ಎಸ್.ಸೂರ್ಯನಾರಾಯಣ ರಾವ್ (ಕಾಮ್ರೇಡ್ ಸೂರಿ) ಅವರು ವಿಧಾನಸಭೆಯಲ್ಲಿ ಮಾಡಿದ ಭಾಷಣಗಳು, ಮಧ್ಯಪ್ರವೇಶಗಳು ಹಾಗೂ ಕೇಳಿದ ಪ್ರಶ್ನೆಗಳ ಆಯ್ದ ದಾಖಲೆಯನ್ನು ಸಂಗ್ರಹಿಸಿ “ಸದನದಲ್ಲಿ ಕಾಮ್ರೇಡ್ ಸೂರಿ” ಎಂಬ ಪುಸ್ತಕವನ್ನು ಸಂಪಾದಿಸಲಾಗಿದೆ. ಅಂದು ಸೂರಿಯವರ ಜೊತೆಗೆ ವಿಧಾನಸಭೆ ಪ್ರವೇಶಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ, ನಾಡಿನ ಚಿಂತಕರಾದ ಡಾ ಕೆ ಪ್ರಕಾಶ್ ಅವರು ಆಶಯ ನುಡಿ ಬರೆದಿದ್ದಾರೆ. ಈ ಕೃತಿಯನ್ನು ಕ್ರಿಯಾ ಮಾಧ್ಯಮ ಪ್ರಕಟಿಸುತ್ತಿದೆ. ಶೀಘ್ರದಲ್ಲೇ ಪುಸ್ತಕ ಬಿಡುಗಡೆ ಆಗಲಿದೆ. ಸಿದ್ದರಾಮಯ್ಯ ಮತ್ತು ಡಾ.ಕೆ ಪ್ರಕಾಶ್ ಪುಸ್ತಕದ ಮಹತ್ವದ ಬಗ್ಗೆ ಬರೆದ ಮಾತುಗಳು ಇಲ್ಲಿವೆ. ಸೂರಿ
ಕರ್ನಾಟಕದ ರಾಜಕೀಯ, ಸಾಮಾಜಿಕ ಇತಿಹಾಸದಲ್ಲಿ ಕೆಲ ಧ್ವನಿಗಳು ಯಾವ ಕಾಲಕ್ಕೂ ಅಳಿದು ಹೋಗುವುದಿಲ್ಲ. ಅವು ತಲೆಮಾರು ತಲೆಮಾರಿಗೂ ಧ್ವನಿಗಳಾಗಿಯೇ ನಿಂತುಕೊಳ್ಳುತ್ತವೆ. ಒಂದು ಕಾಲದಲ್ಲಿ ವರ್ತೂರು ಕ್ಷೇತ್ರವನ್ನು ಪ್ರತಿನಿಧಿಸಿ ವಿಧಾನಸಭೆಗೆ ಹೋಗಿದ್ದ ಎಸ್. ಸೂರ್ಯನಾರಾಯಣ ರಾವ್ (ಕಾಮ್ರೇಡ್ ಸೂರಿ) ಅವರ ಧ್ವನಿ ಅಂತಹ ಶಾಶ್ವತ ಧ್ವನಿಗಳಲ್ಲೊಂದು.
ವಿಧಾನಸಭೆಯ ಒಳಗಾಗಲಿ ಹೊರಗಾಗಲಿ, ಅವರ ಮಾತುಗಳು, ಪ್ರಶ್ನೆಗಳು, ವಿರೋಧಗಳು, ಮತ್ತು ಪ್ರತಿಭಟನೆಗಳು, ಇವೆಲ್ಲವೂ ಜನಸಾಮಾನ್ಯರ ಪರವಾಗಿ ಹೋರಾಡುವ ಜನತಾಂತ್ರಿಕ ಸಿದ್ದಾಂತದ ಪ್ರತಿಧ್ವನಿಗಳಾಗಿವೆ. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಸೂರ್ಯನಾರಾಯಣ ರಾವ್ ಅವರು ಒಂದೇ ಬಾರಿ ಶಾಸಕರಾಗಿ, ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದರೂ ಸದನದಲ್ಲಿ ಅವರಿಗೊಂದು ಪ್ರಾಮುಖ್ಯತೆ ಇತ್ತು. ಅವರ ಜೊತೆಗೇ ವಿಧಾನಸಭೆ ಪ್ರವೇಶಿಸಿದವನು ನಾನು ಎಂಬುದು ನನ್ನ ಹೆಮ್ಮೆ. ಈಗೀಗ ಅವರ ಸ್ಥಾನದಲ್ಲಿ ಯಾರ್ಯಾರು, ಎಂತೆಂಥವರು ಕುಳಿತಿದ್ದಾರೆ ಎನ್ನುವುದು ನಮ್ಮ ಕಾಲದ ದುರಂತವಾಗಿದೆ.
