ಬೆಂಗಳೂರು : ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸಿದ ದಾಳಿಯನ್ನು ಖಂಡಿಸಿ ಸಿಪಿಐ(ಎಂ) ಬೆಂಗಳೂರು ಉತ್ತರ ಹಾಗೂ ದಕ್ಷಿಣ ಜಿಲ್ಲಾ ಸಮಿತಿಗಳ ವತಿಯಿಂದ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಬಿಜೆಪಿ ಸರ್ಕಾರವು ರಾಜಕೀಯ ದ್ವೇಷ ಸಾಧನೆಗಾಗಿ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪಿಣರಾಯಿ ವಿಜಯನ್ ಅವರಿಗೆ ಎಕ್ಸಲಾಜಿಕ್ ಪ್ರಕರಣದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ನ್ಯಾಯಾಲಯಗಳು ಹಲವು ಬಾರಿ ಸ್ಪಷ್ಟಪಡಿಸಿದ್ದರೂ, ಅವರನ್ನು ರಾಜಕೀಯವಾಗಿ ಗುರಿಯಾಗಿಸಿ ಇಂತಹ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ಇ.ಡಿ. ಪ್ರಧಾನ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ನೇತೃತ್ವದಲ್ಲಿ ಭಾಗವಹಿಸಿದ್ದ ಹಿರಿಯ ನಾಯಕರನ್ನು ದಿಲ್ಲಿ ಪೊಲೀಸರು ಬಂಧಿಸಿರುವುದನ್ನೂ ಪ್ರತಿಭಟನಾಕಾರರು ಖಂಡಿಸಿದರು. ಬೃಂದಾ ಕಾರಟ್, ಅಶೋಕ್ ಧವಳೆ, ಮರಿಯಮ್ಮ ಧವಳೆ, ವಿಜೂ ಕೃಷ್ಣನ್ ಸೇರಿದಂತೆ ಹಲವು ನಾಯಕರ ಬಂಧನವು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಆರೋಪಿಸಲಾಯಿತು.
ಇದನ್ನೂ ಓದಿ :‘ವಂದೇ ಮಾತರಂ’ ಸಂಪೂರ್ಣ ಹಾಡುವ ಅಗತ್ಯವಿಲ್ಲ: ಪಿಣರಾಯಿ ವಿಜಯನ್
ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ರಾಜಕೀಯ ಉದ್ದೇಶಗಳಿಗೆ ಬಳಸುವುದನ್ನು ಸಿಪಿಐ(ಎಂ) ತೀವ್ರವಾಗಿ ವಿರೋಧಿಸುತ್ತದೆ ಎಂದು ಪ್ರತಿಭಟನಾಕಾರರು ಹೇಳಿದರು. ಪ್ರತಿಭಟನೆಯಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಗೋಪಾಲಕೃಷ್ಣ ಅರಳಹಳ್ಳಿ, ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಬಿ.ಎನ್. ಮಂಜುನಾಥ್, ಉತ್ತರ ಜಿಲ್ಲಾ ಕಾರ್ಯದರ್ಶಿ ಎನ್. ಪ್ರತಾಪಸಿಂಹ, ಮುಖಂಡರಾದ ಮುನಿರಾಜು, ಕೆ.ಎಸ್. ಲಕ್ಷ್ಮಿ, ಶಾರದಾ, ಮಂಗಳಕುಮಾರಿ, ರಾಜಣ್ಣ, ದೇವಿಕಾ, ಲಿಂಗರಾಜು, ಚಂದ್ರಶೇಖರ್, ಸಿ.ಎನ್. ಶ್ರೀನಿವಾಸ ಸೇರಿದಂತೆ ಅನೇಕರಿದ್ದರು.
ಇದನ್ನೂ ನೋಡಿ : FIR ಎಂದರೆ ಏನು? ಯಾವಾಗ, ಹೇಗೆ ದಾಖಲಿಸಬೇಕು? ವಿಶ್ಲೇಷಣೆ : ಶಶಿಧರ, ವಕೀಲರುJanashakthi Media
