ಬೃಹತ್ ಕಾರ್ಮಿಕರ ಮೆರವಣಿಗೆ: ಲೇಬರ್ ಕೋಡ್ ವಿರುದ್ಧ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ

ತ್ರಿಪುರಾ: ಮತ್ತೆ ಒಂದು ಬಾರಿ ಹೋರಾಟಗಾರ ಕಾರ್ಮಿಕ ವರ್ಗ ಬೀದಿಗೆ ಇಳಿದಿದೆ. ಕೆಂಪು ಧ್ವಜಗಳನ್ನು ಭುಜದ ಮೇಲೆ ಹೊತ್ತುಕೊಂಡು ತಮ್ಮ ಬೇಡಿಕೆಗಳ ಈಡೇರಿಕೆಗೆ ಕೂಗು ಹಾಕಿದರು. ವಿಧಾನಸಭೆ ಮೆರವಣಿಗೆಯಲ್ಲಿ “ಅನಿಯಮಿತ ಉದ್ಯೋಗಿಗಳನ್ನು ನಿಯಮಿತಗೊಳಿಸಬೇಕು, ಬಾಕಿ ಇರುವ ಡಿಎ/ಡಿಆರ್ ಭತ್ಯೆಗಳನ್ನು ತೀರಿಸಬೇಕು, ಯೋಜನಾ ಕಾರ್ಮಿಕರನ್ನು ಸೇರಿ ಕೆಲಸದಿಂದ ವಜಾಗೊಂಡವರನ್ನು ಮರುನೇಮಕ ಮಾಡಬೇಕು. ಕಾರ್ಮಿಕ ವಿರೋಧಿ ಲೇಬರ್ ಕೋಡ್‌ಗಳನ್ನು ರಾಜ್ಯದಲ್ಲಿ ಜಾರಿಗೊಳಿಸಬಾರದು” ಎಂದು ಘೋಷಣೆ ಕೂಗಿದರು.

ಭಾರತೀಯ ಟ್ರೇಡ್ ಯೂನಿಯನ್ ಕೇಂದ್ರ (CITU) ಕರೆ ಮೇರೆಗೆ ನಡೆದ ವಿಧಾನಸಭೆ ಮೆರವಣಿಗೆಯಲ್ಲಿ ನೂರಾರು ಕಾರ್ಮಿಕರು ಭಾಗವಹಿಸಿ, “ನಾವು ಶರಣಾಗುವುದಿಲ್ಲ. ಹೋರಾಟ ಇಲ್ಲಿಗೆ ಮುಗಿದಿಲ್ಲ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಬಲವಾಗಲಿದೆ” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ತ್ರಿಪುರಾ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಿತೇಂದ್ರ ಚೌಧುರಿ ಮತ್ತು ಮಾಜಿ ಮುಖ್ಯಮಂತ್ರಿ ಮಾನಿಕ್ ಸರ್ಕಾರ್ ಪ್ರತಿಭಟಕರ ಹೋರಾಟ ಮನೋಭಾವವನ್ನು ಅಭಿನಂದಿಸಿದರು.

ಜಿತೇಂದ್ರ ಚೌಧುರಿ ಮಾತನಾಡಿ, ಜನ ವಿರೋಧಿ ನೀತಿಗಳ ವಿರುದ್ಧ ಪರ್ವತ ಪ್ರದೇಶದಿಂದ ಸಮತಟ್ಟು ಪ್ರದೇಶದವರೆಗೆ ನಿರಂತರ ಹೋರಾಟ ನಿರ್ಮಿಸಬೇಕೆಂದು ಹೇಳಿದರು. ಸರ್ಕಾರ ಒಳಗಿನಿಂದಲೇ ಕುಸಿಯುತ್ತಿದೆ, ಜನರು ಬಲವಾದ ಪ್ರತಿರೋಧಕ್ಕೆ ಸಜ್ಜಾಗಬೇಕು ಎಂದು ಕರೆ ನೀಡಿದರು. ಮಾನಿಕ್ ಸರ್ಕಾರ್ ಮಾತನಾಡಿ, ಹೋರಾಟದ ದಾರಿಯನ್ನು ಬಿಟ್ಟುಬಿಡಬಾರದು, ಪ್ರಲೋಭನೆಗಳಿಗೆ ಮತ್ತು ಪ್ರಚೋದನೆಗಳಿಗೆ ಒಳಗಾಗಬಾರದು ಎಂದು ಹೇಳಿದರು. ಹೋರಾಟವನ್ನು ಇನ್ನಷ್ಟು ತೀವ್ರ, ವ್ಯಾಪಕ ಮತ್ತು ಬಲಿಷ್ಠಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಇದನ್ನೂ ಓದಿ: ಬೆಂಗಳೂರು| ವಿಶ್ವವಿದ್ಯಾಲಯಗಳಲ್ಲಿ 1000 ಬೋಧಕ ಹುದ್ದೆಗಳ ನೇಮಕಾತಿ

