ಬೆಂಗಳೂರಿನಲ್ಲಿ ಎಐಸಿಸಿಟಿಯು ರಾಜ್ಯಮಟ್ಟದ ಪ್ರತಿಭಟನೆ; ಸರ್ಕಾರಕ್ಕೆ ಮನವಿ
ಬೆಂಗಳೂರು: ಗುತ್ತಿಗೆ, ಹೊರಗುತ್ತಿಗೆ, ದಿನಗೂಲಿ ಹಾಗೂ ತಾತ್ಕಾಲಿಕ ಉದ್ಯೋಗ ಪದ್ಧತಿಗಳ ಮೂಲಕ ಕಾರ್ಮಿಕರ ಶೋಷಣೆ ತಡೆಯಬೇಕು, ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದುಪಡಿಸಿ ನೇರ ವೇತನ ಪಾವತಿ ಜಾರಿಗೊಳಿಸಬೇಕು ಹಾಗೂ ಪರಿಷ್ಕೃತ ಕನಿಷ್ಠ ವೇತನವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಕೇಂದ್ರ ಕಾರ್ಮಿಕ ಸಂಘಗಳ ಮಂಡಳಿ (ಎಐಸಿಸಿಟಿಯು) ವತಿಯಿಂದ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸಾವಿರಾರು ಕಾರ್ಮಿಕರು ಭಾಗವಹಿಸಿದ್ದರು. ಗುತ್ತಿಗೆ, ಹೊರಗುತ್ತಿಗೆ, ದಿನಗೂಲಿ ಹಾಗೂ ಇತರ ಅಸ್ಥಿರ ಉದ್ಯೋಗ ವ್ಯವಸ್ಥೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಉದ್ಯೋಗ ಭದ್ರತೆ, ಸಾಮಾಜಿಕ ಭದ್ರತೆ ಹಾಗೂ ಕಾರ್ಮಿಕ ಕಾನೂನುಗಳ ಸಂಪೂರ್ಣ ರಕ್ಷಣೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಎಐಸಿಸಿಟಿಯು ರಾಷ್ಟ್ರೀಯ ಉಪಾಧ್ಯಕ್ಷ ಕ್ಲಿಫ್ಟನ್ ಡಿ’ರೊಸಾರಿಯೊ ಮಾತನಾಡಿ, ರಾಜ್ಯದ ಕಾರ್ಖಾನೆಗಳು, ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಗುಂಪು ‘ಸಿ’ ಮತ್ತು ಗುಂಪು ‘ಡಿ’ ಹುದ್ದೆಗಳಿಗೆ ಸಂಬಂಧಿಸಿದ ನಿರಂತರ ಹಾಗೂ ಅಗತ್ಯ ಕೆಲಸಗಳನ್ನು ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕರಿಂದ ಮಾಡಿಸಲಾಗುತ್ತಿದೆ ಎಂದು ಹೇಳಿದರು.
ಒಂದೇ ಸಂಸ್ಥೆಯಲ್ಲಿ 10, 20, 25 ಹಾಗೂ 30 ವರ್ಷಗಳವರೆಗೆ ಸೇವೆ ಸಲ್ಲಿಸಿದರೂ ಅನೇಕ ಕಾರ್ಮಿಕರನ್ನು ಕಾಯಂ ಮಾಡದೆ ಉದ್ಯೋಗ ಭದ್ರತೆ ಹಾಗೂ ಸಮರ್ಪಕ ಸಾಮಾಜಿಕ ಭದ್ರತೆಯಿಂದ ವಂಚಿಸಲಾಗುತ್ತಿದೆ. ಕಾಯಂ ನೌಕರರು ಮಾಡುವ ಸಮಾನ ಅಥವಾ ಸಮಾನ ಸ್ವರೂಪದ ಕೆಲಸವನ್ನೇ ಮಾಡುವ ಕಾರ್ಮಿಕರಿಗೆ ಸಮಾನ ವೇತನ ಮತ್ತು ಶಾಸನಬದ್ಧ ಸೌಲಭ್ಯಗಳನ್ನು ನಿರಾಕರಿಸುವ ಈ ಶೋಷಣಾತ್ಮಕ ವ್ಯವಸ್ಥೆಯನ್ನು ಕೊನೆಗೊಳಿಸಬೇಕು ಎಂದು ಆಗ್ರಹಿಸಿದರು.
