ಚಂಡೀಗಢ: ಪಂಜಾಬ್‌ನಲ್ಲಿ ಕಬ್ಬು ಬೆಳೆಯುವ ಪ್ರದೇಶ ಕಳೆದ ವರ್ಷಕ್ಕೆ ಹೋಲಿಸಿದರೆ 14 ಸಾವಿರ ಹೆಕ್ಟೇರ್‌ಗೂ ಅಧಿಕ ಕುಸಿದಿದ್ದು, ಕಬ್ಬು ಬೆಳೆಗಾರರು ರಾಜ್ಯ ಸಲಹಾ ಬೆಲೆ (ಎಸ್‌ಎಪಿ) ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ. ಪ್ರಸ್ತುತ ಪಂಜಾಬ್‌ನಲ್ಲಿ ಕಬ್ಬಿಗೆ ಪ್ರತಿ ಕ್ವಿಂಟಲ್‌ಗೆ ₹416 ಎಸ್‌ಎಪಿ ನೀಡಲಾಗುತ್ತಿದ್ದು, ಇದನ್ನು ₹600ಕ್ಕೆ ಏರಿಸಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸಿವೆ.
ರಾಜ್ಯದಲ್ಲಿ ಕಬ್ಬು ಬೆಳೆಯುವ ಪ್ರದೇಶ ಕಳೆದ ವರ್ಷ ಸುಮಾರು ಒಂದು ಲಕ್ಷ ಹೆಕ್ಟೇರ್‌ನಷ್ಟಿದ್ದರೆ, ಇದೀಗ ಸುಮಾರು 86 ಸಾವಿರ ಹೆಕ್ಟೇರ್‌ಗೆ ಇಳಿದಿದೆ. ಕಬ್ಬು ಉತ್ಪಾದನೆಯಲ್ಲಿಯೂ ಗಣನೀಯ ಕುಸಿತ ಕಂಡುಬಂದಿದ್ದು, 2025–26ರಲ್ಲಿ ರಾಜ್ಯದ ಉತ್ಪಾದನೆ ಸುಮಾರು 500 ಲಕ್ಷ ಕ್ವಿಂಟಲ್‌ಗೆ ಇಳಿದಿದೆ. ಹಿಂದಿನ ವರ್ಷ ಇದು ಸುಮಾರು 632 ಲಕ್ಷ ಕ್ವಿಂಟಲ್ ಆಗಿತ್ತು. ಅಂದರೆ ಉತ್ಪಾದನೆಯಲ್ಲಿ ಸುಮಾರು ಶೇ.20ರಷ್ಟು ಇಳಿಕೆಯಾಗಿದೆ.
ಪಂಜಾಬ್‌ನಲ್ಲಿ ಕಬ್ಬಿಗೆ ದೇಶದಲ್ಲೇ ಅತ್ಯಧಿಕ ಎಸ್‌ಎಪಿ ನೀಡಲಾಗುತ್ತಿದೆ. ಕಳೆದ ವರ್ಷಕ್ಕಿಂತ ₹15 ಹೆಚ್ಚಿಸಿ ಪ್ರಸಕ್ತ ದರವನ್ನು ₹416ಕ್ಕೆ ನಿಗದಿಪಡಿಸಲಾಗಿದೆ. ಇದರ ಜತೆಗೆ 2025–26ರ ಕಬ್ಬು ನುರಿಸುವ ಋತುವಿನಲ್ಲಿ ಖಾಸಗಿ ಸಕ್ಕರೆ ಕಾರ್ಖಾನೆಗಳ ಪರವಾಗಿ ಪ್ರತಿ ಕ್ವಿಂಟಲ್‌ಗೆ ₹68.50ರಷ್ಟು ಸಹಾಯಧನವನ್ನು ನೇರವಾಗಿ ರೈತರಿಗೆ ನೀಡಲಾಗುತ್ತಿದೆ. ಆದರೂ ಕಬ್ಬು ಬೆಳೆಯಲು ರೈತರು ಹಿಂದೇಟು ಹಾಕುತ್ತಿದ್ದಾರೆ.