ಮಾರ್ಚ್‌ 23ರ ಬೆಳಗ್ಗೆ ಅಗರ್ತಲಾ ನಗರದ ಒರಿಯೆಂಟ್ ಚೌಮುಹಾನಿಯಲ್ಲಿ ವಿವಿಧ ವಯೋಮಾನದ ಜನರು ದೊಡ್ಡ ಸಂಖ್ಯೆಯಲ್ಲಿ ಕೂಡಿದರು. ಬೆಳಿಗ್ಗೆ 11 ಗಂಟೆಗೆ ಮುಂಚೆಯೇ ಸ್ಥಳ ಜನರಿಂದ ಕಿಕ್ಕಿರಿದು ತುಂಬಿತ್ತು. ಪ್ರತಿಭಟನಾಕಾರರು ವಾಹನ ಸಂಚಾರಕ್ಕೆ ಅಡಚಣೆ ಆಗದಂತೆ ಸಹಕರಿಸಿದರು. ನಂತರ ಬೆಳಗ್ಗೆ 11.30ರ ಸುಮಾರಿಗೆ ಕೆಂಪು ಧ್ವಜಗಳೊಂದಿಗೆ ಮೆರವಣಿಗೆ ಪ್ರಾರಂಭವಾಯಿತು.

ಈ ಮೆರವಣಿಗೆ ಒರಿಯೆಂಟ್ ಚೌಮುಹಾನಿಯಿಂದ ಆರ್‌ಎಂಎಸ್ ಚೌಮುಹಾನಿ, ಬಿದೂರ್‌ಕರ್ತಾ ಚೌಮುಹಾನಿ ಮತ್ತು ಕರ್ನಲ್ ಚೌಮುಹಾನಿ ಮಾರ್ಗವಾಗಿ ಸಾಗಿದ ಬಳಿಕ, ಉತ್ತರ ಗೇಟ್ ಸಮೀಪದ ಡಿಮ್ಸಾಗರ್ ಬಳಿ ಪೊಲೀಸರು ತಡೆದರು. ಅಲ್ಲೇ ಸಂಚಾರಕ್ಕೆ ಅಡ್ಡಿಯಾಗದಂತೆ ಸಭೆ ನಡೆಸಲಾಯಿತು. ಕಾರ್ಮಿಕರ ಜೊತೆಗೆ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರೂ ಮೆರವಣಿಗೆಯಲ್ಲಿ ಭಾಗವಹಿಸಿದರು.

