ರಟ್ಟೀಹಳ್ಳಿ| ಪಂಚಾಯಿತಿ ಚುನಾವಣೆಯ ಫಲಿತಾಂಶ ಪ್ರಕಟಣೆ

ರಟ್ಟೀಹಳ್ಳಿ: ಇಲ್ಲಿಯ ಪಟ್ಟಣ ಪಂಚಾಯಿತಿಯ 15 ವಾರ್ಡ್‌ಗಳ ಸದಸ್ಯರ ಆಯ್ಕೆಗೆ ಇತ್ತೀಚೆಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಆಗಸ್ಟ್‌ 20ರಂದು ಪ್ರಕಟನೆಯಾಗಿದೆ. ಕಾಂಗ್ರೆಸ್-7 ಹಾಗೂ ಬಿಜೆಪಿ-6 ಸ್ಥಾನಗಳಲ್ಲಿ ವಿಜಯಶಾಲಿಯಾಗಿದ್ದು, ಅಧಿಕಾರದ ಗದ್ದುಗೆ ಹಿಡಿಯಲು ಇಬ್ಬರು ಪಕ್ಷೇತರರು ನಿರ್ಣಾಯಕ ಸ್ಥಾನದಲ್ಲಿದ್ದಾರೆ.

ಪಟ್ಟಣ ಪಂಚಾಯಿತಿ ರಚನೆ ಯಾದ ಬಳಿಕ ಇದೇ ಮೊದಲ ಬಾರಿಗೆ ಚುನಾ ವಣೆ ನಡೆದಿತ್ತು. ಆ. 17ರಂದು ಶೇ. 80.63ರಷ್ಟು ಮತದಾನವಾಗಿತ್ತು. ನಿಗದಿಯಂತೆ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ.

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಿದ್ದಾರೆ. ಹೀಗಾಗಿ, ರಟ್ಟೀಹಳ್ಳಿ ಪಟ್ಟಣ ಪಂಚಾ ಯಿತಿಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಬಿರುಸಿನ ಪ್ರಚಾರ ನಡೆಸಿತ್ತು. ಸ್ಥಳೀಯ ಶಾಸಕ ಯು.ಬಿ. ಬಣಕಾರ ಸಹ ಚುನಾವಣೆಯಲ್ಲಿ ಗೆಲ್ಲಲು ತಂತ್ರಗಳನ್ನು ರೂಪಿಸಿದ್ದರು.

ಇದನ್ನೂ ಓದಿ: ಬೆಂಗಳೂರು| 5 ವರ್ಷದಲ್ಲಿ 14,000 ಮಕ್ಕಳು ನಾಪತ್ತೆ: ಡಾ. ಜಿ ಪರಮೇಶ್ವರ್

ಬಿಜೆಪಿ ಮುಖಂಡರೂ ಆಗಿರುವ ಮಾಜಿ ಸಚಿವ ಬಿ.ಸಿ.ಪಾಟೀಲ ಕ್ಷೇತ್ರವಾಗಿದ್ದರಿಂದ, ಅವರು ಸಹ ಚುನಾವಣೆಯ ಅಖಾಡಕ್ಕೆ ಧುಮ್ಮಿಕ್ಕಿದ್ದರು. ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು, ಅವರ ಗೆಲುವಿಗೆ ಬಿರುಸಿನ ಪ್ರಚಾರ ನಡೆಸಿದ್ದರು.

ಸ್ಥಳೀಯ ಚುನಾವಣೆ ಆಗಿದ್ದರಿಂದ ರಾಷ್ಟ್ರೀಯ ಪಕ್ಷದ ಜೊತೆಯಲ್ಲಿ ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸು ಸಹ ಇರಬೇಕಾಗುತ್ತದೆ. ಅದೇ ಕಾರಣಕ್ಕೆ, ಕೆಲವೇ ಮತಗಳ ಅಂತರದಿಂದ ಉಭಯ ಪಕ್ಷಗಳ ಅಭ್ಯರ್ಥಿಗಳು ಸೋಲು ಅನುಭವಿಸಿದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ 10 ಅಭ್ಯರ್ಥಿಗಳು ಗೆಲುವು ಸಾಧಿಸಬಹುದೆಂದು ಪಕ್ಷದ ಮುಖಂಡರು ಅಂದುಕೊಂಡಿದ್ದರು. ಆದರೆ, ಅವರ ಲೆಕ್ಕಚಾರ ತಪ್ಪಿದೆ. ಏಳು ಅಭ್ಯರ್ಥಿಗಳು ಮಾತ್ರ ಗೆದ್ದಿದ್ದಾರೆ.

ರಟ್ಟೀಹಳ್ಳಿ ಗ್ರಾಮ ಪಂಚಾಯಿತಿ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು, ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇದೇ ಕಾರಣಕ್ಕೆ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆ ಯಲ್ಲಿ ಗೆಲ್ಲಬಹುದೆಂದು ಮುಖಂಡರು ತಿಳಿದಿದ್ದರು. ಆದರೆ, ಬಿಜೆಪಿ 6 ಅಭ್ಯರ್ಥಿ ಗಳು ಮಾತ್ರ ವಿಜಯಶಾಲಿಯಾಗಿದ್ದಾರೆ.