ರೈತರು ಇದಕ್ಕೆ ಹಲವು ಕಾರಣಗಳನ್ನು ಮುಂದಿಟ್ಟಿದ್ದಾರೆ. ಕಬ್ಬು ಕಟಾವಿಗೆ ಕಾರ್ಮಿಕರ ಕೊರತೆ, ಸಮಯಕ್ಕೆ ಸರಿಯಾಗಿ ಕಟಾವು ನಡೆಯದಿರುವುದು, ಕಾರ್ಖಾನೆಗಳಿಗೆ ಕಬ್ಬು ಸಾಗಣೆಯಲ್ಲಿನ ತೊಂದರೆ, ಕಾರ್ಖಾನೆಗಳಿಂದ ಹಣ ಪಾವತಿಯಲ್ಲಿ ವಿಳಂಬ ಹಾಗೂ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ರೈತರನ್ನು ಕಬ್ಬು ಬೆಳೆಯಿಂದ ದೂರ ಸರಿಸುತ್ತಿವೆ ಎಂದು ರೈತ ಮುಖಂಡರು ಹೇಳಿದ್ದಾರೆ.
ಇದನ್ನೂ ಓದಿ : ಬೀದಿ ಬದಿ ವ್ಯಾಪಾರಿಗಳ ತೆರವಿಗೆ ಸುಪ್ರೀಂ ಕೋರ್ಟ್ ಆದೇಶವಿಲ್ಲ: ಸರ್ಕಾರಕ್ಕೆ ಹೈಕೋರ್ಟ್ ಸ್ಪಷ್ಟನೆ
ಭಾರತೀಯ ಕಿಸಾನ್ ಯೂನಿಯನ್ (ಲಖೋವಾಲ್) ಅಧ್ಯಕ್ಷ ಹರೀಂದರ್ ಸಿಂಗ್ ಲಖೋವಾಲ್, ಒಂದು ಕ್ವಿಂಟಲ್ ಕಬ್ಬು ಉತ್ಪಾದಿಸಲು ಕನಿಷ್ಠ ₹450 ವೆಚ್ಚವಾಗುತ್ತಿದೆ. ಹೀಗಾಗಿ ಎಸ್‌ಎಪಿ ₹600ಕ್ಕಿಂತ ಕಡಿಮೆ ಇರಬಾರದು ಎಂದು ಒತ್ತಾಯಿಸಿದ್ದಾರೆ. ಅಖಿಲ ಭಾರತ ಕಿಸಾನ್ ಫೆಡರೇಷನ್ ಅಧ್ಯಕ್ಷ ಪ್ರೇಮ್ ಸಿಂಗ್ ಭಾಂಗು ಕೂಡ ಸಮಯಕ್ಕೆ ಸರಿಯಾಗಿ ಕಬ್ಬಿನ ಬಾಕಿ ಪಾವತಿಸುವುದರ ಜತೆಗೆ ₹600 ಎಸ್‌ಎಪಿ ನಿಗದಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಪಂಜಾಬ್‌ನ ಕಬ್ಬು ಉತ್ಪಾದನೆ ಕಳೆದ ಕೆಲವು ವರ್ಷಗಳಿಂದ ಇಳಿಮುಖವಾಗಿದೆ. 2020–21ರಲ್ಲಿ 74.9 ಲಕ್ಷ ಟನ್ ಇದ್ದ ಉತ್ಪಾದನೆ 2025–26ರಲ್ಲಿ 69.1 ಲಕ್ಷ ಟನ್‌ಗೆ ಇಳಿದಿದೆ. 2022–23 ಮತ್ತು 2023–24ರಲ್ಲಿ 75.1 ಲಕ್ಷ ಟನ್‌ವರೆಗೆ ಏರಿಕೆಯಾಗಿದ್ದ ಉತ್ಪಾದನೆ ಬಳಿಕ ಮತ್ತೆ ಕುಸಿದಿದೆ.
