ಕುಶಾಲನಗರ: ‘ಯುದ್ಧ ಮುಂದುವರಿದರೆ ಪೆಟ್ರೋಲ್, ಡೀಸೆಲ್ ಬೆಲೆಯೂ ಹೆಚ್ಚಾಗಲಿದೆ. ಸರಕು ಸಾಗಾಣಿಕೆ, ಸಾಮಗ್ರಿಗಳ ಬೆಲೆ ಹೆಚ್ಚಾಗಿ ಜನಯರಿಗೆ ಹೊರೆಯಾಗುತ್ತದೆ. ಇದೆಲ್ಲವೂ ಪ್ರಧಾನಿ ಮೋದಿ ಸರ್ಕಾರದ ಆಡಳಿತ ವೈಫಲ್ಯದ ಫಲ. ಕೇಂದ್ರ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸಮಸ್ಯೆಗಳನ್ನು ಪರಿಹರಿಸಬೇಕು. ಇಲ್ಲವೇ ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕು ಎಂದು ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಇಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಒತ್ತಾಯಿಸಿದರು.
ಮಧ್ಯಪ್ರಾಚ್ಯ ಯುದ್ಧದಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎನ್ನುತ್ತಿದ್ದ ಕೇಂದ್ರ ಸರ್ಕಾರ ಯುದ್ಧದ ನೆಪವೊಡ್ಡಿ ಅನಿಲ ಬೆಲೆಯನ್ನು ಏರಿಕೆ ಮಾಡಿದೆ. ಅಡುಗೆ ಅನಿಲದ ಸಮಸ್ಯೆ ಎದುರಾಗಿದೆ. ಯುದ್ಧ ನಡೆಯುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಗೊತ್ತಿದ್ದರೂ ಪೂರ್ವ ತಯಾರಿ ಮಾಡಿಕೊಳ್ಳದ ಕಾರಣ ಇಂದು ಜನರಿಗೆ ಅಡುಗೆ ಅನಿಲದ ಸಮಸ್ಯೆ ಎದುರಾಗಿದೆ. ಅಡುಗೆ ಅನಿಲ ಬೆಲೆ ಹೆಚ್ಚಳ ಮಾಡಿ ಗಾಯದ ಮೇಲೆ ಬರೆ ಎಳೆದಿದೆ. ಕೆಲವು ಕಡೆ ಹೆಚ್ಚು ಹಣ ಕೊಟ್ಟರೂ ಅನಿಲ ಸಿಲಿಂಡರ್ ಸಿಗದಂತಹ ಪರಿಸ್ಥಿತಿ ಎದುರಾಗಿದೆ ಎಂದರು.
ಇದನ್ನೂ ಓದಿ: ಮೂರನೇ ಜಗತ್ತಿನ ದೇಶಗಳ ಸಾರ್ವಭೌಮತ್ವದ ಮೇಲೆ ಸಾಮ್ರಾಜ್ಯಶಾಹಿಯ ದಾಳಿ
ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ಬ್ಯಾನರ್, ಸಿಲಿಂಡರ್ ಚಿತ್ರ ಹಿಡಿದು ಕಾಂಗ್ರೆಸ್ ಕಚೇರಿಯಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರದ ಹಾಗೂ ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಜನವಿರೋಧಿ, ಸಂವಿಧಾನ ವಿರೋಧಿ, ರೈತವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ. ಅಗತ್ಯ ವಸ್ತುಗಳ ಜೊತೆ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡುತ್ತಿದೆ ಎಂದು ಪ್ರತಿಭಟನಿರತರು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಲ್‌ನಲ್ಲಿ ಸೌದೆಯಿಂದ ಅಡುಗೆ ಮಾಡುವ ಮೂಲಕ ಮಹಿಳಾ ಪ್ರತಿಭಟನಾಕಾರರು ಅಣಕು ಪ್ರದರ್ಶನದೊಂದಿಗೆ ಅಸಮಾಧಾನ ವ್ಯಕ್ತಪಡಿಸಿದರು.
ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಗೋವಿಂದಪ್ಪ ,ಮುಖಂಡರಾದ ಕೃಷ್ಣೇಗೌಡ, ರಮೇಶ್,ವಿ.ಎಸ್.ಆನಂದ್ ಕುಮಾರ್, ಅಬ್ದುಲ್ ರಜಾಕ್, ಟಿ.ಕೆ.ಪಾಂಡುರಂಗ, ಧರಣೇದ್ರಕುಮಾರ್, ಎಸ್.ಎಸ್.ಶ್ರೀನಿವಾಸ್, ರಫೀಕ್, ಅಜೀಜ್, ಟಿ.ಬಿ.ಜಗದೀಶ್, ಮಲ್ಲಿಕಾರ್ಜುನ, ಶಶಿಭೀಮಯ್ಯ, ದಾಮೋದರ್, ಜಗದೀಶ್, ನಂಜುಂಡಸ್ವಾಮಿ,ಸುನೀತಾ, ಪದ್ಮ,ಸರೋಜ,ಜಯಲಕ್ಷ್ಮಮ್ಮ, ಗೀತಾ ಬಸಪ್ಪ, ಪಾರ್ವತಿ ಪಾಲ್ಗೊಂಡಿದ್ದರು.
ಇದನ್ನೂ ನೋಡಿ: ಸಾಹಿತ್ಯ ಓದಿಗೆ ವಿಮರ್ಶಾತ್ಮಕ ದೃಷ್ಟಿ ಅಗತ್ಯ – ಬಂಜಗೆರೆ ಜಯಪ್ರಕಾಶ Janashakthi Media