ಹಾಗಾಗಿ, ಈ ಕೃತಿ ಸೂರಿಯವರ ಸದನ ಭಾಷಣಗಳ ಸಂಗ್ರಹವಷ್ಟೇ ಅಲ್ಲ. ನಮ್ಮ ರಾಜ್ಯದ ಪ್ರಜಾಸತ್ತಾತ್ಮಕ ಬದುಕನ್ನು ರೂಪಿಸಿದ ರಾಜಕೀಯ–ಸಾಮಾಜಿಕ ಚಿಂತನೆಗಳ ದಾಖಲೆ. ಇಲ್ಲಿ ಕಾಣುವ ಪ್ರತಿಯೊಂದು ಚರ್ಚೆ, ಪ್ರತಿಯೊಂದು ಪ್ರತಿರೋಧ, ಪ್ರತಿಯೊಂದು ಪ್ರಶ್ನೆಯೂ ಆ ಕಾಲದಲ್ಲಿ ಸಾಮಾನ್ಯ ಜನರ ನೋವುನಲಿವುಗಳ ನೇರ ಪ್ರತಿಧ್ವನಿಯಾಗಿದೆ. ಸೂರಿ
ಕಾಂ. ಸೂರಿಯವರ ಮಾತುಗಳಲ್ಲಿ ಸದಾ ಬಡವರ ಹಕ್ಕು, ರೈತರ ನ್ಯಾಯ, ಕಾರ್ಮಿಕರ ಗೌರವ ಮತ್ತು ಆಡಳಿತದ ಜವಾಬ್ದಾರಿ ಇವೆಲ್ಲವೂ ಸದಾ ಜೀವಂತವಾಗಿರುತ್ತಿತ್ತು. ಒರ್ವ ಶಾಸಕರು ತಮ್ಮ ಸ್ಥಾನವನ್ನು ಹೇಗೆ ಬಳಸಬೇಕು, ಜನರ ಪ್ರತಿನಿಧಿಗೆ ಇರುವ ನೈತಿಕ ಕರ್ತವ್ಯ ಯಾವುದು, ಸಂಸತ್ತೀಯ ಸಂವಾದದ ಮೌಲ್ಯವೇನು ಎಂಬುದಕ್ಕೆ ಕಾಮ್ರೇಡ್ ಸೂರಿಯವರ ಭಾಷಣಗಳು ಉತ್ತಮ ಉದಾಹರಣೆಯಾಗಿದೆ.
ಇಂದಿನ ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳು ಸೂರಿಯವರ ಭಾಷಣಗಳನ್ನು ಓದಿದರೆ, ಶಾಸನಸಭೆ ಕೇವಲ ಮಾತಿನ ವೇದಿಕೆ ಅಲ್ಲ. ಅದು ಜನರ ಜೀವನಕ್ಕೆ ಜವಾಬ್ದಾರಿಯಾದ ವೇದಿಕೆ ಎಂಬ ಅರಿವು ಉಂಟಾಗುತ್ತದೆ.