ಸಭೆಯಲ್ಲಿ ಜಿತೇಂದ್ರ ಚೌಧುರಿ ಮತ್ತು ಮಾನಿಕ್ ಸರ್ಕಾರ್ ಸೇರಿದಂತೆ ಸಿಟು ರಾಜ್ಯಾಧ್ಯಕ್ಷ ಮಾನಿಕ್ ಡೇ, ಪ್ರಧಾನ ಕಾರ್ಯದರ್ಶಿ ಶಂಕರ್ ಪ್ರಸಾದ್ ದತ್ತ, ಟಿಇಸಿಸಿ (ಎಚ್.ಬಿ.ರೋಡ್) ಪ್ರಧಾನ ಕಾರ್ಯದರ್ಶಿ ಮಹುವಾ ರಾಯ್ ಭಾಷಣ ಮಾಡಿದರು. ಟಿಇಸಿಸಿ ಅಧ್ಯಕ್ಷ ರಂಜಿತ್ ರುದ್ರ ಪಾಲ್ ಕೂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿತೇಂದ್ರ ಚೌಧುರಿ ಸರ್ಕಾರದ ವಿರುದ್ಧ ಟೀಕಿಸಿ, ಸರ್ಕಾರಿ ನೌಕರರನ್ನು ರಾಜಕೀಯ ಕಾರಣಗಳಿಂದ ದೂರದ ಪ್ರದೇಶಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ ಹಾಗೂ ಯೋಜನಾ ಕಾರ್ಮಿಕರನ್ನು ನಿರಂತರವಾಗಿ ವಜಾಗೊಳಿಸಲಾಗುತ್ತಿದೆ ಎಂದರು. “ಸಬ್ಕಾ ಸಾಥ್, ಸಬ್ಕಾ ವಿಕಾಸ್” ಎಂಬ ಘೋಷಣೆಯ ಹಿಂದೆ ಸರ್ಕಾರದ ನಿಜ ಸ್ವರೂಪ ಇದಾಗಿದೆ ಎಂದು ಆರೋಪಿಸಿದರು. ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ಹಣದ ಕೊರತೆಯಿಲ್ಲವೆಂದು ಹೇಳುತ್ತಿದ್ದರೆ, ಏಕೆ ನೌಕರರ ಬಾಕಿ ಭತ್ಯೆಗಳನ್ನು ತೀರಿಸಲಾಗುತ್ತಿಲ್ಲ? ಏಕೆ ಅನಿಯಮಿತ ಉದ್ಯೋಗಿಗಳನ್ನು ನಿಯಮಿತಗೊಳಿಸಲಾಗುತ್ತಿಲ್ಲ? ಎಂದು ಪ್ರಶ್ನಿಸಿದರು.

ಹೈಕೋರ್ಟ್ ಆದೇಶವನ್ನು ಪಾಲಿಸದೇ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ 240 ವಿಶೇಷ ಅರ್ಜಿಗಳನ್ನು ಸಲ್ಲಿಸಿದೆ. ಇದಕ್ಕಾಗಿ ಸುಮಾರು ₹12,000 ಕೋಟಿ ವಕೀಲರ ಶುಲ್ಕಕ್ಕೆ ಖರ್ಚಾಗಿದೆ ಎಂದು ಅವರು ಆರೋಪಿಸಿದರು. ಜನರ ಹಕ್ಕುಗಳನ್ನು ಕಸಿದುಕೊಳ್ಳಲು ಸರ್ಕಾರ ನ್ಯಾಯಾಲಯಗಳನ್ನು ಬಳಸುತ್ತಿದೆ ಎಂದರು.

ಮಾನಿಕ್ ಸರ್ಕಾರ್ ಮಾತನಾಡಿ, ಎಂಎನ್‌ಆರ್‌ಇಜಿಎ ಕಾಯ್ದೆಯನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಇದರಿಂದ ಗ್ರಾಮೀಣ ಜನರ ಕನಿಷ್ಠ ಆದಾಯ ಹಕ್ಕು ಕಸಿದುಕೊಳ್ಳಲಾಗುತ್ತಿದೆ. ಲೇಬರ್ ಕೋಡ್‌ಗಳು ಕಾರ್ಮಿಕರ ವಿರುದ್ಧ ರೂಪಿಸಲಾಗಿದೆ ಎಂದು ಹೇಳಿದರು. ಚುನಾವಣೆ ಮೊದಲು ಹೇಳುವುದು ಒಂದೇ, ಅಧಿಕಾರಕ್ಕೆ ಬಂದ ನಂತರ ವಿರುದ್ಧವಾಗಿ ನಡೆದುಕೊಳ್ಳುವುದು ಬಿಜೆಪಿ ಸರ್ಕಾರದ ಸ್ವಭಾವ ಎಂದು ಟೀಕಿಸಿದರು.

ಇತ್ತೀಚೆಗೆ ರೈತರ ಮೆರವಣಿಗೆಯ ಮೇಲೆ ನಡೆದ ದಾಳಿಯನ್ನು ಖಂಡಿಸಿದ ಅವರು, ಪೊಲೀಸ್ ಕ್ರಮ ಸರ್ಕಾರದ ಸೂಚನೆಯಿಲ್ಲದೆ ನಡೆದಿರಲು ಸಾಧ್ಯವಿಲ್ಲ ಎಂದು ಹೇಳಿದರು. ಆದರೆ ಸಿಟು ಮೆರವಣಿಗೆಯಲ್ಲಿ ಪೊಲೀಸರು ತಾಳ್ಮೆ ತೋರಿದರು ಎಂದರು.

ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ ಎಂಬ ಲಕ್ಷಣಗಳು ಸ್ಪಷ್ಟವಾಗುತ್ತಿವೆ ಎಂದು ಅವರು ಹೇಳಿದರು. ಏಪ್ರಿಲ್ 12ರಂದು ನಡೆಯಲಿರುವ ಎಡಿಸಿ ಚುನಾವಣೆಯಲ್ಲಿಯೂ ಮತದಾನದ ಹಕ್ಕು ಕಸಿದುಕೊಳ್ಳುವ ಆತಂಕವಿದೆ ಎಂದು ಹೇಳಿದರು. ಜನರ ಹಕ್ಕುಗಳನ್ನು ರಕ್ಷಿಸಲು ಎಡಪಕ್ಷ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಮಾನಿಕ್ ಡೇ ಮಾತನಾಡಿ, ಹೋರಾಟವನ್ನು ತೀವ್ರಗೊಳಿಸುವ ಮೂಲಕವೇ ಬೇಡಿಕೆಗಳನ್ನು ಸಾಧಿಸಬಹುದು ಎಂದರು. ಫೆಬ್ರವರಿ 12ರಂದು ನಡೆದ ದೇಶವ್ಯಾಪಿ ಸಾಮಾನ್ಯ ಮುಷ್ಕರ ಮೊದಲ ಎಚ್ಚರಿಕೆ ಆಗಿದ್ದು, ಮುಂದಿನ ಹೋರಾಟಗಳು ಇನ್ನಷ್ಟು ಬಲವಾಗಲಿವೆ ಎಂದು ಹೇಳಿದರು.

ಶಂಕರ್ ಪ್ರಸಾದ್ ದತ್ತ ಅವರು ಮುಖ್ಯಮಂತ್ರಿಗೆ ನಾಲ್ಕು ಬೇಡಿಕೆಗಳ ಮನವಿಯನ್ನು ಸಲ್ಲಿಸಲು ಪ್ರಯತ್ನಿಸಿದ್ದರೂ, ವಿಧಾನಸಭೆ ಅಧಿವೇಶನದ ಕಾರಣದಿಂದ ಅವರು ಸ್ವೀಕರಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು. ಸರ್ಕಾರ ಬಾಕಿ ಭತ್ಯೆಗಳನ್ನು ತೀರಿಸುವುದಿಲ್ಲ, ಉದ್ಯೋಗಿಗಳನ್ನು ನಿಯಮಿತಗೊಳಿಸುವುದಿಲ್ಲ ಎಂದು ಟೀಕಿಸಿದರು.

ಮಹುವಾ ರಾಯ್ ಮಾತನಾಡಿ, ಸರ್ಕಾರ ಏಳನೇ ವೇತನ ಆಯೋಗವನ್ನು ಜಾರಿಗೊಳಿಸಿಲ್ಲ ಎಂದು ಆರೋಪಿಸಿದರು. ಹಿಂದಿನ ಎಡಪಕ್ಷ ಸರ್ಕಾರ ಹಳೆಯ ಪಿಂಚಣಿ ಯೋಜನೆಯನ್ನು ಮುಂದುವರೆಸಿದ್ದರೂ, ಬಿಜೆಪಿ ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಎಂದರು. ನೌಕರರ ಹೋರಾಟವನ್ನು ಕುಂಠಿತಗೊಳಿಸಲು ಇಎಸ್‌ಎಂಎಂತಹ ಕಾನೂನುಗಳನ್ನು ಬಳಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಇದನ್ನೂ ನೋಡಿ: ಬಜೆಟ್ ನಿರ್ಲಕ್ಷ್ಯ: ಅಂಗನವಾಡಿ ನೌಕರರ ಅನಿರ್ದಿಷ್ಟ ಧರಣಿ Janashakthi Media

Donate Janashakthi Media

Leave a Reply

Your email address will not be published. Required fields are marked *