ಬೆಂಗಳೂರು: ಮನೆಗಳ ಮುಂದೆ ಹಾಗೂ ರಸ್ತೆ ಬದಿಯಲ್ಲಿ ವಾಹನ ನಿಲುಗಡೆಗೆ ಶುಲ್ಕ ವಿಧಿಸಲು ಮುಂದಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಕ್ರಮವನ್ನು ಸಿಪಿಐ(ಎಂ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ತೀವ್ರವಾಗಿ ಖಂಡಿಸಿವೆ. ಜನವಿರೋಧಿ ಪಾರ್ಕಿಂಗ್ ಶುಲ್ಕದ ಕರಡು ಅಧಿಸೂಚನೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿರುವ ಪಕ್ಷ, ಆಗಸ್ಟ್ 29ರಂದು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ಕರೆ ನೀಡಿದೆ. ಪಾರ್ಕಿಂಗ್
ಈ ಕುರಿತು ಸಿಪಿಐ(ಎಂ) ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ಎನ್. ಪ್ರತಾಪ್ ಸಿಂಹ ಮತ್ತು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಬಿ.ಎನ್. ಮಂಜುನಾಥ್ ಜಂಟಿ ಹೇಳಿಕೆ ನೀಡಿದ್ದಾರೆ.
ಜನಪ್ರತಿನಿಧಿಗಳ ಆಡಳಿತವಿಲ್ಲದ ಬೆಂಗಳೂರಿನಲ್ಲಿ ಸಾರ್ವಜನಿಕರೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ವಸತಿ ಪ್ರದೇಶಗಳಲ್ಲಿ ವಾಹನ ನಿಲುಗಡೆಗೆ ಶುಲ್ಕ ನಿಗದಿಪಡಿಸಿರುವುದು ಜನವಿರೋಧಿ ಕ್ರಮ. ನಗರಾಭಿವೃದ್ಧಿ ಇಲಾಖೆ ಆಗಸ್ಟ್ 11ರಂದು ಹೊರಡಿಸಿರುವ ‘ಗ್ರೇಟರ್ ಬೆಂಗಳೂರು ಪ್ರದೇಶ ಪಾರ್ಕಿಂಗ್ ನಿಯಮಗಳ ಕರಡು ಅಧಿಸೂಚನೆ’ಯನ್ನು ವಾಪಸ್ ಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕರಡು ನಿಯಮಗಳ ಪ್ರಕಾರ ಮನೆಗಳ ಮುಂದೆ ವಾಹನ ನಿಲುಗಡೆಗೆ ವಾರ್ಷಿಕ ₹15,000ರಿಂದ ₹25,000ವರೆಗೆ ಶುಲ್ಕ ವಿಧಿಸುವ ಪ್ರಸ್ತಾವವಿದೆ. ರಸ್ತೆ ಬದಿಯಲ್ಲಿ ಬೈಕ್ ನಿಲುಗಡೆಗೆ ಪ್ರತಿ ಗಂಟೆಗೆ ₹20ರಿಂದ ₹40, ಲಘು ಮೋಟಾರು ವಾಹನಗಳಿಗೆ ₹40ರಿಂದ ₹80 ಶುಲ್ಕ ನಿಗದಿಪಡಿಸಲು ಉದ್ದೇಶಿಸಲಾಗಿದೆ. ನಿಗದಿತ ಪಾರ್ಕಿಂಗ್ ಸ್ಥಳಗಳಲ್ಲಿ ಬೈಕ್‌ಗೆ ಪ್ರತಿ ಗಂಟೆಗೆ ₹10ರಿಂದ ₹20 ಹಾಗೂ ಲಘು ಮೋಟಾರು ವಾಹನಗಳಿಗೆ ₹20ರಿಂದ ₹40 ಶುಲ್ಕ ವಿಧಿಸುವ ಪ್ರಸ್ತಾವವಿದೆ ಎಂದು ಅವರು ತಿಳಿಸಿದ್ದಾರೆ.
ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದೆ ಶುಲ್ಕ ಏಕೆ?