ಈ ಪುಸ್ತಕವನ್ನು ಸಂಪಾದಿಸಿರುವ ನವೀನ್ ಸೂರಿಂಜೆಯವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅವರು ಒಬ್ಬ ಹೋರಾಟಗಾರ ಪತ್ರಕರ್ತನ ದೃಷ್ಟಿಯಿಂದ, ಜನರ ಪರ ನಿಂತಿದ್ದ ಒಬ್ಬ ಶಾಸಕರ ಮಾತುಗಳನ್ನು ಮರುಜೀವಂತಗೊಳಿಸಿದ್ದಾರೆ. ಇಂದಿನ ಸಮಾಜಕ್ಕೆ, ಇಂದಿನ ರಾಜಕೀಯಕ್ಕೆ ಮತ್ತು ಮುಂದಿನ ಪೀಳಿಗೆಗೆ ಈ ದಾಖಲೆಯ ಅಗತ್ಯ ಅತ್ಯಂತ ಹೆಚ್ಚಾಗಿದೆ.
ಕಾಮ್ರೇಡ್ ಸೂರಿಯವರು ವಿಧಾನಸಭೆಯಲ್ಲಿ ಎತ್ತಿದ ಪ್ರತಿಯೊಂದು ಪ್ರಶ್ನೆಗೂ ಇಂದಿಗೂ ನಮ್ಮ ವ್ಯವಸ್ಥೆ ಉತ್ತರ ಹುಡುಕುತ್ತಿದೆ. 80ರ ದಶಕದಲ್ಲಿ ಅವರು ಎತ್ತಿದ ಪ್ರಶ್ನೆಗಳಿಗೆ ಇಂದಿಗೂ ನಮಗ್ಯಾರಿಗೂ ಉತ್ತರ ಕೊಡಲು ಸಾಧ್ಯವಾಗಿಲ್ಲ. ಹಾಗಾಗಿ, ಈ ಕೃತಿ ಕೇವಲ ಒಂದು ದಾಖಲೆಯಲ್ಲ. ಪ್ರಜಾಪ್ರಭುತ್ವದ ಆತ್ಮಕ್ಕೆ ಸದಾ ಪ್ರಶ್ನೆಯಾಗಿಯೇ ಕಾಡುವ ಪಾಠಪುಸ್ತಕ.
ನಮ್ಮ ಭವಿಷ್ಯದ ಜನಪ್ರತಿನಿಧಿಗಳು ಕಾಮ್ರೇಡ್ ಸೂರಿಯಂತವರು ಕುಳಿತ ಸದನದ ಗೌರವವನ್ನು ಅರ್ಥಮಾಡಿಕೊಂಡು, ಜನಪರ ರಾಜಕೀಯದ ಶ್ರೇಷ್ಠ ಪರಂಪರೆಯನ್ನು ಮುಂದುವರಿಸಲಿ. ಅದಕ್ಕೆ ಈ ಪುಸ್ತಕ ನೆರವಾಗಲಿ ಎಂಬುದು ನನ್ನ ಹಾರೈಕೆ. ಸೂರಿ
- ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿಗಳು
ಇದನ್ನೂ ಓದಿ : ಕರ್ನಾಟಕ ರಾಜ್ಯೋತ್ಸವ : ಏಕೀಕರಣ ಹೋರಾಟ ಮರೆಯಬಾರದು ಕಮ್ಯೂನಿಷ್ಟರ ಪಾತ್ರವನ್ನು ನೆನೆಯಬೇಕು
ಬೀದಿಯ ಹೋರಾಟ ಮತ್ತು ಸದನದ ಸಂವಾದ ಗಳ ನಡುವೆ ಸೇತುವೆಯಾದ ಮಾದರಿ ನಾಯಕ ಸೂರಿ : ಪ್ರಕಾಶ್
ಪತ್ರಕರ್ತ ನವೀನ್ ಸೂರಿಂಜೆ ಸಂಪಾದಕತ್ವದ ಈ ಕೃತಿ ಒಂದು ವ್ಯಕ್ತಿಯ ಜೀವನ ಚರಿತ್ರೆಯ ಭಾಗವಲ್ಲ. ಇದು ಒಂದು ರಾಜಕೀಯ ನಿಲುವಿನ, ಒಂದು ತಲೆಮಾರಿನ ಹೋರಾಟದ ಮತ್ತು ಒಂದು ಪ್ರಜಾಸತ್ತಾತ್ಮಕ ಮೌಲ್ಯಗಳ ಪರಂಪರೆಯ ದಾಖಲೆಯಾಗಿದೆ. ‘ಸದನದಲ್ಲಿ ಕಾಮ್ರೇಡ್ ಸೂರಿ’ ಎಂಬ ಈ ಪುಸ್ತಕ, ಕರ್ನಾಟಕ ವಿಧಾನಸಭೆಯ ಒಳಗಡೆ ಸಾಮಾನ್ಯ ಜನರ ಬದುಕು ಹೇಗೆ ಪ್ರತಿಧ್ವನಿಸಬಹುದೆಂಬುದಕ್ಕೆ ದೊರೆಯುವ ಅಪರೂಪದ ಸಾಕ್ಷ್ಯ.
