1978ರ ‘ಉದ್ಯಮ’ದ ವ್ಯಾಖ್ಯೆ ಹೊಸ ಕಾರ್ಮಿಕ ಸಂಹಿತೆಯಲ್ಲಿ ಅನ್ವಯವಾಗುವದಿಲ್ಲ- ಸುಪ್ರೀಂ ಕೋರ್ಟ್ ಬಹುಮತದ ತೀರ್ಪು

9 ನ್ಯಾಯಮೂರ್ತಿಗಳ ಪೀಠದಿಂದ ಮಹತ್ವದ ತೀರ್ಪು | ಹಳೆಯ ಪ್ರಕರಣಗಳಿಗೆ 1978ರ ಮಾನದಂಡವೇ ಅನ್ವಯ | ಹೊಸ ಕೈಗಾರಿಕಾ ಸಂಬಂಧ ಸಂಹಿತೆಗೆ  1978 ರ ಮಾನದಂಡ ಅನ್ವಯಿಸುವುದಿಲ್ಲ
ನವದೆಹಲಿ: ಕೈಗಾರಿಕಾ ವಿವಾದ ಕಾಯ್ದೆ, 1947ರ ಅಡಿಯಲ್ಲಿ ‘ಉದ್ಯಮ’ ಎಂದರೆ ಏನು ಎಂಬುದನ್ನು ನಿರ್ಧರಿಸಲು 1978ರಲ್ಲಿ ರೂಪಿಸಲಾಗಿದ್ದ ಮಹತ್ವದ ‘ತ್ರಿವಳಿ ಪರೀಕ್ಷೆ’ಯನ್ನು ಸುಪ್ರೀಂ ಕೋರ್ಟ್‌ನ 9 ನ್ಯಾಯಮೂರ್ತಿಗಳ ಸಂವಿಧಾನ ಪೀಠ ಬಹುಮತದ ತೀರ್ಪಿನಲ್ಲಿ ಪರಿಷ್ಕರಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠ 5:4 ಬಹುಮತದಲ್ಲಿ ಈ ತೀರ್ಪು ನೀಡಿದೆ.

ಆದರೆ, ಈ ಹೊಸ ವ್ಯಾಖ್ಯಾನವು ಭವಿಷ್ಯಕ್ಕೆ ಮಾತ್ರ ಅನ್ವಯವಾಗಲಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಈಗಾಗಲೇ ಅಂತಿಮಗೊಂಡಿರುವ ಪ್ರಕರಣಗಳನ್ನು ಮರುತೆರೆಯುವುದಿಲ್ಲ. ಕೈಗಾರಿಕಾ ವಿವಾದ ಕಾಯ್ದೆ, 1947ರ ಅಡಿಯಲ್ಲಿ ಪ್ರಸ್ತುತ ಬಾಕಿ ಇರುವ ಪ್ರಕರಣಗಳನ್ನು 1978ರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪ್ರಕರಣದಲ್ಲಿ ರೂಪಿಸಲಾದ ತ್ರಿವಳಿ ಪರೀಕ್ಷೆಯ ಆಧಾರದಲ್ಲೇ ನಿರ್ಧರಿಸಬೇಕು ಎಂದು ಕೋರ್ಟ್ ಹೇಳಿದೆ.

1978ರ ತೀರ್ಪಿನಲ್ಲಿ ಏನಿತ್ತು?

1978ರಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿರುದ್ಧ ಆರ್. ರಾಜಪ್ಪ ಪ್ರಕರಣದಲ್ಲಿ ನ್ಯಾಯ ಮೂರ್ತಿ ವಿ.ಆರ್.ಕೃಷ್ಣ ಅಯ್ಯರ್‌  ನೇತೃತ್ವದ 7 ನ್ಯಾಯಮೂರ್ತಿಗಳ ಸಂವಿಧಾನ ಪೀಠ ‘ಉದ್ಯಮ’ ಎಂಬ ಪದಕ್ಕೆ ವ್ಯಾಪಕ ಅರ್ಥ ನೀಡಿತ್ತು.

