ಕಾರ್ಮಿಕರಿಗೆ ಸಬ್ಸಿಡಿ ದರದಲ್ಲಿ ನೀಡಬೇಕಿದ್ದ ಅಕ್ಕಿ ವ್ಯಾಪಾರಿಗಳಿಗೆ ಮಾರಾಟ? ₹28.49 ಕೋಟಿ ನಷ್ಟ ಆರೋಪ; ಸಿಬಿಐ ತನಿಖೆ

ನವದೆಹಲಿ : ಆರ್ಥಿಕವಾಗಿ ಹಿಂದುಳಿದವರು, ಕಾರ್ಮಿಕರು, ವಲಸೆ ಕಾರ್ಮಿಕರು ಹಾಗೂ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಅಕ್ಕಿ ಒದಗಿಸುವ ಉದ್ದೇಶದಿಂದ ನೀಡಲಾಗಿದ್ದ ಸಬ್ಸಿಡಿ ಅಕ್ಕಿಯನ್ನು ಖಾಸಗಿ ವ್ಯಾಪಾರಿಗಳಿಗೆ ತಿರುಗಿಸಲಾಗಿದೆ ಎಂಬ ಆರೋಪದ ಕುರಿತು ಕೇಂದ್ರ ತನಿಖಾ ದಳ (ಸಿಬಿಐ) ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದೆ. ಈ ಅಕ್ರಮದಿಂದ ಭಾರತೀಯ ಆಹಾರ ನಿಗಮಕ್ಕೆ (ಎಫ್‌ಸಿಐ) ಸುಮಾರು ₹28.49 ಕೋಟಿ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದೆ. ಕಾರ್ಮಿಕರಿಗೆ 

2025–26ನೇ ಸಾಲಿನ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ (ಒಎಂಎಸ್‌ಎಸ್‌) ಎಫ್‌ಸಿಐ ದೆಹಲಿ ವಲಯವು ಈಶಾನ್ಯ ಪ್ರಾದೇಶಿಕ ಕೃಷಿ ಮಾರುಕಟ್ಟೆ ನಿಗಮಕ್ಕೆ (ನೆರಾಮ್ಯಾಕ್) ಒಟ್ಟು 62,000 ಮೆಟ್ರಿಕ್‌ ಟನ್‌ ಅಕ್ಕಿ ಹಂಚಿಕೆ ಮಾಡಿತ್ತು. ಏಪ್ರಿಲ್‌ 13ರಿಂದ ಮೇ 15ರ ನಡುವೆ ಈ ಹಂಚಿಕೆ ನಡೆದಿತ್ತು ಎಂದು ಸಿಬಿಐ ತಿಳಿಸಿದೆ.

ನೆರಾಮ್ಯಾಕ್ ವಾರಕ್ಕೆ 31,000 ಮೆಟ್ರಿಕ್‌ ಟನ್‌ ಅಕ್ಕಿ ಹಂಚಿಕೆ ಮಾಡುವಂತೆ ಮನವಿ ಮಾಡಿತ್ತು. ದೆಹಲಿಯ ಸಾಮಾನ್ಯ ಜನರು, ದಿನಗೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಹಾಗೂ ಪಡಿತರ ಚೀಟಿ ಹೊಂದಿರದವರಿಗೆ ಕೈಗೆಟುಕುವ ದರದಲ್ಲಿ ಅಕ್ಕಿ ದೊರೆಯುವಂತೆ ಮಾಡುವುದೇ ಉದ್ದೇಶ ಎಂದು ಮನವಿಯಲ್ಲಿ ತಿಳಿಸಲಾಗಿತ್ತು.

ಆದರೆ, ಸಿಬಿಐ ಆರೋಪದ ಪ್ರಕಾರ, ಉದ್ದೇಶಿತ ಫಲಾನುಭವಿಗಳಿಗೆ ಅಕ್ಕಿ ತಲುಪಿಸುವ ಬದಲು ನೆರಾಮ್ಯಾಕ್‌ ಮೂರು ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ವ್ಯಾಪಾರಿಗಳಿಗೆ ಅಕ್ಕಿ ಎತ್ತಿಕೊಳ್ಳಲು ಅವಕಾಶ ಕಲ್ಪಿಸಿತ್ತು. ಪ್ರಕರಣದಲ್ಲಿ ಎಂಟು ಆರೋಪಿಗಳನ್ನು ಹೆಸರಿಸಲಾಗಿದ್ದು, ಅಸ್ಸಾಂ ಮೂಲದ ಎರಡು ಕಂಪನಿಗಳು ಹಾಗೂ ಕೋಲ್ಕತ್ತಾ ಮೂಲದ ಸಂಸ್ಥೆಯೂ ಸೇರಿವೆ. ಕಾರ್ಮಿಕರಿಗೆ 

ಸಬ್ಸಿಡಿ ದರದಲ್ಲಿ ಅಕ್ಕಿ ಹಂಚಿಕೆ

ಸುಮಾರು 50,645 ಮೆಟ್ರಿಕ್‌ ಟನ್‌ ಅಕ್ಕಿಯನ್ನು ಪ್ರತಿ ಟನ್‌ಗೆ ₹23,200ರ ದರದಲ್ಲಿ ಎತ್ತಿಕೊಳ್ಳಲಾಗಿದೆ ಎಂದು ಸಿಬಿಐ ಆರೋಪಿಸಿದೆ. ಅದೇ ಸಂದರ್ಭದಲ್ಲಿ ನಿಗದಿತ ಮೀಸಲು ದರ ಪ್ರತಿ ಟನ್‌ಗೆ ₹26,900 ಆಗಿತ್ತು ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ. ಈ ದರ ವ್ಯತ್ಯಾಸದಿಂದ ಎಫ್‌ಸಿಐಗೆ ಸುಮಾರು ₹28.49 ಕೋಟಿ ನಷ್ಟವಾಗಿದೆ ಎಂಬುದು ತನಿಖಾ ಸಂಸ್ಥೆಯ ಆರೋಪ.

