ಅರಣ್ಯ ಇಂಡೀಕರಣ ರದ್ದುಪಡಿಸಿ ರೈತರ ಭೂಮಿ ಹಕ್ಕು ಪುನರ್‌ಸ್ಥಾಪಿಸಿ: ತಿಪಟೂರಿನಲ್ಲಿ ರೈತರ ಸಮಾವೇಶ

ತಿಪಟೂರು: ಕಂದಾಯ ಕೃಷಿ ಭೂಮಿಗಳನ್ನು ಅರಣ್ಯ ಭೂಮಿಯಾಗಿ ಇಂಡೀಕರಣ ಮಾಡಿರುವುದನ್ನು ರದ್ದುಪಡಿಸಿ, ತಲೆತಲಾಂತರಗಳಿಂದ ಕೃಷಿ ಮಾಡುತ್ತಿರುವ ರೈತರ ಭೂಮಿ ಹಕ್ಕನ್ನು ಪುನರ್‌ಸ್ಥಾಪಿಸಬೇಕು ಎಂದು ಆಗ್ರಹಿಸಿ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ರುದ್ರಾಪುರ ಗ್ರಾಮದಲ್ಲಿ ರೈತರ ಸಮಾವೇಶ ನಡೆಯಿತು.

ಅರಣ್ಯ ಇಂಡೀಕರಣದಿಂದ ತಮ್ಮ ಕೃಷಿ ಭೂಮಿಯಿಂದ ಒಕ್ಕಲೆಬ್ಬಿಸುವ ಭೀತಿ ಎದುರಿಸುತ್ತಿರುವ ರುದ್ರಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ರೈತರು ಸಮಾವೇಶದಲ್ಲಿ ಪಾಲ್ಗೊಂಡರು.

ಸಮಾವೇಶವನ್ನು ಉದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂ. ಯಶವಂತ ಟಿ., ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘದ ಹಿರಿಯ ರೈತ ನಾಯಕ ಕೆ.ಟಿ. ಗಂಗಾಧರ್ ಹಾಗೂ ಎಐಕೆಕೆಎಂಎಸ್ ರಾಜ್ಯ ಅಧ್ಯಕ್ಷ ಕಾಂ. ಶಶಿಧರ್ ಮಾತನಾಡಿದರು.

ರೈತರು ಹಲವು ವರ್ಷಗಳಿಂದ ಕೃಷಿ ಮಾಡಿಕೊಂಡು ಬರುತ್ತಿರುವ ಭೂಮಿಯನ್ನು ಅರಣ್ಯ ಭೂಮಿ ಎಂದು ಇಂಡೀಕರಣ ಮಾಡಿರುವುದರಿಂದ ತಮ್ಮ ಬದುಕು ಮತ್ತು ಜೀವನೋಪಾಯಕ್ಕೆ ಧಕ್ಕೆಯಾಗುವ ಆತಂಕ ಎದುರಾಗಿದೆ. ಸರ್ಕಾರ ಕೂಡಲೇ ಈ ಸಮಸ್ಯೆಯನ್ನು ಪರಿಹರಿಸಿ ರೈತರ ಭೂಮಿ ಹಕ್ಕನ್ನು ರಕ್ಷಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.

ಸಮಾವೇಶದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತುಮಕೂರು ಜಿಲ್ಲಾ ಉಪಾಧ್ಯಕ್ಷ ಕಾಂ. ಆರ್.ಎಸ್. ಚನ್ನಬಸವಣ್ಣ, ಸಹ ಕಾರ್ಯದರ್ಶಿ ಕಾಂ. ರಾಜಮ್ಮ, ಸಿಐಟಿಯು ತಿಪಟೂರು ಮುಖಂಡ ಕಾಂ. ಅಲ್ಲಾ ಭಕ್ಷ್ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

ಇದನ್ನೂ ಓದಿ : ರೈಲು ತಾಂತ್ರಿಕ ದೋಷ: ಪರೀಕ್ಷೆ ತಪ್ಪಿಸಿಕೊಂಡವರಿಗೆ ಮರುಪರೀಕ್ಷೆ ನಡೆಸಿ – ಡಿವೈಎಫ್ಐ

15 ದಿನಗಳ ಗಡುವು

ರೈತರ ಸಮಸ್ಯೆ ಕುರಿತು 15 ದಿನಗಳ ಒಳಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಂದಾಯ ಖಾತೆ ಹೊಂದಿರುವ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ರೈತರೊಂದಿಗೆ ಸಭೆ ನಡೆಸಬೇಕು. ಅರಣ್ಯ ಇಂಡೀಕರಣವನ್ನು ರದ್ದುಪಡಿಸಿ, ರೈತರ ಭೂಮಿ ಹಕ್ಕನ್ನು ಪುನರ್‌ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ನಿಗದಿತ ಅವಧಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಹೋರಾಟವನ್ನು ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ವಿಸ್ತರಿಸುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದರು.

ಇದನ್ನೂ ನೋಡಿ : ಕಾರ್ಮಿಕರ ವಿಧಾನಸೌಧ ಚಲೋ | ಏನಿದು ಹೋರಾಟ? ಪ್ರಮುಖ ಬೇಡಿಕೆಗಳೇನು? – ಮೀನಾಕ್ಷಿ ಸುಂದರಂ Janashakthi Media

Donate Janashakthi Media

Leave a Reply

Your email address will not be published. Required fields are marked *