ಯಾವುದೇ ಸಂಸ್ಥೆ ಅಥವಾ ಘಟಕವನ್ನು ‘ಉದ್ಯಮ’ ಎಂದು ಪರಿಗಣಿಸಲು ಮುಖ್ಯವಾಗಿ ಮೂರು ಅಂಶಗಳನ್ನು ಪರಿಶೀಲಿಸಲಾಗುತ್ತಿತ್ತು:

  1. ವ್ಯವಸ್ಥಿತ ಮತ್ತು ಸಂಘಟಿತ ಚಟುವಟಿಕೆ ಇರಬೇಕು.
  2. ಉದ್ಯೋಗದಾತ ಮತ್ತು ಕಾರ್ಮಿಕರ ಸಹಕಾರ ಇರಬೇಕು.
  3. ಮಾನವ ಅಗತ್ಯಗಳನ್ನು ಪೂರೈಸುವ ಸರಕು ಅಥವಾ ಸೇವೆಗಳ ಉತ್ಪಾದನೆ ಅಥವಾ ವಿತರಣೆಯಾಗಬೇಕು.

ಈ ಮಾನದಂಡದಿಂದಾಗಿ ಲಾಭ ಗಳಿಸುವ ಉದ್ದೇಶವಿಲ್ಲದ ಹಲವು ಸಂಸ್ಥೆಗಳು ಹಾಗೂ ಸೇವಾ ಕ್ಷೇತ್ರಗಳೂ ಕೈಗಾರಿಕಾ ವಿವಾದ ಕಾಯ್ದೆಯ ವ್ಯಾಪ್ತಿಗೆ ಬರುವಂತಾಗಿತ್ತು.  ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಕಲ್ಯಾಣ ಸಂಸ್ಥೆಗಳು ಸೇರಿದಂತೆ ಹಲವು ಕ್ಷೇತ್ರಗಳ ಕಾರ್ಮಿಕರ ಹಕ್ಕುಗಳಿಗೆ ಈ ತೀರ್ಪು ಮಹತ್ವದ್ದಾಗಿತ್ತು.

ಸುಪ್ರೀಂ ಕೋರ್ಟ್ ಈಗ ಹೇಳಿದ್ದೇನು?

9 ನ್ಯಾಯಮೂರ್ತಿಗಳ ಪೀಠವು 1978ರ ತೀರ್ಪಿನ ಮೂಲ ಚೌಕಟ್ಟು ಸಂಪೂರ್ಣವಾಗಿ ತಪ್ಪಾಗಿದೆ ಎಂದು ಹೇಳಿಲ್ಲ. ಆದರೆ, ತ್ರಿವಳಿ ಪರೀಕ್ಷೆಯ ಕೆಲವು ಅಂಶಗಳನ್ನು ಇನ್ನಷ್ಟು ಸ್ಪಷ್ಟವಾಗಿ ರೂಪಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಹೀಗಾಗಿ, ‘ಉದ್ಯಮ’ವನ್ನು ಗುರುತಿಸುವ ಮಾನದಂಡವನ್ನು ಪರಿಷ್ಕರಿಸಲಾಗಿದೆ. ಆದರೆ ಈ ಹೊಸ ಮಾನದಂಡವನ್ನು ಕೈಗಾರಿಕಾ ವಿವಾದ ಕಾಯ್ದೆ, 1947ಕ್ಕೆ ಸಂಬಂಧಿಸಿದ ಭವಿಷ್ಯದ ಅನ್ವಯಕ್ಕೆ ಮಾತ್ರ ಪರಿಗಣಿಸಲಾಗುತ್ತದೆ.

ಇದನ್ನೂ ಓದಿ : ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದು, ಕನಿಷ್ಠ ವೇತನ 42 ಸಾವಿರಕ್ಕೆ ಹೆಚ್ಚಳಕ್ಕೆ ಆಗ್ರಹ

ಬಾಕಿ ಇರುವ ಕಾರ್ಮಿಕ ಪ್ರಕರಣಗಳಿಗೆ ಹಳೆಯ ಮಾನದಂಡವೇ

ತೀರ್ಪಿನ ಅತ್ಯಂತ ಪ್ರಮುಖ ಅಂಶವೆಂದರೆ, ಈಗಾಗಲೇ ನ್ಯಾಯಾಲಯಗಳು, ಕಾರ್ಮಿಕ ನ್ಯಾಯಮಂಡಳಿಗಳು ಅಥವಾ ಇತರ ಪ್ರಾಧಿಕಾರಗಳ ಮುಂದೆ ಬಾಕಿ ಇರುವ ಕೈಗಾರಿಕಾ ವಿವಾದಗಳಿಗೆ ಹೊಸ ತ್ರಿವಳಿ ಪರೀಕ್ಷೆಯನ್ನು ಅನ್ವಯಿಸಬಾರದು ಎಂಬುದು.

