ಪಾಟ್ನಾ(ಬಿಹಾರ): ಏಪ್ರಿಲ್ 15ರಂದು ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಪ್ರಮಾಣವಚನ ಸ್ವೀಕರಿಸಿದರು.
ಬೆಳಿಗ್ಗೆ ರಾಜ್ಯಪಾಲರ ನಿವಾಸ ಲೋಕಭವನಕ್ಕೆ ಆಗಮಿಸಿದ ಅವರು, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಸೈಯದ್ ಅತಾ ಹಸ್ನೈನ್ ಅವರು ಪ್ರಮಾಣವಚನ ಬೋಧಿಸಿದರು. ನಿತೀಶ್ ಕುಮಾರ್ ಅವರ ರಾಜೀನಾಮೆಯ ನಂತರ ಚೌಧರಿ ಬಿಹಾರದ ಮೊದಲ ಬಿಜೆಪಿ ಮುಖ್ಯಮಂತ್ರಿ ಆಗಿದ್ದಾರೆ.
2025ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ದಾಖಲೆಯ ಗೆಲುವಿನ ಬಳಿಕ ನಿತೀಶ್ ಕುಮಾರ್ 10ನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಇದೀಗ ಅವರ ಉತ್ತರಾಧಿಕಾರಿಯಾಗಿರುವ 57 ವರ್ಷದ ಚೌಧರಿ ಮೇಲೆ ಸಾಕಷ್ಟು ನಿರೀಕ್ಷೆಗಳು ಮೂಡಿವೆ.
ಇದನ್ನೂ ಓದಿ: ಮೇ 15ರೊಳಗೆ ಸಂಪುಟ ಪುನರ್ ರಚನೆಗೆ ಕಾಂಗ್ರೆಸ್ ಶಾಸಕರು ಒತ್ತಾಯ
1990ರಲ್ಲಿ ರಾಷ್ಟ್ರೀಯ ಜನತಾ ದಳ (ಆರ್ಜೆಡಿ)ದಿಂದ ತಮ್ಮ ರಾಜಕೀಯ ಬದುಕು ಆರಂಭಿಸಿದ ಚೌಧರಿ, 2018ರಲ್ಲಿ ಬಿಜೆಪಿ ಸೇರಿದ್ದರು. 1968ರಲ್ಲಿ ಜನಿಸಿದ ಇವರ ಕುಟುಂಬ ಕೂಡ ರಾಜಕೀಯ ಹಿನ್ನೆಲೆ ಹೊಂದಿದೆ. ತಂದೆ ಶಕುನಿ ಚೌಧರಿ ತಾರಾಪುರ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿದ್ದರು. ತಾಯಿ ಪಾರ್ವತಿ ದೇವಿ 1998ರಲ್ಲಿ ಸಮತಾ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
2024ರಲ್ಲಿ ಬಿಜೆಪಿ ಮತ್ತು ಜೆಡಿ(ಯು) ಮೈತ್ರಿಗೆ ಮೊದಲು, ಚೌಧರಿ ಅವರು ನಿತೀಶ್ ಕುಮಾರ್ ಅವರ ಕಟು ಟೀಕಾಕಾರರಾಗಿದ್ದರು. 2022ರಲ್ಲಿ ನಿತೀಶ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ತಮ್ಮ ಕೇಸರಿ ಪೇಟ ತೆಗೆಯುವುದಿಲ್ಲ ಎಂದು ಸಾರ್ವಜನಿಕವಾಗಿಯೇ ಘೋಷಿಸಿದ್ದರು.
ಇಂದು ಪ್ರಮಾಣ ವಚನ ಸ್ವೀಕಾರಕ್ಕೆ ಮುನ್ನ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರು ಚೌಧರಿ ಅವರನ್ನು ಭೇಟಿ ಮಾಡಿದರು. ಈ ಕುರಿತು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪಾಸ್ವಾನ್, ಪಾಟ್ನಾದಲ್ಲಿ ಬಿಹಾರದ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲು, ನಾನು ನನ್ನ ಸಹೋದರ ಸಾಮ್ರಾಟ್ ಚೌಧರಿ ಅವರನ್ನು ಭೇಟಿಯಾದೆ. ಎನ್‌ಡಿಎ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಗಾಗಿ ಅಭಿನಂದಿಸಿ, ಶುಭಾಶಯ ಕೋರಿದ್ದೇನೆ. ನಿಮ್ಮ ನಾಯಕತ್ವದಲ್ಲಿ ಬಿಹಾರ ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಸಮೃದ್ಧಿಯ ಹೊಸ ಎತ್ತರ ತಲುಪುವ ಸಂಪೂರ್ಣ ವಿಶ್ವಾಸವಿದೆ ಎಂದಿದ್ದಾರೆ.
ಚೌಧರಿ ಅವರನ್ನು ಸಿಎಂ ಗಾದಿಗೇರಿಸುವ ಬಿಜೆಪಿಯ ನಡೆಯ ಹಿಂದೆ ಒಬಿಸಿ ಸಮುದಾಯ ಅದರಲ್ಲೂ ವಿಶೇಷವಾಗಿ ಕೊಯೇರಿ/ಕುಶ್ವಾಹ ಗುಂಪಿನಲ್ಲಿ ಪಕ್ಷದ ಪ್ರಭಾವವನ್ನು ಬಲಪಡಿಸುವ ಕಾರ್ಯತಂತ್ರವಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ನೋಡಿ: ಶಿಕ್ಷಣ ಮೌಲ್ಯಕೇಂದ್ರಿತವಾಗದೇ ಹಣಕೇಂದ್ರಿತವಾಗಿದೆ: ರವಿಕುಮಾರ್ ಬಾಗಿ Janashakthi Media