ಕಾಮ್ರೇಡ್ ಎಸ್. ಸೂರ್ಯನಾರಾಯಣರಾವ್ (ಸೂರಿ) ಅವರು ಸದನವನ್ನು ಅಧಿಕಾರಕ್ಕಾಗಿ ಬಳಸಲಿಲ್ಲ. ಅದನ್ನು ಜನರ ನೋವು, ಹಸಿವು, ಅಸಮಾನತೆ ಮತ್ತು ಅನ್ಯಾಯಗಳ ವಿರುದ್ಧದ ಹೋರಾಟದ ವೇದಿಕೆಯಾಗಿ ಬಳಸಿದರು. ಅವರ ಪ್ರತಿಯೊಂದು ಭಾಷಣವೂ ರೈತನ ಬೆವರು, ಕಾರ್ಮಿಕನ ಗಾಯ, ಬಡವನ ಹಸಿವು ಮತ್ತು ಶೋಷಿತ ಸಮುದಾಯಗಳ ಆಕ್ರೋಶವನ್ನು ಒಳಗೊಂಡಿತ್ತು. ಆದ್ದರಿಂದ ಈ ಪುಸ್ತಕದಲ್ಲಿರುವ ಮಾತುಗಳು ಕೇವಲ ಶಾಸನಸಭೆಯ ದಾಖಲೆಗಳಲ್ಲ, ಅವು ಸಮಾಜದ ಅಂತರಾಳದಿಂದ ಬಂದ ಪ್ರಶ್ನೆಗಳು.
80ರ ದಶಕದಲ್ಲಿ ವಿಧಾನಸಭೆಯಲ್ಲಿ ಕೇಳಿಬಂದ ಈ ಧ್ವನಿಗಳು, ಇಂದಿನ ದಿನಗಳಲ್ಲಿಯೂ ಅಷ್ಟೇ ಪ್ರಸ್ತುತವಾಗಿವೆ. ಬೆಲೆ ಏರಿಕೆ, ಕೃಷಿಯ ಸಂಕಷ್ಟ, ಕಾರ್ಮಿಕರ ಹಕ್ಕು, ಭ್ರಷ್ಟಾಚಾರ, ಬಂಡವಾಳಶಾಹಿ ವ್ಯವಸ್ಥೆ, ಆಡಳಿತದ ಜವಾಬ್ದಾರಿ — ಇವೆಲ್ಲವೂ ಕಾಲಾತೀತ ಪ್ರಶ್ನೆಗಳಾಗಿ ಇಂದಿಗೂ ನಮ್ಮನ್ನು ಕಾಡುತ್ತಿವೆ. ಅದಕ್ಕಾಗಿಯೇ ಈ ಕೃತಿಯನ್ನು ಕೇವಲ ಹಿಂದಿನ ಕಾಲದ ದಾಖಲೆ ಎಂದು ಓದದೇ ವರ್ತಮಾನದ ಚರ್ಚೆಯೇನೋ ಎಂಬಂತೆ ಓದಬಹುದು.
