ಸೆ.3ರಂದು ನೈಸ್‌ ಭೂ ಸಂತ್ರಸ್ತ ರೈತರ ರಾಜ್ಯ ಸಮಾವೇಶ

ಬೆಂಗಳೂರು: ನೈಸ್‌–ಬಿಎಂಐಸಿ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ಮತ್ತು ಯೋಜನೆಯಲ್ಲಿನ ಅಕ್ರಮಗಳ ಕುರಿತು ಸ್ವತಂತ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನೈಸ್‌ ಭೂ ಸಂತ್ರಸ್ತ ರೈತರ ರಾಜ್ಯ ಸಮಾವೇಶವನ್ನು ಸೆಪ್ಟೆಂಬರ್‌ 3ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ನೈಸ್‌

ನೈಸ್‌ ಭೂ ಸಂತ್ರಸ್ತ ರೈತರ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ. ಬೆಂಗಳೂರು ಅರಮನೆ ರಸ್ತೆಯ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಶ್ರೀ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಸಮಾವೇಶ ಆರಂಭವಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠದ ತೀರ್ಪಿನ ಹಿನ್ನೆಲೆಯಲ್ಲಿ ನೈಸ್‌ ಕಂಪನಿ ಹಾಗೂ ಬಿಎಂಐಸಿ ಯೋಜನೆಗೆ ಸಂಬಂಧಿಸಿದ ವ್ಯವಹಾರಗಳ ಕುರಿತು ಸಮಗ್ರ ಮತ್ತು ಸ್ವತಂತ್ರ ತನಿಖೆ ನಡೆಸಬೇಕು. ಅಕ್ರಮಗಳು ಸಾಬೀತಾದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಬಿಎಂಐಸಿ–ನೈಸ್‌ ಪಾಲುದಾರಿಕೆ ರದ್ದುಪಡಿಸಬೇಕು ಎಂಬುದು ರೈತರ ಮತ್ತೊಂದು ಪ್ರಮುಖ ಬೇಡಿಕೆಯಾಗಿದೆ. ನೈಸ್‌ ಯೋಜನೆಯಲ್ಲಿನ ಅಕ್ರಮಗಳ ಕುರಿತು ಟಿ.ಬಿ. ಜಯಚಂದ್ರ ನೇತೃತ್ವದ ಸದನ ಸಮಿತಿ ಮಾಡಿರುವ ಶಿಫಾರಸುಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ. ನೈಸ್‌

ಇದನ್ನೂ ಓದಿ :‘ಚುನಾವಣಾ ಆಯೋಗ ಚಲೋ’: ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು ಹೋರಾಟಗಾರರ ಬಂಧನ

ಬೆಂಗಳೂರು–ಮೈಸೂರು ನಡುವೆ ನೈಸ್‌ ಸಂಸ್ಥೆಗೆ ಕೆಐಎಡಿಬಿ ಮೂಲಕ ವರ್ಗಾಯಿಸಿರುವ ಎಲ್ಲ ರೀತಿಯ ಜಮೀನುಗಳನ್ನು ಮುಟ್ಟುಗೋಲು ಹಾಕಿಕೊಂಡು, ಮೂಲ ಭೂಮಾಲೀಕರಾದ ರೈತರಿಗೆ ವಾಪಸು ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಬಿಎಂಐಸಿ ಯೋಜನೆಗಾಗಿ ಭೂಸ್ವಾಧೀನಗೊಂಡ ರೈತರ ಪಹಣಿಗಳಲ್ಲಿ ಕೆಐಎಡಿಬಿ ಅಥವಾ ನೈಸ್‌ ಹೆಸರಿನಲ್ಲಿ ಮಾಡಲಾಗಿರುವ ಇಂಡೀಕರಣವನ್ನು ತೆಗೆದುಹಾಕಬೇಕು. ಇದರಿಂದ ರೈತರ ಭೂ ದಾಖಲೆಗಳಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಲಾಗಿದೆ.

ಇದಲ್ಲದೆ, ಕಾನೂನುಬಾಹಿರವಾಗಿ ನಡೆಯುತ್ತಿದೆ ಎಂದು ಆರೋಪಿಸಲಾಗಿರುವ ನೈಸ್‌ ವರ್ತುಲ ರಸ್ತೆಯ ಟೋಲ್‌ ಸಂಗ್ರಹವನ್ನು ನಿಷೇಧಿಸಬೇಕು. ಟೋಲ್‌ ಸಂಗ್ರಹ ಸ್ಥಗಿತದಿಂದ ಪರಿಣಾಮಕ್ಕೊಳಗಾಗುವ ಕಾರ್ಮಿಕರಿಗೆ ವೈಜ್ಞಾನಿಕ ಪರಿಹಾರ ಹಾಗೂ ಪರ್ಯಾಯ ಉದ್ಯೋಗ ಒದಗಿಸಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸಿವೆ.

ನೈಸ್‌ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು, ಭೂಮಿ ಮತ್ತು ಭೂ ದಾಖಲೆಗಳನ್ನು ರೈತರಿಗೆ ಮರಳಿಸುವುದು ಹಾಗೂ ಯೋಜನೆಗೆ ಸಂಬಂಧಿಸಿದ ಅಕ್ರಮಗಳ ಕುರಿತು ಸರ್ಕಾರ ಸ್ಪಷ್ಟ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರುವುದು ಸಮಾವೇಶದ ಪ್ರಮುಖ ಉದ್ದೇಶವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ನೈಸ್‌

ಇದನ್ನೂ ನೋಡಿ : “ರಂಗಭೂಮಿ ದಿಗ್ಗಜ ಬಿ. ವಿ. ಕಾರಂತ ಸ್ಮರಣೆ” Janashakthi Media

Donate Janashakthi Media

Leave a Reply

Your email address will not be published. Required fields are marked *