ಕೊಲ್ಕತ್ತಾ: ಪಶ್ಚಿಮ ಬಂಗಾಳದ ಸರ್ಕಾರಿ ವಿಶ್ವವಿದ್ಯಾಲಯಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಒಂದು ವಿಶ್ವವಿದ್ಯಾಲಯದಿಂದ ಮತ್ತೊಂದು ವಿಶ್ವವಿದ್ಯಾಲಯಕ್ಕೆ ವರ್ಗಾವಣೆ ಮಾಡಲು ಅವಕಾಶ ಕಲ್ಪಿಸುವ ಮಸೂದೆಯನ್ನು ರಾಜ್ಯ ವಿಧಾನಸಭೆ ಅಂಗೀಕರಿಸಿದೆ. ‘ವೆಸ್ಟ್ ಬೆಂಗಾಲ್ ಯುನಿವರ್ಸಿಟೀಸ್ ಆ್ಯಂಡ್ ಕಾಲೇಜಸ್ (ಅಡ್ಮಿನಿಸ್ಟ್ರೇಷನ್ ಆ್ಯಂಡ್ ರೆಗ್ಯುಲೇಷನ್) ತಿದ್ದುಪಡಿ ಮಸೂದೆ–2026’ಕ್ಕೆ ವಿಧಾನಸಭೆಯಲ್ಲಿ ಧ್ವನಿಮತದ ಮೂಲಕ ಅನುಮೋದನೆ ದೊರೆತಿದೆ. ವಿಶ್ವವಿದ್ಯಾಲಯ
ಮಸೂದೆಯ ಪ್ರಕಾರ, ರಾಜ್ಯ ಸರ್ಕಾರದ ಸಮಾಲೋಚನೆಯೊಂದಿಗೆ ಆಡಳಿತಾತ್ಮಕ ಕಾರಣಗಳನ್ನು ಮುಂದಿಟ್ಟು ಸರ್ಕಾರಿ ವಿಶ್ವವಿದ್ಯಾಲಯಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಬೇರೆ ವಿಶ್ವವಿದ್ಯಾಲಯಗಳಿಗೆ ವರ್ಗಾವಣೆ ಮಾಡಲು ಅವಕಾಶ ಸಿಗಲಿದೆ. ಈ ಮೂಲಕ ಪ್ರಸ್ತುತ ಒಂದು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿದ್ದ ಸಿಬ್ಬಂದಿ ವರ್ಗಾವಣೆ ವ್ಯವಸ್ಥೆಯನ್ನು ಅಂತರ್ವಿಶ್ವವಿದ್ಯಾಲಯ ಮಟ್ಟಕ್ಕೂ ವಿಸ್ತರಿಸಲಾಗಿದೆ. ರಾಜ್ಯದಾದ್ಯಂತ 31 ಸರ್ಕಾರಿ ವಿಶ್ವವಿದ್ಯಾಲಯಗಳ ಸಿಬ್ಬಂದಿಗೆ ಈ ವ್ಯವಸ್ಥೆ ಅನ್ವಯವಾಗಲಿದೆ.
ಹೊಸ ಹಾಗೂ ಸಿಬ್ಬಂದಿ ಕೊರತೆ ಎದುರಿಸುತ್ತಿರುವ ವಿಶ್ವವಿದ್ಯಾಲಯಗಳಿಗೆ ಅನುಭವಿ ಪ್ರಾಧ್ಯಾಪಕರು ಮತ್ತು ಇತರ ಸಿಬ್ಬಂದಿಯನ್ನು ಕಳುಹಿಸುವ ಮೂಲಕ ಶಿಕ್ಷಣದ ಗುಣಮಟ್ಟ ಹಾಗೂ ಆಡಳಿತಾತ್ಮಕ ಕಾರ್ಯಕ್ಷಮತೆಯನ್ನು ಸುಧಾರಿಸಬಹುದು ಎಂಬುದು ಸರ್ಕಾರದ ವಾದವಾಗಿದೆ. ಜಾರ್ಗ್ರಾಮ್, ಕೂಚ್ಬೆಹಾರ್ ಸೇರಿದಂತೆ ಹೊಸ ವಿಶ್ವವಿದ್ಯಾಲಯಗಳಿಗೆ ಅಗತ್ಯವಿರುವ ಅನುಭವಿ ಮಾನವ ಸಂಪನ್ಮೂಲವನ್ನು ಒದಗಿಸುವ ಉದ್ದೇಶವೂ ಇದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.
ಇದನ್ನೂ ಓದಿ : ಮಹಾರಾಷ್ಟ್ರ | ಡಹಾಣುವಿನಲ್ಲಿ ವಿದ್ಯುತ್ ದರ ಏರಿಕೆ, ಸ್ಮಾರ್ಟ್ ಮೀಟರ್ ವಿರುದ್ಧ ಸಿಪಿಐ(ಎಂ) ಭಾರಿ ಪ್ರತಿಭಟನೆ
ಆದರೆ ಮಸೂದೆಗೆ ಸಿಪಿಐ(ಎಂ) ಸೇರಿದಂತೆ ಎಡಪಕ್ಷಗಳು ಹಾಗೂ ಹಲವು ವಿಶ್ವವಿದ್ಯಾಲಯಗಳ ಶಿಕ್ಷಕರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ವಿಶ್ವವಿದ್ಯಾಲಯಗಳ ಸ್ವಾಯತ್ತತೆಗೆ ಇದು ಧಕ್ಕೆ ಉಂಟುಮಾಡಬಹುದು ಮತ್ತು ಸರ್ಕಾರಕ್ಕೆ ಶಿಕ್ಷಕರು ಹಾಗೂ ಸಿಬ್ಬಂದಿಯನ್ನು ವರ್ಗಾವಣೆ ಮಾಡುವ ಹೆಚ್ಚಿನ ಅಧಿಕಾರ ನೀಡುವುದರಿಂದ ಉದ್ಯೋಗದ ಭದ್ರತೆ ಮೇಲೆ ಪರಿಣಾಮ ಬೀರಬಹುದು ಎಂದು ವಿರೋಧ ವ್ಯಕ್ತಪಡಿಸಲಾಗಿದೆ. ಜಾದವ್ಪುರ ವಿಶ್ವವಿದ್ಯಾಲಯ ಶಿಕ್ಷಕರ ಸಂಘ (JUTA) ಹಾಗೂ ಇತರ ಶಿಕ್ಷಕರ ಸಂಘಟನೆಗಳೂ ಮಸೂದೆಯನ್ನು ಟೀಕಿಸಿವೆ.
