ಬೆಂಗಳೂರು: ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದ 7ನೇ ಕರಡು ಅಧಿಸೂಚನೆಯನ್ನು ವಿರೋಧಿಸಿ ರಾಜ್ಯಾದ್ಯಂತ ಸಿಪಿಐ(ಎಂ) ಹಾಗೂ ಜನಪರ ಸಂಘಟನೆಗಳು ನಡೆಸುತ್ತಿರುವ ಹೋರಾಟದ ಭಾಗವಾಗಿ, ಸಿಪಿಐ(ಎಂ) ರಾಜ್ಯ ನಿಯೋಗವು ಇಂದು ಅರಣ್ಯ, ಪರಿಸರ ಮತ್ತು ಪರಿಸರ ವಿಜ್ಞಾನ ಸಚಿವ ರಾಮಲಿಂಗಾರೆಡ್ಡಿಯವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರಿ ಜನಜೀವನ ಹಾಗೂ ಪರಿಸರದ ಹಿತಾಸಕ್ತಿಯನ್ನು ರಕ್ಷಿಸುವಂತೆ ಆಗ್ರಹಿಸಿ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಲಾಯಿತು.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 2026ರ ಜುಲೈ 27ರಂದು ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದ 7ನೇ ಕರಡು ಅಧಿಸೂಚನೆಯನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ತನ್ನ ನಿಲುವನ್ನು ಸ್ಪಷ್ಟವಾಗಿ ಮಂಡಿಸಬೇಕು ಎಂದು ನಿಯೋಗ ಒತ್ತಾಯಿಸಿತು. ಸೆಪ್ಟೆಂಬರ್ 21ರಿಂದ 23ರವರೆಗೆ ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯುತ್ತಿರುವುದನ್ನು ಸ್ವಾಗತಿಸಿದ ನಿಯೋಗ, ಅಧಿವೇಶನದಲ್ಲಿ ಕೇವಲ ಹಿಂದಿನ ಅಥವಾ ಪ್ರಸ್ತುತ ಅಧಿಸೂಚನೆಗಳನ್ನು ವಿರೋಧಿಸುವುದಕ್ಕೆ ಸೀಮಿತವಾಗದೆ, ರಾಜ್ಯ ಸರ್ಕಾರ ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಕುರಿತು ಸಮಗ್ರ ಚರ್ಚೆ ನಡೆಸಬೇಕು ಎಂದು ಮನವಿ ಮಾಡಿತು.
2022ರ ಏಪ್ರಿಲ್ 18ರಂದು ಕೇಂದ್ರ ಸರ್ಕಾರ ರಚಿಸಿದ್ದ ವಿಶೇಷ ಸಮಿತಿಯು ಪಶ್ಚಿಮ ಘಟ್ಟ ರಾಜ್ಯಗಳ ಸಲಹೆ, ಗ್ರಾಮಗಳ ವ್ಯಾಪ್ತಿ ಹಾಗೂ ತಪ್ಪು ಮಾಹಿತಿಗಳನ್ನು ಪರಿಶೀಲಿಸಿ ಅಂತಿಮ ವರದಿ ನೀಡಬೇಕಿತ್ತು. ಆದರೆ ವರ್ಷಗಳು ಕಳೆದರೂ ಸಮಿತಿ ತನ್ನ ಅಂತಿಮ ವರದಿಯನ್ನು ಸಲ್ಲಿಸಿಲ್ಲ. ಈ ನಡುವೆ 2022 ಮತ್ತು 2024ರ ಕರಡು ಅಧಿಸೂಚನೆಗಳಲ್ಲಿದ್ದ ಹಲವು ಅಂಶಗಳನ್ನೇ 7ನೇ ಕರಡು ಅಧಿಸೂಚನೆಯಲ್ಲಿಯೂ ಪುನಃ ಪ್ರಕಟಿಸಲಾಗಿದೆ ಎಂದು ಸಿಪಿಐ(ಎಂ) ಗಮನ ಸೆಳೆಯಿತು.
