ಚೆನ್ನೈ: ಡಿಎಂಕೆ ನೇತೃತ್ವದ ʻಜಾತ್ಯತೀತ ಪ್ರಗತಿಪರ ಒಕ್ಕೂಟʼ (Secular Progressive Alliance) ದಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) – ಸಿಪಿಐ(ಎಂ) ಗೆ 5 ಸ್ಥಾನಗಳನ್ನು ನೀಡಲಾಗಿದೆ. ಇದಕ್ಕಾಗಿ ಕ್ಷೇತ್ರ ಒಪ್ಪಂದಕ್ಕೆ ಮಾರ್ಚ್ 23 ರಂದುಅಣ್ಣಾ ಅರಿವಲಯಂನಲ್ಲಿ ಸಹಿ ಹಾಕಲಾಯಿತು. ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಗಂ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು. ಚುನಾವಣೆ
ಈ ಸಂದರ್ಭದಲ್ಲಿ ಡಿಎಂಕೆ ಪ್ರಧಾನ ಕಾರ್ಯದರ್ಶಿ ಕೆ. ದುರೈಮುರುಗನ್, ಖಜಾಂಚಿ ಟಿ.ಆರ್. ಬಾಲು, ಪ್ರಧಾನ ಕಾರ್ಯದರ್ಶಿ ಕೆ.ಎನ್. ನೆಹರು, ಸಂಘಟನಾ ಕಾರ್ಯದರ್ಶಿ ಆರ್.ಎಸ್. ಭಾರತಿ, ಉಪ ಪ್ರಧಾನ ಕಾರ್ಯದರ್ಶಿಗಳಾದ ತಿರುಚ್ಚಿ ಶಿವ,ಎ. ರಾಜಾ, ಉನ್ನತ ಮಟ್ಟದ ಕಾರ್ಯಕಾರಿ ಸಮಿತಿ ಸದಸ್ಯರಾದ ಇ.ವಿ. ವೇಲು, ಎಂ.ಆರ್.ಕೆ. ಪನ್ನೀರ್‌ಸೆಲ್ವಂ, ಸಿಪಿಐ(ಎಂ) ರಾಜ್ಯ ಸಮಿತಿ ಕಾರ್ಯಕಾರಿಸದಸ್ಯರಾದ ಕೆ. ಕನಕರಾಜ್, ಕೆ. ಸ್ಯಾಮ್ಯುಯೆಲ್‌ರಾಜ್, ಎಸ್. ಕಣ್ಣನ್ ಹಾಜರಿದ್ದರು.
ಮೈತ್ರಿಕೂಟದ ಅದ್ಭುತ ಗೆಲುವಿಗಾಗಿ ಶ್ರಮಿಸೋಣ;
ಕ್ಷೇತ್ರ ಒಪ್ಪಂದದ ನಂತರ, ಪಿ. ಷಣ್ಮುಗಂ ವರದಿಗಾರರಿಗೆ ಸಂದರ್ಶನ ನೀಡಿದರು.”ಹೆಚ್ಚುವರಿ ಸ್ಥಾನಗಳನ್ನು ಪಡೆಯಲು ನಾವು ಶ್ರಮಿಸಿದ್ದೇವೆ; ನಾವು ಎರಡು ಬಾರಿ ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಿದ್ದೇವೆ; ಸಿಪಿಐ(ಎಂ) ತೆಗೆದುಕೊಳ್ಳುವ ನಿಲುವು ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟಕ್ಕೆ ಯಾವುದೇ ರೀತಿಯಲ್ಲಿ ಸಹಾಯ ಮಾಡುವ ರೀತಿಯಲ್ಲಿ ಇರಬಾರದು ಮತ್ತು ಮೈತ್ರಿಕೂಟದ ಏಕತೆಗೆ ಹಾನಿ ಮಾಡುವ ರೀತಿಯಲ್ಲಿ ಇರಬಾರದು ಎಂಬ ಕಾಳಜಿಯೊಂದಿಗೆ ನಾವು ಈಗ 5 ಸ್ಥಾನಗಳನ್ನು ಒಪ್ಪಿಕೊಂಡಿದ್ದೇವೆ. ಈ ಸಂಖ್ಯೆಯಲ್ಲಿ ನಾವು ತೃಪ್ತರಾಗಿಲ್ಲದಿದ್ದರೂ, ವಿಧಾನಸಭಾ ಚುನಾವಣೆಯಲ್ಲಿ ʼಜಾತ್ಯತೀತ ಪ್ರಗತಿಪರ ಮೈತ್ರಿಕೂಟʼವು ಭರ್ಜರಿ ಗೆಲುವು ಸಾಧಿಸುವುದನ್ನು ಖಚಿತಪಡಿಸಿಕೊಳ್ಳಲು ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷವು ತಮಿಳುನಾಡಿನಾದ್ಯಂತ ಪ್ರಯತ್ನಗಳನ್ನು ಮಾಡುತ್ತದೆ” ಎಂದು ಪಿ. ಷಣ್ಮುಗಂ ಹೇಳಿದರು.