ಸಿಪಿಐ(ಎಂ)ನ ಆಕ್ಷೇಪದ ಪ್ರಮುಖ ಅಂಶವೆಂದರೆ, ವಿಶ್ವವಿದ್ಯಾಲಯಗಳ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಸ್ವಾಯತ್ತತೆಯನ್ನು ದುರ್ಬಲಗೊಳಿಸುವ ರೀತಿಯಲ್ಲಿ ಸರ್ಕಾರಕ್ಕೆ ಅಧಿಕಾರ ಕೇಂದ್ರೀಕರಿಸುವ ಅಪಾಯವಿದೆ ಎಂಬುದು. ವರ್ಗಾವಣೆ ಅಧಿಕಾರವನ್ನು ಬಳಸಿಕೊಂಡು ಸರ್ಕಾರಕ್ಕೆ ಇಷ್ಟವಿಲ್ಲದ ಅಥವಾ ವಿರೋಧ ವ್ಯಕ್ತಪಡಿಸುವ ಪ್ರಾಧ್ಯಾಪಕರ ಮೇಲೆ ಒತ್ತಡ ಹೇರುವ ಸಾಧ್ಯತೆಯೂ ಇದೆ ಎಂಬ ಆತಂಕವನ್ನು ಎಡಪಕ್ಷಗಳು ವ್ಯಕ್ತಪಡಿಸಿವೆ.
ಮಸೂದೆಯಡಿ ವರ್ಗಾವಣೆಯಾಗುವ ಸಿಬ್ಬಂದಿಗೆ ತಮ್ಮ ಮೂಲ ವಿಶ್ವವಿದ್ಯಾಲಯದಲ್ಲಿನ ಹುದ್ದೆಯೊಂದಿಗೆ ಸಂಬಂಧ ಉಳಿಸಿಕೊಳ್ಳುವ ಅವಕಾಶವಿದ್ದು, ಹೊಸ ಸಂಸ್ಥೆಯಲ್ಲಿ ವಿಲೀನಗೊಳ್ಳಲು ಒಪ್ಪಿಕೊಂಡರೆ ನೇಮಕಾತಿಯ ದಿನಾಂಕದ ಆಧಾರದ ಮೇಲೆ ಸೇವಾ ಜ್ಯೇಷ್ಠತೆಯನ್ನು ಪರಿಗಣಿಸಲಾಗುತ್ತದೆ. ವರ್ಗಾವಣೆಯ ಸಂದರ್ಭದಲ್ಲಿ ವರ್ಗಾವಣೆ ಭತ್ಯೆ ಹಾಗೂ ಸ್ಥಳಾಂತರ ವೆಚ್ಚದ ಮರುಪಾವತಿಗೂ ಅವಕಾಶ ಕಲ್ಪಿಸಲಾಗಿದೆ.
ವಿಧಾನಸಭೆಯಲ್ಲಿ ಮಸೂದೆ ಕುರಿತ ಚರ್ಚೆಯ ಸಂದರ್ಭದಲ್ಲಿ ಸರ್ಕಾರದ ಕ್ರಮವನ್ನು ವಿರೋಧಿಸಿದ ಶಿಕ್ಷಕರು ಮತ್ತು ಎಡಪಕ್ಷಗಳ ವಿರುದ್ಧ ಮುಖ್ಯಮಂತ್ರಿ ಶುಭೇಂದು ಅಧಿಕಾರಿ ತೀವ್ರ ಟೀಕೆ ಮಾಡಿದರು. ಹೊಸ ಕಾನೂನು ಶಿಕ್ಷಣ ಸಂಸ್ಥೆಗಳಲ್ಲಿ ಅನುಭವಿ ಸಿಬ್ಬಂದಿಯ ಸಮಾನ ಹಂಚಿಕೆಗೆ ನೆರವಾಗಲಿದೆ ಎಂದು ಅವರು ಸಮರ್ಥಿಸಿಕೊಂಡರು. ಆದರೆ ವಿರೋಧ ಪಕ್ಷಗಳು ಮತ್ತು ಶಿಕ್ಷಕರ ಸಂಘಟನೆಗಳು ಇದನ್ನು ವಿಶ್ವವಿದ್ಯಾಲಯಗಳ ಸ್ವಾಯತ್ತತೆ ಹಾಗೂ ಶೈಕ್ಷಣಿಕ ಸ್ವಾತಂತ್ರ್ಯದ ದೃಷ್ಟಿಯಿಂದ ಗಂಭೀರ ಬೆಳವಣಿಗೆ ಎಂದು ಬಣ್ಣಿಸಿವೆ.
ಇದನ್ನೂ ನೋಡಿ : “ಆಪರೇಷನ್ ನಂತರ ಗಂಭೀರ ಸಮಸ್ಯೆ! ವೈದ್ಯರ ನಿರ್ಲಕ್ಷ್ಯವೇ?” Janashakthi Media
