ಸರ್ಜಾಪುರ ಹೋಬಳಿ ಭೂ ಸ್ವಾಧೀನ ರೈತರ ಮೇಲೆ ಹಲ್ಲೆ, ಬಂಧನ ಕ್ರಮಕ್ಕೆ ಸಿಪಿಐ(ಎಂ) ಖಂಡನೆ

ಆನೇಕಲ್: ತಾಲ್ಲೂಕಿನ ಸರ್ಜಾಪುರ ಹೋಬಳಿಯ 11 ಗ್ರಾಮಗಳ ಭೂ ಸ್ವಾಧೀನ ರೈತರು ಜುಲೈ 1 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಲು ಮುಂದಾದಾಗ ಮಾರ್ಗದಲ್ಲೆ ತಡೆದು ಅಮಾನುಷವಾಗಿ ಹಲ್ಲೆ, ದೌರ್ಜನ್ಯ ನಡೆಸಿ ಬಂಧಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಕ್ರಮವನ್ನು ಸಿಪಿಐ(ಎಂ) ಬೆಂಗಳೂರು ಜಿಲ್ಲಾ ಸಮಿತಿಗಳು ಬಲವಾಗಿ ಖಂಡಿಸಿದೆ ಎಂದು ಉತ್ತರ ಜಿಲ್ಲಾ ಕಾರ್ಯದರ್ಶಿ ಎನ್. ಪ್ರತಾಪ್ ಸಿಂಹ ಹಾಗೂ ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಬಿ. ಎನ್. ಮಂಜುನಾಥ್ ಆಕ್ರೋಶ ವ್ಯಕ್ತಪಡಿಸದರು.

2023 ರಲ್ಲಿ ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ಸ್ವಿಪ್ ಸಿಟಿಗಾಗಿ ಕೆ.ಐ.ಎ.ಡಿ.ಬಿ. ಮೂಲಕ ಸರ್ಜಾಪುರ ಹೋಬಳಿಯ ಹಂದೇನಹಳ್ಳಿ ಪ್ರದೇಶದಲ್ಲಿ ಕೃಷಿ ಭೂಮಿ ಸ್ವಾಧೀನಕ್ಕೆ ಮುಂದಾಯಿತು. ನಂತರ ರೈತರ ಪರವೆಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಭೂ ಸ್ವಾಧೀನವನ್ನು ಮುತ್ತಾನಲ್ಲೂರು, ಬಿಕ್ಕನಹಳ್ಳಿ, ಇನ್ನಿತರ ಪ್ರದೇಶಕ್ಕೂ ವಿಸ್ತರಿಸಿ ರೈತರ ವಿರೋಧದ ನಡುವೆಯು ಸರ್ಜಾಪುರ ಹೋಬಳಿಯ 11 ಗ್ರಾಮಗಳ 2535 ಎಕರೆ ಕೃಷಿ ಭೂಮಿ ಸ್ವಾಧೀನ ಮಾಡುತ್ತಿದೆ ಎಂದು ಹೇಳಿದರು.

ಕಳೆದ ಎರಡು ವರ್ಷಗಳಿಂದ ರೈತರು ಭೂ ಸ್ವಾಧೀನ ವಿರುದ್ಧ ಹೋರಾಟವನ್ನು ನಡೆಸುತ್ತಾ ಬಂದಿದ್ದಾರೆ. ಆದರೆ ರಾಜ್ಯ ಸರ್ಕಾರ ಬೆಂಗಳೂರನ್ನು ಕಾರ್ಪೋರೆಟ್ ಬಂಡವಾಳಗಾರರ ಕೇಂದ್ರವಾಗಿಸಲು ಸರ್ಜಾಪುರ ಹೋಬಳಿ ಸೇರಿದಂತೆ ಬೆಂಗಳೂರು ಸುತ್ತಮುತ್ತ ರೈತರ ತೀವ್ರ ವಿರೋಧದ ನಡುವೆಯು ಭೂ ಸ್ವಾಧೀನ ಮಾಡುತ್ತಿರುವುದು ಜನ ವಿರೋಧಿಯಾಗಿದೆ ಎಂದರು.

