ಸಿಬಿಎಸ್‌ಇ ಫಲಿತಾಂಶ ಗೊಂದಲ: ಕೇಂದ್ರ ಶಿಕ್ಷಣ ಸಚಿವಾಲಯದ ವಿರುದ್ಧ ಟೀಕೆ, ವಿದ್ಯಾರ್ಥಿಗಳ ಆತಂಕ ಹೆಚ್ಚಳ

ನವದೆಹಲಿ: ಸಿಬಿಎಸ್‌ಇ (CBSE) 12ನೇ ತರಗತಿ ಪರೀಕ್ಷೆಯ ಮೌಲ್ಯಮಾಪನ ಮತ್ತು ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಗಳ ವಿತರಣೆ ಪ್ರಕ್ರಿಯೆಯಲ್ಲಿ ಉಂಟಾದ ಗೊಂದಲ ದೇಶದಾದ್ಯಂತ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಮೂಡಿಸಿದೆ. ಸಾವಿರಾರು ವಿದ್ಯಾರ್ಥಿಗಳು ತಮಗೆ ನೀಡಲಾದ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಗಳು ತಮ್ಮದ್ದೇ ಅಲ್ಲ, ಕೈಬರಹವೂ ಹೊಂದಿಕೆಯಾಗುತ್ತಿಲ್ಲ ಎಂದು ದೂರು ನೀಡಿದ್ದಾರೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯ ಮತ್ತು ಸಿಬಿಎಸ್‌ಇ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿವೆ.

ಈ ವರ್ಷ ಸುಮಾರು 17 ಲಕ್ಷ ವಿದ್ಯಾರ್ಥಿಗಳು ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದರು. ಫಲಿತಾಂಶ ಪ್ರಕಟವಾದ ಬಳಿಕ ಮರುಮೌಲ್ಯಮಾಪನ ಹಾಗೂ ಉತ್ತರ ಪತ್ರಿಕೆಗಳ ಪರಿಶೀಲನೆಗಾಗಿ ಅರ್ಜಿ ಸಲ್ಲಿಸಿದ ಅನೇಕ ವಿದ್ಯಾರ್ಥಿಗಳಿಗೆ ತಪ್ಪು ಉತ್ತರ ಪತ್ರಿಕೆಗಳ ಪ್ರತಿಗಳು ಲಭ್ಯವಾಗಿವೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಸಿಬಿಎಸ್‌ಇ ಅಧಿಕಾರಿಗಳು ತಾಂತ್ರಿಕ ದೋಷ ಮತ್ತು ಅಸಂಗತತೆಗಳಿರುವುದನ್ನು ಒಪ್ಪಿಕೊಂಡಿದ್ದಾರೆ.

ವಿವಾದ ತೀವ್ರಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸಮಸ್ಯೆಯ ಹೊಣೆಯನ್ನು ಸ್ವೀಕರಿಸಿದ್ದು, ದೋಷಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ : ತಾಪಮಾನಕ್ಕಿಂತ ಭಯಾನಕ ‘ಆರ್ದ್ರ ಶಾಖೆ’: ಕರಾವಳಿ ಜಿಲ್ಲೆಗಳಿಗೆ ತಜ್ಞರ ಎಚ್ಚರಿಕೆ

ಇದರ ನಡುವೆಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿಬಿಎಸ್‌ಇ ಆನ್‌ಲೈನ್ ಮೌಲ್ಯಮಾಪನ (OSM) ವ್ಯವಸ್ಥೆಯಲ್ಲಿ ಗಂಭೀರ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ್ದಾರೆ. ಮೌಲ್ಯಮಾಪನ ಕಾರ್ಯದ ಗುತ್ತಿಗೆ ನೀಡಿದ ಸಂಸ್ಥೆಯ ಆಯ್ಕೆ ಕುರಿತೂ ಪ್ರಶ್ನೆ ಎತ್ತಿರುವ ಅವರು, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡಲಾಗಿದೆ ಎಂದು ಟೀಕಿಸಿದ್ದಾರೆ.

ಎಸ್‌ಎಫ್‌ಐ ಸೇರಿದಂತೆ ಅನೇಕ ವಿದ್ಯಾರ್ಥಿ ಸಂಘಟನೆಗಳು ಹಾಗೂ ಶಿಕ್ಷಣ ತಜ್ಞರ ಒಂದು ವಲಯ, ಪರೀಕ್ಷಾ ನಿರ್ವಹಣೆ ಮತ್ತು ಮೌಲ್ಯಮಾಪನ ವ್ಯವಸ್ಥೆಯಲ್ಲಿ ಪದೇಪದೇ ಉಂಟಾಗುತ್ತಿರುವ ದೋಷಗಳಿಗೆ ಕೇಂದ್ರ ಸರ್ಕಾರ ಹಾಗೂ ಶಿಕ್ಷಣ ಸಚಿವಾಲಯವೇ ಹೊಣೆ ಎಂದು ಆರೋಪಿಸಿದೆ. ವಿದ್ಯಾರ್ಥಿಗಳ ಮಾನಸಿಕ ಒತ್ತಡ ಮತ್ತು ಭವಿಷ್ಯದ ಬಗ್ಗೆ ಉಂಟಾಗಿರುವ ಅನಿಶ್ಚಿತತೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ನೋಡಿ :ಪಿಣರಾಯಿ ವಿಜಯನ್‌ ಮೇಲಿನ ಇ.ಡಿ. ದಾಳಿ: ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ Janashakthi Media

Donate Janashakthi Media

Leave a Reply

Your email address will not be published. Required fields are marked *