ಬೆಂಗಳೂರು: ಕರ್ನಾಟಕ ಸರ್ಕಾರ 37 ವರ್ಷಗಳ ನಂತರ ಯುವಕರಲ್ಲಿ ನಾಯಕತ್ವ ಗುಣ ಬೆಳೆಸಲು ಮತ್ತು ಯುವ ರಾಜಕೀಯ ಪ್ರತಿಭೆಯನ್ನು ಹುಟ್ಟುಹಾಕುವ ಸಲುವಾಗಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಮುಂದಾಗಿದೆ. ಚುನಾವಣೆಯ ರೂಪುರೇಷೆ ಮತ್ತು ಆಗುಹೋಗುಗಳ ಬಗ್ಗೆ ಅಧ್ಯಯನ ನಡೆಸಲು ಸಚಿವರು ಮತ್ತು ಶಾಸಕರನ್ನೊಳಗೊಂಡ 11 ಸದಸ್ಯರ ಉನ್ನತ ಮಟ್ಟದ ಸಮಿತಿ ರಚಿಸಿದೆ.
ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಅವರು ಸಮಿತಿಯ ಸಂಚಾಲಕರಾಗಿದ್ದರೆ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕರಾದ ರಿಜ್ವಾನ್ ಅರ್ಷದ್ ಮತ್ತು ಬಿ.ಶಿವಣ್ಣ, ಎಂಎಲ್‌ಸಿಗಳಾದ ಸಲೀಮ್ ಅಹ್ಮದ್, ಬಸನಗೌಡ ಬಾದರ್ಲಿ, ಪುಟ್ಟಣ್ಣ, ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಮಂಜುನಾಥ್ ಮತ್ತು ಎನ್‌ಎಸ್‌ಯುಐ ಅಧ್ಯಕ್ಷ ಕೀರ್ತಿ ಗಣೇಶ್ ಸದಸ್ಯರಾಗಿದ್ದಾರೆ.
ಇದನ್ನೂ ಓದಿ : ಮನ್‌ರೇಗಾ ವರ್ಸಸ್ ವಿಬಿ-ಜಿ-ರಾಮ್-ಜಿ – ಪ್ರೊ.ಟಿ.ಆರ್.ಚಂದ್ರಶೇಖರ
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸಲಹೆ ನೀಡಿದ್ದರು. ಈ ಕಾರಣಕ್ಕಾಗಿ, ಮತ್ತೆ ಕ್ಯಾಂಪಸ್ ಚುನಾವಣೆಗಳನ್ನು ನಡೆಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಳೆದ ವಾರ ನಡೆದ ಕಾಂಗ್ರೆಸ್ ಸಂಸ್ಥಾಪಕರ ದಿನದ ಕಾರ್ಯಕ್ರಮದಲ್ಲಿ ತಿಳಿಸಿದ್ದರು.
ವಿದ್ಯಾರ್ಥಿ ಚುನಾವಣೆಗಳನ್ನು ಪಕ್ಷದ ಬ್ಯಾನರ್‌ಗಳ ಅಡಿಯಲ್ಲಿ ನಡೆಸಬೇಕೇ ಅಥವಾ ರಾಜಕೀಯೇತರ ಸ್ವರೂಪದಲ್ಲಿ ನಡೆಸಬೇಕೇ? ಮಹಿಳೆಯರು, ಒಬಿಸಿಗಳು, ಎಸ್‌ಸಿ/ಎಸ್‌ಟಿಗಳು ಮತ್ತು ದೈಹಿಕ ನ್ಯೂನತೆ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡುವ ಬಗ್ಗೆ ಅಧ್ಯಯನ ನಡೆಸಿ 15 ದಿನದಲ್ಲಿ ವರದಿ ಸಲ್ಲಿಸಲು ಪ್ರದೇಶ ಕಾಂಗ್ರೆಸ್ ಸಮಿತಿ ಸೂಚಿಸಿದೆ.