ಬೆಂಗಳೂರು: “ನಾವೇನೋ ಕಳ್ಳರು, ಎಲ್ಲಿಂದಲೋ ಬಂದುಬಿಟ್ಟಿದ್ದೇವೆ, ಮೋಸ ಮಾಡಿ ಗುರುತಿನ ಚೀಟಿ ಪಡೆದುಕೊಂಡಿದ್ದೇವೆ ಎಂಬಂತೆ ನಮ್ಮನ್ನು ಅನುಮಾನದಿಂದ ನೋಡಲಾಗುತ್ತಿದೆ. ಇದು ನಮ್ಮ ಸ್ವಾಭಿಮಾನ ಮತ್ತು ಗೌರವಕ್ಕೆ ಧಕ್ಕೆ. ನಾವು ಕಳ್ಳರಲ್ಲ, ದೇಶದ ನಾಗರಿಕರು. ನಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದೇವೆ. ಗೆದ್ದೇ ಗೆಲ್ಲುತ್ತೇವೆ” ಎಂದು ನಟ ಪ್ರಕಾಶ್ ರಾಜ್ ಹೇಳಿದರು.
ನಗರದ ಫ್ರೀಡಂ ಪಾರ್ಕ್‌ನಲ್ಲಿ ಮಂಗಳವಾರ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ವೇದಿಕೆ ಆಯೋಜಿಸಿದ್ದ ‘ಚುನಾವಣಾ ಆಯೋಗ ಚಲೋ’ ಹೋರಾಟದ ಭಾಗವಾಗಿ ವಿಜಯನಗರ ವಿಧಾನಸಭಾ ಕ್ಷೇತ್ರದ ನರಸಿಂಹಯ್ಯ ಕಾಲೋನಿ ಬೂತ್‌ನಲ್ಲಿ ಎಸ್‌ಐಆರ್ ಸಂತ್ರಸ್ತರೊಂದಿಗೆ ಅವರು ಸಂವಾದ ನಡೆಸಿದರು.
ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಹೊಂದಿದ್ದರೂ ನಾಗರಿಕರನ್ನು ಅನುಮಾನದಿಂದ ನೋಡುವುದು ಸರಿಯಲ್ಲ. ಇದರಿಂದ ಜನರ ಸ್ವಾಭಿಮಾನ ಮತ್ತು ಗೌರವಕ್ಕೆ ಧಕ್ಕೆಯಾಗುತ್ತಿದೆ ಎಂದು ಅವರು ಹೇಳಿದರು.
“ಭಾರತ ನಮ್ಮ ಮನೆ. ನಾವು ಇಲ್ಲೇ ಹುಟ್ಟಿದವರು. ಆದರೆ ಈಗ ನಾವು ಈ ದೇಶದವರು ಎಂದು ಮತ್ತೆ ಸಾಬೀತುಪಡಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಹಾಗಾದರೆ ಸಾಬೀತುಪಡಿಸಲು ಸಾಧ್ಯವಾಗದವರನ್ನು ಎಲ್ಲಿಗೆ ಕಳುಹಿಸುತ್ತೀರಿ?” ಎಂದು ಅವರು ಪ್ರಶ್ನಿಸಿದರು.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೂ ಸುಮಾರು ಎರಡು ವರ್ಷಗಳ ಕಾಲಾವಕಾಶವಿದೆ. ಆದರೆ ಅದಕ್ಕೂ ಮುನ್ನವೇ ಇಂತಹ ಸಮಸ್ಯೆಗಳು ಎದುರಾಗಿವೆ. ಎಸ್‌ಐಆರ್‌ನಿಂದ ಸಂತ್ರಸ್ತರಾದವರೊಂದಿಗೆ ನಾವೆಲ್ಲರೂ ನಿಲ್ಲಬೇಕು. ಇದು ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟವಾಗಿ ರೂಪುಗೊಳ್ಳಲಿದೆ ಎಂದು ಪ್ರಕಾಶ್ ರಾಜ್ ಹೇಳಿದರು.
ಇದನ್ನೂ ಓದಿ : ‘ಚುನಾವಣಾ ಆಯೋಗ ಚಲೋ’: ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು ಹೋರಾಟಗಾರರ ಬಂಧನ

“ನಾವು ರಾಜಕಾರಣಿಗಳಲ್ಲ. ನಮ್ಮ ಹಕ್ಕಿಗಾಗಿ ನಾವೇ ಹೋರಾಡಬೇಕು. ಇದಕ್ಕಾಗಿ ಯಾವುದೇ ರಾಜಕೀಯ ಪಕ್ಷದ ನೆರವು ಅಗತ್ಯವಿಲ್ಲ. ನಮ್ಮ ಹಕ್ಕಿಗಾಗಿ ಒಗ್ಗಟ್ಟಾಗಿ ಹೋರಾಡೋಣ. ನಾವು ಗೆದ್ದೇ ಗೆಲ್ಲುತ್ತೇವೆ” ಎಂದು ಅವರು ಸಂತ್ರಸ್ತರಿಗೆ ಧೈರ್ಯ ತುಂಬಿದರು.
ಅಕ್ರಮವಾಗಿ ಮತದಾರರ ಪಟ್ಟಿಗೆ ಸೇರಿಸಲಾಗಿರುವ ಹೆಸರುಗಳನ್ನು ತೆಗೆದುಹಾಕುವುದಕ್ಕೆ ತಮ್ಮ ವಿರೋಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಆದರೆ, ಅರ್ಹ ನಾಗರಿಕರ ಹೆಸರುಗಳನ್ನು ಏಕೆ ತೆಗೆದುಹಾಕಬೇಕು ಎಂದು ಪ್ರಶ್ನಿಸಿದರು.
“ಈಗಾಗಲೇ ಮತದಾರರಾಗಿರುವವರೇ ಮತ್ತೆ ತಮ್ಮನ್ನು ಮತದಾರರು ಎಂದು ಸಾಬೀತುಪಡಿಸಬೇಕಾದ ಪರಿಸ್ಥಿತಿ ಏಕೆ ಬರಬೇಕು? ಎಸ್‌ಐಆರ್ ಪ್ರಕ್ರಿಯೆಯಿಂದ ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯ ಜನರು ಸಂತ್ರಸ್ತರಾಗಿದ್ದಾರೆ. ಒಂದೂವರೆ ಕೋಟಿ ಕನ್ನಡಿಗರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಅವರಲ್ಲಿ ನಾನೂ ಒಬ್ಬ” ಎಂದು ಪ್ರಕಾಶ್ ರಾಜ್ ಹೇಳಿದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಹೆಸರು ಕಳೆದುಕೊಂಡಿರುವ ಅರ್ಹ ಮತದಾರರ ಸಮಸ್ಯೆಗಳನ್ನು ಪರಿಹರಿಸಬೇಕು ಹಾಗೂ ಅವರ ಮತದಾನದ ಹಕ್ಕನ್ನು ರಕ್ಷಿಸಬೇಕು ಎಂಬುದು ಸಂವಾದದಲ್ಲಿ ಪ್ರಮುಖವಾಗಿ ಕೇಳಿಬಂದ ಒತ್ತಾಯವಾಗಿತ್ತು.
ಇದನ್ನೂ ನೋಡಿ :ಸಾಮೂಹಿಕ ಮತ ಕಗ್ಗೊಲೆ ನಡೆಸುತ್ತಿರುವ SIR ವಿರುದ್ಧ ಚುನಾವಣಾ ಆಯೋಗ ಚಲೋ ನೇರಪ್ರಸಾರ