ಇದನ್ನೂ ಓದಿ: ನೀರು ಮತ್ತು ಭೂಮಿಯಲ್ಲಿನ ಅಪಾಯಕಾರಿ ದೈತ್ಯ: ಹಿಪಪಾಟಮಸ್
ವರದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಪಿ. ಷಣ್ಮುಗಂ ಅವರು, “ಇಂದು, ಪಕ್ಷದ ಪೊಲಿಟ್ ಬ್ಯೂರೋ ಸದಸ್ಯರಾದ ಕೆ. ಬಾಲಕೃಷ್ಣನ್ ಮತ್ತು ನಾನು ಮುಖ್ಯಮಂತ್ರಿಯನ್ನು ಭೇಟಿಯಾದಾಗ, ಪಕ್ಷದ ಕಾರ್ಯಕರ್ತರು ಕ್ಷೇತ್ರಗಳ ಸಂಖ್ಯೆಯಲ್ಲಿನ ಕಡಿತವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ: ರಾಜ್ಯ ಸಮಿತಿ ಮತ್ತು ರಾಜ್ಯ ಕಾರ್ಯಕಾರಿ ಸಮಿತಿ ಅದನ್ನು ಸ್ವೀಕರಿಸುತ್ತಿಲ್ಲ ಎಂಬುದನ್ನು ನಾವು ಮುಖ್ಯಮಂತ್ರಿಯವರ ಗಮನಕ್ಕೆ ತಂದೆವು. ಇದರಿಂದ ಉಂಟಾಗಬಹುದಾದ ತೊಂದರೆಗಳನ್ನು ಉಲ್ಲೇಖಿಸಿ, ಆರು ಕ್ಷೇತ್ರಗಳನ್ನು ಹಂಚಿಕೆ ಮಾಡುವಂತೆ ವಿನಂತಿಸಿದೆವು.
ಆಗಲೂ, ಮುಖ್ಯಮಂತ್ರಿಯವರು ತಾವು ಎದುರಿಸುತ್ತಿರುವ ತೊಂದರೆಗಳನ್ನು ಉಲ್ಲೇಖಿಸಿ, 5ಸ್ಥಾನಗಳಿಗೆ ಒಪ್ಪಿಕೊಳ್ಳಬೇಕು ಎಂದು ಹೇಳಿದರು. ಆದ್ದರಿಂದ, ಇದನ್ನು ಮತ್ತಷ್ಟು ಸಮಯ ಎಳೆದಾಡಿದರೆ, ಚುನಾವಣೆಗೆ ಸಂಬಂಧಿಸಿದ ಕೆಲಸಗಳ ಮೇಲೆ ಪರಿಣಾಮ ಬೀರುತ್ತದೆ.ಇತರ ಪಕ್ಷಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುವುದಕ್ಕೆ ವಿಳಂಬವಾಗುತ್ತದೆ ಎಂಬ ಕಾರಣಕ್ಕೆ ನಾವು ಈ ಸಂಖ್ಯೆಯನ್ನು ಒಪ್ಪಿಕೊಂಡಿದ್ದೇವೆ” ಎಂದು ಷಣ್ಮುಗಂ ಅವರು ಹೇಳಿದರು.
