ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆ ಕುರಿತು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ನ್ಯಾಯಾಲಯದ ಅನುಮತಿಯಿಲ್ಲದೆ ಯೋಜನಾ ಪ್ರದೇಶದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡದಂತೆ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಒಂದು ಇಟ್ಟಿಗೆಯನ್ನೂ ಅಲುಗಾಡಿಸಬಾರದು ಹಾಗೂ ಒಂದೇ ಒಂದು ಮರವನ್ನೂ ಕಡಿಯಬಾರದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಬಿಡದಿ ಸ್ಮಾರ್ಟ್ ಸಿಟಿ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿ ನಾಲ್ವರು ರೈತರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಆರ್. ನಟರಾಜ್ ಅವರ ಏಕಸದಸ್ಯ ಪೀಠದಲ್ಲಿ ನಡೆಯಿತು. ಪರಿಹಾರ ಮೊತ್ತ ನಿಗದಿಪಡಿಸಿದ ತಕ್ಷಣವೇ ಬುಲ್ಡೋಜರ್ಗಳನ್ನು ತೆಗೆದುಕೊಂಡು ಹೋಗಿ ರೈತರ ಆಸ್ತಿಯನ್ನು ನಾಶಪಡಿಸುವ ರೀತಿಯಲ್ಲಿ ಸರ್ಕಾರ ನಡೆದುಕೊಳ್ಳಬಾರದು ಎಂದು ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಪರಿಹಾರ ಮೊತ್ತವನ್ನು ಅಂತಿಮವಾಗಿ ನಿಗದಿಪಡಿಸಿದರೂ, ಹೈಕೋರ್ಟ್ನ ಅನುಮತಿ ಪಡೆಯದೆ ರೈತರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಪೀಠ ಸೂಚಿಸಿದೆ. ಸರ್ಕಾರದ ಪರ ವಾದಿಸಿದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಪರಿಹಾರದ ವಿವರಗಳನ್ನು ಮೊದಲು ಹೈಕೋರ್ಟ್ಗೆ ಸಲ್ಲಿಸಲಾಗುವುದು ಮತ್ತು ಅಲ್ಲಿಯವರೆಗೆ ಯಾವುದೇ ರೈತರನ್ನು ತೆರವುಗೊಳಿಸುವುದಿಲ್ಲ ಎಂದು ಭರವಸೆ ನೀಡಿದರು. ನ್ಯಾಯಾಲಯ ಈ ಹೇಳಿಕೆಯನ್ನು ದಾಖಲಿಸಿಕೊಂಡಿದೆ.
ಇದನ್ನೂ ಓದಿ : ಎಸ್ಐಆರ್ ಕರಡು ಪಟ್ಟಿ ಪ್ರಕಟ | 1 ಕೋಟಿ ಮತದಾರರ ಮುಂದಿನ ಚಿತ್ರವೇನು?
ಸರ್ಕಾರದ ಪರ ವಕೀಲರು ಬಹಳಷ್ಟು ರೈತರು ಸ್ವಯಂಪ್ರೇರಿತರಾಗಿ ಭೂಮಿ ನೀಡಲು ಮುಂದೆ ಬಂದಿದ್ದಾರೆ ಎಂದು ವಾದಿಸಿದರೆ, ರೈತರ ಪರ ವಕೀಲರು ಇದಕ್ಕೆ ಯಾವುದೇ ಅಧಿಕೃತ ದಾಖಲೆಗಳನ್ನು ಸರ್ಕಾರ ನ್ಯಾಯಾಲಯದ ಮುಂದೆ ಸಲ್ಲಿಸಿಲ್ಲ ಎಂದು ಆಕ್ಷೇಪಿಸಿದರು. ವಾಸ್ತವವಾಗಿ ಶೇ.5ರಷ್ಟು ರೈತರೂ ಭೂಮಿ ನೀಡಲು ಒಪ್ಪಿಲ್ಲ ಎಂದು ರೈತರ ಪರ ವಾದ ಮಂಡಿಸಲಾಯಿತು.
ಗ್ರೇಟರ್ ಬೆಂಗಳೂರು ಡೆವಲಪ್ಮೆಂಟ್ ಅಥಾರಿಟಿ (ಜಿಬಿಡಿಎ) ಪರ ವಕೀಲರು, ರೈತರನ್ನು ಬಲವಂತವಾಗಿ ಒಕ್ಕಲೆಬ್ಬಿಸುವುದಿಲ್ಲ ಮತ್ತು ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಆರಂಭಿಕ ಹಂತದಲ್ಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಮುಖ್ಯ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 29ಕ್ಕೆ ಮುಂದೂಡಲಾಗಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದ ಹೊಸ ಅರ್ಜಿಗಳ ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ನಿಗದಿಪಡಿಸಲಾಗಿದೆ.
ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನದ ವಿರುದ್ಧ ರೈತರು ಒಂದು ವರ್ಷಕ್ಕೂ ಹೆಚ್ಚು ಕಾಲ ಹೋರಾಟ ನಡೆಸುತ್ತಿದ್ದಾರೆ. ಯೋಜನೆಯಿಂದ ಫಲವತ್ತಾದ ಕೃಷಿ ಭೂಮಿ, ರೈತರ ಜೀವನೋಪಾಯ ಮತ್ತು ಪರಿಸರಕ್ಕೆ ಹಾನಿಯಾಗಲಿದೆ ಎಂದು ರೈತ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸುತ್ತಿವೆ. ವಿವಿಧ ರೈತ ಸಂಘಟನೆಗಳು ಹಾಗೂ ಸಾರ್ವಜನಿಕರು ಬಿಡದಿ ಟೌನ್ಶಿಪ್ ಯೋಜನೆಯನ್ನು ವಿರೋಧಿಸಿ ನಿರಂತರವಾಗಿ ಪ್ರತಿಭಟನೆ, ಧರಣಿ ಸೇರಿದಂತೆ ಹಲವು ಹೋರಾಟಗಳನ್ನು ನಡೆಸುತ್ತಿದ್ದು, ಭೂಸ್ವಾಧೀನವನ್ನು ಕೈಬಿಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಇದನ್ನೂ ನೋಡಿ : PTCL ಸಾರ್ವಜನಿಕ ಅಹವಾಲು ತೀರ್ಪುಗಾರರ ವರದಿ ಬಿಡುಗಡೆ