2023ರವರೆಗೆ ಬೆಂಗಳೂರಿನ ವಸತಿ ಕಟ್ಟಡಗಳ ನಕ್ಷೆ ಮಂಜೂರಾತಿಗೆ ನೆಲ ಅಂತಸ್ತಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು ಕಡ್ಡಾಯವಾಗಿರಲಿಲ್ಲ. ಎರಡು ಅಂತಸ್ತಿಗಿಂತ ಹೆಚ್ಚಿನ ಕಟ್ಟಡಗಳಿಗೆ ಪಾರ್ಕಿಂಗ್ ನಿಯಮವಿದ್ದರೂ ಅದು ಎಲ್ಲರಿಗೂ ಕಡ್ಡಾಯವಾಗಿರಲಿಲ್ಲ. ಸರ್ಕಾರದ ಬಿಡಿಎ, ವಸತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಜನರಿಗೆ ಮನೆ, ನಿವೇಶನ ಮತ್ತು ಬಡಾವಣೆಗಳನ್ನು ನಿರ್ಮಿಸಿ ನೀಡಿದ್ದರೂ ಹಲವು ಕಡೆ ಸಮರ್ಪಕ ಪಾರ್ಕಿಂಗ್ ಸೌಲಭ್ಯ ಕಲ್ಪಿಸಿಲ್ಲ ಎಂದು ಪ್ರತಾಪ್ ಸಿಂಹ ಮತ್ತು ಮಂಜುನಾಥ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುಮಾರು 12 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ. ಇಂತಹ ಮನೆಗಳ ಮುಂದೆ ವಾಹನ ನಿಲ್ಲಿಸುವುದಕ್ಕೂ ಶುಲ್ಕ ವಿಧಿಸುವುದು ಸಾಮಾನ್ಯ ಜನರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಹಾಕಿದಂತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಕಸ ಸಂಗ್ರಹ ವಾಹನಗಳಿಗೆ ಜಿಪಿಎಸ್ ಟ್ರ್ಯಾಕಿಂಗ್: 138 ಆಟೋ ಟಿಪ್ಪರ್‌ಗಳ ಪ್ರಾಯೋಗಿಕ ಯೋಜನೆ
ದುಡಿಯುವ ವರ್ಗಕ್ಕೆ ಮತ್ತಷ್ಟು ಹೊರೆ
ಬೆಂಗಳೂರಿನ ಜನಸಂಖ್ಯೆಗೆ ಅನುಗುಣವಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇನ್ನೂ ಸಮರ್ಪಕವಾಗಿಲ್ಲ. ಮನೆ ಮಾಲೀಕರು ಹಾಗೂ ಬಾಡಿಗೆದಾರರು ಸಾಲ ಮಾಡಿ ವಾಹನಗಳನ್ನು ಖರೀದಿಸಿದ್ದಾರೆ. ಟ್ಯಾಕ್ಸಿ ಮತ್ತು ಆಟೋಗಳನ್ನು ಅವಲಂಬಿಸಿ ಜೀವನ ನಡೆಸುವ ದುಡಿಯುವ ವರ್ಗವೂ ನಗರದಲ್ಲಿದೆ.
