ಅಂಗುಲ್ ಅರಣ್ಯದಲ್ಲಿ ಕಲ್ಲಿದ್ದಲು ಗಣಿಗಾರಿಕೆಗೆ ಗ್ರೀನ್ ಸಿಗ್ನಲ್: 3.3 ಲಕ್ಷ ಮರಗಳ ಕಡಿತ ಆತಂಕ!

ಭುವನೇಶ್ವರ: ಒಡಿಶಾದ ಅಂಗುಲ್ ಜಿಲ್ಲೆಯಲ್ಲಿ ಪ್ರಸ್ತಾಪಿತ ಅಲಕಾನಂದಾ ಕಲ್ಲಿದ್ದಲು ಗಣಿಗಾರಿಕಾ ಯೋಜನೆಗಾಗಿ 750 ಹೆಕ್ಟೇರ್‌ಗೂ ಹೆಚ್ಚು ಅರಣ್ಯ ಭೂಮಿಯನ್ನು ವಿಲೇವಾರಿ ಮಾಡಲು ಕೇಂದ್ರದ ಅರಣ್ಯ ಸಲಹಾ ಸಮಿತಿ (FAC) ತಾತ್ವಿಕ ಅನುಮೋದನೆ ನೀಡಿದೆ. ಈ ಯೋಜನೆ ರುಂಗ್ಟಾ ಸನ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಹಂಚಿಕೆಯಾಗಿದ್ದು, ಪರಿಸರ ಮತ್ತು ಸಾಮಾಜಿಕ ಪರಿಣಾಮಗಳ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಅಂಗುಲ್

ಜುಲೈ 7ರಂದು ನಡೆದ FAC ಸಭೆಯ ವಿವರಗಳ ಪ್ರಕಾರ, ಈ ಯೋಜನೆಗಾಗಿ 3.3 ಲಕ್ಷಕ್ಕೂ ಹೆಚ್ಚು ಮರಗಳನ್ನು ಕಡಿದುಹಾಕಬೇಕಾಗುತ್ತದೆ. ಸಮಿತಿಯು ಹಂತ-1 (ತಾತ್ವಿಕ) ಅರಣ್ಯ ಅನುಮೋದನೆಯನ್ನು ಕೆಲವು ಷರತ್ತುಗಳೊಂದಿಗೆ ಶಿಫಾರಸು ಮಾಡಿದೆ. ಅಂತಿಮ ಅನುಮೋದನೆ (ಹಂತ-2) ಪಡೆಯಲು ಪ್ರತಿಪೂರಕ ಅರಣ್ಯಾರೋಪಣೆಯಂತಹ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಅಂಗುಲ್

ಯೋಜನೆ ಪ್ರದೇಶವು ಪರಿಸರದ ದೃಷ್ಟಿಯಿಂದ ಅತಿ ಸಂವೇದನಾಶೀಲವಾಗಿದೆ. ಇದು ಸಿಮಿಲಿಪಾಲ್–ಸತ್ಕೋಸಿಯಾ ಟೈಗರ್ ಕಾರಿಡಾರ್‌ನಿಂದ ಸುಮಾರು 4.9 ಕಿ.ಮೀ ದೂರದಲ್ಲಿದ್ದು, ಸಂಬಲ್ಪುರ ಆನೆ ಸಂರಕ್ಷಿತ ಪ್ರದೇಶದಿಂದ ಸುಮಾರು 8.5 ಕಿ.ಮೀ ದೂರದಲ್ಲಿದೆ. ಈ ಅರಣ್ಯ ಪ್ರದೇಶಗಳಲ್ಲಿ ಆನೆಗಳು, ಕರಡಿ (sloth bear), ಚಿರತೆ ಸೇರಿದಂತೆ ಹಲವು ವನ್ಯಜೀವಿಗಳ ಸಂಚಾರ ದಾಖಲಾಗಿದೆ. ಅಂಗುಲ್

ಇದನ್ನೂ ಓದಿ: GBA ಚುನಾವಣೆ ವಿಳಂಬಕ್ಕೆ ಬ್ರೇಕ್: ಡಿಸೆಂಬರ್ 31ರೊಳಗೆ ನಡೆಸುವಂತೆ ಸುಪ್ರೀಂ ಕೋರ್ಟ್ ಗಡುವು

ಪ್ರಸ್ತಾವಿತ ಗಣಿಗಾರಿಕಾ ಪ್ರದೇಶದ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ಒಲ್ಹಾನಿ ನದಿ ಹರಿಯುತ್ತಿದ್ದರೆ, ಬ್ರಹ್ಮಣಿ ನದಿಯ ಉಪನದಿಯಾದ ಟಿಕ್ರಾ ನದಿ ಸುಮಾರು 750 ಮೀಟರ್ ದೂರದಲ್ಲಿದೆ. ಈ ಹಿನ್ನೆಲೆಯಲ್ಲಿ, ಒಲ್ಹಾನಿ ನದಿಯ ಎರಡೂ ಬದಿಗಳಲ್ಲಿ ಕನಿಷ್ಠ 50 ಮೀಟರ್ ಸುರಕ್ಷತಾ ವಲಯವನ್ನು ಕಾಪಾಡಬೇಕು ಎಂದು FAC ಸೂಚಿಸಿದೆ. ಜೊತೆಗೆ, ರಾಜ್ಯದ ಮುಖ್ಯ ವನ್ಯಜೀವಿ ಸಂರಕ್ಷಣಾಧಿಕಾರಿಯಿಂದ ಅನುಮೋದಿತ ಪ್ರದೇಶೀಯ ವನ್ಯಜೀವಿ ನಿರ್ವಹಣಾ ಯೋಜನೆಯನ್ನು ಜಾರಿಗೆ ತರಬೇಕು ಎಂದು ತಿಳಿಸಿದೆ.