ಆದ್ಯತೆಯ ಕ್ಷೇತ್ರಗಳ ಪಟ್ಟಿಯಲ್ಲಿ ಕೀಳ್ವೇಲೂರು ಮತ್ತು ಗಂದರ್ವಕೊಟ್ಟೈ ಸೇರಿದಂತೆ ಸಿಪಐ(ಎಂ) ಸ್ಪರ್ಧಿಸಲು ಬಯಸುವ ಕ್ಷೇತ್ರಗಳನ್ನು ಒಳಗೊಂಡಿರುವ ಪಟ್ಟಿಯನ್ನು ನಾವು ಡಿಎಂಕೆ ನಾಯಕರಿಗೆ ಸಲ್ಲಿಸಿದ್ದೇವೆ.ರಾಜಧಾನಿ ಚೆನ್ನೈ ಒಳಗೆ ಒಂದು ವಿಧಾನಸಭಾ ಕ್ಷೇತ್ರವು ಅತ್ಯಗತ್ಯ ಎಂದು ನಾವು ವಿನಂತಿಸಿದ್ದೇವೆ. ಸಂಬಂಧಿತ ಮಾತುಕತೆಗಳನ್ನು ನಡೆಸುವಾಗ ಇದನ್ನು ಗಣನೆಗೆ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದ್ದಾರೆ ಎಂದು ಪಿ. ಷಣ್ಮುಗಂ ಹೇಳಿದರು.
ಜಾತ್ಯತೀತ ಮೈತ್ರಿಕೂಟದ ಐಕ್ಯತೆಯು ಅತ್ಯಂತ ಮುಖ್ಯ ಎಂದು ಒತ್ತಿ ಹೇಳಿದ ಪಿ. ಷಣ್ಮುಗಂ, ಸಿಪಿಐ(ಎಂ) ಪ್ರಸ್ತುತ ನಡೆಯುತ್ತಿರುವ ನಿರ್ದಿಷ್ಟ ಚುನಾವಣೆಯ ಬಗ್ಗೆ ಮಾತ್ರ ಚರ್ಚೆಗಳಲ್ಲಿ ತೊಡಗಿಸಿಕೊಳ್ಳುತ್ತದೆ. ಈ ಒಕ್ಕೂಟದ ಐಕ್ಯತೆಯನ್ನು ದುರ್ಬಲಗೊಳಿಸಬಾರದು. ಅದಕ್ಕೆ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ ನಿರ್ಧಾರವು ಕಾರಣವಾಗಬಾರದು; ಬದಲಿಗೆ, ಅದು ಜಾತ್ಯತೀತ ರಂಗದ ಒಗ್ಗಟ್ಟಿನಲ್ಲಿದೆ.ಈ 2026 ರ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಕೂಟದ ಗೆಲುವು ಖಚಿತ.ಸಿಪಿಐ(ಎಂ) ತೆಗೆದುಕೊಳ್ಳುವ ಸಣ್ಣ ನಿರ್ಧಾರಗಳು ಆ ಗೆಲುವಿಗೆ ಧಕ್ಕೆ ತರಬಾರದು ಎಂಬ ಆಧಾರದ ಮೇಲೆ ಸೀಟುಗಳ ಸಂಖ್ಯೆಯಲ್ಲಿ ನಮಗೆ ತೃಪ್ತಿ ಇಲ್ಲದಿದ್ದರೂ, ನಾವು ಅದನ್ನು ಒಪ್ಪಿಕೊಂಡಿದ್ದೇವೆಎಂದು ಪಿ. ಷಣ್ಮುಗಂ ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಇದನ್ನೂ ನೋಡಿ: ಸೈಬರ್ ಹರಾಶ್ಮೆಂಟ್ ಕೂಡಾ ಲೈಂಗಿಕ ದೌರ್ಜನ್ಯ – ಡಾ. ನಂದಿನಿ ಬಿ.ಎನ್ Janashakthi Media
