ನವದೆಹಲಿ: ಖನಿಜ ಸಂಪನ್ಮೂಲಗಳ ಮೇಲಿನ ರಾಜ್ಯಗಳ ತೆರಿಗೆ ಅಧಿಕಾರವನ್ನು ನಿರ್ಬಂಧಿಸುವ ಕೇಂದ್ರ ಸರ್ಕಾರದ ಹೊಸ ಗಣಿ ಕಾನೂನು ತಿದ್ದುಪಡಿಗೆ ವಿರೋಧ ತೀವ್ರಗೊಂಡಿದೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಮಸೂದೆಯನ್ನು ಮರುಪರಿಶೀಲಿಸುವಂತೆ ಕೇಂದ್ರವನ್ನು ಒತ್ತಾಯಿಸಿರುವ ಬೆನ್ನಲ್ಲೇ, ಸಂಯುಕ್ತ ಕಿಸಾನ್ ಮೋರ್ಚಾ (SKM) ಕೂಡ ಕಾನೂನನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದೆ.
ಮೈನ್ಸ್ ಆ್ಯಂಡ್ ಮಿನರಲ್ಸ್ (ಡೆವಲಪ್‌ಮೆಂಟ್ ಆ್ಯಂಡ್ ರೆಗ್ಯುಲೇಷನ್) ತಿದ್ದುಪಡಿ ಕಾಯ್ದೆ–2026ಕ್ಕೆ ಸಂಸತ್ತಿನ ಅನುಮೋದನೆ ದೊರೆತಿದ್ದು, ಖನಿಜ ಹಕ್ಕುಗಳು ಮತ್ತು ಖನಿಜ ಸಂಪತ್ತು ಹೊಂದಿರುವ ಭೂಮಿಯ ಮೇಲೆ ರಾಜ್ಯ ಸರ್ಕಾರಗಳು ಹೊಸ ತೆರಿಗೆ, ಸೆಸ್ ಅಥವಾ ಇತರ ಶುಲ್ಕ ವಿಧಿಸುವ ಅಧಿಕಾರಕ್ಕೆ ನಿರ್ಬಂಧ ವಿಧಿಸುವುದು ಇದರ ಪ್ರಮುಖ ಅಂಶವಾಗಿದೆ. ಕೇಂದ್ರ ಸರ್ಕಾರದ ಪ್ರಕಾರ, ದೇಶಾದ್ಯಂತ ಖನಿಜ ತೆರಿಗೆ ವ್ಯವಸ್ಥೆಯಲ್ಲಿ ಏಕರೂಪತೆ ತರುವುದು ಮತ್ತು ಗಣಿಗಾರಿಕೆ ಕ್ಷೇತ್ರದಲ್ಲಿ ಅನಿಶ್ಚಿತತೆ ಕಡಿಮೆ ಮಾಡುವುದು ಇದರ ಉದ್ದೇಶ.
ಆದರೆ ಖನಿಜ ಸಂಪತ್ತಿನಿಂದ ಹೆಚ್ಚಿನ ಆದಾಯ ಪಡೆಯುವ ರಾಜ್ಯಗಳು ಇದನ್ನು ಒಕ್ಕೂಟ ವ್ಯವಸ್ಥೆ ಮತ್ತು ರಾಜ್ಯಗಳ ಆರ್ಥಿಕ ಸ್ವಾಯತ್ತತೆಗೆ ಧಕ್ಕೆ ತರುವ ಕ್ರಮ ಎಂದು ವಿರೋಧಿಸಿವೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಕಾಯ್ದೆಯನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ಗಣಿಗಾರಿಕೆಯಿಂದ ದೊರೆಯುವ ಆದಾಯ ರಾಜ್ಯದ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಪ್ರಮುಖ ಆಧಾರವಾಗಿದ್ದು, ಹೊಸ ಕಾನೂನಿನಿಂದ ರಾಜ್ಯಕ್ಕೆ ದೊಡ್ಡ ಪ್ರಮಾಣದ ಆದಾಯ ನಷ್ಟವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಜಾರ್ಖಂಡ್‌ನಲ್ಲಿ ಖನಿಜ ಸಂಪನ್ಮೂಲಗಳ ಮೇಲಿನ ತೆರಿಗೆ ಮತ್ತು ಸೆಸ್ ಮೂಲಕ ರಾಜ್ಯಕ್ಕೆ ದೊರೆಯುವ ಆದಾಯಕ್ಕೆ ಹೊಸ ಕಾನೂನು ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಣಕಾಸಿನ ಸ್ವಾಯತ್ತತೆಯನ್ನು ದುರ್ಬಲಗೊಳಿಸುವ ಯಾವುದೇ ಕ್ರಮವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಸೊರೇನ್ ಸ್ಪಷ್ಟಪಡಿಸಿದ್ದಾರೆ. ಕಾಯ್ದೆಯ ವಿರುದ್ಧ ಕಾನೂನು ಮತ್ತು ಸಂವಿಧಾನಾತ್ಮಕ ಮಾರ್ಗದಲ್ಲೂ ಹೋರಾಟ ನಡೆಸುವುದಾಗಿ ಜಾರ್ಖಂಡ್ ಸರ್ಕಾರದ ಪರವಾಗಿ ಹೇಳಿಕೆಗಳು ಬಂದಿವೆ.