ಸ್ಥಳೀಯ ಸಂಸ್ಥೆಗಳು ಸಾರ್ವಜನಿಕ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸುವ ಬದಲು ಪಾರ್ಕಿಂಗ್ ಶುಲ್ಕದ ಮೂಲಕ ಜನರಿಂದ ಹಣ ಸಂಗ್ರಹಿಸಲು ಮುಂದಾಗಿರುವುದು ಸರಿಯಲ್ಲ. ಈ ನೀತಿಯಿಂದ ಅಸಂಘಟಿತ ಕಾರ್ಮಿಕರು ಸೇರಿದಂತೆ ಸಾಮಾನ್ಯ ಜನರು ಪ್ರತಿದಿನ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ. ಪಾರ್ಕಿಂಗ್
‘ಜಿಬಿಎ ಮಿನಿ ಸರ್ಕಾರದಂತೆ ವರ್ತಿಸುತ್ತಿದೆ’
ಬೆಂಗಳೂರಿನಲ್ಲಿ ಚುನಾವಣೆ ನಡೆದು ದಶಕ ಕಳೆದಿದ್ದರೂ ಜನರಿಂದ ನೇರವಾಗಿ ಆಯ್ಕೆಯಾದ ಪ್ರತಿನಿಧಿಗಳ ಆಡಳಿತ ಇಲ್ಲ. ಇಂತಹ ಸಂದರ್ಭದಲ್ಲಿ ಜಿಬಿಎ ರಾಜ್ಯ ಸರ್ಕಾರದ ಮಿನಿ ಸರ್ಕಾರದಂತೆ ವರ್ತಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಐದು ನಗರಪಾಲಿಕೆಗಳ ಆಡಳಿತ ವೈಫಲ್ಯವನ್ನು ಮರೆಮಾಚಲು ಮತ್ತು ಹಣಕಾಸಿನ ಸಂಪನ್ಮೂಲ ಸಂಗ್ರಹಿಸಲು ಜನರ ಮೇಲೆ ಶುಲ್ಕದ ಹೊರೆ ಹಾಕಲಾಗುತ್ತಿದೆ ಎಂದು ಪ್ರತಾಪ್ ಸಿಂಹ ಮತ್ತು ಮಂಜುನಾಥ್ ಆರೋಪಿಸಿದ್ದಾರೆ.
ಕರಡು ನಿಯಮಗಳಲ್ಲಿ ಪಾರ್ಕಿಂಗ್ ನಿರ್ವಹಣೆ, ಶುಲ್ಕ ಸಂಗ್ರಹ, ಅನುಮತಿ ಇಲ್ಲದೆ ನಿಲುಗಡೆ ಮಾಡಿದ ವಾಹನಗಳನ್ನು ಟೋಯಿಂಗ್ ಮಾಡುವ ವ್ಯವಸ್ಥೆಯನ್ನು ಗುತ್ತಿಗೆಗೆ ನೀಡುವುದು ಹಾಗೂ ಪ್ರದೇಶದ ಬೇಡಿಕೆಗೆ ಅನುಗುಣವಾಗಿ ಶುಲ್ಕ ಹೆಚ್ಚಿಸುವ ಅವಕಾಶ ಸೇರಿದಂತೆ ಹಲವು ಜನವಿರೋಧಿ ಅಂಶಗಳಿವೆ ಎಂದು ಅವರು ಹೇಳಿದ್ದಾರೆ.
ಆ.29ರಂದು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ
ರಾಜ್ಯ ಸರ್ಕಾರ ಮತ್ತು ಜಿಬಿಎ ಕೂಡಲೇ ಪಾರ್ಕಿಂಗ್ ಶುಲ್ಕ ನಿಗದಿ ಮಾಡುವ ಕ್ರಮವನ್ನು ಕೈಬಿಟ್ಟು, ಕರಡು ಅಧಿಸೂಚನೆಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಜನರ ಹೋರಾಟ ತೀವ್ರಗೊಳ್ಳಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಪಾರ್ಕಿಂಗ್ ಶುಲ್ಕದ ವಿರುದ್ಧ ನಾಗರಿಕರು ವ್ಯಾಪಕವಾಗಿ ಆಕ್ಷೇಪಣೆಗಳನ್ನು ಸಲ್ಲಿಸಬೇಕು. ಆಗಸ್ಟ್ 29ರಂದು ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಎನ್. ಪ್ರತಾಪ್ ಸಿಂಹ ಮತ್ತು ಬಿ.ಎನ್. ಮಂಜುನಾಥ್ ಕರೆ ನೀಡಿದ್ದಾರೆ. ಪಾರ್ಕಿಂಗ್
ಇದನ್ನೂ ನೋಡಿ : 1 ಕೋಟಿ ಮತದಾರರ ಮೇಲೆ SIR ತೂಗುಕತ್ತಿ: Form-8 ಬದಲು Form-6 ಏಕೆ? ವಿಶ್ಲೇಷಣೆ : ಗುರುರಾಜ ದೇಸಾಯಿ