ಸದನದ ಒಳಗೆ ಕೂತು ಮಾತನಾಡುವ ಪ್ರತಿನಿಧಿಯೊಬ್ಬನು ಬೀದಿಯ ಹೋರಾಟದಿಂದ ದೂರವಾಗಬಾರದು ಎಂಬುದನ್ನು ಕಾಮ್ರೇಡ್ ಸೂರಿ ತಮ್ಮ ಬದುಕಿನಿಂದ ಸಾಬೀತುಪಡಿಸಿದರು. ಬೀದಿಯ ಹೋರಾಟ ಮತ್ತು ಸದನದ ಸಂವಾದ — ಈ ಎರಡರ ನಡುವೆ ಸೇತುವೆಯಾಗಿ ನಿಂತ ರಾಜಕಾರಣಿಯೊಬ್ಬರ ಮಾದರಿಯನ್ನು ಈ ಪುಸ್ತಕ ನಮ್ಮ ಮುಂದೆ ಇಡುತ್ತದೆ. ಪ್ರಜಾಪ್ರಭುತ್ವ ಎಂದರೆ ಕೇವಲ ಚುನಾವಣೆ ಅಲ್ಲ, ಅದು ನಿರಂತರ ಹೋರಾಟ, ಜವಾಬ್ದಾರಿ ಮತ್ತು ಎಚ್ಚರ ಎಂಬ ಸೂರಿಯವರ ನಿಲುವು ಈ ಕೃತಿಯ ಪ್ರತಿಯೊಂದು ಪುಟದಲ್ಲೂ ಸ್ಪಷ್ಟವಾಗಿ ಕಾಣಿಸುತ್ತದೆ.
ಪತ್ರಕರ್ತ ನವೀನ್ ಸೂರಿಂಜೆಯವರು ಶ್ರಮವಹಿಸಿ ಕಾಮ್ರೇಡ್ ಸೂರಿಯವರ ವಿಧಾನಸಭೆ ಭಾಷಣಗಳನ್ನು ಸಂಗ್ರಹಿಸಿದ್ದು, ಈ ಪುಸ್ತಕವನ್ನು ಪ್ರಕಟಿಸುತ್ತಿರುವ ಹಿಂದಿನ ಆಶಯ ಸ್ಪಷ್ಟವಾಗಿದೆ. ಜನಪರ ರಾಜಕೀಯದ ಧ್ವನಿಗಳನ್ನು ಮರೆತೇ ಹೋಗದಂತೆ ಉಳಿಸುವುದು, ಹೊಸ ತಲೆಮಾರಿಗೆ ಹೋರಾಟದ ಬುದ್ಧಿ ಮತ್ತು ಧೈರ್ಯವನ್ನು ನೀಡುವುದು ಮತ್ತು ಶಾಸನಸಭೆಯ ಗೌರವವನ್ನು ಮತ್ತೆ ಜನರ ಬದುಕಿನ ಜೊತೆ ಜೋಡಿಸುವುದು ಈ ಪುಸ್ತಕದ ಆಶಯವಾಗಿದೆ. ಜನರ ಪರ ನಿಂತ ಧ್ವನಿಗಳು ಇತಿಹಾಸದ ಪುಟಗಳಲ್ಲಿ ಮುಚ್ಚಿಹೋಗಬಾರದು; ಅವು ಇಂದಿನ ಮತ್ತು ಮುಂದಿನ ಪೀಳಿಗೆಗಳಿಗೆ ದಾರಿದೀಪವಾಗಬೇಕು. ‘ಸದನದಲ್ಲಿ ಕಾಮ್ರೇಡ್ ಸೂರಿ’ ಆ ದಾರಿದೀಪವಾಗಲಿ. ಜನಪರ ರಾಜಕೀಯ ಮತ್ತೆ ಜೀವಂತವಾಗುವತ್ತ ಒಂದು ಸಣ್ಣ, ಆದರೆ ಅರ್ಥಪೂರ್ಣ ಹೆಜ್ಜೆಯಾಗಲಿ ಎಂದು ಆಶಿಸುತ್ತೇನೆ. ಸೂರಿ
ಡಾ. ಕೆ ಪ್ರಕಾಶ್,
ಕಾರ್ಯದರ್ಶಿಗಳು, ಸಿಪಿಐ(ಎಂ) ಕರ್ನಾಟಕ
ಇದನ್ನೂ ನೋಡಿ : ಕಾಮ್ರೇಡ್ ಸೂರ್ಯನಾರಾಯಣ್ ಸದನದ ಒಳಗೂ ಮತ್ತು ಹೊರಗೂ ಹೋರಾಟಗಾರರಾಗಿದ್ದರು -ಸಿಎಂ ಸಿದ್ದರಾಮಯ್ಯ