ಪರಿಸರ ಸಂರಕ್ಷಣೆಯ ಕಾಳಜಿಯ ಜತೆಗೆ ಜನತೆಯ ಹಿತಾಸಕ್ತಿಯನ್ನೂ ಸರ್ಕಾರದ ನೀತಿ ಮತ್ತು ಕ್ರಮಗಳಲ್ಲಿ ಕೇಂದ್ರವಾಗಿರಿಸಬೇಕು ಎಂದು ನಿಯೋಗ ತಿಳಿಸಿತು. ಕಸ್ತೂರಿ ರಂಗನ್ ವರದಿ ಜಾರಿಗೆ ಹಿಂದಿನ ಯುಪಿಎ-2 ಹಾಗೂ ಎನ್‌ಡಿಎ ಸರ್ಕಾರಗಳು ಬದ್ಧತೆ ವ್ಯಕ್ತಪಡಿಸಿದ್ದರೂ, ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ. ಆದ್ದರಿಂದ ಮುಂದಿನ ಹಂತದಲ್ಲಿ ಜನರು ಮತ್ತು ಪರಿಸರ ಎರಡನ್ನೂ ರಕ್ಷಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ದೃಢವಾದ ನಿಲುವು ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಇದನ್ನೂ ಓದಿ : ಕರ್ನಾಟಕದಲ್ಲಿ 38,960 ಜಲಮೂಲಗಳ ಗಣತಿ ಪೂರ್ಣ; ನೀರು ಸಂರಕ್ಷಣೆಗೆ ಬಳಸಲು ಸರ್ಕಾರಕ್ಕೆ ಮಹತ್ವದ ಮಾಹಿತಿ
ನಿಯೋಗ ಮುಂದಿಟ್ಟ ಪ್ರಮುಖ ನಾಲ್ಕು ಹಕ್ಕೊತ್ತಾಯಗಳು:
1. ವಿಶೇಷ ಸಮಿತಿಯ ಅಂತಿಮ ವರದಿಗೆ ಕಾಲಮಿತಿ ನಿಗದಿ ಮಾಡಬೇಕು:
2022ರಲ್ಲಿ ರಚನೆಯಾದ ವಿಶೇಷ ಸಮಿತಿಯು ಇನ್ನೂ ಅಂತಿಮ ವರದಿ ನೀಡಿಲ್ಲ. ಅಂತಿಮ ವರದಿ ಬರುವ ಮುನ್ನ ಮತ್ತೆ ಮತ್ತೆ ಕರಡು ಅಧಿಸೂಚನೆಗಳನ್ನು ಪ್ರಕಟಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಉಳಿದಿರುವ ಅಧ್ಯಯನವನ್ನು ತಕ್ಷಣ ಪೂರ್ಣಗೊಳಿಸಿ ನಿಗದಿತ ಕಾಲಮಿತಿಯೊಳಗೆ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರವು ಸಮಿತಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ಈ ಕುರಿತು ಕರ್ನಾಟಕ ಸರ್ಕಾರ ಕೇಂದ್ರದ ಮೇಲೆ ಬಲವಾದ ಒತ್ತಡ ಹೇರಬೇಕು ಎಂದು ಮನವಿ ಮಾಡಲಾಯಿತು.
2. ಅಂತಿಮ ವರದಿ ಬಳಿಕ ಸಾರ್ವಜನಿಕ ಅಭಿಪ್ರಾಯಕ್ಕೆ ಅವಕಾಶ ನೀಡಬೇಕು:
ವಿಶೇಷ ಸಮಿತಿಯ ಅಂತಿಮ ವರದಿ ಸಲ್ಲಿಕೆಯಾದ ನಂತರ ಅದನ್ನು ಅಧಿಕೃತವಾಗಿ ಪ್ರಕಟಿಸಿ, ರಾಜ್ಯ ಸರ್ಕಾರ ಹಾಗೂ ಸಾರ್ವಜನಿಕರಿಂದ ಮತ್ತೊಮ್ಮೆ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆಯಬೇಕು. ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ಯಾವುದೇ ಏಕಪಕ್ಷೀಯ ಕ್ರಮ ಕೈಗೊಳ್ಳಬಾರದು ಎಂದು ನಿಯೋಗ ಆಗ್ರಹಿಸಿತು.
