ಹಿಮಾಲಯದಲ್ಲಿ ಹೆಚ್ಚುತ್ತಿರುವ ಅಪಾಯ: ಹಿಮನದಿಗಳ ಹಿಂಜರಿತ, ಹಿಮಸರೋವರ ಸ್ಫೋಟದ ಭೀತಿ

ಡೆಹ್ರಾಡೂನ್: ಹಿಮನದಿಗಳು ವೇಗವಾಗಿ ಕರಗುತ್ತಿರುವುದು, ಹಿಮಸರೋವರಗಳ ವಿಸ್ತರಣೆ, ಹಿಮಸರೋವರ ಸ್ಫೋಟದಿಂದ ಉಂಟಾಗುವ ಪ್ರವಾಹ ಹಾಗೂ ಹಿಮಪಾತದ ಅಪಾಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತರಾಖಂಡ ಗಂಭೀರ ಹವಾಮಾನ ಬಿಕ್ಕಟ್ಟಿನ ಅಂಚಿನಲ್ಲಿದೆ ಎಂದು ಹೊಸ ವರದಿ ಎಚ್ಚರಿಸಿದೆ. ಹಿಮಾಲಯದಲ್ಲಿ

‘ಉತ್ತರಾಖಂಡ ಅಟ್ ಎ ಕ್ಲೈಮೇಟ್ ಕ್ರಾಸ್‌ರೋಡ್ಸ್  ವಾಟ್ ಫೋರ್ ಇಯರ್ಸ್ ಆಫ್ ಡಿಸಾಸ್ಟರ್ ರಿಪೋರ್ಟಿಂಗ್ ಟೆಲ್ ಅಸ್ ಅಬೌಟ್ ಗ್ಲೇಸಿಯರ್ಸ್, ಜಿಎಲ್‌ಒಎಫ್‌ಎಸ್ ಅಂಡ್ ಅವಲಾಂಚಸ್’ ಎಂಬ ವರದಿಯನ್ನು ಸಾಮಾಜಿಕ ಅಭಿವೃದ್ಧಿ ಸಂಸ್ಥೆಯೊಂದು ಬಿಡುಗಡೆ ಮಾಡಿದೆ. ಉತ್ತರಾಖಂಡದ ಹಿಮಾಲಯ ಪ್ರದೇಶದಲ್ಲಿ ಹವಾಮಾನ ಬದಲಾವಣೆಯಿಂದ ಉಂಟಾಗುತ್ತಿರುವ ಅಪಾಯಗಳ ಕುರಿತು ವರದಿ ಗಮನ ಸೆಳೆದಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು 2024ರಲ್ಲಿ ಉತ್ತರಾಖಂಡದಲ್ಲಿರುವ ಸುಮಾರು 1,200 ಹಿಮಸರೋವರಗಳ ಪೈಕಿ 13 ಸರೋವರಗಳನ್ನು ಅಪಾಯಕಾರಿ ಎಂದು ಗುರುತಿಸಿತ್ತು. ಅವುಗಳಲ್ಲಿ 5 ಸರೋವರಗಳು ಅತ್ಯಂತ ಹೆಚ್ಚಿನ ಅಪಾಯದ ವರ್ಗದಲ್ಲಿ, 4 ಮಧ್ಯಮ ಹಾಗೂ 4 ಕಡಿಮೆ ಅಪಾಯದ ವರ್ಗದಲ್ಲಿವೆ.

ಹಿಮನದಿಗಳು ಕರಗಿದಂತೆ ಅವುಗಳಿಂದ ಉಂಟಾಗುವ ಸರೋವರಗಳಲ್ಲಿ ನೀರಿನ ಪ್ರಮಾಣ ಹೆಚ್ಚುತ್ತದೆ. ಹಿಮ ಅಥವಾ ಬಂಡೆಗಳ ನೈಸರ್ಗಿಕ ತಡೆ ಒಡೆದರೆ ಕ್ಷಣಾರ್ಧದಲ್ಲಿ ಭಾರಿ ಪ್ರಮಾಣದ ನೀರು ಕೆಳಭಾಗದ ಪ್ರದೇಶಗಳಿಗೆ ಹರಿದುಬರುವ ಸಾಧ್ಯತೆ ಇದೆ. ಇದನ್ನೇ ಹಿಮಸರೋವರ ಸ್ಫೋಟ ಪ್ರವಾಹ (ಜಿಎಲ್‌ಒಎಫ್) ಎಂದು ಕರೆಯಲಾಗುತ್ತದೆ. ಹಿಮಾಲಯದಲ್ಲಿ

ಇದನ್ನೂ ಓದಿ : ‘ಆಪರೇಷನ್ ಮುಕ್ತ’ ಬೆನ್ನಲ್ಲೇ ಹುಲಿಮಂಗಲದಲ್ಲಿ ಆತಂಕ: 400ಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಮನೆ ಕಳೆದುಕೊಳ್ಳುವ ಭೀತಿ