ಅಂತಹ ಪ್ರಕರಣಗಳನ್ನು 1978ರ ಬೆಂಗಳೂರು ನೀರು ಸರಬರಾಜು ಪ್ರಕರಣದಲ್ಲಿ ರೂಪಿಸಲಾದ ತ್ರಿವಳಿ ಪರೀಕ್ಷೆಯ ಆಧಾರದಲ್ಲೇ ನಿರ್ಧರಿಸಬೇಕು ಎಂದು ಬಹುಮತ ಸ್ಪಷ್ಟಪಡಿಸಿದೆ.

ಈ ಮೂಲಕ ಹೊಸ ತೀರ್ಪಿನಿಂದ ಹಳೆಯ ಪ್ರಕರಣಗಳಲ್ಲಿ ಕಾರ್ಮಿಕರ ಹಕ್ಕುಗಳು ಅಥವಾ ಸಂಸ್ಥೆಗಳ ಕಾನೂನು ಸ್ಥಾನಮಾನವನ್ನು ಏಕಾಏಕಿ ಬದಲಾಯಿಸುವ ಸಾಧ್ಯತೆಯನ್ನು ಕೋರ್ಟ್ ತಪ್ಪಿಸಿದೆ.

ಹೊಸ ಕೈಗಾರಿಕಾ ಸಂಬಂಧ ಸಂಹಿತೆಗೆ ಅನ್ವಯವಿಲ್ಲ

ಸುಪ್ರೀಂ ಕೋರ್ಟ್‌ನ ಮತ್ತೊಂದು ಪ್ರಮುಖ ಸ್ಪಷ್ಟನೆ ಎಂದರೆ, ಈ ೧೯೭೮ರ ತೀರ್ಪು ಕೈಗಾರಿಕಾ ಸಂಬಂಧ ಸಂಹಿತೆ, 2020ರಲ್ಲಿನ ‘ಉದ್ಯಮ’ದ ವ್ಯಾಖ್ಯಾನಕ್ಕೆ ಅನ್ವಯಿಸುವುದಿಲ್ಲ.

ಕೈಗಾರಿಕಾ ವಿವಾದ ಕಾಯ್ದೆ, 1947ರ ಸಂಬಂಧಿತ ನಿಬಂಧನೆಗಳು 2025ರ ನವೆಂಬರ್ 21ರಿಂದ ಜಾರಿಗೆ ಬಂದ ಕೈಗಾರಿಕಾ ಸಂಬಂಧ ಸಂಹಿತೆಯ ಮೂಲಕ ಬದಲಾಗಿರುವ ಹಿನ್ನೆಲೆಯಲ್ಲಿ, ಹೊಸ ಸಂಹಿತೆಯನ್ನು ಅದರದೇ ಪಠ್ಯ ಮತ್ತು ಕಾನೂನು ಚೌಕಟ್ಟಿನ ಆಧಾರದ ಮೇಲೆ ವ್ಯಾಖ್ಯಾನಿಸಬೇಕು ಎಂದು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಸೇರಿದಂತೆ ಪೀಠದ ಅಭಿಪ್ರಾಯಗಳಲ್ಲಿ ಒತ್ತಿಹೇಳಲಾಗಿದೆ.

