ಗ್ಯಾರಂಟಿ ಯೋಜನೆಗಳ ಪಾರದರ್ಶಕ ಅನುಷ್ಠಾನಕ್ಕೆ ಗ್ರಾಮ–ವಾರ್ಡ್ ಮಟ್ಟದಲ್ಲಿ 6 ಸದಸ್ಯರ ಸಮಿತಿ

ಮಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನವನ್ನು ಮತ್ತಷ್ಟು ಪಾರದರ್ಶಕಗೊಳಿಸುವ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಆರು ಸದಸ್ಯರನ್ನು ಒಳಗೊಂಡ ‘ಗ್ರಾಮ ಗ್ಯಾರಂಟಿ ಸಮಿತಿ’ ರಚಿಸಲಾಗುವುದು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್‌.ಎಂ. ರೇವಣ್ಣ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಫಲಾನುಭವಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದರ ಜೊತೆಗೆ, ಯೋಜನೆಗಳ ಮರುಪರಿಶೀಲನೆಯನ್ನೂ ಸಮಿತಿಗಳ ಮೂಲಕ ನಡೆಸಲಾಗುವುದು ಎಂದು ಹೇಳಿದರು.

ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಚನೆಯಾಗುವ ಸಮಿತಿಯಲ್ಲಿ ಇಬ್ಬರು ಮಹಿಳೆಯರಿಗೆ ಅವಕಾಶ ನೀಡಲಾಗುತ್ತದೆ. ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗದಿಂದ ತಲಾ ಒಬ್ಬರನ್ನು ಸದಸ್ಯರನ್ನಾಗಿ ನೇಮಿಸಲಾಗುವುದು ಎಂದು ರೇವಣ್ಣ ವಿವರಿಸಿದರು.

ಗೃಹಲಕ್ಷ್ಮಿ ಫಲಾನುಭವಿಗಳ ಮನೆಮನೆ ಪರಿಶೀಲನೆ

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಅರ್ಹತೆಯನ್ನು ಪರಿಶೀಲಿಸಲು ಮನೆಮನೆ ಸಮೀಕ್ಷೆ ನಡೆಸಲಾಗುವುದು. ಈ ಸಂದರ್ಭದಲ್ಲಿ ಫಲಾನುಭವಿಗಳ ದಾಖಲೆಗಳನ್ನು ಪರಿಶೀಲಿಸಿ, ಅರ್ಹರಾಗಿರುವವರಿಗೆ ಅಗತ್ಯ ಅರ್ಜಿಗಳನ್ನು ಭರ್ತಿ ಮಾಡಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಫೆಬ್ರುವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಕಂತುಗಳು ಖಜಾನೆಯಿಂದ ಹಣ ಬಿಡುಗಡೆಯಾಗದ ಕಾರಣ ಬಾಕಿ ಉಳಿದಿವೆ. ಅರ್ಹ ಫಲಾನುಭವಿಗಳಿಗೆ ಈ ಬಾಕಿ ಕಂತುಗಳನ್ನು ಶೀಘ್ರದಲ್ಲೇ ಪಾವತಿಸಲಾಗುವುದು ಎಂದು ರೇವಣ್ಣ ಹೇಳಿದರು.

ಇದನ್ನೂ ಓದಿ : ‘ನಾವು ಕಳ್ಳರಲ್ಲ, ನಮ್ಮ ಹಕ್ಕಿಗಾಗಿ ಹೋರಾಡುತ್ತೇವೆ; ಗೆದ್ದೇ ಗೆಲ್ಲುತ್ತೇವೆ’: ಪ್ರಕಾಶ್ ರಾಜ್