ನೆರಾಮ್ಯಾಕ್‌ಗೆ ಇಂತಹ ರಿಯಾಯಿತಿ ದರದಲ್ಲಿ, ಹರಾಜು ಪ್ರಕ್ರಿಯೆ ಇಲ್ಲದೆ ಅಕ್ಕಿ ಪಡೆಯಲು ಅರ್ಹತೆ ಇರಲಿಲ್ಲ ಎಂಬುದನ್ನೂ ಸಿಬಿಐ ತನಿಖೆಯಲ್ಲಿ ಉಲ್ಲೇಖಿಸಲಾಗಿದೆ. ಸಂಬಂಧಿತ ನೀತಿಯ ಪ್ರಕಾರ ಇಂತಹ ಹಂಚಿಕೆ ರಾಜ್ಯ ಸರ್ಕಾರಗಳು ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿತ್ತು ಎಂದು ತನಿಖಾ ಸಂಸ್ಥೆ ಹೇಳಿದೆ. ಕಾರ್ಮಿಕರಿಗೆ 

ಇದನ್ನೂ ಓದಿ :ದೆಹಲಿ ಮತದಾರರ ಪಟ್ಟಿಯಲ್ಲಿ ಭಾರೀ ಕಡಿತ: ಮೂವರಲ್ಲಿ ಒಬ್ಬರ ಹೆಸರು ಕರಡು ಪಟ್ಟಿಯಿಂದ ಹೊರಗೆ

ವ್ಯಾಪಾರಿಗಳ ಮೂಲಕ ಅಕ್ಕಿ ಎತ್ತುವ ಆರೋಪ

ಸಿಬಿಐ ಪ್ರಕಾರ, ಖಾಸಗಿ ಸಂಸ್ಥೆಗಳ ಪ್ರತಿನಿಧಿಗಳು ದೆಹಲಿ–ಎನ್‌ಸಿಆರ್‌ನ ವ್ಯಾಪಾರಿಗಳನ್ನು ಸಂಪರ್ಕಿಸಿ, ನೆರಾಮ್ಯಾಕ್‌ ಖಾತೆಗೆ ಹಣ ಪಾವತಿಸುವಂತೆ ಮಾಡಿ ಎಫ್‌ಸಿಐ ಗೋದಾಮುಗಳಿಂದ ಅಕ್ಕಿ ಎತ್ತಿಸಿಕೊಳ್ಳುತ್ತಿದ್ದರು. ಗೇವ್ರಾ, ಮಯಾಪುರಿ ಮತ್ತು ನರೇಲಾದ ಎಫ್‌ಸಿಐ ಗೋದಾಮುಗಳಿಂದ ಅಕ್ಕಿ ಸಾಗಿಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ವ್ಯಾಪಾರಿಗಳು ಅಕ್ಕಿಯನ್ನು ಮತ್ತಷ್ಟು ವ್ಯಾಪಾರಿಗಳಿಗೆ ಮಾರಾಟ ಮಾಡಿ ಲಾಭ ಗಳಿಸಿದ್ದಾರೆ ಎಂಬ ಆರೋಪವೂ ಇದೆ. ಪ್ರತಿ ಕೆ.ಜಿಗೆ ಕಮಿಷನ್‌ ಪಡೆಯಲಾಗುತ್ತಿತ್ತು ಎಂದು ಸಿಬಿಐ ಆರೋಪಿಸಿದೆ.

ಈ ಪ್ರಕರಣವು ಎಫ್‌ಸಿಐ ದೆಹಲಿ ವಲಯದ ಮಾಜಿ ಅಧಿಕಾರಿಗಳು, ನೆರಾಮ್ಯಾಕ್‌ ಅಧಿಕಾರಿಗಳು ಹಾಗೂ ಖಾಸಗಿ ವ್ಯಾಪಾರಿಗಳ ವಿರುದ್ಧ ದಾಖಲಾಗಿದೆ. ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯಿಂದ ಬಂದ ವರದಿ, ಎಫ್‌ಸಿಐ ಜಾಗೃತ ದಳದ ಪರಿಶೀಲನೆ ಹಾಗೂ ವಿಶೇಷ ಸಮಿತಿಯ ವರದಿಗಳ ಆಧಾರದ ಮೇಲೆ ಸಿಬಿಐ ತನಿಖೆ ಆರಂಭಿಸಿದೆ. ಕಾರ್ಮಿಕರಿಗೆ 

ಇದನ್ನೂ ನೋಡಿ : ಬೈಕ್–ಆಟೊ ನೋ ಎಂಟ್ರಿ | ಫ್ಲೈಓವರ್ ಯಾರಿಗಾಗಿ? ವೇಗದ ಕಾರುಗಳಿಗೆ ಮಾತ್ರವಾ?ವಿಶ್ಲೇಷಣೆ: ಗುರುರಾಜ ದೇಸಾಯಿ

Donate Janashakthi Media

Leave a Reply

Your email address will not be published. Required fields are marked *