದಾರೆ. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹಾಗೂ ಬಿಎಸ್ಪಿ ನಾಯಕಿ ಮಾಯಾವತಿ ಕೂಡ ಕಾರ್ಯಾಚರಣೆಯ ಸಮಯ ಮತ್ತು ರೀತಿಯನ್ನು ಪ್ರಶ್ನಿಸಿದ್ದಾರೆ.
ಕೈರಾನಾ ಲೋಕಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ಸಂಸದೆ ಇಕ್ರಾ ಹಸನ್ ಅವರನ್ನು ಸಹಾರನ್ಪುರಕ್ಕೆ ತೆರಳದಂತೆ ಅವರ ನಿವಾಸದಲ್ಲಿ ಗೃಹಬಂಧನದಲ್ಲಿರಿಸಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ. ಧ್ವಂಸಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ಭೇಟಿ ಮಾಡಲು ತಾವು ಸಹಾರನ್ಪುರಕ್ಕೆ ತೆರಳಲು ಬಯಸಿದ್ದರೂ ಪೊಲೀಸರು ತಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದಕ್ಕೆ ಪ್ರತಿಯಾಗಿ ಸಹಾರನ್ಪುರದ ಪೊಲೀಸ್ ಅಧಿಕಾರಿಗಳು ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪಾಲಿಸಲಾಗಿದೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ನೋಡಿ : ಕಾರ್ಮಿಕರ ವಿಧಾನಸೌಧ ಚಲೋ | ಏನಿದು ಹೋರಾಟ? ಪ್ರಮುಖ ಬೇಡಿಕೆಗಳೇನು? – ಮೀನಾಕ್ಷಿ ಸುಂದರಂ Janashakthi Media