ತೀರ್ಪಿನಲ್ಲಿ ನ್ಯಾಯಮೂರ್ತಿಗಳ ನಡುವೆ ಮಹತ್ವದ ಭಿನ್ನಾಭಿಪ್ರಾಯವೂ ಕಂಡುಬಂದಿದೆ. ೯ ನ್ಯಾಯಮೂರ್ತಿಗಳಲ್ಲಿ ನಾಲ್ವರು  ಈ ತೀರ್ಪನ್ನು ಒಪ್ಪಿಲ್ಲ ಎಂಬುದು ಗಮನಾರ್ಹ. ನ್ಯಾಯಮೂರ್ತಿ ವಿ. ನಾಗರತ್ನ, ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರು ಈ ಮರುಪರಿಶೀಲನೆಗೆ ಅನಗತ್ಯವಾಗಿತ್ತು ಎಂಬ ನಿಲುವು ವ್ಯಕ್ತಪಡಿಸಿದ್ದಾರೆ. ನ್ಯಾ|ನಾಗರತ್ನ, ೧೯೭೮ರ ʼಉದ್ಯಮʼ ಕುರಿತ ನಿರೂಪಣೆ ಹೆಚ್ಚೆಚ್ಚು ಖಾಸಗೀಕರಣಗೊಳ್ಳುತ್ತಿರುವ ಅರ್ಥವ್ಯವಸ್ಥೆಯಲ್ಲಿ ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಈಗಲೂ ಬಹಳ ಮಹತ್ವದ್ದಾಗಿಯೇ ಇದೆ ಎಂದು ತನ್ನ ಪ್ರತ್ಯೇಕ ತೀರ್ಪಿನಲ್ಲಿ ಒತ್ತಿ  ಹೇಳಿದ್ದಾರೆ. ಮಾಲಕತ್ವ ಖಾಸಗಿಯವರಿಗೆ ಬದಲಾದಾಗ ಸಾರ್ವಜನಿಕ ವಲಯದ ಘಟಕಗಳ ನೌಕರರು/ಕಾರ್ಮಿಕರು ಖಾಸಗಿ ವಲಯದ ನೌಕರರು/ ಕಾರ್ಮಿಕರಾಗಿ ಪರಿವರ್ತಿತರಾಗುತ್ತಾರೆ. ಈ ಸನ್ನಿವೇಶದಲ್ಲಿ ಕೈಗಾರಿಕಾ ವಿವಾದ ಕಾಯ್ದೆಯ ಅಡಿಯಲ್ಲಿ ಈ ರಕ್ಷಣೆ ನೀಡಲಾಗಿತ್ತು. ಸುಮಾರು ೫೦ ವರ್ಷಗಳ ಕಾಲ ದೃಢವಾಗಿ  ನಿಂತಿರುವ ಈ ವ್ಯಾಖ್ಯಾನದಲ್ಲಿ ಕೈಯಾಡಿಸುವುದು ಕೈಗಾರಿಕಾ ಸಂಬಂಧಗಳ ಸಂಹಿತೆಯ ಅಡಿಯಲ್ಲಿ ಈ ಪದದ ವ್ಯಾಖ್ಯಾನದ ಮೇಲೆ ನೆರಳು ಬೀರುತ್ತದೆ ಎಂದು ಎಚ್ಚರಿಸಿದ್ದಾರೆ. ಹಸ್ತಕ್ಷೇಪ ಅನಿಶ್ಚಿತತೆಯನ್ನು ಸೃಷ್ಟಿಸುತ್ತದೆ ಮತ್ತು “ಕೈಗಾರಿಕಾ ಶಾಂತಿ”ಯನ್ನು ಕದಡುತ್ತದೆ.

ನ್ಯಾಯಮೂರ್ತಿ ದತ್ತ ಅವರು 1978ರ ಬೆಂಗಳೂರು ನೀರು ಸರಬರಾಜು ತೀರ್ಪಿನ ತ್ರಿವಳಿ ಪರೀಕ್ಷೆಯೇ ಸರಿಯಾದ ಕಾನೂನು ಮಾನದಂಡವಾಗಿದೆ ಎಂದು ಹೇಳಿದ್ದಾರೆ. ಅರ್ಧ ಶತಮಾನದಿಂದ ಜಾರಿಯಲ್ಲಿದ್ದ ಕಾನೂನು ಸ್ಥಿತಿಯನ್ನು ಅನಗತ್ಯವಾಗಿ ಬದಲಿಸುವುದು ಕಾನೂನು ವ್ಯವಸ್ಥೆಯ ಸ್ಥಿರತೆಗೆ ಧಕ್ಕೆ ತರಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಇದನ್ನೂ ನೋಡಿ : “ಕನಿಷ್ಠ ವೇತನವೂ ಇಲ್ಲ, ಜೀವಕ್ಕೆ ಗ್ಯಾರಂಟಿಯೂ ಇಲ್ಲ! ಬೇಯುತ್ತಿದೆ ವಿದ್ಯುತ್ ಕಾರ್ಮಿಕರ ಬದುಕು” | ಎಸ್‌ ವರಲಕ್ಷ್ಮಿ

Donate Janashakthi Media

Leave a Reply

Your email address will not be published. Required fields are marked *