1,200ಕ್ಕೂ ಹೆಚ್ಚು ಹಿಮಸರೋವರಗಳು

ಉತ್ತರಾಖಂಡದಲ್ಲಿ ಸುಮಾರು 1,200 ಹಿಮಸರೋವರಗಳಿದ್ದು, 426 ಸರೋವರಗಳು 1,000 ಚದರ ಮೀಟರ್‌ಗಿಂತಲೂ ದೊಡ್ಡದಾಗಿವೆ. ಇವು ಒಟ್ಟು 33.47 ಲಕ್ಷ ಚದರ ಮೀಟರ್‌ಗೂ ಹೆಚ್ಚು ಪ್ರದೇಶವನ್ನು ಆವರಿಸಿವೆ ಎಂದು ಅಧಿಕೃತ ಅಂದಾಜುಗಳು ತಿಳಿಸಿವೆ. ಜಾಗತಿಕ ತಾಪಮಾನ ಏರಿಕೆಯಿಂದ ಹಿಮನದಿಗಳ ಕರಗುವಿಕೆ ವೇಗ ಪಡೆದುಕೊಂಡಿರುವುದು ಹಿಮಸರೋವರಗಳ ಗಾತ್ರ ಹೆಚ್ಚಲು ಕಾರಣವಾಗುತ್ತಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಅಪಾಯಕಾರಿ ಹಿಮಸರೋವರಗಳ ಗುರುತಿಸುವಿಕೆ ನಡೆದಿದ್ದರೂ, ಅವುಗಳ ನಿರಂತರ ಮೇಲ್ವಿಚಾರಣೆ ಮತ್ತು ಮುನ್ನೆಚ್ಚರಿಕೆ ವ್ಯವಸ್ಥೆ ಎಲ್ಲೆಡೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಿಸಿಲ್ಲ ಎಂಬುದು ವರದಿಯ ಪ್ರಮುಖ ಆತಂಕವಾಗಿದೆ.

ವರದಿಯಲ್ಲಿ ವಸುಧಾರಾ ಸರೋವರವನ್ನು ಉದಾಹರಣೆಯಾಗಿ ಉಲ್ಲೇಖಿಸಲಾಗಿದ್ದು, ಅದರ ಅಪಾಯದ ಮೌಲ್ಯಮಾಪನ ಪೂರ್ಣಗೊಂಡಿದ್ದರೂ, ಹಲವು ತಿಂಗಳುಗಳ ನಂತರವೂ ಮುನ್ನೆಚ್ಚರಿಕೆ ವ್ಯವಸ್ಥೆ ಅಳವಡಿಕೆಯಾಗಿಲ್ಲ ಎಂದು ಹೇಳಲಾಗಿದೆ.

2013ರ ಕೇದಾರನಾಥ ದುರಂತದ ಬಳಿಕ ಹಿಮನದಿಗಳು ಮತ್ತು ಹಿಮಸರೋವರಗಳ ಮೇಲ್ವಿಚಾರಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಂಡಿವೆ. 2024ರಲ್ಲಿ ಉತ್ತರಾಖಂಡಕ್ಕಾಗಿ ರಾಷ್ಟ್ರೀಯ ಜಿಎಲ್‌ಒಎಫ್ ಅಪಾಯ ತಗ್ಗಿಸುವ ಕಾರ್ಯಕ್ರಮವನ್ನೂ ಆರಂಭಿಸಲಾಗಿದೆ. ಆದರೂ, ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲಿ ನಿರಂತರ ನೆಲಮಟ್ಟದ ಮೇಲ್ವಿಚಾರಣೆ ಇನ್ನೂ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದಿಲ್ಲ ಎಂಬುದು ಆತಂಕಕ್ಕೆ ಕಾರಣವಾಗಿದೆ.

ಹಿಮಾಲಯದ ಪರಿಸರ ಬದಲಾವಣೆ ಈಗ ಕೇವಲ ಪರಿಸರ ಸಮಸ್ಯೆಯಲ್ಲ; ಅದು ಜನರ ಜೀವ, ವಸತಿ, ರಸ್ತೆ, ಸೇತುವೆ ಮತ್ತು ಮೂಲಸೌಕರ್ಯಗಳ ಸುರಕ್ಷತೆಗೆ ನೇರ ಸವಾಲಾಗಿದೆ. ಹಿಮನದಿಗಳ ಹಿಂಜರಿತದ ವೇಗವನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕೆ ವ್ಯವಸ್ಥೆ, ನಿರಂತರ ವೈಜ್ಞಾನಿಕ ಮೇಲ್ವಿಚಾರಣೆ ಮತ್ತು ಅಪಾಯ ಪ್ರದೇಶಗಳಲ್ಲಿನ ನಿರ್ಮಾಣ ಚಟುವಟಿಕೆಗಳ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಹಿಮಾಲಯದಲ್ಲಿ

ಇದನ್ನೂ ನೋಡಿ : ಕಾರ್ಮಿಕರ ವಿಧಾನಸೌಧ ಚಲೋ | ಏನಿದು ಹೋರಾಟ? ಪ್ರಮುಖ ಬೇಡಿಕೆಗಳೇನು? – ಮೀನಾಕ್ಷಿ ಸುಂದರಂ Janashakthi Media

Donate Janashakthi Media

Leave a Reply

Your email address will not be published. Required fields are marked *