ಕನಿಷ್ಠ ವೇತನ 42 ಸಾವಿರಕ್ಕೆ ಹೆಚ್ಚಿಸಲು ಆಗ್ರಹ
ಎಐಸಿಸಿಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೈತ್ರೇಯಿ ಕೃಷ್ಣನ್ ಮಾತನಾಡಿ, ಸರ್ಕಾರವು 2026ರ ಮೇ 22ರಂದು ಅಧಿಸೂಚನೆ ಹೊರಡಿಸಿರುವ ಪರಿಷ್ಕೃತ ಕನಿಷ್ಠ ವೇತನವನ್ನು ಯಾವುದೇ ಕಾರಣಕ್ಕೂ ತಡೆಹಿಡಿಯಬಾರದು ಅಥವಾ ವಿಳಂಬ ಮಾಡಬಾರದು ಎಂದು ಒತ್ತಾಯಿಸಿದರು.
ಅಧಿಸೂಚಿತ ಕನಿಷ್ಠ ವೇತನಕ್ಕಿಂತ ಕಡಿಮೆ ವೇತನ ನೀಡುತ್ತಿರುವ ಉದ್ಯೋಗದಾತರ ವಿರುದ್ಧ ಕಾರ್ಮಿಕ ಇಲಾಖೆ ತಕ್ಷಣ ತಪಾಸಣೆ ನಡೆಸಬೇಕು. ಕಾರ್ಮಿಕರಿಗೆ ಬಾಕಿ ಇರುವ ವೇತನವನ್ನು ವಸೂಲಿ ಮಾಡಿಸಬೇಕು. ಕಾರ್ಮಿಕರ ಹಕ್ಕು ಉಲ್ಲಂಘಿಸುವ ಉದ್ಯೋಗದಾತರ ವಿರುದ್ಧ ಕಾನೂನು ಕ್ರಮ ಹಾಗೂ ಅಗತ್ಯವಿದ್ದಲ್ಲಿ ವಿಚಾರಣೆ ನಡೆಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ನಿರಂತರವಾಗಿ ಏರುತ್ತಿರುವ ಜೀವನ ವೆಚ್ಚವನ್ನು ಪರಿಗಣಿಸಿ ಕನಿಷ್ಠ ವೇತನವನ್ನು ತಿಂಗಳಿಗೆ ಕನಿಷ್ಠ 42 ಸಾವಿರ ರೂ.ಗೆ ಪರಿಷ್ಕರಿಸಬೇಕು ಎಂದು ಎಐಸಿಸಿಟಿಯು ಒತ್ತಾಯಿಸಿದೆ.
ಈಎಸ್ಐ ಸೌಲಭ್ಯ ಪಡೆಯಲು ನಿಗದಿಪಡಿಸಿರುವ ವೇತನ ಮಿತಿಯನ್ನು ಕೂಡಲೇ ಪರಿಷ್ಕರಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ. 2016ರಲ್ಲಿ ಈಎಸ್ಐ ವೇತನ ಮಿತಿಯನ್ನು 15 ಸಾವಿರ ರೂ.ನಿಂದ 21 ಸಾವಿರ ರೂ.ಗೆ ಹೆಚ್ಚಿಸಲಾಗಿತ್ತು. ಹಲವು ವರ್ಷಗಳಿಂದ ಈ ಮಿತಿಯನ್ನು ಪರಿಷ್ಕರಿಸಿಲ್ಲ. ಇದೀಗ ಕೆಲವು ನಿಗದಿತ ಉದ್ಯೋಗಗಳಲ್ಲಿ ಸರ್ಕಾರ ಅಧಿಸೂಚಿಸಿರುವ ಕನಿಷ್ಠ ವೇತನವೇ 21 ಸಾವಿರ ರೂ.ಗಿಂತ ಹೆಚ್ಚಾಗಿರುವುದರಿಂದ, ಕಾನೂನುಬದ್ಧವಾಗಿ ಕನಿಷ್ಠ ವೇತನ ಪಡೆಯಬೇಕಾದ ಕಾರ್ಮಿಕರೇ ಈಎಸ್ಐ ಸೌಲಭ್ಯದಿಂದ ಹೊರಗುಳಿಯುವಂತಹ ಗೊಂದಲ ಉಂಟಾಗಿದೆ ಎಂದು ಸಂಘಟನೆ ತಿಳಿಸಿದೆ.
