ಬೆಂಗಳೂರು: ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಶೀಘ್ರದಲ್ಲೇ ನಡೆಯುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ. ಆಗಸ್ಟ್ 6ರಿಂದ ಮುಂಗಾರು ಅಧಿವೇಶನ ಆರಂಭವಾಗಲಿದೆ ಎಂಬ ಮಾಹಿತಿಯನ್ನೂ ಅವರು ನೀಡಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, “ಆಗಸ್ಟ್ 6ರಿಂದ ಅಧಿವೇಶನ ಕರೆಯಲು ನಿರ್ಧರಿಸಿದ್ದೇವೆ. ನಾನು ಒಂದು ದಿನದ ಕೆಲಸಕ್ಕಾಗಿ ದೆಹಲಿಗೆ ತೆರಳಿ ಬರುವೆ. ನಂತರ ನಮ್ಮ ಪಕ್ಷದ ನಾಯಕರು ಮೂರ್ನಾಲ್ಕು ದಿನಗಳಲ್ಲಿ ದಿನಾಂಕ ನಿಗದಿ ಮಾಡುತ್ತಾರೆ. ಆ ಬಳಿಕ ಮತ್ತೆ ದೆಹಲಿಗೆ ಹೋಗುವೆ” ಎಂದು ವಿವರಿಸಿದರು.
ಸಚಿವ ಸಂಪುಟ ವಿಸ್ತರಣೆ ಪದೇಪದೇ ಮುಂದೂಡಲ್ಪಟ್ಟ ಹಿನ್ನೆಲೆ, ಸಿಎಂ ನೀಡಿರುವ ಈ ಹೇಳಿಕೆ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೆಹಲಿಯಲ್ಲಿ ಲಭ್ಯವಾಗುವ ನಂತರ ಈ ಕುರಿತು ಅಂತಿಮ ಚರ್ಚೆ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ: “ಇದು ಲವ್ ಲೆಟರ್” – ಬಿಜೆಪಿಯ ಕಾನೂನು ನೋಟಿಸ್‌ಗೆ ಒಮರ್ ಅಬ್ದುಲ್ಲಾ ವ್ಯಂಗ್ಯ
ಕಾವೇರಿ ವಿಷಯ: ರೈತರ ಹಿತ ಮೊದಲ ಆದ್ಯತೆ
ಕಾವೇರಿ ನೀರಿನ ವಿಚಾರದಲ್ಲಿ ಪ್ರತಿಕ್ರಿಯಿಸಿದ ಸಿಎಂ, “ರೈತರ ಬದುಕು ಕಾಪಾಡುವುದು ನಮ್ಮ ಮುಖ್ಯ ಕರ್ತವ್ಯ. ಜೊತೆಗೆ ಕುಡಿಯುವ ನೀರಿನ ಅಗತ್ಯ ಪೂರೈಸಬೇಕು. ತಮಿಳುನಾಡಿಗೆ ನೀರು ಬಿಡುವ ಕುರಿತು ನ್ಯಾಯಾಲಯದ ಆದೇಶವನ್ನು ಪಾಲಿಸಲೇಬೇಕು” ಎಂದು ಹೇಳಿದರು.
ಜುಲೈ 15ರಂದು ನಡೆಯಲಿರುವ ಕಾವೇರಿ ನಿರ್ವಹಣಾ ಮಂಡಳಿ ಸಭೆಯಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಿ, ಬಳಿಕ ಮುಂದಿನ ತೀರ್ಮಾನ ತಿಳಿಸಲಾಗುವುದು ಎಂದರು.
ಮಂಡ್ಯ ಶಾಸಕರ ಮನವಿ
ಮಂಡ್ಯ ಜಿಲ್ಲೆಯ ಶಾಸಕರು ನೀರು ಬಿಡುಗಡೆ ಕುರಿತು ಮನವಿ ಸಲ್ಲಿಸಿರುವ ಬಗ್ಗೆ ಪ್ರಶ್ನೆಗೆ, “ಮಂಡ್ಯ ಹಾಗೂ ಶ್ರೀರಂಗಪಟ್ಟಣ ಭಾಗದ ಶಾಸಕರು ಹಾಗೂ ಜಿಲ್ಲಾ ಸಚಿವರು ಭೇಟಿ ಮಾಡಿದ್ದಾರೆ. ಸಭೆ ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು” ಎಂದು ಹೇಳಿದರು.
ಕೆಪಿಎಸ್‌ಸಿ ಹಾಗೂ ತಿರುಪತಿ ಆರತಿ ವಿಚಾರ
ಕೆಪಿಎಸ್‌ಸಿ ಅಧ್ಯಕ್ಷರ ಅಮಾನತು ಕುರಿತು ಮಾತನಾಡಿದ ಅವರು, “ರಾಜ್ಯಪಾಲರು ಆದೇಶ ನೀಡಿದ್ದಾರೆ. ಹಿರಿಯ ಅಧಿಕಾರಿಗೆ ಜವಾಬ್ದಾರಿ ನೀಡಲು ಸೂಚನೆ ನೀಡಿದ್ದೇನೆ” ಎಂದರು.
ತಿರುಪತಿಯಲ್ಲಿ ಮೊದಲ ಆರತಿ ಕರ್ನಾಟಕದವರಿಗೆ ಅವಕಾಶ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ, “ಇದು ಮಹಾರಾಜರ ಕಾಲದಿಂದಲೂ ನಡೆದುಕೊಂಡು ಬಂದ ಪರಂಪರೆ. ಈಗ ರಾಜ್ಯದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಈ ಅವಕಾಶ ಕಲ್ಪಿಸಲಾಗುತ್ತಿದೆ. ಇದು ಯಾವುದೇ ಒಂದು ಪಕ್ಷಕ್ಕೆ ಸೀಮಿತವಲ್ಲ” ಎಂದು ಸ್ಪಷ್ಟಪಡಿಸಿದರು.
ಹಿರಿಯ ನಾಯಕ ಎಚ್. ಹನುಮಂತಪ್ಪರಿಗೆ ನಮನ
ಮಾಜಿ ಸಂಸದ ಎಚ್. ಹನುಮಂತಪ್ಪ ಅವರ ನಿಧನದ ಕುರಿತು ಸಂತಾಪ ವ್ಯಕ್ತಪಡಿಸಿದ ಸಿಎಂ, ಅವರು ಪಕ್ಷದ ಹಿರಿಯ ನಾಯಕರು ಹಾಗೂ ಅನುಭವಿಗಳಾಗಿದ್ದರು. ರಾಜ್ಯ ಮತ್ತು ರಾಷ್ಟ್ರದ ವಿಚಾರಗಳಲ್ಲಿ ಮಾರ್ಗದರ್ಶನ ನೀಡಿದ ವ್ಯಕ್ತಿತ್ವವಾಗಿದ್ದರು ಎಂದು ಸ್ಮರಿಸಿದರು.
ಇದನ್ನೂ ನೋಡಿ: ರಾಮ ಮಂದಿರ ಟ್ರಸ್ಟ್ ಹಗರಣ: ಭಕ್ತಿಯ ಹೆಸರಿನಲ್ಲಿ ಭ್ರಷ್ಟಾಚಾರ? ಹೊಣೆ ಹೊರುವರೇ ಮೋದಿ? MG ಹೆಗಡೆ | ಗುರುರಾಜ ದೇಸಾಯಿ