ಇದನ್ನೂ ಓದಿ : ದೆಹಲಿ ರೈಲು ಮಾರ್ಗಗಳಲ್ಲಿದ್ದ 6,333 ಟನ್ ಹಳೆಯ ತ್ಯಾಜ್ಯ ತೆರವು: ಎಂಸಿಡಿ–ರೈಲ್ವೆ ಜಂಟಿ ಕಾರ್ಯಾಚರಣೆ
SKM: ಖನಿಜ ಸಂಪತ್ತು ಜನರದ್ದು, ಕಾರ್ಪೊರೇಟ್‌ಗಳದ್ದಲ್ಲ
ಇದೇ ವೇಳೆ ಸಂಯುಕ್ತ ಕಿಸಾನ್ ಮೋರ್ಚಾ (SKM) ಕೂಡ ಹೊಸ ಗಣಿ ಕಾಯ್ದೆಯ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಆಗಸ್ಟ್ 31ರಂದು ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿದ SKM, ಖನಿಜ ಸಂಪತ್ತಿನಿಂದ ರಾಜ್ಯಗಳಿಗೆ ಸಿಗುವ ಆದಾಯದ ಹಕ್ಕನ್ನು ಕಡಿತಗೊಳಿಸುವುದರಿಂದ ಗ್ರಾಮೀಣ ಅಭಿವೃದ್ಧಿ, ರೈತರು, ಆದಿವಾಸಿಗಳು ಮತ್ತು ಗಣಿಗಾರಿಕೆ ಪ್ರದೇಶಗಳ ಜನರ ಹಿತಾಸಕ್ತಿಗೆ ಹಾನಿಯಾಗಲಿದೆ ಎಂದು ಹೇಳಿದೆ.
ಖನಿಜ ಸಂಪತ್ತು ದೇಶದ ನೈಸರ್ಗಿಕ ಸಂಪನ್ಮೂಲವಾಗಿದ್ದು, ಅದರ ಪ್ರಯೋಜನ ಸ್ಥಳೀಯ ಜನಸಮುದಾಯ ಮತ್ತು ರಾಜ್ಯಗಳಿಗೆ ದೊರೆಯಬೇಕು ಎಂಬುದು SKMನ ನಿಲುವಾಗಿದೆ. ರಾಜ್ಯಗಳ ಆದಾಯದ ಮೂಲವನ್ನು ದುರ್ಬಲಗೊಳಿಸಿ ಖನಿಜ ವಲಯದ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸುವ ಕ್ರಮ ಅಂತಿಮವಾಗಿ ದೊಡ್ಡ ಗಣಿಗಾರಿಕೆ ಕಂಪನಿಗಳಿಗೆ ಅನುಕೂಲ ಮಾಡಿಕೊಡಬಹುದು ಎಂದು ಸಂಘಟನೆ ಆರೋಪಿಸಿದೆ.