3. ಬಾಧಿತ ಪ್ರದೇಶಗಳಿಗೆ ಪರ್ಯಾಯ ಪರಿಹಾರಗಳನ್ನು ರೂಪಿಸಬೇಕು:
ಕಸ್ತೂರಿ ರಂಗನ್ ವರದಿಯ ಶಿಫಾರಸುಗಳಿಂದ ಬಾಧಿತವಾಗುವ ಪ್ರದೇಶಗಳನ್ನು ನಿಖರವಾಗಿ ಗುರುತಿಸಿ, ಯಾವ ಗ್ರಾಮಗಳು ಹಾಗೂ ಎಷ್ಟು ಜನಸಂಖ್ಯೆ ಇದರ ವ್ಯಾಪ್ತಿಗೆ ಬರುತ್ತವೆ ಎಂಬುದನ್ನು ಅಧ್ಯಯನ ಮಾಡಬೇಕು. ಈ ಉದ್ದೇಶಕ್ಕಾಗಿ ಕರ್ನಾಟಕ ಸರ್ಕಾರವೇ ತಜ್ಞರ ಸಮಿತಿಯನ್ನು ರಚಿಸಿ ಸಮಗ್ರ ಅಧ್ಯಯನ ನಡೆಸಿ, ಬಾಧಿತ ಪ್ರದೇಶಗಳಿಗೆ ಪರ್ಯಾಯ ಹಾಗೂ ಪರಿಹಾರಾತ್ಮಕ ಕ್ರಮಗಳನ್ನು ಶಿಫಾರಸು ಮಾಡುವಂತೆ ಮಾಡಬೇಕು. ಇಂತಹ ತಜ್ಞರ ಸಮಿತಿಗಳ ಮೂಲಕ ಪರ್ಯಾಯ ಪರಿಹಾರಗಳನ್ನು ರೂಪಿಸಿರುವ ಕೇರಳದ ಎಲ್‌ಡಿಎಫ್ ಸರ್ಕಾರಗಳ ಕ್ರಮಗಳನ್ನೂ ಪರಿಗಣಿಸಬೇಕು ಎಂದು ನಿಯೋಗ ತಿಳಿಸಿತು.
4. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ, ಆದಿವಾಸಿ ಮತ್ತು ಅರಣ್ಯವಾಸಿಗಳ ಹಕ್ಕುಗಳ ರಕ್ಷಣೆ:
ಪಶ್ಚಿಮ ಘಟ್ಟದಲ್ಲಿ ಅವೈಜ್ಞಾನಿಕ ಹಾಗೂ ಬೃಹತ್ ಗಣಿಗಾರಿಕೆ, ಅಕ್ರಮ ಮರಳು ಸಾಗಣೆ, ರೆಸಾರ್ಟ್‌ಗಳ ನಿರ್ಮಾಣ ಸೇರಿದಂತೆ ಅರಣ್ಯ ಮತ್ತು ವನ್ಯಜೀವಿ ಪರಿಸರಕ್ಕೆ ಹಾನಿ ಉಂಟುಮಾಡುವ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು. ಪಶ್ಚಿಮ ಘಟ್ಟಗಳ ಸಂರಕ್ಷಣೆ ಮಾನವಕುಲ ಹಾಗೂ ಜೀವವೈವಿಧ್ಯದ ಉಳಿವಿಗೆ ಸಂಬಂಧಿಸಿದ ಪ್ರಶ್ನೆಯಾಗಿದ್ದು, ಅರಣ್ಯ ಪ್ರದೇಶಗಳಲ್ಲಿ ಬದುಕುತ್ತಿರುವ ಆದಿವಾಸಿಗಳು ಮತ್ತು ಅರಣ್ಯವಾಸಿಗಳ ಹಕ್ಕುಗಳನ್ನು ರಕ್ಷಿಸುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಇದೇ ವೇಳೆ 2024ರ ಕರಡು ಅಧಿಸೂಚನೆಯಲ್ಲಿ ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದ 20,668 ಚದರ ಕಿಲೋಮೀಟರ್‌ಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಪ್ರಸ್ತಾಪಿಸಲಾಗಿತ್ತು. ಈ ಪೈಕಿ 16,632 ಚದರ ಕಿಲೋಮೀಟರ್ ಪ್ರದೇಶ ಈಗಾಗಲೇ ವಿವಿಧ ಅರಣ್ಯ, ವನ್ಯಜೀವಿ ಹಾಗೂ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಯಲ್ಲಿ ಇರುವುದರಿಂದ, ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ಪುನರ್‌ಪರಿಶೀಲಿಸುವ ಅಗತ್ಯವಿದೆ ಎಂದು ನಿಯೋಗ ತನ್ನ ಹಕ್ಕೊತ್ತಾಯ ಪತ್ರದಲ್ಲಿ ತಿಳಿಸಿದೆ.