ಕರ್ನಾಟಕ ಹೈಕೋರ್ಟ್ನಲ್ಲಿ 2026ರ ಆಗಸ್ಟ್ 4ರಂದು ಡಬ್ಲ್ಯು.ಪಿ. ಸಂಖ್ಯೆ 18258/2026 ಪ್ರಕರಣದಲ್ಲಿ ಹೊರಬಂದ ಆದೇಶದ ಹಿನ್ನೆಲೆಯಲ್ಲಿ, ಪ್ರಸ್ತುತ ವೇತನ ಮಟ್ಟ ಮತ್ತು ಜೀವನ ವೆಚ್ಚಕ್ಕೆ ಅನುಗುಣವಾಗಿ ಈಎಸ್ಐ ವೇತನ ಮಿತಿಯನ್ನು ಪರಿಷ್ಕರಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ತಕ್ಷಣ ಪತ್ರ ಬರೆಯಬೇಕು ಎಂದು ಒತ್ತಾಯಿಸಲಾಯಿತು.
ಇದನ್ನೂ ಓದಿ : ರೈಲು ನಿಲ್ದಾಣಗಳಲ್ಲಿ ಅವಧಿ ಮೀರಿದ ಮೊಸರು, ಹಾಲು: ಪತ್ರಿಕೆಯಲ್ಲಿ ಆಹಾರ ಪ್ಯಾಕಿಂಗ್ ಪತ್ತೆ
ಸರ್ಕಾರದ ಪರವಾಗಿ ಮನವಿ ಸ್ವೀಕಾರ
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ. ರಘು ಹಾಗೂ ಕಾರ್ಮಿಕ ಆಯುಕ್ತ ರಾಗಪ್ರಿಯಾ ಅವರು ಎಐಸಿಸಿಟಿಯು ಸಲ್ಲಿಸಿದ ಮನವಿಯನ್ನು ಸರ್ಕಾರದ ಪರವಾಗಿ ಸ್ವೀಕರಿಸಿ ಪ್ರತಿಭಟನಾಕಾರರೊಂದಿಗೆ ಚರ್ಚಿಸಿದರು.
ಕನಿಷ್ಠ ವೇತನ, ನೇರ ವೇತನ ಪಾವತಿ, ಉದ್ಯೋಗ ಭದ್ರತೆ, ಈಎಸ್ಐ ಹಾಗೂ ಸಾಮಾಜಿಕ ಭದ್ರತೆ ಸೇರಿದಂತೆ ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಲಾಯಿತು.
ಕಾರ್ಮಿಕರ ಮನವಿಯನ್ನು ಮುಖ್ಯಮಂತ್ರಿ ಹಾಗೂ ಕಾರ್ಮಿಕ ಸಚಿವರ ಗಮನಕ್ಕೆ ತಂದು, ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ತಿಳಿಸುವುದಾಗಿ ಪಿ. ರಘು ಮತ್ತು ರಾಗಪ್ರಿಯಾ ಭರವಸೆ ನೀಡಿದರು.
ಪ್ರತಿ ಕಾರ್ಮಿಕನಿಗೂ ಕೆಲಸಕ್ಕೆ ಸೇರಿದ ದಿನದಿಂದಲೇ ಉದ್ಯೋಗ ಭದ್ರತೆ ಹಾಗೂ ಎಲ್ಲ ಶಾಸನಬದ್ಧ ಹಕ್ಕುಗಳನ್ನು ಖಾತರಿಪಡಿಸಬೇಕು. ಆರೋಗ್ಯ, ಹೆರಿಗೆ ಹಾಗೂ ಪಿಂಚಣಿ ಸೇರಿದಂತೆ ಸಮಗ್ರ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಎಲ್ಲ ಕಾರ್ಮಿಕರಿಗೂ ವಿಸ್ತರಿಸಬೇಕು ಎಂದು ಎಐಸಿಸಿಟಿಯು ಒತ್ತಾಯಿಸಿದೆ.