ಗಣಿಗಾರಿಕೆ ನಡೆಯುವ ಪ್ರದೇಶಗಳಲ್ಲಿ ಭೂಮಿ ಕಳೆದುಕೊಳ್ಳುವುದು, ಸ್ಥಳಾಂತರ, ಪರಿಸರ ಹಾನಿ ಹಾಗೂ ಜೀವನೋಪಾಯದ ಮೇಲೆ ಪರಿಣಾಮ ಎದುರಿಸುವವರು ಸ್ಥಳೀಯ ರೈತರು, ಆದಿವಾಸಿಗಳು ಮತ್ತು ಗ್ರಾಮೀಣ ಸಮುದಾಯಗಳಾಗಿದ್ದಾರೆ. ಹೀಗಾಗಿ ಖನಿಜ ಸಂಪತ್ತಿನ ಆದಾಯವನ್ನು ಸ್ಥಳೀಯ ಅಭಿವೃದ್ಧಿ, ಪುನರ್ವಸತಿ ಮತ್ತು ಜನಕಲ್ಯಾಣಕ್ಕೆ ಬಳಸುವ ರಾಜ್ಯಗಳ ಸಾಮರ್ಥ್ಯವನ್ನು ಕಡಿಮೆ ಮಾಡಬಾರದು ಎಂದು SKM ಒತ್ತಾಯಿಸಿದೆ.
2024ರಲ್ಲಿ ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಖನಿಜ ಹಕ್ಕುಗಳು ಮತ್ತು ಖನಿಜಭರಿತ ಭೂಮಿಗೆ ತೆರಿಗೆ ವಿಧಿಸುವ ರಾಜ್ಯಗಳ ಅಧಿಕಾರಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿತ್ತು. ಅದರ ಬಳಿಕ ರಾಜ್ಯಗಳು ತಮ್ಮ ಖನಿಜ ಸಂಪನ್ಮೂಲಗಳಿಂದ ಹೆಚ್ಚುವರಿ ಆದಾಯ ಪಡೆಯುವ ದಾರಿ ತೆರೆದಿತ್ತು. ಇದೀಗ ಕೇಂದ್ರದ ಹೊಸ ಕಾನೂನು ಆ ಅಧಿಕಾರಕ್ಕೆ ಮಿತಿ ವಿಧಿಸುವ ಪ್ರಯತ್ನವಾಗಿದೆ ಎಂಬುದು ವಿರೋಧ ಪಕ್ಷಗಳು ಮತ್ತು ರಾಜ್ಯಗಳ ವಾದ.
ಕೇಂದ್ರ ಸರ್ಕಾರ ಮಾತ್ರ ರಾಜ್ಯಗಳ ಆರ್ಥಿಕ ಸ್ವಾಯತ್ತತೆಯನ್ನು ಕಸಿಯುವ ಉದ್ದೇಶ ಕಾಯ್ದೆಗೆ ಇಲ್ಲ ಎಂದು ಹೇಳಿದೆ. ವಿವಿಧ ರಾಜ್ಯಗಳಲ್ಲಿ ವಿಭಿನ್ನ ತೆರಿಗೆ ಮತ್ತು ಸೆಸ್‌ಗಳಿಂದ ಗಣಿಗಾರಿಕೆ ವೆಚ್ಚ ಹೆಚ್ಚಾಗುವುದನ್ನು ತಪ್ಪಿಸಿ, ಖನಿಜ ವಲಯದಲ್ಲಿ ಸ್ಥಿರತೆ ಮತ್ತು ಏಕರೂಪತೆ ತರುವುದೇ ಉದ್ದೇಶ ಎಂದು ಕೇಂದ್ರ ಸ್ಪಷ್ಟಪಡಿಸಿದೆ.
ಆದರೆ ಜಾರ್ಖಂಡ್, ಕೇರಳ ಸೇರಿದಂತೆ ಹಲವು ರಾಜ್ಯಗಳ ವಿರೋಧ ಹಾಗೂ SKMನ ಆಕ್ಷೇಪದಿಂದಾಗಿ ಗಣಿ ಕಾಯ್ದೆ ತಿದ್ದುಪಡಿ ಇದೀಗ ಕೇಂದ್ರ–ರಾಜ್ಯ ಸಂಬಂಧ, ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಹಕ್ಕು ಮತ್ತು ಕಾರ್ಪೊರೇಟ್ ಗಣಿಗಾರಿಕೆಯ ಪ್ರಶ್ನೆಯನ್ನು ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ತಂದಿದೆ.
ಇದನ್ನೂ ನೋಡಿ : SIR | ಚುನಾವಣಾ ಆಯೋಗದ ಎಡವಟ್ಟು – ಮತದಾರರಿಗೆ ಆಪತ್ತು! Janashakthi Media