ಮರಗಳ ಕಡಿತವನ್ನು ಹಂತ ಹಂತವಾಗಿ, ರಾಜ್ಯ ಅರಣ್ಯ ಇಲಾಖೆಯ ಸಲಹೆ ಪಡೆದು ಹಾಗೂ ಅನುಮೋದಿತ ಗಣಿಗಾರಿಕಾ ಮತ್ತು ಗಣಿಗಾರಿಕೆ ಮುಕ್ತಾಯ ಯೋಜನೆಗಳ ಪ್ರಕಾರವೇ ಕೈಗೊಳ್ಳಬೇಕು ಎಂದು ಸಮಿತಿ ನಿರ್ದೇಶಿಸಿದೆ.

ಪರಿಸರದ ಪರಿಣಾಮಗಳ ಜೊತೆಗೆ, ಈ ಯೋಜನೆ ಸಾಮಾಜಿಕವಾಗಿ ಕೂಡ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ಯೋಜನೆಯ ಪ್ರಕಾರ, 818 ಕುಟುಂಬಗಳು ಸ್ಥಳಾಂತರಗೊಳ್ಳಬೇಕಾಗಿದ್ದು, ಐದು ಗ್ರಾಮಗಳ 1,584 ಕುಟುಂಬಗಳು ವಿವಿಧ ರೀತಿಯಲ್ಲಿ ಪರಿಣಾಮಕ್ಕೆ ಒಳಗಾಗಲಿವೆ.

ದೇಶದಲ್ಲಿ ಗಣಿಗಾರಿಕೆ, ಮೂಲಸೌಕರ್ಯ ಮತ್ತು ಕೈಗಾರಿಕಾ ಯೋಜನೆಗಳಿಗಾಗಿ ಅರಣ್ಯ ಭೂಮಿ ವಿಲೇವಾರಿ ಕುರಿತ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಈ ಪ್ರಸ್ತಾವನೆ ಬಂದಿದೆ. 1980ರ ಅರಣ್ಯ (ಸಂರಕ್ಷಣೆ) ಕಾಯ್ದೆ ಜಾರಿಗೆ ಬಂದ ಬಳಿಕ 1.73 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಅರಣ್ಯ ಭೂಮಿ ಅರಣ್ಯೇತರ ಬಳಕೆಗಳಿಗೆ ವಿಲೇವಾರಿ ಮಾಡಲಾಗಿದೆ ಎಂದು ಸರ್ಕಾರದ ಅಂಕಿ-ಅಂಶಗಳು ಸೂಚಿಸುತ್ತವೆ. ಇದರಲ್ಲಿ ಗಣಿಗಾರಿಕೆ ದೊಡ್ಡ ಪಾಲು ಹೊಂದಿದೆ.

ಪರಿಸರ ತಜ್ಞರು, ಪ್ರತಿಪೂರಕ ಅರಣ್ಯಾರೋಪಣೆ ಮಾಡಿದರೂ ಸಹ, ನೈಸರ್ಗಿಕ ಅರಣ್ಯಗಳ ಜೈವಿಕ ವೈವಿಧ್ಯತೆ, ಪರಿಸರ ಸಮತೋಲನ ಮತ್ತು ಕಾರ್ಬನ್ ಸಂಗ್ರಹ ಸಾಮರ್ಥ್ಯವನ್ನು ಸಂಪೂರ್ಣವಾಗಿ ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.

ಖನಿಜ ಸಂಪತ್ತಿನಲ್ಲಿ ಶ್ರೀಮಂತ ರಾಜ್ಯವಾಗಿರುವ ಒಡಿಶಾದಲ್ಲಿ ಕಲ್ಲಿದ್ದಲು, ಲೋಹಧಾತು ಮತ್ತು ಬಾಕ್ಸೈಟ್ ಗಣಿಗಾರಿಕೆಗೆ ಅರಣ್ಯ ಭೂಮಿ ವಿಲೇವಾರಿ ಹೆಚ್ಚುತ್ತಿರುವುದು, ಕೈಗಾರಿಕಾ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವೆ ಸಮತೋಲನ ಸಾಧಿಸುವ ಪ್ರಶ್ನೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಇದನ್ನೂ ನೋಡಿ: ರಾಜ್ಯದ ನಿರುದ್ಯೋಗ ಪ್ರಮಾಣ ಶೇ.8.6: ಕಂಬಳದ ಉದ್ಯೋಗ ಕೊಡುವಿರಾ ಮುಖ್ಯಮಂತ್ರಿಗಳೇ? Janashakthi Media

Donate Janashakthi Media

Leave a Reply

Your email address will not be published. Required fields are marked *