ಮಹಿಳಾ ಕಾರ್ಮಿಕರಿಗೆ ಸುರಕ್ಷಿತ, ಗೌರವಯುತ ಹಾಗೂ ಕಿರುಕುಳಮುಕ್ತ ಕೆಲಸದ ವಾತಾವರಣ ಕಲ್ಪಿಸಬೇಕು. ಕಾರ್ಮಿಕರು ಸಂಘಟಿತರಾಗಿ ತಮ್ಮ ಬೇಡಿಕೆಗಳನ್ನು ಮಂಡಿಸಲು ಮತ್ತು ಕಾನೂನುಬದ್ಧ ಹೋರಾಟ ನಡೆಸಲು ಇರುವ ಹಕ್ಕುಗಳನ್ನು ರಕ್ಷಿಸಬೇಕು ಎಂದು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಅಪ್ಪಣ್ಣ, ನಿರ್ಮಲಾ, ನಾಗರಾಜ ಪೂಜಾರ್, ಮೋಹನ್, ರಾಮಣ್ಣ ವಿಟ್ಲ ಸೇರಿದಂತೆ ಹಲವು ಕಾರ್ಮಿಕ ಮುಖಂಡರು ಮಾತನಾಡಿದರು. ಕೆ. ನಾಗಲಿಂಗಸ್ವಾಮಿ, ಅಜೀಜ್ ಜಾಗಿರ್ದಾರ್, ಕೇಶವ ನಾಯಕ್, ಅಶೋಕಗೌಡ, ಮಾಯಮ್ಮ, ಪರಶುರಾಮ, ಉಮಾ, ಭಾನುಪ್ರಕಾಶ್, ಬಸವರಾಜ್ ಎಂ., ಗೌರಿ, ಚಂದ್ರಶೇಖರ್ ಶಿರುಗುಪ್ಪ ಸೇರಿದಂತೆ ವಿವಿಧ ಜಿಲ್ಲೆಗಳ ಸಾವಿರಾರು ಕಾರ್ಮಿಕರು ಭಾಗವಹಿಸಿದ್ದರು.
ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರ
ಗುತ್ತಿಗೆ, ಹೊರಗುತ್ತಿಗೆ, ದಿನಗೂಲಿ ಹಾಗೂ ತಾತ್ಕಾಲಿಕ ಕಾರ್ಮಿಕ ಪದ್ಧತಿಗಳಲ್ಲಿ ನಿರಂತರ ಮತ್ತು ಅಗತ್ಯ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಕಾಯಂ ಮಾಡಬೇಕು, ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರಿಗೆ ನೇರ ವೇತನ ಪಾವತಿ ಜಾರಿಗೊಳಿಸಬೇಕು, ಪರಿಷ್ಕೃತ ಕನಿಷ್ಠ ವೇತನವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಮತ್ತು ಉದ್ಯೋಗ ಹಾಗೂ ಸಾಮಾಜಿಕ ಭದ್ರತೆ ಖಾತರಿಪಡಿಸಬೇಕು ಎಂಬುದು ಪ್ರಮುಖ ಬೇಡಿಕೆಗಳಾಗಿವೆ.
ಕಾರ್ಮಿಕರ ಜೀವನ, ಉದ್ಯೋಗ ಭದ್ರತೆ ಹಾಗೂ ಸಾಮಾಜಿಕ ಭದ್ರತೆಗೆ ನೇರವಾಗಿ ಸಂಬಂಧಿಸಿದ ಈ ಬೇಡಿಕೆಗಳನ್ನು ಸರ್ಕಾರ ತುರ್ತಾಗಿ ಪರಿಗಣಿಸಿ, ಸಂಬಂಧಿಸಿದ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿ ನಿಗದಿತ ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಎಐಸಿಸಿಟಿಯು ಆಗ್ರಹಿಸಿದೆ.
ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಐಸಿಸಿಟಿಯು ಎಚ್ಚರಿಕೆ ನೀಡಿದೆ.
ಇದನ್ನೂ ನೋಡಿ : “ಕನಿಷ್ಠ ವೇತನವೂ ಇಲ್ಲ, ಜೀವಕ್ಕೆ ಗ್ಯಾರಂಟಿಯೂ ಇಲ್ಲ! ಬೇಯುತ್ತಿದೆ ವಿದ್ಯುತ್ ಕಾರ್ಮಿಕರ ಬದುಕು” | ಎಸ್ ವರಲಕ್ಷ್ಮಿ
