ಬೆಂಗಳೂರು: ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿದ್ದ ಬಿ. ನಾಗೇಂದ್ರ ಅವರ ರಾಜೀನಾಮೆಯನ್ನು ರಾಜ್ಯಪಾಲ ಥಾವರ್ಚಂದ್ ಗೆಹಲೋಟ್ ಭಾನುವಾರ ಅಂಗೀಕರಿಸಿದ್ದಾರೆ. ಇದರೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ನಾಗೇಂದ್ರ ಅವರ 25 ದಿನಗಳ ಸಚಿವ ಸ್ಥಾನಕ್ಕೆ ತೆರೆ ಬಿದ್ದಿದೆ.
ನಾಗೇಂದ್ರ ಅವರ ರಾಜೀನಾಮೆಯಿಂದ ರಾಜ್ಯ ಸಚಿವ ಸಂಪುಟದಲ್ಲಿ ಎರಡು ಸ್ಥಾನಗಳು ಖಾಲಿಯಾಗಿದ್ದು, ಅವುಗಳನ್ನು ಭರ್ತಿ ಮಾಡುವ ಕುರಿತು ಕಾಂಗ್ರೆಸ್ ಹೈಕಮಾಂಡ್ನೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. ಸಂಪುಟ ವಿಸ್ತರಣೆಗೆ ಶೀಘ್ರದಲ್ಲೇ ಚಾಲನೆ ದೊರೆಯುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿದ್ದನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿತ್ತು. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಆರೋಪದ ಹಿನ್ನೆಲೆಯಲ್ಲಿ ಅವರು 2024ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಅವರನ್ನು ಯೋಜನೆ ಮತ್ತು ಸಾಂಖ್ಯಿಕ ಸಚಿವರನ್ನಾಗಿ ಸೇರ್ಪಡೆ ಮಾಡಲಾಗಿತ್ತು.
ನಾಗೇಂದ್ರ ಅವರ ಮರು ಸೇರ್ಪಡೆಯನ್ನು ವಿರೋಧಿಸಿ ಬಿಜೆಪಿ ವಿಧಾನಮಂಡಲದ ಒಳಗೂ ಹೊರಗೂ ಪ್ರತಿಭಟನೆ ನಡೆಸಿ, ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿತ್ತು. ಇದೀಗ ಅವರ ರಾಜೀನಾಮೆ ಅಂಗೀಕಾರಗೊಂಡಿರುವ ಹಿನ್ನೆಲೆಯಲ್ಲಿ ಎರಡು ಖಾಲಿ ಸ್ಥಾನಗಳಿಗೆ ಯಾರನ್ನು ನೇಮಕ ಮಾಡಬೇಕು ಎಂಬುದು ಕಾಂಗ್ರೆಸ್ನಲ್ಲಿ ಪ್ರಮುಖ ಚರ್ಚೆಯಾಗಿದೆ.
ಇದನ್ನೂ ಓದಿ : ಪಂಜಾಬ್ನಲ್ಲಿ ಮತ್ತೆ ಬಿಜೆಪಿ–ಅಕಾಲಿದಳ ಮೈತ್ರಿ? ‘ಪುನರ್ಸುರಜಿತ್’ ಬಣಕ್ಕೂ ಆಹ್ವಾನದ ಸುಳಿವು
ಇಬ್ಬರ ಹೆಸರು ಮುಂಚೂಣಿಯಲ್ಲಿ
ಸಚಿವ ಸಂಪುಟದ ಖಾಲಿ ಸ್ಥಾನಗಳ ಭರ್ತಿಯಲ್ಲಿ ರಾಜಕೀಯ ಹಾಗೂ ಸಾಮಾಜಿಕ ಸಮೀಕರಣಗಳನ್ನು ಕಾಂಗ್ರೆಸ್ ಪರಿಗಣಿಸುತ್ತಿದೆ ಎನ್ನಲಾಗಿದೆ.
ಸಂಡೂರು ಶಾಸಕಿ ಅನ್ನಪೂರ್ಣಾ ಅವರ ಹೆಸರು ಒಂದು ಸ್ಥಾನಕ್ಕೆ ಮುಂಚೂಣಿಯಲ್ಲಿದೆ. ಅವರು ಬಳ್ಳಾರಿ ಸಂಸದ ಈ. ತುಕಾರಾಂ ಅವರ ಪತ್ನಿಯಾಗಿದ್ದು, ನಾಯಕ ಸಮುದಾಯಕ್ಕೆ ಸೇರಿದವರು ಎಂದು ವರದಿ ಹೇಳಿದೆ.
ಮತ್ತೊಂದು ಸ್ಥಾನಕ್ಕೆ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅವರ ಹೆಸರು ಕೇಳಿಬರುತ್ತಿದೆ. ಕುರುಬ ಸಮುದಾಯದ ನಾಯಕರಾಗಿರುವ ಶಿವಣ್ಣನವರ ಅವರ ಸೇರ್ಪಡೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲವಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.
ಈ ಇಬ್ಬರ ನೇಮಕಕ್ಕೆ ಹೈಕಮಾಂಡ್ ಒಪ್ಪಿಗೆ ಪಡೆಯುವ ಸಾಧ್ಯತೆ ಇದ್ದು, ಬಳಿಕ ರಾಜ್ಯಪಾಲರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿ ಸಂಪುಟ ವಿಸ್ತರಣೆ ನಡೆಸುವ ನಿರೀಕ್ಷೆಯಿದೆ.
ಸೆ.1ರಂದು ಬಿಜೆಪಿಯ ಪಾದಯಾತ್ರೆ
ಇದೇ ವೇಳೆ ನಾಗೇಂದ್ರ ರಾಜೀನಾಮೆ ನೀಡಿದ್ದರೂ ಮಹರ್ಷಿ ವಾಲ್ಮೀಕಿ ನಿಗಮದ ಹಗರಣ ಸೇರಿದಂತೆ ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ಸೆಪ್ಟೆಂಬರ್ 1ರಂದು ಪಾದಯಾತ್ರೆ ನಡೆಸುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸುಗೂರಿನಿಂದ ಬಳ್ಳಾರಿವರೆಗೆ ನಡೆಯಲಿರುವ ಪಾದಯಾತ್ರೆಯಲ್ಲಿ 8ರಿಂದ 10 ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಲಾಗುವುದು ಎಂದು ವಿಜಯೇಂದ್ರ ತಿಳಿಸಿದ್ದಾರೆ. ಈ ಕುರಿತು ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೂ ಚರ್ಚಿಸಿರುವುದಾಗಿ ಅವರು ಹೇಳಿದ್ದಾರೆ.
ಇದನ್ನೂ ನೋಡಿ : ಪಾರ್ಕಿಂಗ್ ಪಾಲಿಸಿ: ಸಮಸ್ಯೆಗೆ ಪರಿಹಾರವೇ, ಸರ್ಕಾರಕ್ಕೆ ಆದಾಯವೇ? ಬೆಂಗಳೂರಿನ ಪಾರ್ಕಿಂಗ್ ಕಥೆ ಏನು? |