ಮೃತರ ಖಾತೆಗೆ ಜಮೆಯಾದ ಹಣ ವಾಪಸ್

ಗ್ಯಾರಂಟಿ ಯೋಜನೆಗಳಡಿ ಮೃತಪಟ್ಟ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗಿದ್ದ ಒಟ್ಟು ₹117 ಕೋಟಿಯಲ್ಲಿ ₹30 ಕೋಟಿಯನ್ನು ಸರ್ಕಾರ ಈಗಾಗಲೇ ವಾಪಸ್ ಪಡೆದಿದೆ ಎಂದು ರೇವಣ್ಣ ಮಾಹಿತಿ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೃತರ ಖಾತೆಗಳಿಗೆ ಜಮೆಯಾಗಿದ್ದ ₹3.34 ಕೋಟಿಯಲ್ಲಿ ₹1.43 ಕೋಟಿಯನ್ನು ವಾಪಸ್ ಪಡೆಯಲಾಗಿದೆ ಎಂದು ಅವರು ತಿಳಿಸಿದರು.

₹1.47 ಲಕ್ಷ ಕೋಟಿ ಗ್ಯಾರಂಟಿ ವೆಚ್ಚ

ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳ ಮೂಲಕ ಈವರೆಗೆ ಒಟ್ಟು ₹1.47 ಲಕ್ಷ ಕೋಟಿ ಹಣವನ್ನು ಜನರಿಗೆ ತಲುಪಿಸಲಾಗಿದೆ ಎಂದು ರೇವಣ್ಣ ಹೇಳಿದರು.

ಗೃಹಲಕ್ಷ್ಮಿ ಯೋಜನೆಯಡಿ 1.23 ಕೋಟಿ ಮಹಿಳೆಯರಿಗೆ ₹76,951 ಕೋಟಿ, ಗೃಹಜ್ಯೋತಿಗೆ ₹28,759.54 ಕೋಟಿ, ಯುವನಿಧಿಗೆ ₹1,203 ಕೋಟಿ ಹಾಗೂ ಶಕ್ತಿ ಯೋಜನೆಗೆ ₹21,233 ಕೋಟಿ ವೆಚ್ಚವಾಗಿದೆ ಎಂದು ಅವರು ವಿವರಿಸಿದರು.

ಅನ್ನಭಾಗ್ಯ ಯೋಜನೆಗೆ ಪರ್ಯಾಯವಾಗಿ ಶೀಘ್ರದಲ್ಲೇ ‘ಇಂದಿರಾ ಕಿಟ್’ ವಿತರಿಸುವ ಪ್ರಸ್ತಾವನೆಯೂ ಇದೆ ಎಂದು ರೇವಣ್ಣ ತಿಳಿಸಿದರು.

ಕರಾವಳಿಗೆ ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್

ಕರಾವಳಿ ಭಾಗದಲ್ಲಿ ಸಾರ್ವಜನಿಕ ಸಾರಿಗೆಗೆ ಎದುರಾಗಿರುವ ಬಸ್‌ಗಳ ಕೊರತೆ ನಿವಾರಿಸಲು ಮಂಗಳೂರು ಮತ್ತು ಉಡುಪಿಗೆ ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಯೋಜಿಸಲಾಗುವುದು. ಇದರಿಂದ ಸಾರ್ವಜನಿಕರಿಗೆ ಸಾರಿಗೆ ಸೌಲಭ್ಯ ಮತ್ತಷ್ಟು ಸುಧಾರಿಸಲಿದೆ ಎಂದು ರೇವಣ್ಣ ಹೇಳಿದರು.

ಇದನ್ನೂ ನೋಡಿ : ಬೈಕ್–ಆಟೊ ನೋ ಎಂಟ್ರಿ | ಫ್ಲೈಓವರ್ ಯಾರಿಗಾಗಿ? ವೇಗದ ಕಾರುಗಳಿಗೆ ಮಾತ್ರವಾ?ವಿಶ್ಲೇಷಣೆ: ಗುರುರಾಜ ದೇಸಾಯಿ

Donate Janashakthi Media

Leave a Reply

Your email address will not be published. Required fields are marked *