ಇದನ್ನೂ ಓದಿ: ಅಪಾರ್ಟ್‌ಮೆಂಟ್ ಸಂಘ ನೋಂದಣಿಗೆ ಸಮರ್ಥ ಪ್ರಾಧಿಕಾರ ಬೇಕು: BDA ಮನವಿ

ಸರ್ಜಾಪುರ ಹೋಬಳಿ 11 ಹಳ್ಳಿಗಳ ರೈತರು, ಪ್ರಗತಿಪರ ಸಂಘಟನೆಗಳು ಕೃಷಿ ಭೂಮಿ ಸ್ವಾಧೀನ ಕೈಬಿಡಬೇಕೆಂದು ಹೋರಾಟ ಮೂಲಕ ಹಲವು ಬಾರಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು ಭೂ ಸ್ವಾಧೀನ ಕೈಬಿಡದೆ ಕಾರ್ಪೊರೇಟ್ ಬಂಡವಾಳಗಾರರ ಪರ ಹಿತಾಸಕ್ತಿ ಪ್ರದರ್ಶಿಸುತ್ತಿದೆ.

ನಿನ್ನೆ ಬೆಂಗಳೂರಿನ ಕೆಐಎಡಿಬಿ ಮುಂದೆ ಪ್ರತಿಭಟನೆ ಮೂಲಕ ಮನವಿ ಪತ್ರ ಸಲ್ಲಿಸಲು ಬೆಂಗಳೂರಿಗೆ ಹೋಗುತ್ತಿದ್ದ ರೈತ ಹೋರಾಟಗಾರರನ್ನು ಮಾರ್ಗ ಮದ್ಯ ಮಡಿವಾಳ ಚೆಕ್ ಪೋಸ್ಟ್ ಬಳಿ ತಡೆದ ಪೋಲಿಸರು, ಮಹಿಳೆಯರು ಮತ್ತು ವೃದ್ಧರು ಹಾಗೂ ಹಿರಿಯ ರೈತರು ಎನ್ನುವುದನ್ನು ನೋಡದೆ ಅಮಾನುಷವಾಗಿ ವರ್ತಿಸಿ ರೈತ ಮುಖಂಡರ ಮೇಲೆ ಹಲ್ಲೆ ನಡೆಸಿ ಬಂಧಿಸಿರುವ ರಾಜ್ಯ ಸರ್ಕಾರದ ಕ್ರಮವು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದು ಹೇಳಿದರು.

ಸಿಪಿಐ(ಎಂ) ಪಕ್ಷವು ಭೂ ಸ್ವಾಧೀನ ರೈತರ ಹೋರಾಟವನ್ನು ಬೆಂಬಲಿಸಲಿದೆ. ರೈತರೊಂದಿಗೆ ನಿಲ್ಲಲಿದೆ. ಕೂಡಲೇ ರಾಜ್ಯ ಕಾಂಗ್ರೆಸ್ ಸರ್ಕಾರವು ರೈತ ವಿರೋಧಿ ಧೋರಣೆ ಕೈಬಿಟ್ಟು ಕೃಷಿ ಭೂಮಿ ಸ್ವಾಧೀನ ಹಿಂಪಡೆಯಬೇಕೆಂದು ಸಿಪಿಐ(ಎಂ) ಬೆಂಗಳೂರು ಜಿಲ್ಲಾ ಸಮಿತಿಗಳು ಆಗ್ರಹಿಸಲಿದೆ ಎಂದು ತಿಳಿಸಿದರು.

ಇದನ್ನೂ ನೋಡಿ: ‘ಅರ್ಬುದನ ಡೈರಿ’ | ಕ್ಯಾನ್ಸರ್ ಪೀಡಿತರಿಗೆ ವಿಶ್ವಾಸ ತುಂಬುವ ಅನುಭವ ಕಥನ Janashakthi Media

Donate Janashakthi Media

Leave a Reply

Your email address will not be published. Required fields are marked *