ರಾಜ್ಯದಲ್ಲಿ ಸರ್ಕಾರಿ ಹಾಗೂ ಖಾಸಗಿ ಸೇರಿದಂತೆ ಹಲವು ಸಕ್ಕರೆ ಕಾರ್ಖಾನೆಗಳಿದ್ದು, ಕಬ್ಬು ಲಭ್ಯತೆ ಕಡಿಮೆಯಾಗುತ್ತಿರುವುದು ಅವುಗಳ ಮೇಲೂ ಪರಿಣಾಮ ಬೀರಿದೆ. ಕಳೆದ ನುರಿಸುವ ಋತುವಿನಲ್ಲಿ ರಾಜ್ಯದ ಕಾರ್ಖಾನೆಗಳಿಗೆ ಸುಮಾರು 630 ಲಕ್ಷ ಕ್ವಿಂಟಲ್ ಕಬ್ಬು ಅಗತ್ಯವಿದ್ದರೂ, ಉತ್ಪಾದನೆ ಸುಮಾರು 500 ಲಕ್ಷ ಕ್ವಿಂಟಲ್‌ಗೆ ಸೀಮಿತವಾಗಿತ್ತು. ಪರಿಣಾಮ ಕೆಲವು ಕಾರ್ಖಾನೆಗಳು ಸಾಮಾನ್ಯಕ್ಕಿಂತ ಮುಂಚಿತವಾಗಿಯೇ ಕಾರ್ಯಾಚರಣೆ ಸ್ಥಗಿತಗೊಳಿಸಬೇಕಾಯಿತು.
ಇದೇ ವೇಳೆ ದೇಶಾದ್ಯಂತವೂ ಕಬ್ಬು ಬೆಳೆ ಪ್ರದೇಶದಲ್ಲಿ ಸ್ವಲ್ಪ ಇಳಿಕೆಯಾಗಿದೆ. ಆಗಸ್ಟ್ 21ರ ವೇಳೆಗೆ ದೇಶದಲ್ಲಿ 58.44 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ 58.87 ಲಕ್ಷ ಹೆಕ್ಟೇರ್‌ನಷ್ಟಿತ್ತು. ಬಿಹಾರ, ಉತ್ತರಾಖಂಡ, ಮಹಾರಾಷ್ಟ್ರ, ಪಂಜಾಬ್ ಮತ್ತು ಮಧ್ಯಪ್ರದೇಶದಲ್ಲಿ ಇಳಿಕೆ ಕಂಡುಬಂದಿದ್ದರೆ, ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಬೆಳೆ ಪ್ರದೇಶ ಹೆಚ್ಚಾಗಿದೆ.
ಕಬ್ಬು ಬೆಳೆ ಪ್ರದೇಶ ಕುಸಿಯುತ್ತಿರುವ ಬೆನ್ನಲ್ಲೇ ಸಕ್ಕರೆ ಬೆಲೆಯೂ ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಪಂಜಾಬ್‌ನಲ್ಲಿ ಸಕ್ಕರೆ ಬೆಲೆ ಒಂದು ತಿಂಗಳಲ್ಲಿ ಕೆಜಿಗೆ ಸುಮಾರು ₹46ರಿಂದ ₹65ಕ್ಕೆ ಏರಿಕೆಯಾಗಿದೆ. ಹಬ್ಬಗಳ ಅವಧಿಯಲ್ಲಿ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಮುಂದಿನ ದಿನಗಳಲ್ಲಿ ಪೂರೈಕೆ ಹಾಗೂ ಬೆಲೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಕಬ್ಬು ಬೆಳೆಯುವ ಪ್ರದೇಶವನ್ನು ಉಳಿಸಿಕೊಳ್ಳಲು ರೈತರಿಗೆ ಲಾಭದಾಯಕ ಬೆಲೆ, ಸಮಯಕ್ಕೆ ಸರಿಯಾದ ಪಾವತಿ ಮತ್ತು ಕಟಾವು–ಸಾಗಣೆ ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯ ಎಂದು ರೈತ ಸಂಘಟನೆಗಳು ಒತ್ತಾಯಿಸಿವೆ. ₹600 ಎಸ್‌ಎಪಿ ನಿಗದಿಪಡಿಸುವ ಮೂಲಕ ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ಒದಗಿಸಬೇಕು ಎಂಬ ಬೇಡಿಕೆ ಇದೀಗ ಪಂಜಾಬ್‌ನಲ್ಲಿ ಮತ್ತೆ ತೀವ್ರಗೊಂಡಿದೆ.
ಇದನ್ನೂ ನೋಡಿ : SIR ಕರಡು ಪಟ್ಟಿ ಪ್ರಕಟ: ಹೆಚ್ಚಲಿದೆಯೇ ಜನರ ಸಂಕಟ? Janashakthi Media