ಅದೇ ರೀತಿ ಹಿಂದಿನ ರಾಜ್ಯ ಸರ್ಕಾರದ ಸಲಹೆಯಂತೆ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ಅರಣ್ಯ, ರಾಷ್ಟ್ರೀಯ ಉದ್ಯಾನವನ ಹಾಗೂ ವನ್ಯಜೀವಿ ಪ್ರದೇಶಗಳಿಗೆ ಸೀಮಿತಗೊಳಿಸುವುದು, ಜನವಸತಿ ಪ್ರದೇಶಗಳನ್ನು ಕೈಬಿಡುವುದು ಮತ್ತು ಸ್ಥಳೀಯ ಅಭಿವೃದ್ಧಿ ಕಾಮಗಾರಿಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಬದಲು ಅವುಗಳನ್ನು ನಿಯಂತ್ರಣದೊಂದಿಗೆ ಪರಿಗಣಿಸುವುದು ಸೂಕ್ತ ಎಂದು ಸಿಪಿಐ(ಎಂ) ಅಭಿಪ್ರಾಯಪಟ್ಟಿದೆ.
ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆ ಮತ್ತು ಅಲ್ಲಿನ ಲಕ್ಷಾಂತರ ಜನರ ಬದುಕು, ಹಕ್ಕುಗಳು ಹಾಗೂ ಅಭಿವೃದ್ಧಿಯ ಆಶಯಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದೊಂದಿಗೆ ದೃಢವಾಗಿ ವ್ಯವಹರಿಸಬೇಕು. ಈ ವಿಷಯವನ್ನು ಮುಂಬರುವ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಕೂಲಂಕಷವಾಗಿ ಚರ್ಚಿಸಿ, ರಾಜ್ಯದ ಜನರ ಪರವಾದ ಸ್ಪಷ್ಟ ನಿಲುವನ್ನು ರೂಪಿಸಬೇಕು ಎಂದು ಸಿಪಿಐ(ಎಂ) ರಾಜ್ಯ ನಿಯೋಗ ಒತ್ತಾಯಿಸಿತು.
ನಿಯೋಗದ ಮನವಿಯನ್ನು ಸಚಿವ ರಾಮಲಿಂಗಾರೆಡ್ಡಿಯವರು ಸಕಾರಾತ್ಮಕವಾಗಿ ಆಲಿಸಿ, ವಿಷಯದ ಕುರಿತು ಸ್ಪಂದಿಸಿ ಮಾತನಾಡಿದರು.
ನಿಯೋಗದಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ. ಕೆ. ಪ್ರಕಾಶ, ಕೊಡಗು ಜಿಲ್ಲಾ ಮುಖಂಡ ಡಾ. ದುರ್ಗಾಪ್ರಸಾದ್, ಆದಿವಾಸಿ ಹಕ್ಕುಗಳ ಸಮಿತಿಯ ಡಾ. ಎಸ್.ವೈ. ಗುರುಶಾಂತ್, ಶ್ರೀಧರ ನಾಡಾ, ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯರಾದ ಬಾಲಕೃಷ್ಣ ಶೆಟ್ಟಿ (ಉಡುಪಿ), ಯಮುನಾ ಗಾಂವ್ಕರ್ (ಉತ್ತರ ಕನ್ನಡ), ಜೆ. ಜಯರಾಮ (ಮೈಸೂರು), ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ, ಸಾಬು ವಿರಾಜಪೇಟೆ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಇದನ್ನೂ ನೋಡಿ : ಕಸ್ತೂರಿ ರಂಗನ್ ವರದಿ ವಾಪಸ್‌ಗೆ ಆಗ್ರಹ | ಅಂಕೋಲಾದಲ್ಲಿ ಹಾಲಕ್ಕಿಗಳು, ಜನಪರ ಸಂಘಟನೆಗಳ ಬೃಹತ್ ಪ್ರತಿಭಟನೆ!
