ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಅಕ್ರಮವಾಗಿ ತಲುಪಿಸಲಾಗಿದ್ದ ಮೊಬೈಲ್ ಫೋನ್ ಹಾಗೂ ಇತರ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಹಲವು ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜೈಲಿನೊಳಗೆ ಮೊಬೈಲ್ ಬಳಕೆ ಮಾಡಿರುವ ಪ್ರಕರಣದ ತನಿಖೆ ವೇಳೆ ಈ ಸಂಗತಿ ಬೆಳಕಿಗೆ ಬಂದಿದೆ. ಪ್ರಜ್ವಲ್ ರೇವಣ್ಣ ಅವರಿಂದ ವಶಪಡಿಸಿಕೊಂಡ ಮೊಬೈಲ್ ಸೇರಿದಂತೆ ಇತರ ಸಾಧನಗಳನ್ನು ಪರಿಶೀಲಿಸಿದಾಗ ಹಲವು ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೈಲಿನೊಳಗೆ ಮೊಬೈಲ್, ಸಿಮ್ ಕಾರ್ಡ್, ಚಾರ್ಜರ್ ಮತ್ತು ಪೆನ್‌ಡ್ರೈವ್ ತಲುಪಿದ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ. ಈ ವಸ್ತುಗಳನ್ನು ಜೈಲಿನೊಳಗೆ ತಲುಪಿಸಲು ಜೈಲು ಸಿಬ್ಬಂದಿಯೊಬ್ಬರು ಸೇರಿದಂತೆ ಐವರು ಸಹಕರಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದು, ಈ ಪ್ರಕರಣದಲ್ಲಿ ಬಂಧನಗಳೂ ನಡೆದಿವೆ. ಮೊಬೈಲ್ ಮತ್ತು ಸಿಮ್‌ಗಾಗಿ ಪ್ರಜ್ವಲ್ ರೇವಣ್ಣ ಅವರು ₹1 ಲಕ್ಷ ಪಾವತಿಸಿದ್ದರು ಎಂಬ ಆರೋಪವೂ ತನಿಖೆಯಲ್ಲಿ ಕೇಳಿಬಂದಿದೆ.
ಇದನ್ನೂ ಓದಿ : ವೃದ್ಧ ಮತದಾರರ ಎಸ್‌ಐಆರ್ ವಿಚಾರಣೆ: ಕುಟುಂಬಸ್ಥರೂ ಹಾಜರಾಗಲು ಅವಕಾಶ
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಂತಹ ಭದ್ರತಾ ವ್ಯವಸ್ಥೆ ಇರುವ ಜೈಲಿನೊಳಗೆ ನಿಷೇಧಿತ ಮೊಬೈಲ್ ಹೇಗೆ ತಲುಪಿತು ಎಂಬುದು ಇದೀಗ ಪ್ರಮುಖ ಪ್ರಶ್ನೆಯಾಗಿದೆ. ಜೈಲು ಸಿಬ್ಬಂದಿಯ ಸಹಕಾರವಿಲ್ಲದೆ ಈ ರೀತಿಯ ವಸ್ತುಗಳು ಒಳಗೆ ಹೋಗಲು ಸಾಧ್ಯವೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಅವರನ್ನು ಈಗಾಗಲೇ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಜೈಲಿನಲ್ಲಿದ್ದಾಗ ಮೊಬೈಲ್ ಬಳಸಿದ ಆರೋಪದ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದನಿಗೆ ಜೈಲಿನೊಳಗೆ ಮೊಬೈಲ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳು ತಲುಪಿರುವುದು ಕಾರಾಗೃಹದ ಭದ್ರತಾ ವ್ಯವಸ್ಥೆಯ ಮೇಲೆಯೇ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಇದನ್ನೂ ನೋಡಿ : SIR | ಚುನಾವಣಾ ಆಯೋಗದ ಎಡವಟ್ಟು – ಮತದಾರರಿಗೆ ಆಪತ್ತು! Janashakthi Media
