ನವದೆಹಲಿ: ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಖ್ಯಾತ ಕಾನೂನು ತಜ್ಞರು ಹಾಗೂ ಕಾನೂನು ಕ್ಷೇತ್ರದ ಹಿರಿಯ ವಿದ್ವಾಂಸರಿಗೂ ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅಭಿಪ್ರಾಯಪಟ್ಟಿದ್ದಾರೆ. “ಸುಪ್ರೀಂ
ನವದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಸಂವಿಧಾನದ 124(3)(ಸಿ) ವಿಧಿಯು ‘ಖ್ಯಾತ ಕಾನೂನು ತಜ್ಞ’ರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಿಸಲು ಅವಕಾಶ ಕಲ್ಪಿಸಿದೆ. ಆದರೆ ಸಂವಿಧಾನ ಜಾರಿಗೆ ಬಂದು 76 ವರ್ಷಕ್ಕೂ ಹೆಚ್ಚು ಕಾಲ ಕಳೆದರೂ ಈ ಅವಕಾಶವನ್ನು ಬಳಸಿಕೊಂಡಿಲ್ಲ ಎಂದು ಅವರು ಗಮನಸೆಳೆದರು.
ಇದುವರೆಗೆ ಸುಪ್ರೀಂ ಕೋರ್ಟ್ಗೆ ಮುಖ್ಯವಾಗಿ ಹೈಕೋರ್ಟ್ ನ್ಯಾಯಮೂರ್ತಿಗಳು ಅಥವಾ ವಕೀಲರನ್ನೇ ಉನ್ನತೀಕರಿಸಲಾಗಿದೆ. ಖ್ಯಾತ ಕಾನೂನು ವಿದ್ವಾಂಸರನ್ನು ನ್ಯಾಯಮೂರ್ತಿಗಳಾಗಿ ಪರಿಗಣಿಸದಿರುವುದು ಸಂವಿಧಾನದ ಬಳಕೆಯಾಗದ ಅವಕಾಶವಾಗಿ ಉಳಿದಿರುವುದು ವಿಷಾದಕರ ಎಂದು ಭುಯಾನ್ ಹೇಳಿದ್ದಾರೆ.
ಭಾರತೀಯ ಕಾನೂನು ಶಿಕ್ಷಣ ಕ್ಷೇತ್ರದಲ್ಲಿ ಸುಪ್ರೀಂ ಕೋರ್ಟ್ ಮಟ್ಟದ ಜವಾಬ್ದಾರಿ ನಿರ್ವಹಿಸುವಷ್ಟು ಸಾಮರ್ಥ್ಯದ ವಿದ್ವಾಂಸರು ಇಲ್ಲವೇ ಎಂಬ ಪ್ರಶ್ನೆಯನ್ನೂ ಅವರು ಮುಂದಿಟ್ಟಿದ್ದಾರೆ. ಕೇಂದ್ರ ಸರ್ಕಾರ ಮತ್ತು ನ್ಯಾಯಾಂಗದ ಕೊಲಿಜಿಯಂ ಈ ಅವಕಾಶವನ್ನು ಸಮರ್ಪಕವಾಗಿ ಪರಿಶೀಲಿಸಿಲ್ಲವೇ ಅಥವಾ ಶೈಕ್ಷಣಿಕ ಕ್ಷೇತ್ರದ ಸಾಮರ್ಥ್ಯದ ಬಗ್ಗೆ ಅನುಮಾನವಿದೆಯೇ ಎಂಬುದನ್ನು ಚಿಂತಿಸಬೇಕಿದೆ ಎಂದಿದ್ದಾರೆ. ಸುಪ್ರೀಂ
ಇದನ್ನೂ ಓದಿ : ಧಾರವಾಡ : ಪ್ರಕಾಶ್ ರಾಜ್ ಕಾರ್ಯಕ್ರಮಕ್ಕೆ ಅಡ್ಡಿ; ಮುತ್ತಿಗೆಗೆ ಯತ್ನಿಸಿದ ಯುವಕರು ಪೊಲೀಸ್ ವಶಕ್ಕೆ
ಕಾನೂನು ವಿದ್ವಾಂಸರಿಗೆ ಪ್ರಾಯೋಗಿಕ ಅನುಭವ ಕಡಿಮೆ ಎಂಬ ಕಾರಣ ನೀಡಿ ಅವರನ್ನು ಪರಿಗಣಿಸದಿರುವ ವಾದವನ್ನು ಅವರು ತಳ್ಳಿಹಾಕಿದ್ದಾರೆ. ಅಂತಹ ಆಕ್ಷೇಪಣೆ ಅತ್ಯಂತ ದುರ್ಬಲವಾದದ್ದು ಎಂದು ಭುಯಾನ್ ಹೇಳಿದ್ದಾರೆ.
ಅಮೆರಿಕ, ಬ್ರಿಟನ್, ಕೆನಡಾ ಮತ್ತು ಕೀನ್ಯಾದಂತಹ ದೇಶಗಳಲ್ಲಿ ಖ್ಯಾತ ಕಾನೂನು ವಿದ್ವಾಂಸರು ಸಾಂವಿಧಾನಿಕ ನ್ಯಾಯಾಲಯಗಳ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿರುವುದನ್ನು ಅವರು ಉದಾಹರಿಸಿದ್ದಾರೆ. ಕಾನೂನು ಕ್ಷೇತ್ರದ ಆಳವಾದ ಶೈಕ್ಷಣಿಕ ಜ್ಞಾನ ಹೊಂದಿರುವ ವ್ಯಕ್ತಿಗಳು ಸಂಕೀರ್ಣ ಸಾರ್ವಜನಿಕ ಕಾನೂನು ಮತ್ತು ಸಾಂವಿಧಾನಿಕ ವಿಚಾರಗಳನ್ನು ವಿಶಾಲ ದೃಷ್ಟಿಕೋನದಿಂದ ಪರಿಶೀಲಿಸಲು ನೆರವಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ ಹಕ್ಕು ಅತ್ಯಂತ ಮಹತ್ವದ್ದಾಗಿದೆ ಎಂದು ನ್ಯಾಯಮೂರ್ತಿ ಭುಯಾನ್ ಹೇಳಿದ್ದಾರೆ. ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ವಿದ್ಯಾರ್ಥಿಗಳನ್ನು ಬೆದರಿಸುವಂತಹ ವಾತಾವರಣ ಇರಬಾರದು ಎಂದೂ ಅವರು ತಿಳಿಸಿದ್ದಾರೆ. ಸುಪ್ರೀಂ
ಇದನ್ನೂ ನೋಡಿ : ‘ಮನೆ ಮುಂದೆ ವಾಹನ ನಿಲ್ಲಿಸೋಕೆ ದುಡ್ಡಾ?’ | ಪಾರ್ಕಿಂಗ್ ಶುಲ್ಕದ ವಿರುದ್ಧ ಜನಾಕ್ರೋಶ Janashakthi Media