ಪಕ್ಷೇತರರಿಗೆ ಬೇಡಿಕೆ:

ವಾರ್ಡ್ 9ರಲ್ಲಿ ಶಿವಕುಮಾರ ಉಪ್ಪಾರ ಹಾಗೂ ವಾರ್ಡ್ 15ರಲ್ಲಿ ಲಲಿತಾ ಚನ್ನಗೌಡ್ರ ಅವರು ಪಕ್ಷೇತರರಾಗಿ ವಿಜಯಶಾಲಿಯಾಗಿದ್ದಾರೆ. ಅಧಿಕಾರದ ಗದ್ದುಗೆ ಹಿಡಿಯಲು ಒಂದು ಹಾಗೂ ಎರಡು ಸ್ಥಾನಗಳ ಅವಶ್ಯಕತೆಯಿದೆ. ಹೀಗಾಗಿ, ಇಬ್ಬರೂ ಪಕ್ಷೇತರರಿಗೆ ಬೇಡಿಕೆ ಬಂದಿದೆ.

ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಪಡೆಯಲು ಸದಸ್ಯರ ಬಹುಮತದ ಅಗತ್ಯವಿದೆ. 15 ಸದಸ್ಯರ ಜೊತೆಯಲ್ಲಿ ಸ್ಥಳೀಯ ಶಾಸಕ ಹಾಗೂ ಸ್ಥಳೀಯ ಸಂಸದ ಸಹ ಮತದಾನ ಮಾಡಲು ಅರ್ಹತೆ ಪಡೆದಿದ್ದಾರೆ.

ಸ್ಥಳೀಯ ಶಾಸಕ ಬಣಕಾರ, ಕಾಂಗ್ರೆಸ್‌ನವರು. ಸಂಸದ ಬಸವರಾಜ ಬೊಮ್ಮಾಯಿ, ಬಿಜೆಪಿಯವರು. ಅವರಿ ಬ್ಬರು ತಮ್ಮದೇ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುತ್ತಾರೆ. ಈ ರೀತಿಯಾದರೆ, ಕಾಂಗ್ರೆಸ್‌ಗೆ 8 ಹಾಗೂ ಬಿಜೆಪಿಗೆ 7 ಸದಸ್ಯರ ಬೆಂಬಲ ಸಿಗಲಿದೆ. ಉಳಿದ ಇಬ್ಬರು ಪಕ್ಷೇತರರು ಯಾರ ಪರವಿದ್ದಾರೆ ಎಂಬುದೇ ನಿರ್ಣಾಯಕವಾಗಲಿದೆ.

ಪಕ್ಷೇತರರಾಗಿ ಆಯ್ಕೆಯಾಗಿರುವ ಶಿವಕುಮಾರ ಉಪ್ಪಾರ ಕಾಂಗ್ರೆಸ್ ಪರ ಒಲುವು ಹೊಂದಿರಬಹುದು. ಇನ್ನೊಬ್ಬ ಅಭ್ಯರ್ಥಿ ಲಲಿತಾ, ಸ್ವಾಭಿಮಾನದ ಮೂಲಕ ಆರಿಸಿ ಬಂದಿದ್ದಾರೆ. ಆದರೆ, ಅವರ ಕುಟುಂಬಕ್ಕೆ ಬಿಜೆಪಿಯ ಹಿನ್ನೆಲೆ ಯಿದೆ. ಹೀಗಾಗಿ, ಪಕ್ಷೇತರರು ಯಾರ ಪರ ಎಂಬುದನ್ನು ಹೇಳುವುದು ಸದ್ಯಕ್ಕೆ ಕಷ್ಟವಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ, ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಯಲ್ಲಿ ಕಾಂಗ್ರೆಸ್‌ನವರು ಕುಳಿತರೆ ಪಟ್ಟಣದ ಅಭಿವೃದ್ಧಿ ಸಾಧ್ಯವೆಂದು ಪಕ್ಷದ ಸದಸ್ಯರು ಹೇಳುತ್ತಿದ್ದಾರೆ. ಪಕ್ಷೇತರರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಆರಂಭಿಸಿದ್ದಾರೆ. ಅಧ್ಯಕ್ಷ ಸ್ಥಾನದ ಮೀಸಲಾತಿ: ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗದ ‘ಅ’ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿದೆ.

ಇದನ್ನೂ ನೋಡಿ: ಧರ್ಮಸ್ಥಳ ಕೊಲೆ ಪ್ರಕರಣ : ಕಾಂಗ್ರೆಸ್‌, ಬಿಜೆಪಿಯ ನಾಯಕರುಗಳೆ.. ನಿಮಗೆ ಮನುಷ್ಯತ್ವ ಇಲ್ಲವೆ? Janashakthi Media

Donate Janashakthi Media

Leave a Reply

Your email address will not be published. Required fields are marked *