ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿ ‘ಎಸ್ಐಆರ್ ವಿರೋಧಿ ಕರ್ನಾಟಕ’ ವೇದಿಕೆ ಕರೆ ನೀಡಿದ್ದ ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆ ವೇಳೆ ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು ಹೋರಾಟಗಾರರು, ಸಂತ್ರಸ್ತರು ಹಾಗೂ ನಾಗರಿಕ ಸಂಘಟನೆಗಳ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಚುನಾವಣಾ ಆಯೋಗದ ಪ್ರತಿನಿಧಿಗಳು ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಆಲಿಸಬೇಕು ಎಂದು ಸಂಘಟಕರು ಆಹ್ವಾನಿಸಿದ್ದರು. ಆದರೆ ಆಯೋಗದ ಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಚುನಾವಣಾ ಆಯೋಗದ ಕಚೇರಿಯತ್ತ ತೆರಳಲು ಮುಂದಾದರು. ಈ ಸಂದರ್ಭದಲ್ಲಿ ಪೊಲೀಸರು ಅವರನ್ನು ತಡೆದು ವಶಕ್ಕೆ ಪಡೆದರು ಎಂದು ವರದಿಯಾಗಿದೆ.
ಪ್ರತಿಭಟನೆಯಲ್ಲಿ ನಟ ಪ್ರಕಾಶ್ ರಾಜ್, ನಟ ಕಿಶೋರ್, ಹಿರಿಯ ಸಾಹಿತಿ ಎಲ್.ಎನ್. ಮುಕುಂದರಾಜ್, ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ, ದಲಿತ ಸಂಘರ್ಷ ಸಮಿತಿಯ ಮುಖಂಡ ಎನ್. ವೆಂಕಟೇಶ್, ಜನಶಕ್ತಿ ರಾಜ್ಯಾಧ್ಯಕ್ಷ ನೂರ್ ಶ್ರೀಧರ್, ಸಿಪಿಐಎಂ ಮುಖಂಡ ಜಿ.ಎನ್. ನಾಗರಾಜ, ರೈತ ನಾಯಕ ವೀರ ಸಂಗಯ್ಯ, ಹಿರಿಯ ಪತ್ರಕರ್ತೆ ವಿಜಯಮ್ಮ, ಚಿಂತಕಿ ಡಾ. ವಸುಂಧರಾ ಭೂಪತಿ ಸೇರಿದಂತೆ ವಿವಿಧ ಸಾಮಾಜಿಕ ಹಾಗೂ ಜನಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಎಸ್ಐಆರ್ ಪ್ರಕ್ರಿಯೆಯಿಂದ ಮತದಾರರ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸಮರ್ಪಕ ಕಾರಣವಿಲ್ಲದೆ ಯಾವುದೇ ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಬಾರದು. ಈಗಾಗಲೇ ಹೆಸರು ಕೈಬಿಟ್ಟಿರುವವರಿಗೆ ಮೇಲ್ಮನವಿ ಸಲ್ಲಿಸಿ ಮರುಸೇರ್ಪಡೆಗೊಳ್ಳಲು ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ : ಧಾರವಾಡದಲ್ಲಿ ‘ಸಮುದಾಯ–50’ ಕಾರ್ಯಕ್ರಮಕ್ಕೆ ಅಡ್ಡಿ: ಬಲಪಂಥೀಯರ ವಿರುದ್ಧ ಕ್ರಮಕ್ಕೆ ಆಗ್ರಹ

ಸ್ಥಳಾಂತರಗೊಂಡ ಮತದಾರರಿಗೆ ಪ್ರಸ್ತುತ ವಾಸಿಸುವ ವಿಳಾಸಕ್ಕೆ ಮತವನ್ನು ವರ್ಗಾಯಿಸಿಕೊಳ್ಳಲು ಫಾರಂ–8 ಮೂಲಕ ಅವಕಾಶ ಕಲ್ಪಿಸಬೇಕು. ನೋಟಿಸ್ ನೀಡಲಾಗುತ್ತಿರುವ 43 ಲಕ್ಷ ಮತದಾರರ ಹೆಸರುಗಳನ್ನು ಕಾರಣಗಳೊಂದಿಗೆ ಬಹಿರಂಗಪಡಿಸಬೇಕು ಹಾಗೂ ಅವರನ್ನು ಅಪರಾಧಿಗಳಂತೆ ನಡೆಸಿಕೊಳ್ಳಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಗ್ರಾಮ ಹಾಗೂ ವಾರ್ಡ್ ಸಭೆಗಳನ್ನು ಸಮರ್ಪಕ ಪ್ರಚಾರದೊಂದಿಗೆ ನಡೆಸಬೇಕು ಮತ್ತು ಎಸ್ಐಆರ್ ಪ್ರಕ್ರಿಯೆಯ ಆಕ್ಷೇಪಣೆ ಹಾಗೂ ಮೇಲ್ಮನವಿ ಅವಧಿಯನ್ನು ಆರು ತಿಂಗಳಿಗೆ ವಿಸ್ತರಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟರು.
ಇದಕ್ಕೂ ಮುನ್ನ ಬಾಪೂಜಿನಗರದಲ್ಲಿ ಎಸ್ಐಆರ್ ಸಂತ್ರಸ್ತರೊಂದಿಗೆ ಸಂವಾದ ನಡೆಸಿದ್ದ ಪ್ರಕಾಶ್ ರಾಜ್, ಅರ್ಹ ನಾಗರಿಕರು ತಮ್ಮ ಭಾರತೀಯತ್ವ ಹಾಗೂ ಮತದಾನದ ಹಕ್ಕನ್ನು ಮತ್ತೆ ಮತ್ತೆ ಸಾಬೀತುಪಡಿಸಬೇಕಾದ ಪರಿಸ್ಥಿತಿ ಎದುರಾಗಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಎಸ್ಐಆರ್ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂದು ಅವರು ಹೇಳಿದ್ದರು.
ಕರ್ನಾಟಕದ ಕರಡು ಮತದಾರರ ಪಟ್ಟಿಯಲ್ಲಿ 1.07 ಕೋಟಿಗೂ ಹೆಚ್ಚು ಹೆಸರುಗಳನ್ನು ಕೈಬಿಡಲಾಗಿದೆ ಎಂಬ ಅಂಕಿ-ಅಂಶಗಳು ಈಗಾಗಲೇ ರಾಜಕೀಯ ಹಾಗೂ ನಾಗರಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ. ಈ ಪೈಕಿ ಅರ್ಹ ಮತದಾರರೂ ಇದ್ದಾರೆ ಎಂದು ನಾಗರಿಕ ಸಂಘಟನೆಗಳು ಆರೋಪಿಸಿದ್ದು, ಹೆಸರು ಮರುಸೇರ್ಪಡೆಗೆ ಹೆಚ್ಚಿನ ಕಾಲಾವಕಾಶ ನೀಡುವಂತೆ ಒತ್ತಾಯಿಸುತ್ತಿವೆ.
ಇದನ್ನೂ ನೋಡಿ : ರಾತ್ರಿ ವೇಳೆ ಬೀದಿಬದಿ ವ್ಯಾಪಾರಿಗಳ ಗಾಡಿ ವಶ: ‘ಬಡವರ ಮೇಲೇಕೆ ಈ ದರ್ಪ?’ Janashakthi Media
